ಈ ಸ್ಮಾರ್ಟ್‌ಫೋನ್ ಬಳಕೆ ಮಾಡುವವರಿಗೆ ಭಾರತ ಸರ್ಕಾರದ ಎಚ್ಚರಿಕೆ! ನಿಮ್ಮ ಖಾಸಗಿ ಮಾಹಿತಿ ಲೀಕ್...
ಸ್ಮಾರ್ಟ್‌ಫೋನ್ (smartphones) ಅನ್ನು ಇಂದು ಬಹುಪಾಲು ಎಲ್ಲಾ ಜನರು ಬಳಕೆ ಮಾಡುತ್ತಾರೆ. ಆದರೆ ಸ್ಮಾರ್ಟ್‌ಫೋನ್ ಅನ್ನು ಸ್ಕ್ಯಾಮರ್‌ಗಳು (Scammers) ಗುರಿಯಾಗಿಸಿಕೊಂಡು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಮಸ್ಯೆ ಉಂಟು ಮಾಡುವುದು ಸಾಮಾನ್ಯವಾದ ವಿಚಾರವಾಗಿದೆ. ಅದರಂತೆ ಈಗ ಭಾರತದ ಸರ್ಕಾರ ಈ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆಯೊಂದನ್ನು ನೀಡಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ ಮೇಲೆ ಸ್ಕ್ಯಾಮರ್‌ಗಳು ಆಗಾಗ್ಗೆ ದಾಳಿ ನಡೆಸುತ್ತಲೇ ಇರುತ್ತಾರೆ. ಈ ದಾಳಿಯಿಂದ ತಪ್ಪಿಸಲು ಸರ್ಕಾರ ಅಥವಾ ಸಂಬಂಧಿತ ಸಂಸ್ಥೆಗಳು ಬಳಕೆದಾರರಿಗೆ ಎಚ್ಚರಿಕೆ ವಹಿಸಲು ಹೇಳುತ್ತಲೇ ಇರುತ್ತದೆ. ಅದರಂತೆ ಈಗ ಸರ್ಕಾರ ಮತ್ತೊಂದು ಎಚ್ಚರಿಕೆ ನೀಡಿದ್ದು, ಖಾಸಗಿ ಮಾಹಿತಿ ಲೀಕ್ ಬಗ್ಗೆ ಉಲ್ಲೇಖಿಸಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಮಸ್ಯೆ ನಿರ್ಮಾಣ ಆಗಿದೆ?, ಅವರು ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಭಾರತ ಸರ್ಕಾರದ ಎಚ್ಚರಿಕೆ: ಸ್ಯಾಮ್‌ಸಂಗ್, ಗೂಗಲ್ ಪಿಕ್ಸೆಲ್, ಒನ್‌ಪ್ಲಸ್ (Samsung, Google Pixel, OnePlus) ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಗೂಗಲ್‌ನ ಆಂಡ್ರಾಯ್ಡ್ ಓಎಸ್ (Android OS) ಅನ್ನೇ ಅವಲಂಬಿಸಿದ್ದಾರೆ. ಅದರಂತೆ ಜನರು ಈ ಫೋನ್‌ಗಳನ್ನು ಬಳಕೆ ಮಾಡಿಕೊಂಡು ಕೇವಲ ಫೋನ್ ಕರೆ ಅಥವಾ ಮೆಸೆಜ್ ಅಲ್ಲದೆ ಬ್ಯಾಂಕಿಗ್ ಮಾಹಿತಿ ಹಾಗೂ ವೈಯುಕ್ತಿಕ ಮಾಹಿತಿಯನ್ನೂ ಹಂಚಿಕೊಳ್ಳುತ್ತಿದ್ದಾರೆ ಹಾಗೂ ಸ್ಟೋರ್ ಮಾಡುತ್ತಿದ್ದಾರೆ. ಆದರೆ ಈಗ ಈ ಖಾಸಗಿ ಮಾಹಿತಿಗೆ ಕುತ್ತು ತರುವ ಕೆಲಸ ಮಾಡಲಾಗಿದೆ.
ಈ ಖಾಸಗಿ ಮಾಹಿತಿಯನ್ನು ಕದಿಯಲು ಸ್ಕ್ಯಾಮರ್‌ಗಳು ಭಿನ್ನ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಈ ಡೇಟಾಗೆ ಸ್ಕ್ಯಾಮರ್‌ಗಳು ಏನಾದರೂ ಪ್ರವೇಶಿಸಿದರೆ ಎಲ್ಲಾ ಮಾಹಿತಿಯನ್ನು ಮೋಸದ ಚಟುವಟಿಕೆಗಳಿಗೆ ಬಳಕೆ ಮಾಡುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಈ ಕಾರಣಕ್ಕೆ ಜನರನ್ನು ಸುರಕ್ಷಿತವಾಗಿರಿಸಲು ಭಾರತ ಸರ್ಕಾರವು ಆಂಡ್ರಾಯ್ಡ್ ಓಎಸ್ ಆವೃತ್ತಿ 11, 12, 12L, 13 ಮತ್ತು 14 ರ ಬಳಕೆದಾರರಿಗೆ ತೀವ್ರ ಎಚ್ಚರಿಕೆಯನ್ನು ನೀಡಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಆಂಡ್ರಾಯ್ಡ್ ಓಎಸ್ ನಲ್ಲಿ ಅನೇಕ ದುರ್ಬಲತೆಗಳನ್ನು ವರದಿ ಮಾಡಿದೆ. ಈ ದುರ್ಬಲತೆಗಳು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ವಂಚಕರಿಗೆ ನೀಡುವ ಕೆಲಸ ಮಾಡುತ್ತವೆ ಎಂದು ತಿಳಿಸಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಗೂಗಲ್ ಕಾಲಕಾಲಕ್ಕೆ ನವೀಕರಣಗಳನ್ನು ಬಿಡುಗಡೆ ಮಾಡಿದರೂ ಸಹ ಡೇಟಾ, ಸ್ಟೋರೇಜ್ ಅಥವಾ ಇತರೆ ಸಮಸ್ಯೆಗಳಿಂದ ಅನೇಕ ಓಎಸ್ ಅನ್ನು ನವೀಕರಿಸುವುದಿಲ್ಲ. ಓಎಸ್‌ನ ಹಳೆಯ ಆವೃತ್ತಿಗಳನ್ನು ಹೊಂದಿರುವ ಡಿವೈಸ್‌ಗಳು ಈಗ ಸಮಸ್ಯೆಗೆ ಒಳಗಾಗಲಿವೆ. ಈ ಕಾರಣಕ್ಕಾಗಿಯೇ ಸರ್ಕಾರ ಓಎಸ್ ಅನ್ನು ಅಪ್‌ಡೇಟ್ ಮಾಡಿ ಎಂದು ಕೇಳಿಕೊಂಡಿದೆ.
ಇಂತಹ ಕೆಲವು ಅಪಾಯಕಾರಿ ದೌರ್ಬಲ್ಯಗಳನ್ನು ಈಗ ಭಾರತ ಸರ್ಕಾರವು ಆಂಡ್ರಾಯ್ಡ್ ಬಳಕೆದಾರರಿಗೆ ತನ್ನ ಎಚ್ಚರಿಕೆಯಲ್ಲಿ ಉಲ್ಲೇಖಿಸಿದೆ. ಸಿಇಆರ್‌ಟಿ-ಇನ್ ಪ್ರಕಾರ, ಫ್ರೇಮ್‌ವರ್ಕ್, ಸಿಸ್ಟಮ್, ಎಎಮ್‌ಲಾಜಿಕ್, ಆರ್ಮ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಘಟಕಗಳು, ಕ್ವಾಲ್ಕಾಮ್ ಕಾಂಪೊನೆಂಟ್‌ಗಳು ಹಾಗೂ ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಸಾಕಷ್ಟು ಸಮಸ್ಯೆಗಳು ನಿರ್ಮಾಣ ಆಗಿವೆ ಎಂದು ತಿಳಿಸಲಾಗಿದೆ.

ಈ ದುರ್ಬಲತೆಗಳಿಂದಾಗಿ ಆಕ್ರಮಣಕಾರರಿಗೆ ಸೂಕ್ಷ್ಮ ಮಾಹಿತಿಯನ್ನು ಪಡೆಯಲು, ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅಥವಾ ಉದ್ದೇಶಿತ ವ್ಯವಸ್ಥೆಯಲ್ಲಿ ಸೇವಾ ಪರಿಸ್ಥಿತಿಗಳ ನಿರಾಕರಣೆಗೆ ಕಾರಣವಾಗಬಹುದು. ಇದರಿಂದಾಗಿಯೇ ಯಾವುದೇ ವಂಚನೆಗಳನ್ನು ತಪ್ಪಿಸಲು, ಸ್ಮಾರ್ಟ್‌ಫೋನ್ ಬಳಕೆದಾರರು ಓಎಸ್ ಅನ್ನು ಅಪ್‌ಡೇಟ್ ಮಾಡಬೇಕಾದ ಅನಿವಾರ್ಯತೆ ಇದೆ. ನೀವು ಈವರೆಗೂ ಏನಾದರೂ ಓಎಸ್ ಅನ್ನು ಅಪ್‌ಡೇಟ್ ಮಾಡಿಲ್ಲವಾದರೆ ತಕ್ಷಣವೇ ಅಪ್‌ಡೇಟ್ ಮಾಡಿ.


Click it and Unblock the Notifications








