ಇದ್ದಕ್ಕಿದ್ದಂತೆ ಗೂಗಲ್ ಪೇ ಬಳಕೆದಾರರಿಗೆ ಉಚಿತವಾಗಿ ಬಂತು 80,000ರೂ.ಗೂ ಹೆಚ್ಚಿನ ಹಣ! ಕಾರಣ?
ಗೂಗಲ್ ಪೇ ಆಪ್ ಪಾವತಿ ಸೇವೆಯಾಗಿದ್ದು, ಇದು ಬಹಳಷ್ಟು ಜನರಿಗೆ ಇದ್ದಕ್ಕಿದ್ದಂತೆ ಒಂದು ಸಾವಿರದಿಂದ ಹಿಡಿದು ಬರೋಬ್ಬರಿ ಎಂಬತ್ತು ಸಾವಿರದ ವರೆಗೆ ಬಳಕೆದಾರರಿಗೆ ಹಣ ಜಮಾ ಮಾಡಿದೆ. ಅರೇ.. ಇದೇನಿದು ಗೂಗಲ್ ಪೇ ಸುಖಾಸುಮ್ಮನೆ ನಮ್ಮ ಖಾತೆಗೆ ಹಣ ಜಮಾ ಮಾಡಿದೆ ಎಂದುಕೊಂಡ ಗ್ರಾಹಕರು ಅಚ್ಚರಿಗೆ ಒಳಗಾದ ಘಟನೆ ಜರುಗಿದೆ.
ಹೌದು, ಹಲವಾರು ಗೂಗಲ್ ಪೇ ಬಳಕೆದಾರರು ಇದ್ದಕ್ಕಿದ್ದಂತೆ ತಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಪಡೆದಿರುವ ಬಗ್ಗೆ ಎಲ್ಲಾ ಕಡೆ ವರದಿಯಾಗುತ್ತಿದ್ದು, ಈ ಸಂಬಂಧ ಕೆಲವರು ಭಾರೀ ಸಂತಸ ಹೊರಹಾಕಿದ್ದರು. ಆದರೆ, ಈ ಸಂತಸ ಕೆಲವು ಕ್ಷಣದ ವರೆಗೆ ಮಾತ್ರ ಇತ್ತು. ಹಾಗಿದ್ರೆ, ಗೂಗಲ್ ಪೇ ನಲ್ಲಿ ಕಂಡುಬಂದ ಸಮಸ್ಯೆ ಏನು?, ಯಾಕಾಗಿ ಹಲವು ಮಂದಿಯ ಖಾತೆಗೆ ಹಣ ಜಮೆ ಆಗಿತ್ತು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಕ್ಯಾಶ್‌ಬ್ಯಾಕ್ ರೂಪದಲ್ಲಿ ಜನರಿಗೆ ಹಣ ಹಂಚಿದ ಗೂಗಲ್ ಪೇ: ತಾಂತ್ರಿಕ ಸಮಸ್ಯೆಯಿಂದ ಇದ್ದಕ್ಕಿದ್ದಂತೆ ಅನಾಮಿಕ ಖಾತೆಗೆ ಹಣ ಜಮೆ ಆಗಿರುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಈಗ ಗೂಗಲ್ ಪೇನಲ್ಲಿ ಈ ಸಮಸ್ಯೆ ಸಂಭವಿಸಿದೆ. ಅಂದರೆ, ಕ್ಯಾಶ್‌ಬ್ಯಾಕ್ ರೂಪದಲ್ಲಿ ಯುಎಸ್ ಜನರಿಗೆ ಹಣವನ್ನು ನೀಡಿ ಪೇಚಿಗೆ ಸಿಲುಕಿದೆ. ಅದರಲ್ಲೂ ಕೆಲವು ಬಳಕೆದಾರರು ಬರೋಬ್ಬರಿ 80,000ರೂ. ಗಳಿಗೂ ಅಧಿಕ ಹಣ ಪಡೆದುಕೊಂಡಿದ್ದಾರೆ. ಇದನ್ನು ಪಡೆದ ಬಳಕೆದಾರರ ಸಂತೋಷಕ್ಕೆ ಪಾರವೇ ಇರಲಿಲ್ಲ ಎನ್ನಲಾಗಿದೆ.
ಗೂಗಲ್ ಪೇ ಯಾಕಾಗಿ ಇಷ್ಟೊಂದು ಹಣ ನೀಡಿದೆ?: ಗೂಗಲ್ ಪೇ ಇಷ್ಟೊಂದು ಹಣ ನೀಡಲು ಪ್ರಮುಖ ಕಾರಣ ಅದರಲ್ಲಿ ಕಂಡುಬಂದ ದೋಷ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಬಳಕೆದಾರರು 10, 15, 20 ಮತ್ತು 50 ಡಾಲರ್‌ಗಳನ್ನು ಕ್ಯಾಶ್‌ಬ್ಯಾಕ್ ಆಗಿ ಪಡೆದುಕೊಂಡಿದ್ದಾರೆ. ಆದರೆ, ಕಂಪೆನಿಯವರು ಕೂಡಲೇ ದೋಷ ಸರಿಪಡಿಸಿ ಜನರಿಗೆ ಕಳುಹಿಸಿದ್ದ ಹಣವನ್ನು ವಾಪಸ್ ಪಡೆದುಕೊಂಡಿದೆ.

ಈ ಸಂಬಂಧ ಪತ್ರಕರ್ತ ಮಿಶಾಲ್ ರಹಮಾನ್ ಟ್ವೀಟ್ ಮಾಡಿದ್ದು, ಗೂಗಲ್ ಪೇ ಇದ್ದಕ್ಕಿದ್ದಂತೆ $ 46 ಕ್ಯಾಶ್‌ಬ್ಯಾಕ್ ನೀಡಿದೆ. ಆದರೆ ಸ್ವಲ್ಪ ಸಮಯದ ನಂತರ ಗೂಗಲ್ ಪೇನಿಂದ ಒಂದು ಸಂದೇಶ ಬಂತು. ಅದರಲ್ಲಿ ಕಂಪೆನಿಯು ತಾಂತ್ರಿಕ ದೋಷದಿಂದ ಹಂಚಿಕೆ ಮಾಡಲಾದ ಹಣವನ್ನು ಹಿಂಪಡೆಯಲಿದೆ ಎಂದಿತ್ತು ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಹಲವಾರು ಬಳಕೆದಾರರಿಗೆ ನಿರಾಸೆ ಆಗಿರುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಪಿಕ್ಸೆಲ್ ಬಳಕೆದಾರರು ಸಹ $100, $240 ಮತ್ತು $1,072 ( 87,700ರೂ. ಗಳು) ಮೊತ್ತವನ್ನು ಪಡೆಯುತ್ತಿದ್ದಾರೆಂದು ವರದಿ ಮಾಡಿದ್ದಾರೆ. ಇದು ನನಗೆ ಸಂಭವಿಸಿದ ತಕ್ಷಣ, ನಾನು ಗೂಗಲ್‌ನೊಂದಿಗೆ ಮಾತನಾಡಿದ್ದೇನೆ ಎಂದು ಬಳಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ. ಜೊತೆಗೆ ಈ ಬಗ್ಗೆ ನಮಗೆ ಮಾಹಿತಿ ಇದ್ದು, ಇದನ್ನು ಮುಂದಿನ 24-48 ಗಂಟೆಗಳಲ್ಲಿ ಬಗೆಹರಿಸುವುದಾಗಿ ಗೂಗಲ್ ಪೇ ತಿಳಿಸಿತ್ತಂತೆ.
ಎಷ್ಟು ಜನರಿಂದ ಹಣ ವಾಪಸ್ ಪಡೆದುಕೊಳ್ಳಲಾಗಿದೆ: ಇನ್ನು ಗೂಗಲ್ ಪೇ ಬಳಕೆ ಮಾಡಿಕೊಂಡು ಪಡೆದ ಹಣವನ್ನು ಖರ್ಚು ಮಾಡಿದ ಅಥವಾ ಬೇರೆ ಯಾವುದೇ ಖಾತೆಗೆ ಕಳುಹಿಸಿದ ಜನರಿಂದ ಕಂಪೆನಿಯು ಹಣವನ್ನು ಮರುಪಡೆದುಕೊಂಡಿಲ್ಲ. ಆದರೆ, ವಾಲೆಟ್‌ನಲ್ಲಿ ಹಣ ಇದ್ದವರಿಂದ ಮಾತ್ರ ಹಣವನ್ನು ಹಿಂಪಡೆಯಲಾಗಿದೆ. ಹೀಗಾಗಿ ಈಗಾಗಲೇ ಪ್ರೀಯಾಗಿ ಸಿಕ್ಕಿತು ಎಂದು ಬೇಕಾಬಿಟ್ಟಿ ಖರ್ಚು ಮಾಡಿರುವ ಜನರಿಂದ ಹಣವನ್ನು ಹೇಗೆ ವಾಪಸ್ ಪಡೆದುಕೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ತಿಳಿಸಿಲ್ಲ.

ಗೂಗಲ್ ಪೇ ಬಳಕೆದಾರರು ಆಕರ್ಷಿಸಲು ಬಳಕೆದಾರರ ಪಾವತಿಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುತ್ತಾ ಬರುತ್ತಿದೆ. ಹೀಗಾಗಿ ಈ ದೊಡ್ಡ ಮೊತ್ತವನ್ನು ಪಡೆದುಕೊಂಡ ಬಳಕೆದಾರರು ಸಾಮಾನ್ಯವಾಗಿ ಗೂಗಲ್ ಕ್ಯಾಶ್‌ಬ್ಯಾಕ್ ನೀಡಿದೆ ಎಂದು ಖುಷಿಪಟ್ಟು ಸುಮ್ಮನಾಗಿದ್ದರು. ಆದರೆ, ಕೆಲವೇ ಕ್ಷಣದಲ್ಲಿ ಈ ಹಣ ವಾಪಸ್ ಹೋಗಿದ್ದು, ಈ ಮೂಲಕ ಗೂಗಲ್ ದೋಷದ ಬಗ್ಗೆ ಎಲ್ಲರಿಗೂ ತಿಳಿದುಬಂದಿದೆ.


Click it and Unblock the Notifications








