Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
ಗೂಗಲ್ ಪಿಕ್ಸೆಲ್ (Google Pixel) ಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದು, ಈ ನಡುವೆ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್ ಆದ ಗೂಗಲ್ ಪಿಕ್ಸೆಲ್ 8a (Google Pixel 8a) ಲಾಂಚ್‌ಗೆ ದಿನಗಣನೆ ಶುರುವಾಗಿದೆ. ಈ ಫೋನ್ ಬಗ್ಗೆ ಈಗಾಗಲೇ ಕೆಲವು ಮಾಹಿತಿ ಲೀಕ್ ಆಗಿದ್ದು, ಇದೀಗ ಇದರ ಬೆಲೆ ಬಗ್ಗೆ ಮಾಹಿತಿ ಲೀಕ್ ಆಗಿವೆ.
ಹೌದು, ಗೂಗಲ್ ಪಿಕ್ಸೆಲ್ 8a ಮುಂದಿನ ತಿಂಗಳು ಅಂದರೆ ಮೇ 14 ರಂದು ಗೂಗಲ್‌ನ ಮುಂಬರುವ I/O ಈವೆಂಟ್‌ನಲ್ಲಿ ಫೋನ್ ಅನ್ನು ಅನಾವರಣ ಮಾಡಬಹುದು ಎಂಬ ಮಾಹಿತಿ ಇದೆ. ಅಲ್ಲದೆ ಈ ಫೋನ್ ಕುರಿತು ಕೆಲವು ಊಹಾಪೋಹಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಹಾಗಿದ್ರ, ಈ ಫೋನ್ ಬೆಲೆ ಎಷ್ಟಿರಬಹುದು?, ಇದು ಏನೆಲ್ಲಾ ಫೀಚರ್ಸ್ ಪಡೆದಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್‌ಫೋನ್: ಈ ವರ್ಷ ತನ್ನ ವಾರ್ಷಿಕ ಗೂಗಲ್ I/O ಡೆವಲಪರ್ ಸಮ್ಮೇಳನದಲ್ಲಿ ಗೂಗಲ್ ತನ್ನ ಹೊಸ ಸ್ಮಾರ್ಟ್‌ಫೋನ್, ಪಿಕ್ಸೆಲ್ 8A ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮೇ 14 ರಂದು ಈವೆಂಟ್ ನಡೆಯಲಿದ್ದು, ಈ ವೇಳೆ ಈ ಫೋನ್ ಜೊತೆಗೆ ಇತರೆ ಡಿವೈಸ್‌ಗಳನ್ನೂ ಸಹ ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಈ ಈವೆಂಡ್‌ನ ದಿನಾಂಕವು ಸಮೀಪಿಸುತ್ತಿದ್ದಂತೆ, ಪಿಕ್ಸೆಲ್ 8a ಕುರಿತು ಸಾಕಷ್ಟು ಮಾಹಿತಿಗಳು ಲೀಕ್ ಆಗುತ್ತಿವೆ. ಮೊದಲು, ಪಿಕ್ಸೆಲ್ 8a ನಾಲ್ಕು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿ ಇತ್ತು. ಅಂದರೆ ಕಪ್ಪು, ಸೆರಾಮಿಕ್, ನೀಲಿ ಮತ್ತು ಹೊಸ ಹಸಿರು ವೇರಿಯಂಟ್‌ಗಳನ್ನು ಉಲ್ಲೇಖ ಮಡಲಾಗಿತ್ತು. ಈಗ, ತಾಜಾ ಲೀಕ್‌ಗಳು ಭಾರತದಲ್ಲಿ ಈ ಫೋನ್‌ನ ಬೆಲೆಯ ಬಗ್ಗೆ ಸುಳಿವು ನೀಡಿವೆ. ಅದರಂತೆ ಈ ಫೋನ್ 50,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರಬಹುದು ಎಂದು ತಿಳಿದುಬಂದಿದೆ.

ಈ ನಡುವೆ ಕೆನಡಾದ ರಿಟೇಲರ್ ವ್ಯಾಪಾರಿ ಅಧಿಕೃತ ಬಿಡುಗಡೆಯ ಮೊದಲು ಪಿಕ್ಸೆಲ್ 8a ಸೇಲ್ ಅನ್ನು ಅಕಾಲಿಕವಾಗಿ ಪಟ್ಟಿ ಮಾಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ರಿಟೇಲರ್ ವ್ಯಾಪಾರಿಗಳ ಪ್ರಕಾರ, ಪಿಕ್ಸೆಲ್ 8a ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಕಂಡುಬರುತ್ತದಂತೆ. ಅಂದರೆ ಒಂದು 128GB ಮತ್ತು 256GB. ಮೂಲ ಮಾದರಿಯಾದ 128GB ಸ್ಟೋರೇಜ್ ಫೋನ್ ಬೆಲೆ CAD 708.99 ಇರಲಿದ್ದು, ಭಾರತದಲ್ಲಿ ಅಂದಾಜು 42,500ರೂ.ಗಳು. ಹಾಗೆಯೇ 256GB ವೇರಿಯಂಟ್‌ಗೆ CAD 792.99 ಅಂದಾಜು 47,500 ರೂ.ಗಳು ಎಂದು ನಂಬಲಾಗಿದೆ.
ಈ ಹಿಂದೆ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಫೋನ್‌ನ ಬೆಲೆ USD 500 ಮತ್ತು USD 550 ರ ನಡುವೆ ಇರಬಹುದೆಂದು ಉಲ್ಲೇಖ ಮಾಡಿದ್ದರು. ಅದರಂತೆ ಭಾರತದಲ್ಲಿ ಸರಿಸುಮಾರು 41,648 ರೂ.ಗಳಿಂದ 45,813 ರೂ. ಗಳಲ್ಲಿ ಲಭ್ಯ ಇರಲಿದೆ ಎಂದು ಹೇಳಲಾಗಿತ್ತು. ಈ ಬೆಲೆ ತಂತ್ರವು ಕಳೆದ ವರ್ಷದ ಪಿಕ್ಸೆಲ್ 7A ಬಿಡುಗಡೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ. ಈ ಫೋನ್ ಅನ್ನು 43,999 ರೂ.ಗಳ ಬೆಲೆಗೆ ಲಾಂಚ್ ಮಾಡಲಾಗಿತ್ತು. ಆದರೂ ಸಹ ಇವುಗಳು ಅಧಿಕೃತ ಬೆಲೆಗಳಲ್ಲ ಮತ್ತು ಫೋನ್ ಅಂತಿಮವಾಗಿ ಭಾರತದಲ್ಲಿ ಲಾಂಚ್ ಆದಾಗ ನಿಖರ ಮಾಹಿತಿಗಳು ತಿಳಿದುಬರಲಿವೆ.
ಈ ಫೋನ್‌ನ ಕೆಲವು ಲೀಕ್ ಮಾಹಿತಿ ಬಗ್ಗೆ ಹೇಳುವುದಾದರೆ ಪಿಕ್ಸೆಲ್ 8a ವಿನ್ಯಾಸವು ಅದರ ಪೂರ್ವವರ್ತಿಯಾದ ಪಿಕ್ಸೆಲ್ 7a ನಂತೆಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಹೊಸ ರೋಮಾಂಚಕ ಹಸಿರು ಬಣ್ಣದ ಆಯ್ಕೆಯಲ್ಲಿ ಬರುವ ನಿರೀಕ್ಷೆಯಿದೆ. ಹಿಂದಿನ ಲೀಕ್‌ನಲ್ಲಿ ತಿಳಿಸಿದಂತೆ ಈ ಫೋನ್ ಡಿಸ್‌ಪ್ಲೇನ ಕೆಳಭಾಗದಲ್ಲಿ ದುಂಡಗಿನ ಅಂಚನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ ಈ ಫೋನ್ 6.1-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, 90Hz ರಿಫ್ರೆಶ್ ರೇಟ್ ಆಯ್ಕೆ 120Hz OLED ಪ್ಯಾನೆಲ್‌ಗೆ ನವೀಕರಿಸಲಾಗಿದೆ. ಇದು 64 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದಿರಲಿದ್ದು, 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಯ್ಕೆ ಪಡೆದಿರಲಿದೆ. ಇನ್ನು ಡ್ಯುಯಲ್-ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ ಎನ್ನಲಾಗಿದ್ದು, 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.


Click it and Unblock the Notifications








