ಸರ್ಕಾರೇತರ ಸಂಸ್ಥೆಗಳಿಗೆ ಆಧಾರ್ ದೃಢೀಕರಣ ಪವರ್ ನೀಡಲು ಮುಂದಾದ ಸರ್ಕಾರ: ನಿಮ್ಮ ಸಲಹೆ ಏನು?
ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡುವಲ್ಲಿ ದೇಶದ ಜನರು ಬ್ಯೂಸಿ ಆಗಿರುವಾಗಲೇ ಈಗ ಆಧಾರ್ ಸಂಬಂಧ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಅಂದರೆ ಇನ್ಮುಂದೆ ಖಾಸಗಿ ಸಂಸ್ಥೆಗಳಿಗೆ ಆಧಾರ್ ಈ ಪ್ರಯೋಜನ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದಕ್ಕಾಗಿಯೇ ಆಧಾರ್‌ನಲ್ಲಿನ ನಿಯಮಗಳಲ್ಲಿ ಸರ್ಕಾರ ಕೆಲವು ಬದಲಾವಣೆ ಮಾಡಲು ಸಜ್ಜಾಗಿದೆ.
ಹೌದು, ಆಧಾರ್ ದೃಢೀಕರಣಕ್ಕೆ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಲು ಸರ್ಕಾರೇತರ ಸಂಸ್ಥೆಗಳಿಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಮೂಲಕ ಖಾಸಗಿ ಸಂಸ್ಥೆಗಳು ಸಹ ಆಧಾರ್ ದೃಢೀಕರಣ ಮಾಡಬಹುದಾಗಿದೆ. ಹಾಗಿದ್ರೆ, ಸರ್ಕಾರ ಯಾಕೆ ನಿರ್ಧಾರ ಮಾಡಿದೆ?, ಇದರಿಂದ ದೇಶದ ಜನರಿಗೆ ಆಗುವ ಅನುಕೂಲ ಏನು?, ಈ ರೀತಿ ಮಾಡಿದ್ರೆ ಸರ್ಕಾರದ ಭದ್ರತೆಗೆ ಸಮಸ್ಯೆ ಉಂಟಾಗುವುದಿಲ್ಲವೇ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಆಧಾರ್ ದೃಢೀಕರಣ: ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ. ಆದರೆ, ಈಗ ಸರ್ಕಾರಿ ಕಚೇರಿಯ ಹೊರತಾಗಿ ಖಾಸಗಿ ಸಂಸ್ಥೆಗಳಿಂದ ದೃಢೀಕರಣಕ್ಕಾಗಿ ಆಧಾರ್ ಬಳಸುವ ನಿಯಮಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೇ 5, 2023 ರವರೆಗೆ ಈ ವಿಷಯದ ಬಗ್ಗೆ ಜನರಿಂದ ಸಲಹೆಗಳನ್ನು ಕೇಳಿದೆ.
ಇನ್ನು ದೇಶದ ಜನರ ಅಗತ್ಯ ಮಾಹಿತಿಗಳೆಲ್ಲಾ ಆಧಾರ್‌ಗೆ ಲಿಂಕ್ ಆಗಿದ್ದು, ಈ ಮೂಲಕ ಆಧಾರ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಆಧಾರ್ ದೃಢೀಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರ ಬಳಕೆ ಮಾಡುತ್ತವೆ. ಆದರೆ, ಇನ್ಮುಂದೆ ಖಾಸಗಿ ಸಂಸ್ಥೆಗಳು ಸಹ ಇದನ್ನು ಬಳಕೆ ಮಾಡುವಂತೆ ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ.

ಸರ್ಕಾರ ಯಾಕೆ ಈ ನಿರ್ಧಾರ ಮಾಡಿದೆ?: ಸರ್ಕಾರದ ಮಾಹಿತಿಯಂತೆ ದೇಶದ ಜನಜೀವನವನ್ನು ಸುಲಭಗೊಳಿಸುವುದು, ಸೇವೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದಂತೆ. ಈ ಮೂಲಕ ಜನರ ಜೀವನ ಉತ್ತಮವಾಗಿರುತ್ತದೆ ಎಂದಿದೆ. ಇದಕ್ಕಾಗಿಯೇ ಆಧಾರ್ ದೃಢೀಕರಣವನ್ನು ಬಳಸಲು ಬಯಸುವ ಎಲ್ಲಾ ಸರ್ಕಾರೇತರ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಈ ಕರಡನ್ನು ಕಳುಹಿಸಿದ್ದು, ಈ ಕುರಿತು ಅವರಿಂದ ಸಲಹೆಗಳನ್ನು ಸ್ವೀಕಾರ ಮಾಡಲು ಮುಂದಾಗಿದೆ. ಇದಾದ ನಂತೆ ಮತ್ತೆ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಈ ಮಾಹಿತಿ ರವಾನೆ ಆಗಲಿದೆ.
ಈ ಸಂಬಂಧ ನೀವು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ: ಇನ್ನು ಖಾಸಗಿ ಸಂಸ್ಥೆಗಳು, ಎನ್‌ಜಿಓಗಳು ಸೇರಿದಂತೆ ಸಾರ್ವಜನಿಕರು ಸಹ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದಕ್ಕೆ ಮೇ 2023 ರ ವರೆಗಿನ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಈ ಸಲಹೆಗಳನ್ನು ಸರ್ಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದ್ದು, ಆಧಾರ್‌ನ ಪ್ರಸ್ತಾವಿತ ಬದಲಾವಣೆಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಗಮನಿಸಬಹುದು.
ಆಧಾರ್ ಕಾರ್ಡ್ ಯಾಕೆ ಮುಖ್ಯ: ಆಧಾರ್ ಎಂಬುದು ದೇಶದ ಪ್ರತಿಯೊಬ್ಬರ ಪ್ರಜೆಯ ಬಳಿ ಇರಬೇಕಾದ ಅಗತ್ಯ ದಾಖಲೆಯಾಗಿದ್ದು, ಈ ಆಧಾರ್ ಮೂಲಕ ಬಳಕೆದಾರರು ಶಾಲೆ, ಕಾಲೇಜು ಪ್ರವೇಶದಿಂದ ಹಿಡಿದು ಪ್ರಯಾಣದವರೆಗಿನ ಎಲ್ಲ ಕೆಲಸಗಳಿಗೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದಿಷ್ಟು ಮಾತ್ರವಲ್ಲದೆ ಸರ್ಕಾರದ ಹಾಗೂ ಖಾಸಗಿ ಸಂಸ್ಥೆಗಳ ಸೇವೆಯನ್ನು ಈ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು.

ನಿಯಮ ಬದಲಾದ ನಂತರ ಆಗುವ ಬದಲಾವಣೆ ಏನು?: ಪಾಸ್‌ವರ್ಡ್ ಅಥವಾ ಓಟಿಪಿ ಮೂಲಕ ಆಧಾರ್ ದೃಢೀಕರಣ ಮಾಡಲು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಅನುಕೂಲ ನೀಡಲಾಗಿತ್ತು. ಆದರೆ, ಜನರು ಖಾಸಗಿ ಸಂಸ್ಥೆಗಳಿಂದಲೂ ಹಲವು ಸೇವೆ ಪಡೆಯುತ್ತಿರುವ ಕಾರಣ ಈ ಅಧಿಕಾರವನ್ನು ಅವರಿಗೂ ನೀಡುವುದು ಸರ್ಕಾರದ ಗುರಿ.ಆದರೆ, ಖಾಸಗಿ ಸಂಸ್ಥೆಗಳು ಯಾವೆಲ್ಲಾ ವಿಷಯಗಳಿಗೆ ಆಧಾರ್ ದೃಡೀಕರಣವನ್ನು ಪಡೆದುಕೊಳ್ಳುತ್ತವೆ ಎಂಬ ಬಗ್ಗೆ ನಿಖರವಾಗಿ ತಿಳಿದಿಲ್ಲ. ಜೊತೆಗೆ ಭದ್ರತಾ ವಿಚಾರಕ್ಕೆ ಏನೆಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ ಎಂಬುದನ್ನೂ ತಿಳಿಸಿಲ್ಲ.


Click it and Unblock the Notifications








