ಅಂಡ್ರಾಯ್ಡ್‌ನಲ್ಲಿ eSIM ವರ್ಗಾವಣೆ ಸುಲಭಗೊಳಿಸಲು ಮುಂದಾದ ಗೂಗಲ್! ಏನಿದು ಇ-ಸಿಮ್?, ಹೇಗೆ ಕೆಲಸ ಮಾಡಲಿದೆ?
ಇತ್ತೀಚಿನ ದಿನಗಳಲ್ಲಿ ಸಿಮ್‌ಗಳಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಗಳು ಜರುಗುತ್ತಿವೆ. ಓರ್ವ ವ್ಯಕ್ತಿ ಒಂದು ಐಡಿಗೆ ನಾಲ್ಕು ಸಿಮ್‌ಗಳನ್ನು ಮಾತ್ರ ಖರೀದಿ ಮಾಡುವಂತೆ ಸರ್ಕಾರ ನಿಯಮ ರೂಪಿಸಿದೆ. ಜೊತೆಗೆ ಸಿಮ್ ಮಾರಾಟಗಾರರು ಸಿಮ್ ಮಾರುವ ಮುನ್ನ ಹೆಚ್ಚಿನ ಕಾಳಜಿ ಹೊಂದಿರಬೇಕು ಎಂದು ಎಚ್ಚರಿಸಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇ-ಸಿಮ್ (eSIM) ವಿಚಾರ ಮುನ್ನೆಲೆಗೆ ಬಂದಿದೆ.
ಹೌದು, ಇಸಿಮ್‌ಗಳು ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಜನಪ್ರಿಯತೆ ಪಡೆಯುತ್ತಿವೆ. ಅದರಲ್ಲೂ ಆಪಲ್ ಐಫೋನ್ 14 ಸರಣಿಯಲ್ಲಿ ಇ-ಸಿಮ್ ಆಯ್ಕೆ ನೀಡಲಾಗಿದ್ದು, ಇದು ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಈ ನಡುವೆ ಸಂಪೂರ್ಣ ಇ-ಸಿಮ್ ಕಲ್ಪನೆಯೊಂದಿಗೆ ಗೂಗಲ್ (Google) ಒಂದು ಹೆಜ್ಜೆ ಮುಂದಿಡುತ್ತಿದ್ದು, ಬಳಕೆದಾರರಿಗೆ ಇ-ಸಿಮ್ ಅನ್ನು ಒಂದು ಡಿವೈಸ್‌ನಿಂದ ಮತ್ತೊಂದಕ್ಕೆ ವರ್ಗಾಯಿಸಲು ಸುಲಭ ಮಾಡಿಕೊಡಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ.

ಗೂಗಲ್ ಈ ವರ್ಷದ ಆರಂಭದಲ್ಲಿ ಇ-ಸಿಮ್ ವರ್ಗಾವಣೆ ಫೀಚರ್ಸ್‌ನಲ್ಲಿ(eSIM Transfer Features) ಕೆಲಸ ಮಾಡುತ್ತಿದೆ. ಈ ಮೂಲಕ ಬಳಕೆದಾರರು ಈ ಸಿಮ್‌ಅನ್ನು ಒಂದು ಡಿವೈಸ್‌ನಿಂದ ಮತ್ತೊಂದು ಡಿವೈಸ್‌ಗೆ ಸ್ಥಳೀಯವಾಗಿ ಬದಲು ಮಾಡಲು ಅನುವು ಮಾಡಿಕೊಡಲಿದೆ. ಸದ್ಯಕ್ಕೆ ಎರಡು ಡಿವೈಸ್‌ಗಳ ನಡುವೆ ಇ-ಸಿಮ್ ಗಳನ್ನು ಅದಲು ಬದಲು ಮಾಡಲು ಯಾವುದೇ ಆಯ್ಕೆ ಇಲ್ಲ. ಒಂದು ಡಿವೈಸ್‌ನಿಂದ ಇ-ಸಿಮ್ ಅನ್ನು ಅನ್ನು ನಿಷ್ಕ್ರಿಯಗೊಳಿಸಬೇಕು ಎಂದರೆ ಅದನ್ನು ಇನ್ನೊಂದು ಡಿವೈಸ್‌ನಲ್ಲಿ ಮತ್ತೆ ಸಕ್ರಿಯಗೊಳಿಸಬೇಕು.
ಸ್ಥಳೀಯ ಇ-ಸಿಮ್ ವರ್ಗಾವಣೆ ಬೆಂಬಲವು ಕ್ಯೂಆರ್ ಕೋಡ್‌ಗಳನ್ನು(QR code) ಆಧರಿಸಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಈ ಕ್ಯೂಆರ್ ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ಇ-ಸಿಮ್ ಅನ್ನು ಆಡ್ ಮಾಡಲು ಅನುಮತಿಸುತ್ತದೆ. ಈ ಹೊಸ ಫೀಚರ್ಸ್ ಇದೀಗ ಲೈವ್ ಆಗಿರದ ಕಾರಣ ಈ ವಿಚಾರದಲ್ಲಿ ಮುಂದಿನ ಹಂತಗಳು ಹೇಗಿರಲಿವೆ ಎಂಬ ಬಗ್ಗೆ ಮಾಹಿತಿ ಲಭ್ಯ ಇಲ್ಲ.
ಸದ್ಯಕ್ಕೆ ಗೂಗಲ್ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿಯನ್ನೂ ಸಹ ಘೋಷಣೆ ಮಾಡಿಲ್ಲ. ಆದರೆ, ಮುಂಬರುವ ಆಂಡ್ರಾಯ್ಡ್ 14 (Android 14) ಮೊದಲ ರೋಲ್‌ಔಟ್‌ನಲ್ಲಿ ಈ ಫೀಚರ್ಸ್ ಆಯ್ಕೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಿದಂತೆ ಪಿಕ್ಸೆಲ್ ಸ್ಮಾರ್ಟ್‌ಫೋನ್‌ನಲ್ಲಿ(Pixel smartphone) ಈ ಪ್ರಕ್ರಿಯೆಯ ಒಂದು ಭಾಗವಾಗಬಹುದು ಎಂದು ತಿಳಿದುಬಂದಿದೆ.
ಇದರಿಂದ ಬಳಕೆದಾರರಿಗೆ ಆಗುವ ಲಾಭ ಏನು?: ಗೂಗಲ್‌ನ ಮುಂಬರುವ ಸ್ಥಳೀಯ ಇ-ಸಿಮ್ ವರ್ಗಾವಣೆ ಫೀಚರ್ಸ್, ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಳ್ಳುವುದು, ಬಳಕೆದಾರ ಸ್ನೇಹಿ ಅನುಕೂಲ ನೀಡಲಿದೆ. ಅದರಲ್ಲೂ ಟೆಲಿಕಾಂ ಪೂರೈಕೆದಾರರ (Telecom Providers) ಮೇಲಿನ ಅವಲಂಬನೆಯನ್ನು ಇದು ತೆಗೆದುಹಾಕಲಿದ್ದು ಮತ್ತು ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭವಾಗಿಸುತ್ತದೆ.
ಏನಿದು ಇಸಿಮ್?: ಇ-ಸಿಮ್ ಅಥವಾ ಎಂಬೆಡೆಡ್ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್(Embedded Subscriber Identity Module) ಎಂದು ಕರೆಯಲಾಗುವ ಈ ಎಕ್ನಾಲಜಿ ಡಿಜಿಟಲ್ ಸಿಮ್ ಕಾರ್ಡ್ ಆಗಿದ್ದು, ಇದನ್ನು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಸ್ಮಾರ್ಟ್‌ವಾಚ್ ಅಥವಾ ಇತರ ಇಂಟರ್ನೆಟ್ ಆಫ್ ಥಿಂಗ್ಸ್ (IoT) ಡಿವೈಸ್‌ಗಳಲ್ಲಿ ನೇರವಾಗಿ ನಿರ್ಮಾಣ ಮಾಡಲಾಗುತ್ತದೆ. ಡಿವೈಸ್‌ನ ಸಿಮ್ ಕಾರ್ಡ್ ಸ್ಲಾಟ್‌ಗೆ ಸೇರಿಸಬೇಕಾದ ಸಾಂಪ್ರದಾಯಿಕ ಭೌತಿಕ ಸಿಮ್ ಕಾರ್ಡ್‌ಗಳಿಗಿಂತ ಭಿನ್ನವಾಗಿ, ಇಸಿಮ್‌ಗಳನ್ನು ಡಿವೈಸ್‌ನ ಹಾರ್ಡ್‌ವೇರ್‌ಗೆ ಸಂಯೋಜಿಸಲಾಗುತ್ತದೆ.
ಇದು ರಿಮೋಟ್ ಸಕ್ರಿಯಗೊಳಿಸುವಿಕೆ ಆಯ್ಕೆ ಹೊಂದಿದ್ದು, ಭೌತಿಕ ಸಿಮ್ ಕಾರ್ಡ್ ಅನ್ನು ಸೇರಿಸುವ ಅಗತ್ಯವಿಲ್ಲದೇ ಬಳಕೆದಾರರು ತಮ್ಮ ಸೆಲ್ಯುಲಾರ್ ಸೇವೆಯನ್ನು ರಿಮೋಟ್ ಆಗಿ ಸಕ್ರಿಯಗೊಳಿಕೊಳ್ಳಬಹುದು. ಈ ವಿಶೇಷ ಫೀಚರ್ಸ್ ಅಂತರಾಷ್ಟ್ರೀಯವಾಗಿ ಪ್ರಯಾಣಿಕರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಜೊತೆಗೆ ಬಳಕೆದಾರರು ಹೊಸ ಭೌತಿಕ ಸಿಮ್ ಕಾರ್ಡ್ ಅನ್ನು ಖರೀದಿ ಮಾಡದೆ ತಮಗೆ ಇಷ್ಟವಾದ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ಅದರಲ್ಲೂ ಈ ಇ-ಸಿಮ್ ತಂತ್ರಜ್ಞಾನವು ಬಹು ಸಿಮ್ ಪ್ರೊಫೈಲ್‌ಗಳನ್ನು ಪಡೆಯಲು ಡಿವೈಸ್‌ಗಳಿಗೆ ಅನುಕೂಲ ಮಾಡಿಕೊಡುತ್ತದೆ. ಇದರರ್ಥ ಒಂದೇ ಡಿವೈಸ್ ನಲ್ಲಿ ಬಹು ಫೋನ್ ಸಂಖ್ಯೆಗಳು ಅಥವಾ ಪ್ಲ್ಯಾನ್‌ಗಳೊಂದಿಗೆ ಸಂಯೋಜಿಸಬಹುದು. ಉದಾಹರಣೆಗೆ ಕೆಲಸ ಮತ್ತು ವೈಯಕ್ತಿಕ ಬಳಕೆಗಾಗಿ ಪ್ರತ್ಯೇಕ ಸಿಮ್‌ಗಳ ಅಗತ್ಯವಿರುವ ಬಳಕೆದಾರರಿಗೆ ಇದು ಅನುಕೂಲವಾಗಿದೆ.


Click it and Unblock the Notifications








