Google's 25th Birthday! ಜನ್ಮದಿನದ ಸಂಭ್ರಮದಲ್ಲಿ ಗೂಗಲ್; ಈ ಟೆಕ್ ದೈತ್ಯನನ್ನು ಮೊದಲು ಏನಂತಾ ಕರೆಯುತ್ತಿದ್ದರು ಗೊತ್ತಾ?
ಹ್ಯಾಪಿ ಬರ್ತಡೇ ಗೂಗಲ್.... ಗೂಗಲ್ ಎಂದರೆ ಚಿಕ್ಕ ಮಕ್ಕಳಿಂದ ವಯಸ್ಸಾದವರ ವರೆಗೂ ಗೊತ್ತಿರುವ ವಿಷಯ. ಈ ಮೂಲಕ ತಮಗೆ ಬೇಕಾದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಡೆಯುತ್ತಾರೆ. ಈ ನಡುವೆ ಗೂಗಲ್ 25 ನೇ ವರ್ಷಕ್ಕೆ ಕಾಲಿಟ್ಟಿದ್ದು, ತನ್ನದೇ ಆದ ರೀತಿಯಲ್ಲಿ ಈ ಗೂಗಲ್ ಸಂಭ್ರಮಾಚರಣೆಯಲ್ಲಿ ತೊಡಗಿದೆ.
ಹೌದು, ಇದೀಗ ಗೂಗಲ್ 25 ನೇ ಜನ್ಮದಿನದ ಸಂಭ್ರಮದಲ್ಲಿದೆ. ಗೂಗಲ್ ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್ ಎಂದು ಕರೆಸಿಕೊಂಡಿದೆಯಾದರೂ ಈ ಸರ್ಚ್ ಇಂಜಿನ್ ಅನ್ನು ಗೂಗಲ್ ಎಂದು ಮೊದಲು ಕರೆಯುತ್ತಿರಲಿಲ್ಲ ಎಂಬುದು ನಿಮಗೆ ತಿಳಿದಿದೆಯೇ?, ಹಾಗಿದ್ರೆ 25 ನೇ ವರ್ಷಕ್ಕೆ ಕಾಲಿಡುತ್ತಿರುವ ಗೂಗಲ್ ಹೇಗೆ ಪ್ರಾರಂಭವಾಯಿತು ಮತ್ತು ಅದಕ್ಕೆ 'ಗೂಗಲ್' ಎಂಬ ಹೆಸರು ಹೇಗೆ ಬಂತು ಎಂಬ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

25 ನೇ ವರ್ಷಕ್ಕೆ ಕಾಲಿಟ್ಟ ಗೂಗಲ್: ಇಂಟರ್ನೆಟ್ ಜಗತ್ತಿನಲ್ಲಿ ಗೂಗಲ್ ಎಂಬುದು ದೊಡ್ಡ ಹೆಸರು. ಇಂದಿನ ದಿನಗಳಲ್ಲಿ ಜನರಿಗೆ ಅಗತ್ಯವಾದ ಸೇವೆಯಾಗಿದೆ. ಅಂದರೆ ಮನಸ್ಸಲ್ಲಿ ಮೂಡುವ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ ಯಾವುದೇ ವಿಷಯದ ಬಗ್ಗೆ ಏನೇ ಮಾಹಿತಿ ಬೇಕೆಂದರೂ ಇದು ಕ್ಷಣ ಮಾತ್ರದಲ್ಲಿ ನೀಡುತ್ತದೆ.
ಈ ಮೂಲಕ ಇಡೀ ವಿಶ್ವವೇ ಬೆರಳಿನ ಮೇಲೆ ನರ್ತಿಸುವಂತೆ ಮಾಡುವ ಈ ಸರ್ಚ್ ಇಂಜಿನ್ ಆರಂಭವಾದದ್ದು 1998ರಲ್ಲಿ. ಇಂದು 25 ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶೇಷ ರೀತಿಯ ಡೂಡಲ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಅಂದರೆ ಈ ಡೂಡಲ್‌ನಲ್ಲಿ ನೀವು G25gle ಎಂಬುದನ್ನು ಕಾಣಬಹುದಾಗಿದೆ.
ಕಳೆದ 25 ವರ್ಷಗಳಿಂದ ಇಡೀ ಜಗತ್ತಿನಲ್ಲಿ ಗೂಗಲ್ ಇಂಟರ್ನೆಟ್ ಪ್ರಪಂಚದ ರಾಜನಾಗಿ ತನ್ನದೇ ಆದ ಪ್ರಭಾವ ಬೀರುತ್ತಾ ಬರುತ್ತಿದೆ. ಅದರಲ್ಲೂ ಇಂದು ಪ್ರತಿ ಮಗುವಿನ ಬಾಯಲ್ಲಿ ಗೂಗಲ್ ಹೆಸರು ಲೀಲಾಜಾಲವಾಗಿ ಬರುತ್ತದೆ. ಆದರೆ ಮೊದಲೇ ತಿಳಿಸಿದಂತೆ ಈ ಗೂಗಲ್ ಅನ್ನು ಮೊದಲು ಗೂಗಲ್ ಎಂದು ಕರೆಯುತ್ತಿರಲಿಲ್ಲ. ಹಾಗಿದ್ರೆ ಬನ್ನಿ ಈ ಸರ್ಚ್ ಇಂಜಿನ್‌ಗೆ ಗೂಗಲ್ ಅಂತಾ ಹೆಸರನ್ನು ಯಾಕೆ ಇಡಲಾಯಿತು ಎಂದು ತಿಳಿಯೋಣ.
ಗೂಗಲ್ ಎಂದು ಏಕೆ ಹೆಸರಾಯಿತು? : ಅಂದು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಒಟ್ಟಾಗಿ ಈ ಸರ್ಚ್ ಎಂಜಿನ್ ಅನ್ನು ಆರಂಭಿಸಿದ್ದರು. ಅಂದರೆ ಈ ಇಬ್ಬರೂ ಸೇರಿ 4 ಸೆಪ್ಟೆಂಬರ್ 1998 ರಂದು ಗೂಗಲ್ ಅನ್ನು ಪ್ರಾರಂಭಿಸಿದರು. ಸರ್ಚ್ ಇಂಜಿನ್ ಅನ್ನು ರಚಿಸಿದಾಗ, ಅದನ್ನು 'ಬ್ಯಾಕ್‌ರಬ್' ಎಂದು ಕರೆಯಲಾಗುತ್ತಿತ್ತು. ಆದರೆ, ಕಂಪನಿಯನ್ನು ನೋಂದಾಯಿಸುವ ವಿಷಯ ಬಂದಾಗ, ಇಬ್ಬರೂ ಕಂಪನಿಯನ್ನು GOOGOL ಹೆಸರಿನೊಂದಿಗೆ ನೋಂದಾಯಿಸಲು ಮುಂದಾದರು.
ಇನ್ನು ಈ GOOGOL ಎಂಬುದು ಗಣಿತದ ಪದವಾಗಿದ್ದು, ಇದರರ್ಥ 100 ಸೊನ್ನೆಗಳನ್ನು ಹೊಂದಿರುವ ಸಂಖ್ಯೆ. ಆದರೆ ಈ ಹೆಸರನ್ನು ನೋಂದಾಯಿಸುವಾಗ ಕಾಗುಣಿತದಲ್ಲಿ ತಪ್ಪಾಗಿ GOOGOL ಬದಲಿಗೆ Google ಎಂದು ಬರೆಯಲಾಗಿತ್ತಂತೆ. ಇದಾದ ನಂತರದಲ್ಲಿ ಗೂಗಲ್ ಎಂಬ ಪದವನ್ನು ಬಳಕೆ ಮಾಡುವುದು ಮತ್ತು ಬರೆಯುವುದು ತುಂಬಾ ಸುಲಭವಾದ್ದರಿಂದ ಇದೇ ಹೆಸರು ಈಗ ಎಲ್ಲರಿಗೂ ಇಷ್ಟವಾಗಿದೆ. ಅದರಂತೆ ಗೂಗಲ್ ಈಗ ಎಷ್ಟು ಜನಪ್ರಿಯವಾಗಿದೆ ಎಂದರೆ ಜನರು ಇಂಟರ್ನೆಟ್‌ನಲ್ಲಿ ಏನನ್ನಾದರೂ ಹುಡುಕಿ ಎನ್ನುವ ಬದಲು ಗೂಗಲ್ ಮಾಡಿ ಎಂದು ಹೇಳುತ್ತಾರೆ.
ಅದಾಗ್ಯೂ ಈ ವಿಷಯದಲ್ಲಿ ಇನ್ನೊಂದು ವಾದ ಕೇಳಿಬರುತ್ತದೆ ಅದೇನೆಂದರೆ 1998 ರಲ್ಲಿ, ಗೂಗಲ್ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆಯ್ ಬ್ರಿನ್ ಕಂಪನಿಯನ್ನು ಹೆಸರಿಸಲು ಬಯಸಿದಾಗ, ಅವರು ಗೂಗೋಲ್ ಎಂಬ ಪದವನ್ನು ನಿರ್ಧರಿಸಿದ್ದೇನು ನಿಜ. ಆದರೆ, ಪದವನ್ನು ಹಾಗೆಯೇ ತೆಗೆದುಕೊಳ್ಳುವ ಬದಲು ಅದನ್ನು ಸ್ವಲ್ಪ ಮಾರ್ಪಡಿಸಲು ಮುಂದಾದರಂತೆ. ಅವರು 'g'ಮತ್ತು 'l'ನಡುವಿನ 'o' ಅನ್ನು ತೆಗೆದು 'l'ನಂತರ 'e'ಅನ್ನು ಸೇರಿಸಿದರು. ಈ ಕಾರಣಕ್ಕೆ Google ಎಂದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಗೂಗಲ್‌ನ ಇತರ ಸೇವೆಗಳು: ಗೂಗಲ್ ಅನ್ನು ಸರ್ಚ್ ಇಂಜಿನ್ ಎಂದು ಮಾತ್ರ ಕರೆಯಲಾಗುವುದಿಲ್ಲ, ಆದರೆ ಇದು ಹಲವಾರು ಇತರ ಸೇವೆಗಳನ್ನು ಒದಗಿಸುತ್ತದೆ. ಇಂದು ಜಿಮೇಲ್ ರೂಪದಲ್ಲಿ ಗೂಗಲ್ ವಿಶ್ವದ ಅತಿದೊಡ್ಡ ಮೇಲಿಂಗ್ ಸೇವೆಯನ್ನು ನೀಡುತ್ತದೆ. ಇದರ ಹೊರತಾಗಿ, ಯೂಟ್ಯೂಬ್ ವಿಶ್ವದ ಅತಿದೊಡ್ಡ ವೀಡಿಯೊ ಸ್ಟ್ರೀಮಿಂಗ್ ವೇದಿಕೆಯಾಗಿದೆ. ಇದು ಗೂಗಲ್ ನ ಒಂದು ಭಾಗವಾಗಿದೆ.
ಗೂಗಲ್ ಮ್ಯಾಪ್, ಗೂಗಲ್ ಡ್ರೈವ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಚಲಾಯಿಸಲು ಬಳಸುವ ಆಂಡ್ರಾಯ್ಡ್ ಓಎಸ್ ಕೂಡ ಗೂಗಲ್‌ಗೆ ಸೇರಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಲಯದಲ್ಲೂ ಗೂಗಲ್ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಅದರಂತೆ ಈ ಟೆಕ್ ಸಂಸ್ಥೆಯು ಗೂಗಲ್ ಬಾರ್ಡ್ ಎಐ ಅನ್ನು ಪ್ರಾರಂಭಿಸಿದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್ ಸೇವೆಯಾಗಿದೆ.
ಸೆಪ್ಟೆಂಬರ್ 4 ರಂದು ಪ್ರಾರಂಭಯಿತಾದರೂ ಸೆಪ್ಟೆಂಬರ್ 27 ರಂದು ಹುಟ್ಟುಹಬ್ಬ ಏಕೆ?: ಗೂಗಲ್ ಅನ್ನು 4 ಸೆಪ್ಟೆಂಬರ್ 1998 ರಂದು ಪ್ರಾರಂಭಿಸಲಾಯಿತು.ಆದರೆ, ಅದರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಇದರ ಹಿಂದೆಯೂ ಒಂದು ಕಾರಣವಿದೆ. ವಾಸ್ತವವಾಗಿ ಆರಂಭಿಕ ಅವಧಿಯಲ್ಲಿ ಕೆಲವು ವರ್ಷಗಳವರೆಗೆ ಈ ಕಂಪನಿಯು ತನ್ನ ಜನ್ಮದಿನವನ್ನು ಸೆಪ್ಟೆಂಬರ್ 4 ರಂದೇ ಆಚರಿಸುತ್ತಿತ್ತು.

ಕಾಲಾನಂತರದಲ್ಲಿ ಕಂಪನಿಯು ಸರ್ಚ್ ಇಂಜಿನ್‌ನಲ್ಲಿ ದಾಖಲೆಯ ಸರ್ಚ್ ಪುಟವನ್ನು ಸೇರಿಸುವ ನೆನಪಿಗಾಗಿ ಸೆಪ್ಟೆಂಬರ್ 27 ರಂದು ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧಾರ ಮಾಡಿತು. ಅಂದಿನಿಂದ ಗೂಗಲ್‌ನ ಅಧಿಕೃತ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದೇ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಾಗಿದ್ರೆ ಮತ್ಯಾಕೆ ತಡ ನಿಮಗೆ ಕೇಳಿದ್ದನ್ನೆಲ್ಲಾ ನೀಡುವ ಗೂಗಲ್‌ಗೆ ನೀವೊಮ್ಮೆ ಹೇಳಿ ಬಿಡಿ ಹ್ಯಾಪಿ ಬರ್ತಡೇ ಗೂಗಲ್ ಅಂತ.


Click it and Unblock the Notifications








