Google AI: ಬೆಂಗಳೂರಿನ ಕೆಟ್ಟ ಟ್ರಾಫಿಕ್ ಜಾಮ್ ತಡೆಯಲು ಗೂಗಲ್ ಎಐ ಎಂಟ್ರಿ!
ಗೂಗಲ್ (Google) ಎಲ್ಲಾ ವಿಭಾಗದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಈ ನಡುವೆ ಗೂಗಲ್‌ನ ಎಐ (Google AI) ತಂತ್ರಜ್ಞಾನವು ಕೆಲವು ಭಾರತೀಯ ನಗರಗಳಲ್ಲಿ ಟ್ರಾಫಿಕ್ ಜಾಮ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹೊಸ ತಂತ್ರಜ್ಞಾನವನ್ನು ಈಗಾಗಲೇ ಪರೀಕ್ಷಿಸಲಾಗುತ್ತಿದೆ. ಅದರಲ್ಲೂ ಬೆಂಗಳೂರಿಗರಿಗಂತೂ ಸಂತಸದ ವಿಚಾರವಾಗಲಿದೆ.
ಹೌದು, ಇಂದಿನ ದಿನಗಳಲ್ಲಿ ಮಹಾನಗರಗಳಲ್ಲಿ ದೊಡ್ಡ ಸಮಸ್ಯೆ ಎಂದರೆ ಸಂಚಾರ ದಟ್ಟಣೆ. ಇದರಿಂದ ಆಗುವ ಸಮಸ್ಯೆ ಅಷ್ಟಿಷ್ಟಲ್ಲ ಅದರಲ್ಲೂ ಬೆಂಗಳೂರಂತ ನಗರಗಳಲ್ಲಿ ಉದ್ಯೋಗಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಗೂಗಲ್ ಹೊಸ ಸೇವೆ ನೀಡಲು ಮುಂದಾಗಿದೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುವ ಸಂಚಾರದಟ್ಟಣೆಯನ್ನು ತಡೆಗಟ್ಟಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ?, ಇದಕ್ಕೆ ನಿರ್ಧಿಷ್ಟ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಎಐ: ಸಂಚಾರ ದಟ್ಟಣೆ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ (Delhi, Mumbai, Bangalore, Kolkata) ಸೇರಿದಂತೆ ಇತರೆ ನಗರಗಳು. ಈ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲತೆ ಉಂಟಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಈ ಸಂಚಾರದಟ್ಟಣೆ ಪರಿಸರಕ್ಕೂ ಮಾರಕವಾಗಿದೆ. ಏಕೆಂದರೆ ವಾಹನಗಳಿಂದ ಬರುವ ಹೊಗೆ ಹೆಚ್ಚಿದ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಆದರೆ ಗೂಗಲ್ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದೆ. ಜೊತೆಗೆ ಈಗಾಗಲೇ ಕೆಲವು ಪ್ರಮುಖ ಭಾರತೀಯ ನಗರಗಳಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಿದೆ.
ಈ ಸಂಬಂಧ ಮಾಜಿ ಶಿಯೋಮಿ ಉತ್ಪನ್ನ ನಿರ್ವಾಹಕ ಸುದೀಪ್ ಸಾಹು ಅವರ ಟ್ವೀಟ್ ವೈರಲ್ ಆಗುತ್ತಿದೆ. ಬೆಂಗಳೂರು, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಗೂಗಲ್ ಎಐ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಅಲ್ಲಿ ವಿವರಿಸಲಾಗಿದೆ. ಅವರ ಟ್ವೀಟ್ ಪ್ರಕಾರ, ಗೂಗಲ್‌ನ ಎಐ ಪ್ರಾಜೆಕ್ಟ್ ಗ್ರೀನ್ ಲೈಟ್ ನ (Google AI Project Green Light) ಭಾಗವಾಗಿ ಬೆಂಗಳೂರಿನಲ್ಲಿ ಹೊಸ ಟ್ರಾಫಿಕ್ ಲೈಟ್‌ಗಳನ್ನು ಅಳವಡಿಸಿದೆಯಂತೆ.
ಈ ಉಪಕ್ರಮವು ವಿವಿಧ ವಿಭಾಗಗಳಲ್ಲಿ ಉತ್ತಮ ಸಂಚಾರಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಸಂಚಾರ ದಟ್ಟಣೆ ಒಂದೇ ಅಲ್ಲದೆ ಅಂತಿಮವಾಗಿ ವಾಹನಗಳಿಂದ ಆಗುವ ಹೊರಸೂಸುವಿಕೆಯನ್ನು ಕಡಿಮೆ ಮಾಡಲಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಸಾಹು ಅವರು ಗೂಗಲ್‌ನಿಂದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ವೀಡಿಯೊದ ಪ್ರಕಾರ, ಪ್ರಾಜೆಕ್ಟ್ ಗ್ರೀನ್ ಲೈಟ್ (Project Green Light) ವಿವಿಧ ನಗರಗಳಲ್ಲಿ ವಾಹನಗಳಿಂದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗೂಗಲ್‌ನ ಎಐ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ನಿರ್ದಿಷ್ಟ ಪ್ರದೇಶದಲ್ಲಿ ಡ್ರೈವಿಂಗ್ ಟ್ರೆಂಡ್‌ಗಳನ್ನು ಗಮನಿಸಿ, ಗೂಗಲ್ ಮ್ಯಾಪ್ಸ್ ನಿಂದ (Google Maps) ಡೇಟಾವನ್ನು ವಿಶ್ಲೇಷಿಸುವ ಮೂಲಕ ಇದನ್ನು ಮಾಡಲಾಗುತ್ತದಂತೆ. ಇದರ ಆಧಾರದ ಮೇಲೆ, ಎಲ್ಲಿ ಯಾವ ಪ್ರಮಾಣದ ಸಂಚಾರ ದಟ್ಟಣೆ ಇರಲಿದೆ?, ಎಷ್ಟು ಸಮಯ ಸಂಚಾರ ದಟ್ಟಣೆ ಅಗಲಿದೆ ಎಂಬುದನ್ನು ನಿಖರವಾಗಿ ತಿಳಿಯಲಾಗುತ್ತದೆ.
ಗೂಗಲ್‌ನ ಗ್ರೀನ್ ಲೈಟ್ ಪ್ರಾಜೆಕ್ಟ್: ಅಕ್ಟೋಬರ್ 10 ರ ಬ್ಲಾಗ್ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆ. ಗೂಗಲ್ ಪ್ರಾಜೆಕ್ಟ್ ಗ್ರೀನ್ ಲೈಟ್ ಅನ್ನು ಘೋಷಿಸಿದ್ದು, ಇದನ್ನು ಬಳಸುವುದರಿಂದ ನಗರಗಳು ಟ್ರಾಫಿಕ್ ಸಮಸ್ಯೆಗಳಿಂದ (Traffic problem) ಮುಕ್ತಿ ಪಡೆದುಕೊಳ್ಳಬಹುದು. ಹಾಗೆಯೇ ಅವುಗಳ ಒಟ್ಟಾರೆ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಗಿದೆ.

ಇನ್ನು ಗೂಗಲ್ ಸಂಶೋಧನಾ ತಂಡಗಳು ಎಐ ಬಳಕೆಯನ್ನು ಅನ್ವೇಷಿಸುತ್ತಿದ್ದು, ಗೂಗಲ್ ನಕ್ಷೆಗಳಿಂದ ಮಾದರಿ ಛೇದಕಗಳು ಮತ್ತು ಟ್ರಾಫಿಕ್ ಹರಿವಿಗೆ ಚಾಲನೆಯ ಟ್ರೆಂಡ್‌ಗಳನ್ನು ಅನ್ವೇಷಿಸುತ್ತಿವೆ. ನಾವು ಪ್ರತಿ ಛೇದನದ ಎಐ ಆಧಾರಿತ ಮಾದರಿಯನ್ನು ನಿರ್ಮಿಸುತ್ತೇವೆ ಅಂದರೆ ಅದರ ರಚನೆ, ಟ್ರಾಫಿಕ್ ಮಾದರಿಗಳು, ಲೈಟ್‌ಗಳ ವೇಳಾಪಟ್ಟಿ, ಮತ್ತು ಟ್ರಾಫಿಕ್ ಮತ್ತು ಲೈಟ್‌ಗಳ ವೇಳಾಪಟ್ಟಿಗಳು ಹೇಗೆ ಸಂವಹನ ನಡೆಸುತ್ತವೆ. ಇದಾದ ನಂತರ ನಾವು ಟ್ರಾಫಿಕ್ ಲೈಟ್‌ಗಳ ನಡುವಿನ ಪರಸ್ಪರ ಕ್ರಿಯೆಯ ಮಾದರಿಯನ್ನು ಸಹ ನಿರ್ಮಿಸುತ್ತೇವೆ ಎಂದು ಗೂಗಲ್ ತಿಳಿಸಿದೆ.


Click it and Unblock the Notifications








