1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದ ಸರ್ಕಾರ! ಕಾರಣ ಏನು ಗೊತ್ತಾ?
ಫೋನ್‌ಗಳನ್ನು (Phone) ಬಳಕೆ ಮಾಡದೇ ಇರುವ ಕೈಗಳು ಯಾವಿಲ್ಲ ಹೇಳಿ. ಬಹುಪಾಲು ಜನರು ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹಲವಾರು ಸ್ಮಾರ್ಟ್‌ಫೋನ್ ತಯಾರಿಕಾ ಬ್ರ್ಯಾಂಡ್‌ಗಳು ತಲೆ ಎತ್ತುತ್ತಲೇ ಇವೆ. ಆದರೆ, ಈ ಫೋನ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮಂದಿ ಸಹ ನಮ್ಮ ನಡುವ ಇದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ.
ಹೌದು, ದೇಶದಲ್ಲಿ ಫೋನ್‌ಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ವಂಚಿಸಿರುವ ಹಿನ್ನೆಲೆ ಸಾಕಷ್ಟು ಫೋನ್ ನಂಬರ್‌ಗಳನ್ನು (phone number) ನಿರ್ಬಂಧ ಮಾಡಲಾಗಿದೆ. ಈ ಸಂಬಂಧ ಐಎಎನ್‌ಎಸ್ ವರದಿ ಮಾಡಿದೆ. ಹಾಗಿದ್ರೆ, ಈ ಫೋನ್ ಬಳಕೆದಾರರು ದೇಶದಲ್ಲಿ ಮಾಡುತ್ತಿದ್ದ ಕೃತ್ಯ ಎಂತಹುದು?, ಈ ಸಂಖ್ಯೆಗಳನ್ನು ನಿರ್ಬಂಧ ಮಾಡಲು ಎಐ ಹೇಗೆ ಸಹಾಯಕ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫೋನ್ ಸಂಖ್ಯೆ ನಿರ್ಬಂಧ: ಸೈಬರ್ ಅಪರಾಧ ಅಥವಾ ಹಣಕಾಸು ವಂಚನೆಯಲ್ಲಿ ತೊಡಗಿರುವ ಸುಮಾರು 1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರು ಹಣಕಾಸು ಸೇವಾ ವಲಯದಲ್ಲಿ ಸೈಬರ್ ಭದ್ರತೆಯ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಎಪಿಐ ಏಕೀಕರಣದ ಮೂಲಕ ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ (CFCFRMS) ಪ್ಲಾಟ್‌ಫಾರ್ಮ್‌ಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಯೋಜಿಸುವುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಅದರಂತೆ ಸುಮಾರು 1.40 ಲಕ್ಷ ಮೊಬೈಲ್ ಫೋನ್‌ಗಳ ಸಂಪರ್ಕ ಸಂಖ್ಯೆಯನ್ನು ನಿರ್ಬಂಧ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಜೊತೆಗೆ ಇವು ಸೈಬರ್-ಕ್ರೈಮ್ ಅಥವಾ ಹಣಕಾಸು ವಂಚನೆಗಳಲ್ಲಿ ಪ್ರಮುಖಪಾತ್ರ ವಹಿಸಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಟೆಲಿಕಾಂ ಇಲಾಖೆ ಈ ಸಂಬಂಧ ದೊಡ್ಡ ಪರಿಶೀಲನೆಯನ್ನೇ ನಡೆಸಿದೆ. ಅದರಂತೆ ಬರೋಬ್ಬರಿ 35 ಲಕ್ಷ ಎಸ್‌ಎಮ್‌ಎಸ್ ಕಳುಹಿಸುವ ಪ್ರಮುಖ ಘಟಕಗಳನ್ನು ವಿಶ್ಲೇಷಿಸಿದ್ದು, ಇದರಲ್ಲಿ 19,776 ಪ್ರಧಾನ ಘಟಕಗಳು ದುರುದ್ದೇಶಪೂರಿತ ಎಸ್‌ಎಮ್‌ಎಸ್ ಕಳುಹಿಸುವ ಕೆಲಸ ಮಾಡಿವೆ ಅನ್ನೋದನ್ನು ಕಂಡಿಕೊಂಡಿದೆ. ಇದರ ಜೊತೆಗೆ 30,700 ಎಸ್‌ಎಮ್‌ಎಸ್ ಹೆಡರ್‌ಗಳು ಮತ್ತು 1,95,766 ಎಸ್‌ಎಮ್‌ಎಸ್ ಟೆಂಪ್ಲೇಟ್‌ಗಳನ್ನು ಈ ಮೂಲಕ ಕಡಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಭೆಯಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಕೊನೆಯ ಸಭೆಯಲ್ಲಿ ಹೊರಹೊಮ್ಮಿದ ಕ್ರಿಯಾ ಅಂಶಗಳನ್ನು ಸಹ ಪರಿಶೀಲಿಸಿತು. ಅದರಂತೆ ಹಣಕಾಸು ಸೇವಾ ವಲಯದಲ್ಲಿ ಸೈಬರ್ ಭದ್ರತೆಯಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸುವಲ್ಲಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲನೆ ನಡೆದಿದೆ. ಡಿಜಿಟಲ್ ಪಾವತಿ ವಂಚನೆಗಳು ಮತ್ತು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಪಾಲುದಾರರ ಸಿದ್ಧತೆ ಬಗ್ಗೆ ಮತ್ತೊಮ್ಮೆ ಸಲಹೆ ನೀಡಲಾಗಿದೆ.

ಈ ಚರ್ಚೆಯ ವೇಳೆ ಎಐ ಯಂತ್ರ ಕಲಿಕೆ ಆಧಾರಿತ ಎಂಜಿನ್ ASTR ಅನ್ನು ಟೆಲಿಕಾಂ ಇಲಾಖೆ ಅಭಿವೃದ್ಧಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಎಐ ನಕಲಿ ದಾಖಲೆಗಳ ಮೇಲೆ ತೆಗೆದುಕೊಂಡ ಮೊಬೈಲ್ ಸಂಪರ್ಕಗಳನ್ನು ಪತ್ತೆಹಚ್ಚುವ ಹಾಗೂ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತದೆ ಎನ್ನಲಾಗಿದೆ.
ಅದರಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಿಯಮಿತ 10 ಅಂಕಿಯ ಸಂಖ್ಯೆಗಳ ಬಳಕೆಯನ್ನು ಹಂತಹಂತವಾಗಿ ತೆಗೆದುಹಾಕುವ ಅಗತ್ಯವಿದೆ ಮತ್ತು ಟ್ರಾಯ್ ಸೂಚಿಸಿದಂತೆ ವಾಣಿಜ್ಯ ಅಥವಾ ಪ್ರಚಾರ ಚಟುವಟಿಕೆಗಳಿಗಾಗಿ '140xxx' ನಂತಹ ನಿರ್ದಿಷ್ಟ ಸಂಖ್ಯೆಯ ಸರಣಿಗಳನ್ನು ಬಳಸಬೇಕಾಗುತ್ತದೆ ಎಂದೂ ಸಹ ಉಲ್ಲೇಖ ಮಾಡಲಾಗಿದೆ.


Click it and Unblock the Notifications








