ವಾಟ್ಸಾಪ್‌ನಿಂದ ಹಿಡಿದು ಟೆಲಿಗ್ರಾಮ್‌ವರೆಗೆ ಭಾರತೀಯರನ್ನು ಹೇಗೆಲ್ಲಾ ವಂಚಿಸಲಾಗಿದೆ ಗೊತ್ತಾ!?
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ಗಳ ವಿಭಾಗದಲ್ಲಿ ವಾಟ್ಸಾಪ್, ಸಿಗ್ನಲ್, ಟೆಲಿಗ್ರಾಮ್ ಸೇರಿದಂತೆ ಅನೇಕ ಆಪ್‌ಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲೂ ಹೆಚ್ಚಿನ ಭದ್ರತಾ ಫೀಚರ್ಸ್ ಅನ್ನು ನೀಡಲಾಗುತ್ತದೆ ಎಂದು ವಾಟ್ಸಾಪ್ ಹೇಳಿಕೊಳ್ಳುತ್ತದೆ. ಅದಾಗ್ಯೂ ಈ ಪ್ಲಾಟ್‌ಫಾರ್ಮ್‌ನಲ್ಲಿ ನಿತ್ಯವೂ ಅದೆಷ್ಟೋ ಮಂದಿ ಮೋಸ ಹೋಗುತ್ತಿದ್ದಾರೆ.
ಹೌದು, ಭಾರತದಲ್ಲಿ ಪ್ರಮುಖ ಮೆಸೆಜಿಂಗ್ ಆಪ್‌ಗಳನ್ನು ಬಳಕೆ ಮಾಡಿಕೊಂಡು ಸ್ಕ್ಯಾಮರ್‌ಗಳು ಒಂದಲ್ಲಾ ಒಂದು ಹೊಸ ರೀತಿಯಲ್ಲಿ ಸಾಮಾನ್ಯ ಜನರಿಗೆ ವಂಚನೆ ಮಾಡುತ್ತಲೇ ಬರುತ್ತಿದ್ದಾರೆ. ಅದಾಗ್ಯೂ ಈ ಪ್ಲಾಟ್‌ಫಾರ್ಮ್‌ಗಳು ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಿದ್ರೆ, ಬನ್ನಿ ಹೇಗೆಲ್ಲಾ ಭಾರತೀಯರನ್ನು ಸ್ಕ್ಯಾಮರ್‌ಗಳು ವಂಚಿಸುತ್ತಿದ್ದಾರೆ, ಇದರಿಂದ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ತಿಳಿಯೋಣ.

ಹೊಸ ಮಾರ್ಗ ಕಂಡುಕೊಂಡ ಸ್ಕ್ಯಾಮರ್‌ಗಳು: ಈ ಮೊದಲು ಸ್ಕ್ಯಾಮರ್‌ಗಳು ನೇರವಾಗಿ ಮೆಸೆಜ್ ಮಾಡುವ ಮೂಲಕ ವಂಚನೆ ಮಾಡುತ್ತಿದ್ದರು. ಈ ಬಗ್ಗೆ ಜನರು ಎಚ್ಚೆತ್ತುಕೊಂಡ ಹಿನ್ನೆಲೆ ಯೂಟ್ಯೂಬ್ ಮೂಲಕ ಮೋಸ ಮಾಡುತ್ತಿದ್ದಾರೆ. ಅಂದರೆ ಯೂಟ್ಯೂಬ್‌ನಿಂದ ಆರಂಭ ಆಗುವ ಇವರ ಕೆಲಸ ವಾಟ್ಸಾಪ್‌ಗೆ ತಲುಪಲಿದ್ದು, ಅಂತಿಮವಾಗಿ ಟೆಲಿಗ್ರಾಮ್ ಮೂಲಕ ಕೊನೆಗೊಳ್ಳಲಿದೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಹಣವನ್ನು ದೋಚಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಅಂತಾರಾಷ್ಟ್ರೀಯ ಸ್ಪ್ಯಾಮ್ ಕರೆಗಳು ಕಡಿಮೆಯಾಗಿದ್ದರೂ ಸಹ ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನಲ್ಲಿ ಮಾತ್ರ ಜನರು ಸ್ಲ್ಯಾಮ್ ಸಂಬಂಧಿ ಟೆಕ್ಸ್ಟ್ ಮೆಸೆಜ್‌ಗಳನ್ನು ಸ್ವೀಕಾರ ಮಾಡುವ ಮೂಲಕ ಭಾರೀ ಹಣ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ನಿದರ್ಶನ ಎಂಬಂತೆ ಭಾರತದಲ್ಲಿ ಹಲವಾರು ಘಟನೆಗಳು ಜರುಗಿದ್ದು, ಇವುಗಳ ಕಡೆ ಕಣ್ಣಾಯಿಸೋಣ.
ಗುರುಗ್ರಾಮ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಓರ್ವರು ಮೋಸ ಹೋಗಿದ್ದಾರೆ. ಅಂದರೆ ಯೂಟ್ಯೂಬ್‌ನಲ್ಲಿನ ವಿಡಿಯೋಗಳನ್ನು ಲೈಕ್ ಮಾಡುವ ಮೂಲಕ ಹಣ ಗಳಿಸಬಹುದು ಎಂದು ವಾಟ್ಸಾಪ್ ಮೂಲಕ ನಂಬಿಸಲಾಗಿದೆ. ಬಳಿಕ ಅವರನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸುವುದಕ್ಕಾಗಿ ವಂಚಕರು ಭಾರಿ ಗಳಿಕೆಯ ಭರವಸೆಯೊಂದಿಗೆ ಆಮಿಷ ಒಡ್ಡಿದ್ದಾರೆ. ಇದಾದ ನಂತರದಲ್ಲಿ ಇಂಜಿನಿಯರ್ 42 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರು: ಈ ರೀತಿಯ ಘಟನೆಗಳ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಏಪ್ರಿಲ್‌ನಲ್ಲಿ ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ 500 ಕ್ಕೂ ಹೆಚ್ಚು ಜನರನ್ನು ವಂಚಿಸಿದ ನಾಲ್ವರು ಸೈಬರ್ ವಂಚಕರ ಗುಂಪನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾ ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದು, ಚೀನಾದ ಸಹಚರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.

ಇವರು ಹೇಗೆ ಮೋಸ ಮಾಡುತ್ತಿದ್ದಾರೆ?: ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವುದು ಸಾಮಾನ್ಯವಾದ ಕಾರ್ಯ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ಕೆಲವು ವಿಡಿಯೋಗಳಿಗೆ ಲೈಕ್ ನೀಡುವ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸುತ್ತಿದ್ದಾರೆ. ಈ ನಂಬಿಕೆ ಹೆಚ್ಚಾಗುವಂತೆ ಮಾಡಲು ಆರಂಭದಲ್ಲಿ ಇಂತಿಷ್ಟು ಎಂದು ಹಣ ಸಹ ನೀಡಲಾಗುತ್ತದೆ. ಇದನ್ನು ನಂಬುವ ಸಾಮಾನ್ಯರು ಸ್ಕ್ಯಾಮರ್‌ಗಳು ತೋಡುವ ಹಳ್ಳಕ್ಕೆ ಬೀಳುತ್ತಿದ್ದಾರೆ. ಈ ದರೋಡೆಗಳ ಹಿಂದೆ ಹಲವಾರು ಚೀನೀ ಗ್ಯಾಂಗ್‌ಗಳನ್ನು ಸಹ ಗುರುತಿಸಲಾಗಿದೆ.
ಮಹಿಳೆಗೆ ಪಂಗನಾಮ : ಪೊಲೀಸರು ಮಾಹಿತಿ ನೀಡಿದಂತೆ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ಒಂದು ವಾಟ್ಸಾಪ್ ಮೆಸೆಜ್ ಸ್ವೀಕರಿಸಿದ್ದಾರಂತೆ. ಅದರಲ್ಲಿ ಪ್ರತಿ ಲೈಕ್‌ಗೆ 50 ರೂಪಾಯಿ ಪಾವತಿಸುತ್ತೇವೆ ಎಂದು ತಿಳಿಸಲಾಗಿದೆ. ಅದರಂತೆ ಆ ಮಹಿಳೆ ವಿವಿಧ ಲಿಂಕ್‌ಗಳನ್ನು ತೆರೆದು ಲೈಕ್ ಮಾಡಿದ್ದಾರೆ. ಇದಾದ ನಂತರ ಇಂತಿಷ್ಟು ಹಣ ಗಳಿಸಿದ್ದೀರಿ ಎಂದು ಸ್ಕ್ಯಾಮರ್‌ಗಳು ತಿಳಿಸಿದ್ದಾರೆ. ಜೊತೆಗೆ ಹಣ ಸ್ವೀಕರಿಸಲು ಟೆಲಿಗ್ರಾಮ್ ಲಿಂಕ್ ಅನ್ನು ತೆರೆಯಲು ಕೇಳಿಕೊಂಡಿದ್ದರಂತೆ.
ಹಣ ಸಿಗುತ್ತದೆ ಎಂದು ಮಹಿಳೆ ಆ ಟೆಲಿಗ್ರಾಮ್ ಚಾನೆಲ್‌ಗೆ ಸೇರಿಕೊಂಡಿದ್ದಾರೆ. ಬಳಿಕ ಆಕೆಯ ಬ್ಯಾಂಕ್ ಖಾತೆಗೆ 150ರೂ. ಜಮೆಯಾಗಿದೆ. ನಂತರ ಸ್ಕ್ಯಾಮರ್ ಮತ್ತೊಂದು ಟೆಲಿಗ್ರಾಮ್ ಚಾನೆಲ್‌ಗೆ ಸೇರಲು ಮತ್ತು ಕೆಲವು ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ 200ರೂ.ಗಳನ್ನು ಮಹಿಳೆ ಪಡೆದಿಕೊಂಡಿದ್ದಾರೆ. ಈ ರೀತಿ ಹಂತಹಂತವಾಗಿ ಹಳ್ಳಕ್ಕೆ ಕೆಡವುತ್ತಾ ಹೋದ ಸ್ಕ್ಯಾಮರ್‌ಗಳು ನಂತರ ದೊಡ್ಡ ಬಾವಿಗೆ ತಳ್ಳಿದ್ದಾರೆ.
ಅಂದರೆ ಸ್ಲ್ಯಾಮರ್ ಕ್ಸಾರಿನಾ ಎಂಬಾಕೆ ಕರೆ ಮಾಡಿ ಲಾಭದ ಭರವಸೆಯೊಂದಿಗೆ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಮಹಿಳೆಯನ್ನು ಮನವೊಲಿಸಿದ್ದಾರೆ. ಇದನ್ನು ನಂಬಿದ ಮಹಿಳೆಯು ಆರಂಭದಲ್ಲಿ 1,000ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಆದರೆ, ಕ್ಸಾರಿನಾ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆಯೊಂದಿಗೆ ಹೆಚ್ಚಿನ ಹಣ ಪಾವತಿ ಮಾಡುವಂತೆ ಕೇಳಿಕೊಂಡಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಸುಮಾರು 22 ಲಕ್ಷ ರೂಪಾಯಿ ಮಹಿಳೆ ಕಳೆದುಕೊಂಡಿದ್ದು, ಈಗ ಪೊಲೀಸರ ಮೊರೆ ಹೋಗಿದ್ದಾರೆ.

ಈ ಎಲ್ಲಾ ಘಟನೆ ನಡುವೆ ದೆಹಲಿ ಪೊಲೀಸರು ಇತ್ತೀಚೆಗೆ ಚೀನಾ, ದುಬೈ ಮೂಲದ ಸೈಬರ್ ವಂಚಕರ ಅಂತಾರಾಷ್ಟ್ರೀಯ ಗ್ಯಾಂಗ್ ಅನ್ನು ಪತ್ತೆ ಮಾಡಿದ್ದು, ಜಾರ್ಜಿಯಾದಲ್ಲಿ ಕುಳಿತಿರುವ ಮಾಸ್ಟರ್‌ಮೈಂಡ್ ಅಮೆಜಾನ್‌ನಲ್ಲಿ ಮನೆಯಿಂದ ಆನ್‌ಲೈನ್ ಉದ್ಯೋಗವನ್ನು ಒದಗಿಸುವ ನೆಪದಲ್ಲಿ 11,000 ಜನರಿಗೆ ವಂಚಿಸಿರುವುದನ್ನು ಕಂಡುಕೊಂಡಿದ್ದಾರೆ. ಈ ಸಂಬಂಧ ದೆಹಲಿ, ಗುರುಗ್ರಾಮ್ ಮತ್ತು ಹರಿಯಾಣದಲ್ಲಿ ನಡೆಸಿದ ಪ್ರತ್ಯೇಕ ದಾಳಿ ನಡೆಸಲಾಗಿದೆ.
ಸಾಮಾನ್ಯ ಜನರಲ್ಲಿ ಈ ಸಂಬಂಧ ಜಾಗೃತಿ ಹೆಚ್ಚಾಗಿದ್ದರಿಂದಾಗಿ ಮನೆಯಿಂದ ಆನ್‌ಲೈನ್ ಕೆಲಸ ಅಥವಾ ಅರೆಕಾಲಿಕ ಉದ್ಯೋಗಗಳನ್ನು ಹುಡುಕುತ್ತಿರುವ ಜನರನ್ನು ವಂಚಿಸಲು ಚೀನಾದ ಸೈಬರ್ ಅಪರಾಧಿಗಳು ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಅದರಂತೆ ವಂಚಕರು ಬಳಕೆ ಮಾಡಿರುವ ಟೆಲಿಗ್ರಾಮ್ ಐಡಿ ಬೀಜಿಂಗ್‌ನಿಂದ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
5.17 ಕೋಟಿ ರೂ. ಜಮಾ: ದುರಂತದ ವಿಷಯ ಏನೆಂದರೆ ಈ ಮಹಿಳೆಗೆ ಆದ ಮೋಸವನ್ನು ಬೆನ್ನತ್ತಿ ಹೋಗಿ ಬೆಂಡೆತ್ತಿದ ಆರೋಪಿಗಳ ಖಾತೆಯನ್ನು ಪರಿಶೀಲನೆ ನಡೆಸಲಾಗಿದ್ದು, ಒಂದೇ ದಿನದಲ್ಲಿ ಒಟ್ಟು 5.17 ಕೋಟಿ ರೂ. ಜಮಾ ಆಗಿರುವುದು ಕಂಡುಬಂದಿದೆ. ಮತ್ತಷ್ಟು ಹಣದ ಜಾಡು ಹಿಡಿದಾಗ, ಒಟ್ಟು ಮೊತ್ತವನ್ನು ಏಳು ವಿವಿಧ ಸಂಸ್ಥೆಗಳ ಮೂಲಕ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ರೀತಿಯ ಘಟನೆಗಳು ನಿತ್ಯವೂ ಜರುಗುತ್ತಿದ್ದರೂ ನೀವು ಸ್ಕ್ಯಾಮರ್‌ಗಳು ತೋರಿಸುವ ಆಸೆಗೆ ಬಿದ್ದರೆ ನಿಮಗೆ ನೀವೆ ಮೂರು ನಾಮ ಹಾಕಿಕೊಂಡಂತೆ. ಹೀಗಾಗಿ ಈ ರೀತಿಯ ಯಾವುದೇ ಸುಲಭ ಕೆಲಸಗಳ ಆಫರ್ ಬಂದಾಗ ಒಮ್ಮೆ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಜೊತೆಗೆ ಗೇಮಿಂಗ್ ಆಪ್‌ಗಳ ಬಗ್ಗೆಯೂ ಸಹ ಎಚ್ಚರಿಕೆ ವಹಿಸಬೇಕಾಗಿದ್ದು, ಇವುಗಳ ಸಹ ನಿಮ್ಮನ್ನು ವಂಚನೆ ಮಾಡಲು ಸದಾ ಹಾತೊರೆಯುತ್ತಿರುತ್ತವೆ.


Click it and Unblock the Notifications








