MWC 2024: ಅತ್ಯುತ್ತಮ ಸ್ಮಾರ್ಟ್‌ಫೋನ್ ಪ್ರಶಸ್ತಿ ಪಡೆದ ಈ ಫೋನ್! ಅಂತಹುದ್ದೇನಿದೆ ಇದರಲ್ಲಿ?
ಸ್ಮಾರ್ಟ್‌ಫೋನ್ ವಿಚಾರಕ್ಕೆ ಬಂದರೆ ಮಾರುಕಟ್ಟೆಯಲ್ಲಿ ನೀವು ವಿವಿಧ ರೀತಿಯ ಫೋನ್‌ಗಳನ್ನು ಕಾಣಬಹುದು. ಆದರೆ ಕೆಲವು ಫೋನ್‌ಗಳು ಮಾತ್ರ ಎಲ್ಲಾ ವಿಚಾರದಲ್ಲೂ ಅಗ್ರಸ್ಥಾನ ಪಡೆಯುತ್ತವೆ. ಈ ಮೊದಲು ಆಪಲ್ ಹಾಗೂ ಸ್ಯಾಮ್‌ಸಂಗ್ (Apple and Samsung) ಫೋನ್‌ಗಳು ಉತ್ತಮ ಪೋನ್‌ಗಳು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬೇರೆಯದೇ ಫೋನ್ ಉತ್ತಮ ಫೋನ್ ಎನಿಸಿಕೊಂಡಿದೆ.
ಹೌದು, ಇದೀಗ ಗೂಗಲ್ ಪಿಕ್ಸೆಲ್ 8 (Google Pixel 8) ಅತ್ಯುತ್ತಮ ಸ್ಮಾರ್ಟ್‌ಫೋನ್ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಗೂಗಲ್ ಪಿಕ್ಸೆಲ್ 8 ಸರಣಿಯನ್ನು 2023 ರ ಅತ್ಯುತ್ತಮ ಸ್ಮಾರ್ಟ್‌ಫೋನ್ ಎಂದು ಗೌರವಿಸಲಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಕಾರಣಕ್ಕೆ ಈ ಫೋನ್ ಉತ್ತಮ, ಇದರ ಕಾರ್ಯಕ್ಷಮತೆ ಹೇಗಿದೆ ಅನ್ನೋದನ್ನು ತಿಳಿಯೋಣ.

ಗೂಗಲ್ ಪಿಕ್ಸೆಲ್ 8 ಅತ್ಯುತ್ತಮ ಸ್ಮಾರ್ಟ್‌ಫೋನ್: ಗೂಗಲ್ ಪಿಕ್ಸೆಲ್ 8 ಸರಣಿಯು ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ 2023 ಅತ್ಯುತ್ತಮ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿದೆ. ಈ ಪ್ರಮುಖ ಸರಣಿಯು ಅದರ ಅಸಾಧಾರಣ ಕಾರ್ಯಕ್ಷಮತೆ, ನಾವೀನ್ಯತೆಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಫೋನ್ ಐಫೋನ್ 15 ಪ್ರೊ ಸರಣಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಸರಣಿ (iPhone 15 Pro series,Samsung Galaxy S23 series) ಸೇರಿದಂತೆ ಇತರ ನಾಮನಿರ್ದೇಶಿತರನ್ನು ಹಿಂದಿಕ್ಕಿದೆ.
GSMA ಆಯೋಜಿಸಿದ್ದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಗ್ಲೋಬಲ್ ಮೊಬೈಲ್ ಅವಾರ್ಡ್ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. 'ಅತ್ಯುತ್ತಮ ಮೊಬೈಲ್ ತಂತ್ರಜ್ಞಾನದ ಪ್ರಗತಿ' ಮತ್ತು 'ಅತ್ಯುತ್ತಮ ಮೊಬೈಲ್ ನೆಟ್‌ವರ್ಕ್ ಮೂಲಸೌಕರ್ಯ' ದಂತಹ ವಿವಿಧ ವಿಭಾಗಗಳಲ್ಲಿ ತಂತ್ರಜ್ಞಾನದ ಸಾಧನೆಗಳನ್ನು ಗುರುತಿಸುವ ವಾರ್ಷಿಕ ಕಾರ್ಯಕ್ರಮ ಇದಾಗಿದ್ದು, ಡಿವೈಸ್ ವಿಭಾಗದಲ್ಲಿ ಗೂಗಲ್ ಪಿಕ್ಸೆಲ್ ಪೋನ್ ಅತ್ಯುತ್ತಮ ಸ್ಮಾರ್ಟ್‌ಫೋನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಅವಾರ್ಡ್ ಅನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ನೀಡಲಾಗಿದೆ. ಅಂದರೆ ಜನವರಿ 2023 ರಿಂದ ಡಿಸೆಂಬರ್ 2023 ರವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಆಧಾರದ ಮೇಲೆ ಪ್ರಮುಖ ಸ್ವತಂತ್ರ ವಿಶ್ಲೇಷಕರು, ಪತ್ರಕರ್ತರು ಮತ್ತು ಪ್ರಭಾವಿಗಳು ಮೌಲ್ಯಮಾಪನ ಮಾಡಿದ್ದಾರೆ. ಅದರಂತೆ ಅಂತಿಮವಾಗಿ ಈ ಫೋನ್ ಅನ್ನು ಆಯ್ಕೆ ಮಾಡಲಾಗಿದೆ.
ಅದರಲ್ಲೂ ಈ ಪಿಕ್ಸೆಲ್ 8 ಸರಣಿಯು ಇತರ ಪ್ರಬಲ ಪ್ರತಿಸ್ಪರ್ಧಿಗಳಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ವಾಸ್ತವವಾಗಿ 2023 ರ ಅತ್ಯುತ್ತಮ ಸ್ಮಾರ್ಟ್‌ಫೋನ್ ಲೈನ್‌ಅಪ್‌ನಲ್ಲಿ ಐಫೋನ್ 15 ಪ್ರೊ ಸರಣಿ, ಒನ್‌ಪ್ಲಸ್ ಓಪನ್, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 (Samsung Galaxy Z Flip 5) ಇದ್ದವು. ಅವುಗಳನ್ನೆಲ್ಲಾ ಈ ಪಿಕ್ಸೆಲ್ ಫೋನ್ ಹಿಂದಿಕ್ಕಿದೆ.
ಇನ್ನು ಈ ಗೂಗಲ್ ಪಿಕ್ಸೆಲ್ 8 ಸರಣಿಯು ಕಳೆದ ವರ್ಷ ಹೊಸ ನವೀಕರಣಗಳು ಮತ್ತು ಎಐ ಆವಿಷ್ಕಾರಗಳೊಂದಿಗೆ ಗಮನ ಸೆಳೆದಿದೆ. ಈ ಸರಣಿಯು ಗೂಗಲ್‌ನ ಇತ್ತೀಚಿನ ಟೆನ್ಸರ್ G3 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಜೊತೆಗೆ ಬೆರಗುಗೊಳಿಸುತ್ತದೆ. ಅದರಲ್ಲೂ ಫೋಟೋ ಮತ್ತು ವಿಡಿಯೋ ಗುಣಮಟ್ಟಕ್ಕಾಗಿ ಪ್ರಬಲ ಕ್ಯಾಮರಾ ಜೊತೆಗೆ ಗೇಮ್ ಚೇಂಜರ್ ಟೂಲ್ಸ್ ಅನ್ನೂ ಸಹ ಹೊಂದಿದೆ.
ಕಳೆದ ವರ್ಷ, ಆಪಲ್‌ನ ಐಫೋನ್ 14 ಪ್ರೊ ಅನ್ನು ಅತ್ಯುತ್ತಮ ಫೋನ್ ಎಂದು ಪ್ರಶಂಸಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷ ಐಫೋನ್ 13 ಪ್ರೊ ಮ್ಯಾಕ್ಸ್‌ಗೆ ಈ ಗೌರವ ಸಿಕ್ಕಿತ್ತು. 2021 ರಲ್ಲಿ ಗ್ಯಾಲಕ್ಸಿ S21 ಅಲ್ಟ್ರಾ ಅತ್ಯುತ್ತಮ ಫೋನ್ ಎಂದೆನಿಸಿಕೊಂಡಿತ್ತು. 2021 ರಲ್ಲಿ ಪಿಕ್ಸೆಲ್ 6 ಪ್ರೊ ಸಹ ಶಾರ್ಟ್‌ಲಿಸ್ಟ್‌ಗೆ ಸೇರ್ಪಡೆಗೊಂಡಿತ್ತು ಈ ನಡುವೆ ಪಿಕ್ಸೆಲ್ 3 ನ ನೈಟ್ ಸೈಟ್ ಫೀಚರ್ಸ್ 2019 ರಲ್ಲಿ 'ಡಿಸ್ರಪ್ಟಿವ್ ಡಿವೈಸ್ ಇನ್ನೋವೇಶನ್' ಗಾಗಿ GSMA ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ಗೂಗಲ್ ಪಿಕ್ಸೆಲ್ 8 ಸ್ಮಾರ್ಟ್‌ಫೋನ್ ಫೀಚರ್ಸ್ ಬಗ್ಗೆ ತಿಳಿಯುವುದಾದರೆ ಈ ಫೋನ್ 6.2 ಇಂಚಿನ 424 PPI, OLED ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಹಾಗೆಯೇ 120 Hz ರಿಫ್ರೆಶ್ ರೆಟ್ ಇದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಗೂಗಲ್ ಟೆನ್ಸರ್ G38 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ v14 ಓಎಸ್‌ನಲ್ಲಿ ರನ್ ಆಗಲಿದೆ.
ಹಾಗೆಯೇ 50 ಮೆಗಾಪಿಕ್ಸೆಲ್ + 12 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್ ಹೊಂದಿದೆ. ಇದರ ಜೊತೆಗೆ 10.5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 4575 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಈ ಫೋನ್‌ನಲ್ಲಿ ಕಾಣಬಹುದು.


Click it and Unblock the Notifications








