OnePlus: ಒನ್‌ಪ್ಲಸ್ ನಾರ್ಡ್ CE4 ಬಿಸಿಯಾಗುತ್ತಿದೆಯೇ? ಚಿಂತೆ ಬೇಡ.. ಇಲ್ಲಿದೆ ಪರಿಹಾರ
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು (OnePlus smartphone) ಭಾರತವೂ ಸೇರಿದಂತೆ ಜಾಗತಿಕವಾಗಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಒನ್‌ಪ್ಲಸ್ ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಲಾಂಚ್ ಮಾಡಿಕೊಂಡು ಬರುತ್ತಲೇ ಇದ್ದು, ಈ ನಡುವೆ ಕೆಲವು ಬಳಕೆದಾರರು ಈ ಫೋನ್‌ಗಳ ಸಂಬಂಧ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಲೇ ಇದ್ದಾರೆ.
ಹೌದು, ಒನ್‌ಪ್ಲಸ್ ಫೋನ್‌ಗಳು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿವೆಯಾದರೂ ಸಹ ಅವುಗಳ ಬೇಡಿಕೆ ಏನೂ ಕಡಿಮೆ ಆಗಿಲ್ಲ. ಈ ನಡುವೆ ಯಾರೆಲ್ಲಾ ಒನ್‌ಪ್ಲಸ್ ನಾರ್ಡ್ CE4 (OnePlus Nord CE4) ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದು, ಫೋನ್ ಬಿಸಿಯಾಗುವ ಸಮಸ್ಯೆ ಎದುರಿಸುತ್ತಿದ್ದಾರೋ ಅವರು ಚಿಂತೆ ಮಾಡಬೇಕಿಲ್ಲ. ಹಾಗಿದ್ರೆ, ಈ ಸಮಸ್ಯೆಗೆ ಪರಿಹಾರ ಏನು?, ಯಾಕೆ ಈ ಫೋನ್ ಬಿಸಿಯಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಒನ್‌ಪ್ಲಸ್ ನಾರ್ಡ್ CE4 ಸ್ಮಾರ್ಟ್‌ಫೋನ್‌ನಲ್ಲಿ ಸಮಸ್ಯೆ: ಈ ಫೋನ್‌ನ ಹೀಟಿಂಗ್ ಸಮಸ್ಯೆಯನ್ನು ಪರಿಹರಿಸುವ ಮತ್ತು ಕ್ಯಾಮೆರಾ ಗುಣಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ, ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿಶೇಷವಾಗಿ ಭಾರತೀಯ ಬಳಕೆದಾರರಿಗೆ ಹೊಸ ನವೀಕರಣವನ್ನು ಪ್ರಕಟಿಸಿದೆ. ಒನ್‌ಪ್ಲಸ್ ನಾರ್ಡ್ CE4 ಅನ್ನು ಇತ್ತೀಚೆಗೆ ಭಾರತದಲ್ಲಿ ಲಾಂಚ್ ಮಾಡಲಾಗಿದ್ದು, ಕೆಲವು ಬಳಕೆದಾರರು ಡೇಟಾವನ್ನು ವರ್ಗಾಯಿಸುವಾಗ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಇರುವಾಗ ಫೋನ್ ಹೆಚ್ಚು ಬಿಸಿಯಾಗುತ್ತದೆ ಎಂದು ದೂರಿದ್ದಾರೆ.
ನವೀಕರಣದಲ್ಲಿ ಏನೇನಿದೆ?: ಆಕ್ಸಿಜನ್ ಓಎಸ್ 14.0.1.427 ಅಪ್‌ಡೇಟ್‌ನ ನಂತರ ಎಐ ಎರೇಸರ್ ಟೂಲ್ ಅನ್ನು ಸೇರಿಸಲಾಗಿದ್ದು, ಕಂಪನಿಯು ಈಗ IN: CPH2613_14.0.1.429(EX01) ಎಂಬ ಹೊಸ ಆವೃತ್ತಿಯನ್ನು ತಂದಿದೆ. ಹೊಸ ಅಪ್‌ಡೇಟ್ ಭಾರತೀಯ ಗ್ರಾಹಕರಿಗಾಗಿ ಮತ್ತು ಕ್ಯಾಮೆರಾ ಸ್ಥಿರತೆ ಮತ್ತು ಫೋನ್‌ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಜೊತೆಗೆ ಹೀಟಿಂಗ್ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಒನ್‌ಪ್ಲಸ್ ಅಪ್‌ಡೇಟ್ ಅನ್ನು ಈ ಸಮಯದಲ್ಲಿ ಕಡಿಮೆ ಸಂಖ್ಯೆಯ ಬಳಕೆದಾರರಿಗೆ ಹೊರತರಲಾಗುತ್ತಿದೆ. ಹಾಗಂದ ಮಾತ್ರಕ್ಕೆ ನೀವು ಚಿಂತೆ ಮಾಡಬೇಡಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರನ್ನು ತಲುಪುವ ನಿರೀಕ್ಷೆಯಿದೆ. ಇನ್ನು ಹಲವಾರು ಒನ್‌ಪ್ಲಸ್ ನಾರ್ಡ್ CE4 ಬಳಕೆದಾರರು ಮಿತಿಮೀರಿದ ಮತ್ತು ಇತರ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಲೇ ಇದ್ದಾರೆ. ಕಮ್ಯೂನಿಟಿ ಪೇಜ್‌ನಲ್ಲಿ, ಬೇರೆ ಫೋನ್‌ಗೆ ಡೇಟಾವನ್ನು ವರ್ಗಾಯಿಸುವಾಗ ಮತ್ತು ಜೂಮ್ ಬಳಸುವಾಗ ಫೋನ್ ಹೆಚ್ಚು ಬಿಸಿಯಾಗುತ್ತದೆ ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ. ಜೊತೆಗೆ ವಿಡಿಯೋ ಕರೆಯಲ್ಲಿ ಹಾಗೂ ಯೂಟ್ಯೂಬ್ ಬಳಕೆ ಮಾಡುವಾಗ ಈ ಫೋನ್ ಹೆಚ್ಚು ಬಿಸಿಯಾಗುತ್ತದೆ ಎಂದು ವರದಿ ಮಾಡಿದ್ದಾರೆ.
ಈ ನಡುವೆ ಫಿಂಗರ್‌ಪ್ರಿಂಟ್ ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಈ ಫೋನ್ ಕೆಲವೊಮ್ಮೆ ನಿಧಾನವಾಗಿ ಕೆಲಸ ಮಾಡುತ್ತದೆ ಎಂದು ದೂರಲಾಗಿದೆ. ಆದರೆ, ಈಗ ಈ ಎಲ್ಲಾ ಸಮಸ್ಯೆಗಳನ್ನು ಈ ಒಂದು ನವೀಕರಣದೊಂದಿಗೆ ಪರಿಹರಿಸಲು ಒನ್‌ಪ್ಲಸ್ ಮುಂದಾಗಿದೆ. ಈ ಮೂಲಕ ಈ ಫೋನ್ ಬಳಕೆದಾರರು ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ, ಯಾವುದೇ ಕಾರ್ಯಗಳನ್ನಾದರೂ ಸಹ ಸಲೀಸಾಗಿ ಮಾಡಬಹುದಾಗಿದೆ.
ಒನ್‌ಪ್ಲಸ್ ನಾರ್ಡ್ CE4 ಬಗ್ಗೆ ಮಾಹಿತಿ: ಈ ಸ್ಮಾರ್ಟ್‌ಫೋನ್‌ನ 8GB+128GB ಸ್ಟೋರೇಜ್ ವೇರಿಯಂಟ್ ಫೋನ್‌ಗೆ 24,999 ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದ್ದು, ಇದು 6.7-ಇಂಚಿನ FHD+ 120Hz ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಕ್ವಾಲ್ಕಾಮ್ನ್ ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 5500 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.


Click it and Unblock the Notifications








