ಇನ್ಮುಂದೆ ನೀವು Gmail ಗೆ ಹಣ ಪಾವತಿ ಮಾಡಬೇಕು?: ಆದ್ರೂ ಉಚಿತವಾಗಿ ಬಳಸುವುದು ಹೇಗೆ?
ಜಿಮೇಲ್ ಇಂದು ತುಂಬಾ ಅಗತ್ಯವಾದ ಖಾತೆಯಾಗಿದ್ದು, ಈ ಮೂಲಕ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಎಂಟ್ರಿ ನೀಡಬಹುದಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್ ಮತ್ತು ಇಂಟರ್ ನೆಟ್ ಬಳಸುವ ಪ್ರತಿಯೊಬ್ಬರಿಗೂ ಜಿಮೇಲ್ ತುಂಬಾ ಅಗತ್ಯವಾಗಿದ್ದು, ಈ ನಡುವೆ ನಾವು ನೀವೆಲ್ಲಾ ಜಿಮೇಲ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಬಳಕೆ ಮಾಡುತ್ತಿದ್ದೆವು. ಆದರೆ,ಇನ್ಮುಂದೆ ಹಣ ನೀಡಬೇಕಿದೆ.
ಹೌದು, ಜಿಮೇಲ್ ತನ್ನದೇ ಆದ ರೀತಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದು, ಈ ಮೂಲಕ ಶೀಘ್ರದಲ್ಲೇ ಈ ಉಚಿತ ಸೇವೆಯನ್ನು ನಿಲ್ಲಿಸಬಹುದು ಎಂದು ಹೇಳಲಾಗುತ್ತಿದೆ. ಅದರಂತೆ ನೀವು ಇನ್ಮುಂದೆ ಹಣ ಪಾವತಿ ಮಾಡಬೇಕಾಗುತ್ತದೆ. ಹಾಗಿದ್ರೆ, ಜಿಮೇಲ್‌ನಲ್ಲಿ ಆಗುತ್ತಿರುವ ಬದಲಾವಣೆ ಏನು?, ಉಚಿತವಾಗಿ ಜಿಮೇಲ್ ಸೇವೆ ಪಡೆದುಕೊಳ್ಳಲು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಕಳೆದ ವಾರದಿಂದ ಜಿಮೇಲ್‌ನಲ್ಲಿ ಬದಲಾವಣೆ: ಜಿಮೇಲ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ಆದಾಯಗಳಿಸುವ ಭಾಗವಾಗಿ ಕಳೆದ ವಾರದಿಂದ ಮೊಬೈಲ್ ಮತ್ತು ವೆಬ್ ಆವೃತ್ತಿಗಳೆರಡರಲ್ಲೂ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದೆ. ಇದರಲ್ಲೇನಿದೆ ವಿಶೇಷ ಈ ಹಿಂದೆಯೂ ಸಹ ಜಾಹೀರಾತುಗಳು ಕಾಣಿಸುತ್ತಿದ್ದವು ಎಂದರೆ ನೀವು ಸರಿಯಾಗಿ ಗಮನಿಸಿಲ್ಲ ಎಂದರ್ಥ. ಯಾಕೆಂದರೆ ಈ ಹಿಂದೆ ಇಮೇಲ್‌ಗಳ ಮೇಲ್ಭಾಗದಲ್ಲಿ ಪ್ರಸಾರ ಆಗುತ್ತಿದ್ದ ಜಾಹೀರಾತುಗಳು ಇದೀಗ ಮೇಲಿಂಗ್ ಪಟ್ಟಿಯ ಮಧ್ಯದಲ್ಲಿಯೇ ಕಾಣಿಸಿಕೊಳ್ಳುತ್ತಿವೆ.
ಈ ಸಂಬಂಧದ ಕೆಲವು ವರದಿಗಳನ್ನು ಗಮನಿಸುವುದಾದರೆ ಭವಿಷ್ಯದಲ್ಲಿ ಜಿಮೇಲ್‌ನಲ್ಲಿ ಜಾಹೀರಾತುಗಳ ಸಂಖ್ಯೆಯು ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಅಂದರೆ ಇದೀಗ ಯುಟ್ಯೂಬ್‌ನಲ್ಲಿ ಹೇಗೆ ಜಾಹೀರಾತುಗಳು ಪ್ರಸಾರ ಆಗುತ್ತಿವೆಯೋ ಅದೇ ರೀತಿ ಜಿಮೇಲ್‌ನಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳಲಿವೆ. ಜೊತೆಗೆ ಯೂಟ್ಯೂಬ್‌ನಲ್ಲಿ ಹೇಗೆ ಜಾಹೀರಾತು ಮುಕ್ತ ವಿಡಿಯೋ ನೋಡಲು ಚಂದಾದಾರಿಕೆ ಪಡೆದುಕೊಳ್ಳಬೇಕೋ ಅದೇ ರೀತಿ ಜಾಹೀರಾತು ಮುಕ್ತ ಜಿಮೇಲ್ ಬಳಕೆ ಮಾಡಲು ಹಣ ಪಾವತಿ ಮಾಡುವ ವ್ಯವಸ್ಥೆ ಪರಿಚಯಿಸಲು ಗೂಗಲ್ ಮುಂದಾಗಿದೆ ಎಂದು ತೋರುತ್ತದೆ.

ನ್ಯಾವಿಗೇಷನ್ ಸಮಸ್ಯೆಗಳು: ಇಮೇಲ್ ಪಟ್ಟಿಗಳ ಮಧ್ಯದಲ್ಲಿ ಗೂಗಲ್ ಜಿಮೇಲ್‌ಗೆ ಜಾಹೀರಾತುಗಳನ್ನು ಸೇರಿಸಿದ್ದು, ಈ ಕಾರಣದಿಂದಾಗಿ ಮೇಲ್ ಅನ್ನು ಪರಿಶೀಲಿಸುವಲ್ಲಿ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಈ ಬಗ್ಗೆ ಹಲವು ಜಿಮೇಲ್ ಬಳಕೆದಾರರು ಗೂಗಲ್‌ಗೆ ದೂರನ್ನು ಸಹ ಸಲ್ಲಿಕೆ ಮಾಡಿದ್ದಾರೆ. ಇದೀಗ ಈ ಜಾಹೀರಾತು ಕ್ರಮವನ್ನು ಬಳಕೆದಾರರು ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದು, ಜಾಹೀರಾತುಗಳಿಂದಾಗಿ ಮೇಲ್ ಅನ್ನು ನ್ಯಾವಿಗೇಟ್ ಮಾಡಲು ತೊಂದರೆಯಾಗಿದೆ ಎಂದು ದೂರಿದ್ದಾರೆ
ಈ ಸಂಬಂಧ ಜಿಮೇಲ್ ತನ್ನ ಹೊಸ ಕ್ರಮವನ್ನು ಸಮರ್ಥಿಸಿಕೊಂಡಿದೆ. ನಾವು ಯಾವಾಗಲೂ ಫಾರ್ಮ್ಯಾಟ್‌ಗಳನ್ನು ಪ್ರಯೋಗಿಸುತ್ತಿದ್ದೇವೆ ಮತ್ತು ಹೊಸ ವ್ಯವಹಾರಗಳನ್ನು ಅನ್ವೇಷಿಸಲು ಮತ್ತು ಸಂಪರ್ಕದಲ್ಲಿರಲು ಜನರಿಗೆ ಸಹಾಯ ಮಾಡುವ ವಿಧಾನಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಚಂದಾದಾರರಾಗಿರುವ ವ್ಯಾಪಾರಗಳಿಂದ ಪ್ರಚಾರದ ಸಂದೇಶವನ್ನು ತೋರಿಸಲಾಗುತ್ತದೆ ಎಂದು ತಿಳಿಸಿದೆ.
ಹಾಗೆಯೇ ಈ ಹೊಸ ನಿರ್ಧಾರದ ಪ್ರಕಾರ ಜೊತೆಗೆ ಜನರು ಇಷ್ಟಪಡಬಹುದಾದ ಕಂಪನಿಗಳ ಕೊಡುಗೆಗಳು ಮತ್ತು ಡೀಲ್‌ಗಳನ್ನು ಇದರಲ್ಲಿ ತೋರಿಸಲಾಗುತ್ತದೆ ಎಂದು ತಿಳಿಸಲಾಗಿದ್ದು, ನಾವು ಮೊಬೈಲ್‌ನಾದ್ಯಂತ ಕಳೆದ ವರ್ಷ ಪ್ರಚಾರಗಳ ಟ್ಯಾಬ್‌ನಲ್ಲಿ ಇನ್‌ಸ್ಟ್ರೀಮ್ ಜಾಹೀರಾತುಗಳನ್ನು ಪರಿಚಯಿಸಿದ್ದೆವು. ಅದರಂತೆ ಕಳೆದ ತಿಂಗಳು ಡೆಸ್ಕ್‌ಟಾಪ್‌ಗೂ ಇದನ್ನೂ ವಿಸ್ತರಿಸಿದ್ದೇವೆ ಎಂದು ತಿಳಿಸಿದೆ. ಈ ಮೂಲಕ ಜಿಮೇಲ್ ಅಧಿಕೃತವಾಗಿ ಇನ್ನೇನು ಕೆಲವು ದಿನಗಳಲ್ಲಿ ವಿವಿಧ ರೀತಿಯ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಪರಿಚಯಿಸಲು ಯೋಜಿಸಿದೆ ಎಂದು ತಿಳಿದುಬಂದಿದೆ.

ಇದನ್ನು ಉಚಿತವಾಗಿ ಬಳಕೆ ಮಾಡುವುದು ಹೇಗೆ?: ಕೆಲವು ವರದಿಗಳ ಪ್ರಕಾರ ನೀವು ಯಾವುದೇ ಪಾವತಿ ಮಾಡದೆ ಇದ್ದರೂ ಸಹ ಜಿಮೇಲ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಆದರೆ, ಜಿಮೇಲ್ ಓಪನ್ ಮಾಡಿದಾಗ ಕಾಣಿಸಿಕೊಳ್ಳುವ ಎಲ್ಲಾ ಜಾಹೀರಾತುಗಳನ್ನು ವೀಕ್ಷಣೆ ಮಾಡಬೇಕಿದೆ.ಇನ್ನು ಕೆಲವರು ಜಿಮೇಲ್ ಅನ್ನು ನಿರಂತರವಾಗಿ ಬಳಕೆ ಮಾಡಿದರೆ ಇನ್ನೂ ಕೆಲವರು ಆಗಾಗ್ಗೆ ಅಗತ್ಯ ಬಿದ್ದಾಗ ಮಾತ್ರ ಇದನ್ನು ಓಪನ್ ಮಾಡುತ್ತಿದ್ದಾರೆ.ಹೀಗಾಗಿ ಮುಂದಿನ ದಿನಗಳಲ್ಲಿ ಜಿಮೇಲ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.


Click it and Unblock the Notifications








