Gmail: ಮಿಲಿಯನ್‌ಗಟ್ಟಲೆ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್! ನಿಮ್ಮ ಖಾತೆ ರಕ್ಷಿಸಿಕೊಳ್ಳಿ
ಜಿಮೇಲ್ (Gmail) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲಾ ರೀತಿಯ ಆನ್‌ಲೈನ್ ಚಟುವಟಿಕೆಗೆ ಜಿಮೇಲ್ ಅಗತ್ಯವಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್ ಬಳಕೆ ಮಾಡಬೇಕು ಎಂದರೂ ಇದು ಕಡ್ಡಾಯ. ಈ ಕಾರಣಕ್ಕಾದರೂ ಪ್ರತಿಯೊಬ್ಬರೂ ಸಹ ಈ ಖಾತೆಯನ್ನು ಹೊಂದಿರುತ್ತಾರೆ. ಈ ನಡುವೆ ಜಿಮೇಲ್ ಬಳಕೆದಾರರಿಗೆ ಗೂಗಲ್ ಶಾಕಿಂಗ್ ಸುದ್ದಿ ನೀಡಿದೆ.
ಹೌದು, ಗೂಗಲ್ ಹೊರಡಿಸಿದ ಇತ್ತೀಚಿನ ಪ್ರಕಟಣೆಯಲ್ಲಿ ಜಿಮೇಲ್ ಬಳಕೆದಾರರಿಗೆ ತುರ್ತು ಗಡುವನ್ನು ನೀಡಲಾಗಿದೆ. ಇದರೊಳಗೆ ಎಚ್ಚೆತ್ತುಕೊಳ್ಳದೆ ಇದ್ದರೆ ಶೀಘ್ರದಲ್ಲೇ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಗೂಗಲ್ (Google) ತನ್ನ ಹೇಳಿಕೆಯಲ್ಲಿ ಉಲ್ಲೇಖ ಮಾಡಿದೆ. ಹಾಗಿದ್ರೆ, ಗೂಗಲ್ ಯಾಕೆ ಹೀಗೆ ಮಾಡುತ್ತಿದೆ?, ಯಾವೆಲ್ಲಾ ಖಾತೆಗಳು ಡಿಲೀಟ್ ಆಗಲಿವೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಜಿಮೇಲ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ನೀವು ಜಿಮೇಲ್ ಅನ್ನು ಬಳಕೆ ಮಾಡದೆ ಇದ್ದರೆ ನಿಮ್ಮ ಖಾತೆಯನ್ನು ಶೀಘ್ರದಲ್ಲೇ ನಿಷ್ಕ್ರಿಯ ಮಾಡಲಿದೆ ಗೂಗಲ್. ಹೌದು, ಗೂಗಲ್ ನ ಇತ್ತೀಚಿನ ಪ್ರಕಟಣೆಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಮಾಹಿತಿ ಪ್ರಕಾರ ಮುಂದಿನ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ನಿಷ್ಕ್ರಿಯ ಖಾತೆಗಳನ್ನು ಅಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದೆ ನಿಷ್ಕ್ರಿಯವಾಗಿರುವ ಖಾತೆಗಳನ್ನು ಈ ವೇಳೆ ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ. ಡಿಸೆಂಬರ್ 2023 ರಲ್ಲಿ ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಟೆಕ್ ದೈತ್ಯ ಗೂಗಲ್ ದೃಢಪಡಿಸಿದ್ದು, ಪರಿಣಾಮ ಯಾರೆಲ್ಲಾ ಎರಡು ವರ್ಷದಿಂದ ತಮ್ಮ ಖಾತೆಯನ್ನು ಬಳಕೆ ಮಾಡಿಲ್ಲವೋ ಅವರು ಜಿಮೇಲ್‌ನಲ್ಲಿ ಇರುವ ಪ್ರಮುಖ ಮಾಹಿತಿಯನ್ನು ಬ್ಯಾಕಪ್ ಮಾಡಿಕೊಳ್ಳಬೇಕಿದೆ.
ಜಿಮೇಲ್ ನಿಷ್ಕ್ರಿಯವಾಗುತ್ತವೆ ಎಂದಾಕ್ಷಣ ಎಲ್ಲರೂ ಸಹ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಜಿಮೇಲ್ ಡಾಕ್ಸ್, ಕ್ಯಾಲೆಂಡರ್ ಮತ್ತು ಫೋಟೋಗಳಂತ ವಿಭಾಗಗಳಿಗೆ ನಿಯಮಿತವಾಗಿ ಲಾಗಿನ್ ಆಗುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇವುಗಳನ್ನು ಸಕ್ರಿಯ ಖಾತೆಗಳು ಎಂದೇ ಭಾವಿಸಲಾಗುತ್ತದೆ. ಬದಲಾಗಿ ಗೂಗಲ್‌ನ ಯಾವ ವಿಭಾಗದಲ್ಲೂ ನಿಮ್ಮ ಜಿಮೇಲ್ ಖಾತೆ ಬಳಕೆ ಆಗಿಲ್ಲ ಎಂದಾದರೆ ಮಾತ್ರ ಅದನ್ನು ಡಿಲೀಟ್ ಮಾಡುವ ಕೆಲಸ ಮಾಡಲಾಗುತ್ತದೆ.

ಯಾಕೆ ಈ ನಿರ್ಧಾರ?: ಹಳೆಯ ಮತ್ತು ನಿಷ್ಕ್ರಿಯ ಖಾತೆಗಳು ಸೈಬರ್ ಬೆದರಿಕೆಗಳಿಗೆ ಹೆಚ್ಚು ಒಳಗಾಗುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಗೂಗಲ್ ಬಳಕೆದಾರರಿಗೆ ಸುರಕ್ಷತೆಯ ಖಾತರಿಯನ್ನು ನೀಡಲಿದೆ. ಹಾಗೆಯೇ ಗೂಗಲ್ ಈ ಸಂಬಂಧ ಹೇಳಿಕೆ ನೀಡಿದ್ದು, ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ, ನಾವು ಖಾತೆಯನ್ನು ಮತ್ತು ಅದರ ಕಂಟೆಂಟ್ ಅನ್ನು ಅಳಿಸಬಹುದು ಎಂದು ಎಚ್ಚರಿಸಿದೆ.
ಬಳಕೆದಾರರಿಗೆ ನೋಟಿಫಿಕೇಶನ್: ಬಳಕೆದಾರರಿಗೆ ಈ ಸಂಬಂಧ ಜಾಗರೂಕರಾಗಿರಲು ಮತ್ತು ಕೆಲವು ಹಂತಗಳನ್ನು ಅನುಸರಿಸಲು ಗೂಗಲ್ ಸಲಹೆ ನೀಡಿದೆ. ಗೂಗಲ್ ಖಾತೆಯನ್ನು ಅಳಿಸುವ ಮೊದಲು ಗೂಗಲ್ ಖಾತೆಯ ಇಮೇಲ್ ವಿಳಾಸ ಮತ್ತು ಬಳಕೆದಾರರು ಒದಗಿಸಿದ ಮರುಪ್ರಾಪ್ತಿ ಇಮೇಲ್ ಎರಡಕ್ಕೂ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತದೆ. ಇದರಿಂದ ಎಚ್ಚೆತ್ತುಕೊಂಡು ಡೇಟಾವನ್ನು ಎಲ್ಲಾದರೂ ಬೇರೆ ಕಡೆ ಸೇವ್ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ಅದಾಗ್ಯೂ ನಿಮ್ಮ ಜಿಮೇಲ್ ಖಾತೆಯೂ ಇನ್ನೂ ಸಹ ಜೀವಂತವಾಗಿ ಇರಬೇಕು ಎಂದರೆ ಮುಂಬರುವ ಗಡುವಿನ ಮೊದಲು ಲಾಗ್ ಇನ್ ಮಾಡುವ ಕೆಲಸ ಮಾಡಬೇಕಿದೆ. ಈ ಮೂಲಕ ಜಿಮೇಲ್‌ನಲ್ಲಿ ಸಕ್ರಿಯವಾಗಿರುವುದನ್ನು ಗೂಗಲ್‌ಗೆ ಮನವರಿಕೆ ಮಾಡಿಕೊಡಬಹುದು. ಜೊತೆಗೆ ನಿಮ್ಮ ಖಾತೆಯ ಸುರಕ್ಷತೆಯನ್ನೂ ಸಹ ಖಚಿತಪಡಿಸಿಕೊಳ್ಳಿ. ಸಾಧ್ಯವಾದರೆ ಪಾಸ್‌ವರ್ಡ್ ಬದಲಾವಣೆ ಮಾಡಿ ಹಾಗೂ ಎರಡು ಹಂತದ ದೃಢೀಕರಣ ಸಕ್ರಿಯಗೊಳಿಸಿ.


Click it and Unblock the Notifications








