ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ಮಹಾ ಮೋಸ! ಮಹಿಳೆಗೆ 4.63 ಲಕ್ಷ ರೂ.ವಂಚನೆ
ಆನ್‌ಲೈನ್ ಹಗರಣ (Online fraud) ಆಗಾಗ್ಗೆ ವರದಿಯಾಗುತ್ತಲೇ ಇವೆ. ಈ ನಡುವೆ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಜನರಿಗೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿವೆಯಾದರೂ ಜನರು ಮಾತ್ರ ಸ್ಕ್ಯಾಮರ್‌ಗಳಿಂದ ಮೋಸ ಹೋಗುತ್ತಿರುವುದು ನಿಂತಿಲ್ಲ.
ಹೌದು, ಆನ್‌ಲೈನ್ ವಂಚನೆ ಮೂಲಕ ಸಾಕಷ್ಟು ಜನರು ತಾವು ಕಷ್ಟ ಪಟ್ಟು ಕೂಡಿ ಇಟ್ಟಿದ್ದ ಹಣವನ್ನೆಲ್ಲಾ ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಇಂತಹುದೇ ಒಂದು ಘಟನೆ ಈಗ ಕೊಯಮತ್ತೂರಿನಲ್ಲಿ ನಡೆದಿದ್ದು, ಮಹಿಳೆ 4.63 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹಾಗಿದ್ರೆ ಈ ಮಹಿಳೆ ಮೋಸ ಹೋಗಿದ್ದು ಹೇಗೆ, ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮಹಿಳೆಗೆ ವಂಚನೆ: ಕೊಯಮತ್ತೂರಿನ ವಡವಳ್ಳಿ ನಿವಾಸಿ 34 ವರ್ಷದ ಮಹಿಳೆ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದು, 4.63 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಮೆಸೇಜಿಂಗ್ ಆಪ್ ಆದ ಟೆಲಿಗ್ರಾಮ್ (Telegram) ಮೂಲಕ ಇವರನ್ನು ಸಂಪರ್ಕಿಸಿ, ಲಾಭದಾಯಕ ಅರೆಕಾಲಿಕ ಉದ್ಯೋಗದ ಅವಕಾಶವನ್ನು ನೀಡುವ ಆಸೆ ತೋರಿಸಿ ಮೋಸದ ಬಲೆಗೆ ಬೀಳಿಸಿದ್ದಾರೆ.
ಆರಂಭದಲ್ಲಿ, ವಿವಿಧ ಕಂಪನಿಗಳಿಗೆ ಗೂಗಲ್‌ನಲ್ಲಿ ವಿಮರ್ಶೆಗಳನ್ನು ನೀಡುವ ಕೆಲಸ ನೀಡಲಾಗಿತ್ತು. ಇದೇ ವೇಳೆ ವಂಚಕನು ಹಣವನ್ನು ಹೂಡಿಕೆ ಮಾಡಲು ಇವರನ್ನು ಆಕರ್ಷಿಸಿದ್ದಾನೆ. ಹೂಡಿಕೆಯ ಮೇಲೆ ಗಣನೀಯ ಆದಾಯವನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಅಪರಿಚಿತರ ಭರವಸೆಯನ್ನು ನಂಬಿದ ಮಹಿಳೆ ವ್ಯಕ್ತಿಯ ಖಾತೆಗೆ ಅನೇಕ 4.63 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ.

ಇದಾದ ನಂತರದಲ್ಲಿ ಪ್ರೀತಿ ತನ್ನ ಹೂಡಿಕೆಯ ಆದಾಯವನ್ನು ಮರುಪಡೆಯಲು ಮುಂದಾಗಿದ್ದಾರೆ. ಆದರೆ, ವಂಚಕ ಮತ್ತಷ್ಟು ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದ್ದಾನೆ. ಇದೇ ವೇಳೆ ಈ ಮಹಿಳೆಗೆ ತಾವು ಮೋಸ ಹೋಗಿದ್ದೇವೆ ಅನ್ನೋದು ತಿಳಿದುಬಂದಿದೆ. ಇದಾದ ತಕ್ಷಣದಲ್ಲೇ ಕೊಯಮತ್ತೂರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೆಲ್ಲಾ ಆದ ಮೇಲೆ ಕಾನೂನು ಜಾರಿ ಅಧಿಕಾರಿಗಳು ಆನ್‌ಲೈನ್ ವಂಚಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, ವಂಚನೆಗೆ ಸಂಬಂಧಿಸಿದ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಡಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
-ನಿಮಗೆ ಏನಾದರೂ ಈ ರೀತಿಯ ಆಫರ್ ಬಂದರೆ ಖಂಡಿತಾ ಒಪ್ಪಿಕೊಳ್ಳಬೇಡಿ. ಆನ್‌ಲೈನ್‌ನಲ್ಲಿ ಉದ್ಯೋಗ ಆಫರ್‌ಗಳು ಅಥವಾ ಹೂಡಿಕೆಯ ಅವಕಾಶಗಳನ್ನು ನೀಡಿದಾಗ ಅದನ್ನು ಅನುಮಾನಾಸ್ಪದವಾಗಿ ನೋಡಿ.
- ಸ್ವೀಕರಿಸಿದ ಯಾವುದೇ ಉದ್ಯೋಗ ಕೊಡುಗೆಗಳ ನ್ಯಾಯಸಮ್ಮತತೆಯನ್ನು ಸಂಪೂರ್ಣವಾಗಿ ಸಂಶೋಧಿಸುವುದು ಹಾಗೂ ಪರಿಶೀಲಿಸುವುದು ಮುಖ್ಯವಾಗಿದೆ. ವಿಶೇಷವಾಗಿ ವಂಚಕರು ಈ ವೇಳೆ ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ. ಆ ಬಗ್ಗೆ ಯಾವುದೇ ಮಾಹಿತಿ ನೀಡಬೇಡಿ.
- ಯಾರಾದರೂ ಈ ರೀತಿ ಹೇಳಿಕೊಂಡು ನಿಮ್ಮನ್ನು ಸಂಪರ್ಕ ಮಾಡಿದ್ರೆ ಪ್ರತಿಷ್ಠಿತ ಮೂಲಗಳನ್ನು ಸಂಪರ್ಕಿಸುವುದು ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಿಂದ ಸಲಹೆ ಪಡೆಯುವುದು ಮುಖ್ಯವಾಗಿದೆ. ನಿಜವಾದ ಅವಕಾಶಗಳು ಮತ್ತು ಸಂಭಾವ್ಯ ವಂಚನೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.

- ಆನ್‌ಲೈನ್ ವಂಚಕರಿಂದ ರಕ್ಷಿಸಿಕೊಳ್ಳಲು ಕಟ್ಟುನಿಟ್ಟಾದ ಗೌಪ್ಯತೆ ಕ್ರಮಗಳನ್ನು ನಿರ್ವಹಿಸುವುದು ಸಹ ಅತ್ಯಗತ್ಯವಾಗಿದೆ. ಅಪರಿಚಿತ ವ್ಯಕ್ತಿಗಳು ಅಥವಾ ಘಟಕಗಳೊಂದಿಗೆ ಸೂಕ್ಷ್ಮವಾದ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ. ವಿಶೇಷವಾಗಿ ಮೆಸೆಜ್ ಕಳುಹಿಸುವ ಆಪ್‌ಗಳು ಅಥವಾ ಇಮೇಲ್‌ನಂತಹ ಅಸುರಕ್ಷಿತ ಚಾನಲ್‌ಗಳ ಮೂಲಕ ಬಂದ ಮೆಸೆಜ್ ಅನ್ನು ನಿರ್ಲಕ್ಷಿಸಿ.
- ಹೆಚ್ಚುವರಿಯಾಗಿ ಈ ರೀತಿಯ ಹಗರಣಗಳಿಂದ ಸದಾ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಯಾವುದೇ ಸರ್ಕಾರಿ ಅಥವಾ ಖಾಸಗಿ ಅಧಿಕಾರಿಗಳು ಕರೆ ಮಾಡಿ ನಿಮ್ಮ ಬ್ಯಾಂಕ್ ವಿವರ ಅಥವಾ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುವುದಿಲ್ಲ. ಆದ ಕಾರಣ ಯಾರೇ ಈ ಸಂಬಂಧ ಫೋನ್ ಮಾಡಿದ್ರೂ ಅಥವಾ ಮೆಸೆಜ್ ಮಾಡಿದ್ರೂ ಅದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ.


Click it and Unblock the Notifications








