Gemini: ಮೋದಿ ಬಗ್ಗೆ ಜೆಮಿನಿಯ ವಿವಾದಾತ್ಮಕ ಪ್ರತ್ಯುತ್ತರ: ಭಾರತ ಸರ್ಕಾರದ ಕ್ಷಮೆ ಕೇಳಿದ ಗೂಗಲ್
ಭಾರತ ಸರ್ಕಾರ ಟೆಕ್ನಾಲಜಿ ವಿಷಯದಲ್ಲಿ ಇತರೆ ರಾಷ್ಟ್ರಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ. ಅದರಂತೆ ಭಾರತ ಎಲ್ಲಾ ರೀತಿಯ ಟೆಕ್ ದೈತ್ಯರಿಗೆ ದೊಡ್ಡ ಮೈದಾನವನ್ನೇ ಸೃಷ್ಟಿಮಾಡಿಕೊಟ್ಟಿದ್ದು, ಇವುಗಳ ತೀವ್ರ ಸ್ಫರ್ಧೆಯಿಂದ ಬಳಕೆದಾರರಿಗೆ ಉತ್ತಮವಾದ ಟೆಕ್ನಾಲಜಿ ಅನುಭವ ಲಭ್ಯ ಆಗುತ್ತಿದೆ. ಆದರೆ ಈಗ ಮೋದಿ ಬಗ್ಗೆಯೇ ಜೆಮಿನಿ ಅನುಚಿತ ಕಾಮೆಂಟ್ ಮಾಡಿದ್ದು, ಈಗ ಮಂಡಿಯೂರಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಎಐ ಪ್ಲಾಟ್‌ಫಾರ್ಮ್ ಜೆಮಿನಿ (AI platform Gemini) ಮಾಡಿದ ವಿವಾದಾತ್ಮಕ ಕಾಮೆಂಟ್ ಹಿನ್ನೆಲೆ ಗೂಗಲ್ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದೆ. ಈ ಘಟನೆ ಹಿನ್ನೆಲೆ ಸರ್ಕಾರ ಮತ್ತಷ್ಟು ಕಠಿಣವಾಗಿದ್ದು, ಈ ರೀತಿಯ ಎಐ ಪ್ಲಾಟ್‌ಫಾರ್ಮ್‌ಗಳಿಗೆ ಎಚ್ಚರಿಕೆ ರವಾನಿಸಿದೆ. ಹಾಗಿದ್ರೆ, ಏನಿದು ಘಟನೆ?, ಮೋದಿ ಬಗ್ಗೆ ಜೆಮಿನಿ ಮಾಡಿದ ಕಾಮೆಂಟ್ ಏನು?, ಹಾಗೆಯೇ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನೀಡಿದ ಎಚ್ಚರಿಕೆ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಜೆಮಿನಿ: ಗೂಗಲ್ ಇದೀಗ ಭಾರತಕ್ಕೆ ಕ್ಷಮೆಯಾಚಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗೂಗಲ್‌ನ ಎಐ ಪ್ಲಾಟ್‌ಫಾರ್ಮ್ ಜೆಮಿನಿ ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಎಐ ಪ್ಲಾಟ್‌ಫಾರ್ಮ್ ಜೆಮಿನಿ ಅಷ್ಟು ವಿಶ್ವಾಸಾರ್ಹವಾಗಿಲ್ಲ. ಇದೀಗ ಗೂಗಲ್ ಕ್ಷಮೆಯಾಚಿಸಿದೆ ಎಂದು ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಇನ್ನು ಗೂಗಲ್ ಜೆಮಿನಿಯು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಇತರೆ ಸೆಲೆಬ್ರಿಟಿಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ವಿವಾದಾತ್ಮಕ ಉತ್ತರಗಳನ್ನು ನೀಡಿದೆ. ನೆಟ್ಟಿಗರೊಬ್ಬರು ಮೋದಿ ಬಗ್ಗೆ ನೀಡಿದ ಉತ್ತರದ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ಈಗ ಭಾರೀ ವೈರಲ್ ಆಗಿದೆ.

ಈ ನಡುವೆ ಗೂಗಲ್ ಎಐ ಟೂಲ್ ಪಕ್ಷಪಾತಿಯಾಗುತ್ತಿದೆ ಎಂದು ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ವಿಷಯವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದ್ದು, ಈ ನಡುವೆ ಇದು ಐಟಿ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಐಟಿ ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಗೂಗಲ್‌ಗೆ ಕೇಂದ್ರ ನೋಟಿಸ್ ನೀಡಿದ್ದು, ಪ್ರತಿಕ್ರಿಯೆಯಾಗಿ ಗೂಗಲ್ ಕ್ಷಮೆಯಾಚಿಸಿದೆ.
ಈ ಸಂಬಂಧ ರಾಜೀವ್ ಚಂದ್ರಶೇಖರ್ ಅವರ ಹೇಳಿಕೆಯೊಂದಿಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಅದರಂತೆ ದೇಶದಲ್ಲಿ ಪರೀಕ್ಷಾ ಹಂತದಲ್ಲಿರುವ ಮತ್ತು ತರಬೇತಿಯಲ್ಲಿರುವ ಎಐ ಟೂಲ್ಸ್ ಅನ್ನ ಪ್ರಾರಂಭಿಸಲು ಬಯಸಿದರೆ ಸಂಬಂಧಪಟ್ಟ ಎಐ ಪ್ಲಾಟ್‌ಫಾರ್ಮ್‌ಗಳಿಂದ ಪೂರ್ವಾನುಮತಿ ತೆಗೆದುಕೊಳ್ಳುವಂತೆ ಚಂದ್ರಶೇಖರ್ ಸಲಹೆಯನ್ನು ನೀಡಿದೆ. ಇನ್ನು ಸ್ಟಾರ್ಟ್ ಅಪ್ ಕಂಪನಿಗಳಿಗೆ ಕೇಂದ್ರ ವಿನಾಯಿತಿ ನೀಡಿದೆ. ಈ ನಿಬಂಧನೆಯು ದೊಡ್ಡ ಟೆಕ್ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿದುಬಂದಿದೆ.

ಅದಾಗ್ಯೂ ಗೂಗಲ್‌ನ ಕ್ಷಮೆಯಾಚನೆಯನ್ನು ಟೀಕಿಸಿದ ಸಚಿವ ಚಂದ್ರಶೇಖರ್, ಪ್ಲಾಟ್‌ಫಾರ್ಮ್ ಅನ್ನು ವಿಶ್ವಾಸಾರ್ಹವಲ್ಲ ಎಂದು ಕರೆಯುವುದು ಮಾನ್ಯವಾದ ವಿಷಯವಲ್ಲ. ಬಳಕೆದಾರರಿಗೆ ತಪ್ಪುದಾರಿಗೆಳೆಯುವ ಅಥವಾ ಪರಿಶೀಲಿಸದ ಮಾಹಿತಿಯನ್ನು ನೀಡುವ ಅಪಾಯವಿದ್ದರೆ ಗ್ರಾಹಕ ಪರಿಹಾರಗಳನ್ನು ಒದಗಿಸುವಾಗ ಎಐ ಪ್ಲಾಟ್‌ಫಾರ್ಮ್‌ಗಳು ಪ್ರಾಯೋಗಿಕ ಹಂತಗಳಲ್ಲಿ ಕಾರ್ಯನಿರ್ವಹಿಸಬಾರದು ಎಂದಿದ್ದಾರೆ.
ಮಿನಿಯಂತಹ ಪ್ಲಾಟ್‌ಫಾರ್ಮ್‌ಗಳು ಸಂಭಾವ್ಯ ತಪ್ಪುಗಳು ಅಥವಾ ಕಾನೂನುಬಾಹಿರ ವಿಷಯಗಳ ಬಗ್ಗೆ ಬಳಕೆದಾರರಿಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು ಎಂದು ಸಚಿವ ಚಂದ್ರಶೇಖರ್ ಒತ್ತಾಯಿಸಿದ್ದು, ಸುಳ್ಳು ಅಥವಾ ಕಾನೂನುಬಾಹಿರ ಮಾಹಿತಿಯನ್ನು ಪ್ರಸಾರ ಮಾಡಿದ್ರೆ ಎಐ ಪ್ಲಾಟ್‌ಫಾರ್ಮ್‌ಗಳು ಭಾರತೀಯ ಐಟಿ ಮತ್ತು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


Click it and Unblock the Notifications








