Gmail Shutting Down: ಜಿಮೇಲ್ ಸೇವೆ ನಿಜಕ್ಕೂ ಸ್ಥಗಿತವಾಗುತ್ತಾ? ಗೂಗಲ್ ಹೇಳಿದ್ದೇನು?
ಗೂಗಲ್ (Google) ಈಗಾಗಲೇ ನೀಡಿರುವ ಸಾಕಷ್ಟು ಸೇವೆಗಳಲ್ಲಿ ಜಿಮೇಲ್ ಪ್ರಮುಖವಾಗಿದೆ. ಈ ಜಿಮೇಲ್ ಖಾತೆ ಮೂಲಕ ಜನರು ಎಲ್ಲಾ ರೀತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಜಿಮೇಲ್ (Gmail Shutting Down) ಇನ್ನೇನು ಕೆಲವೇ ದಿನಗಳಲ್ಲಿ ಸ್ಥಗಿತವಾಗಲಿದೆಯಂತೆ.
ಹೌದು, ಗೂಗಲ್ ಶೀಘ್ರದಲ್ಲೇ ಜಿಮೇಲ್ ಸೇವೆಗಳನ್ನು ನಿಲ್ಲಿಸಲಿದೆ ಎಂಬ ಹಲವಾರು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ಮೂಲಕ ಮುಂದೆ ಏನಪ್ಪಾ ಅನ್ನೋ ಗೊಂದಲದಲ್ಲಿ ಜನರು ಚರ್ಚೆ ಮಾಡಲು ಮುಂದಾಗಿದ್ದಾರೆ. ಹಾಗಿದ್ರೆ, ನಿಜಕ್ಕೂ ಜಿಮೇಲ್ ಸ್ಥಗಿತವಾಗುತ್ತದೆಯೇ?, ಜಿಮೇಲ್‌ನಲ್ಲಿ ಏನಾದರೂ ಹೊಸ ಬದಲಾವಣೆ ಆಗಲಿದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಿಮೇಲ್ ಸೇವೆ ಸ್ಥಗಿತ?: ಗೂಗಲ್‌ನ ಪ್ರಮುಖ ಸೇವೆಯಾದ ಜಿಮೇಲ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಎಕ್ಸ ನಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಗೂಗಲ್ ಜಿಮೇಲ್ ಸೇವೆಗಳನ್ನು ಸ್ಥಗಿತಗೊಳಿಸುವ ಸುದ್ದಿ ನಿಜವೋ ಸುಳ್ಳೋ ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಖಂಡಿತಾ ಜಿಮೇಲ್ ಸೇವೆ ಸ್ಥಗಿತ ಆಗುವುದಿಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ.
ಈ ಸಂಬಂಧ ವೈರಲ್ ಪೋಸ್ಟ್ ಬಹಳ ಸದ್ದು ಮಾಡುತ್ತಿದೆ. ಅದರಲ್ಲಿ ಇರುವಂತೆ 'ಆತ್ಮೀಯ ಜಿಮೇಲ್ ಬಳಕೆದಾರರೇ, ನಾವು ಜಿಮೇಲ್ ಕುರಿತು ಮಹತ್ವದ ನವೀಕರಣವನ್ನು ಹಂಚಿಕೊಳ್ಳಲು ಮುಂದಾಗಿದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಅಸಂಖ್ಯಾತ ಸಂಪರ್ಕಗಳನ್ನು ಉತ್ತೇಜಿಸಿದ ವರ್ಷಗಳ ನಂತರ ಜಿಮೇಲ್‌ನ ಪ್ರಯಾಣವು ಮುಕ್ತಾಯಗೊಳ್ಳುತ್ತಿದೆ. ಆಗಸ್ಟ್ 1, 2024 ರಂದು, ಜಿಮೇಲ್ ಅಧಿಕೃತವಾಗಿ ಮುಕ್ತಾಯವಾಗುತ್ತದೆ. ಇದರರ್ಥ ಈ ದಿನಾಂಕದಿಂದ ಜಿಮೇಲ್ ಇನ್ನು ಮುಂದೆ ಇಮೇಲ್‌ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬೆಂಬಲಿಸುವುದಿಲ್ಲ' ಎಂದು ಉಲ್ಲೇಖಿಸಲಾಗಿದೆ.
'ಜಿಮೇಲ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ವಿಕಸನಗೊಳ್ಳುತ್ತಿರುವ ಡಿಜಿಟಲ್ ಲ್ಯಾಂಡ್‌ಸ್ಕೇಪ್ ಮತ್ತು ನಮ್ಮ ಬಳಕೆದಾರರ ಅಗತ್ಯಗಳನ್ನು ಪೂರೈಸುವ ಉತ್ತಮ ಗುಣಮಟ್ಟದ, ನವೀನ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಎಚ್ಚರಿಕೆಯಿಂದ ಪರಿಗಣಿಸಿ ತೆಗೆದುಕೊಳ್ಳಲಾಗಿದೆ. ಪ್ರಗತಿ ಮತ್ತು ಹೊಂದಾಣಿಕೆಯ ಉತ್ಸಾಹದಲ್ಲಿ ನಾವು ಹೊಸ ತಂತ್ರಜ್ಞಾನಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ನಮ್ಮ ಸಂಪನ್ಮೂಲಗಳನ್ನು ಕೇಂದ್ರೀಕರಿಸುವುದರ ಜೊತೆಗೆ ಆನ್‌ಲೈನ್‌ನಲ್ಲಿ ಸಂವಹನ ಮಾಡುವ ಮತ್ತು ಸಂವಹನ ನಡೆಸುವ ವಿಭಾಗದಲ್ಲಿ ಕ್ರಾಂತಿಯನ್ನುಂಟುಮಾಡುವುದನ್ನು ಮುಂದುವರಿಸುತ್ತೇವೆ' ಎಂದು ಆ ವೈರಲ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಇಷ್ಟೆಲ್ಲಾ ಆದ ನಂತರ ಗೂಗಲ್ ಕೊನೆಗೂ ಎಕ್ಸ್‌ನಲ್ಲಿ ಬಂದು ಒಂದೇ ಪದದಲ್ಲಿ ಗೂಗಲ್ ಇನ್ನೂ ಇರಲಿದೆ ಎಂದು ತಿಳಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದ್ದ ಚರ್ಚೆಗೆ ಫುಲ್ ಸ್ಟಾಪ್ ಇಡಲಾಗಿದೆ. ಅಷ್ಟಕ್ಕೂ ವಿಷಯ ಈಗ ಮುನ್ನೆಲೆಗೆ ಬರಲು ಕಾರಣ ಸಹ ಇದೆ. ಅದೇನೆಂದರೆ ಈ ಹಿಂದೆ ಜಿಮೇಲ್‌ನ ಕ್ಲಾಸಿಕ್ ಹೆಚ್‌ಟಿಎಮ್‌ಎಲ್ ವ್ಯೂ ಅನ್ನು 2024 ರಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಗೂಗಲ್ ಘೋಷಣೆ ಮಾಡಿತ್ತು.
ಜಿಮೇಲ್ ಬಳಕೆದಾರರನ್ನು ಮೂಲ ಹೆಚ್‌ಟಿಎಮ್‌ಎಲ್ ವೀಕ್ಷಣೆಯಿಂದ ಜಿಮೇಲ್‌ನ ಇತ್ತೀಚಿನ ಆವೃತ್ತಿಗೆ ಪರಿವರ್ತಿಸುವ ಕೆಲಸ ಮಾಡುತ್ತಿದೆ. ಇದನ್ನು ಸ್ಟ್ಯಾಂಡರ್ಡ್ ವ್ಯೂ (standard view) ಎಂದು ಕರೆಯಲಾಗುತ್ತದೆ. ಈ ಸಣ್ಣ ಬದಲಾವಣೆ ಹೊರತಾಗಿ ಇಮೇಲ್ ಸೇವೆಯು ಎಂದಿನಂತೆ ಮುಂದುವರೆಯಲಿದೆ. ಈ ಮೂಲಕ ಬಳಕೆದಾರರಿಗೆ ಗೂಗಲ್ ಹೊಸ ಅನುಭವಗಳನ್ನು ಮತ್ತು ಜಿಮೇಲ್‌ಗೆ ಅಪ್‌ಗ್ರೇಡ್‌ಗಳನ್ನು ಪರಿಚಯಿಸುವುದನ್ನು ಮುಂದುವರೆಸಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಕೆಲವರು ಈ ಸಂಬಂಧ ನಕಲಿ ಫೋಟೋವನ್ನು ಎಲ್ಲಾ ಕಡೆ ಶೇರ್ ಮಾಡಿ ಜನರಲ್ಲಿ ಆತಂಕ ಉಂಟು ಮಾಡಿದ್ದಾರೆ.


Click it and Unblock the Notifications








