UPI: ಯುಪಿಐ ಕನಿಷ್ಠ ಸಮಯ ಮಿತಿ, ಮೊದಲ ಆನ್‌ಲೈನ್ ವಹಿವಾಟು ಪ್ರಕ್ರಿಯೆಗೆ ನಾಲ್ಕು ಗಂಟೆ ಕಾಯಬೇಕು?
ಈಗಂತೂ ಯುಪಿಐ ವ್ಯವಹಾರ (UPI transaction) ವ್ಯಾಪಕವಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಫೋನ್‌ಪೇ, ಗೂಗಲ್ ಪೇ, ಪೇಟಿಎಮ್ ಹೊಂದಿರುವ ಬಹುಪಾಲು ಮಂದಿ ಯುಪಿಐ ವ್ಯವಹಾರ ಮಾಡುತ್ತಾರೆ. ಈ ಮೂಲಕ ಕ್ಷಣಾರ್ಧದಲ್ಲಿ ಬೇಕಾದವರಿಗೆ ಹಣ ಕಳಿಸಬಹುದು ಅಥವಾ ಹಣ ಸ್ವೀಕಾರ ಮಾಡಬಹುದಾಗಿದೆ. ಈ ಬೆಳವಣಿಗೆ ನಡುವೆ ಭಾರತ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ.
ಹೌದು, ಭಾರತದಲ್ಲಿ ಸೈಬರ್ ವಂಚನೆ ಪ್ರಕರಣ (cyber fraud ) ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅತ್ಯುತ್ತಮ ನಿರ್ಧಾರ ಮಾಡಿದೆ. ಅದರಂತೆ ಯುಪಿಐ ಕನಿಷ್ಠ ಸಮಯ ಮಿತಿ ಅನ್ವಯ (UPI Minimum Time Limit) ಮಾಡಲು ಮುಂದಾಗಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಇದರಿಂದ ಹೇಗೆ ವಂಚನೆಯಿಂದ ಪಾರಾಗಬಹುದ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಯುಪಿಐ ಕನಿಷ್ಠ ಸಮಯ ಮಿತಿ: ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿಯೂ ಯುಪಿಐ ಮೂಲಕ ವಹಿವಾಟು ಸಾಮಾನ್ಯ ವಿಷಯವಾಗಿದೆ. ಈ ಡಿಜಿಟಲ್ ಪಾವತಿಗಳ ಈ ಬೆಳವಣಿಗೆಯೊಂದಿಗೆ ಆನ್‌ಲೈನ್ ವಂಚನೆಯ ಪ್ರಕರಣಗಳು ಸಹ ಹೆಚ್ಚಾಗುತ್ತಿದ್ದು, ಈ ರೀತಿಯ ವಂಚನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ಸರ್ಕಾರ ಯುಪಿಐ ಕನಿಷ್ಠ ಸಮಯ ಮಿತಿ ಸಮಯ ಜಾರಿ ಮಾಡಲು ಮುಂದಾಗಿದೆ.
ಈಗಾಗಲೇ ಯಾವೆಲ್ಲಾ ನಂಬರ್‌ಗಳ ಮೂಲಕ ವಂಚನೆ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಿ ಸಾವಿರಾರು ಸಂಖ್ಯೆಗಳನ್ನು ನಿರ್ಬಂಧ ಮಾಡಲಾಗಿದೆ. ಇದೀಗ ಆನ್‌ಲೈನ್ ಪಾವತಿ ವಂಚನೆಯನ್ನು ತಡೆಯಲು ಯುಪಿಐ ವಹಿವಾಟಿನ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಮುಂದಾಗಿದೆ. ಅಂದರೆ 4 ಗಂಟೆಗಳ ಮಿತಿಯನ್ನು ವಿಧಿಸಬಹುದು ಎಂದು ಪ್ರಮುಖ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಯಾವುದೇ ಯುಪಿಐ ಪಾವತಿಯು ಇಬ್ಬರು ಬಳಕೆದಾರರ ನಡುವೆ ನಡೆಯುತ್ತದೆ ಎಂಬುದು ನಿಮಗೆ ತಿಳಿದ ವಿಚಾರ. ಈ ಇಬ್ಬರಲ್ಲಿ ಒಬ್ಬರು ಪಾವತಿಸುವವರು ಮತ್ತು ಇನ್ನೊಬ್ಬರು ಸ್ವೀಕರಿಸುವವರಾಗಿರುತ್ತಾರೆ. ಆದರೆ ಈಗ ಇಬ್ಬರು ಬಳಕೆದಾರರ ನಡುವಿನ ಮೊದಲ ಯುಪಿಐ ವಹಿವಾಟಿಗೆ ಕನಿಷ್ಠ ಸಮಯದ ಮಿತಿಯನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಅದರಂತೆ, ಈ ಕನಿಷ್ಠ ಸಮಯ ಮಿತಿ 4 ಗಂಟೆ ಇರಲಿದೆ ಎನ್ನಲಾಗಿದೆ.
ಅದರಲ್ಲೂ ಈ ವ್ಯವಹಾರದಲ್ಲಿ 2,000ರೂ. ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕನಿಷ್ಠ ಸಮಯವನ್ನು ಜಾರಿಗೆ ತರಲು ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ವಿವಿಧ ಡಿಜಿಟಲ್ ಪಾವತಿ ವಿಧಾನಗಳಾದ ತಕ್ಷಣದ ಪಾವತಿ ಸೇವೆ (IMPS), ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS), ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಯಲ್ಲಿ ಈ ನಿಯಮ ಜಾರಿಗೆ ತರಲಾಗುತ್ತಿದೆ ಎನ್ನಲಾಗಿದೆ.

ಪ್ರಸ್ತುತ ಬಳಕೆದಾರರು ಹೊಸ ಯುಪಿಐ ಖಾತೆಯನ್ನು ಹೊಂದಿಸಿದಾಗ ಅವರು ಮೊದಲ 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ಗಳನ್ನು ಕಳುಹಿಸಲು ಅನುಮತಿಸಲಾಗಿದೆ. ಅದೇ ರೀತಿ, ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆಯೊಂದಿಗೆ 50,000 ರೂ.ಗಳನ್ನು 24 ಗಂಟೆಗಳ ಒಳಗೆ ವರ್ಗಾಯಿಸಬಹುದು. ಆದರೆ, ಈ ಹೊಸ ಯೋಜನೆ ಪ್ರಕಾರ ಯಾರೇ ಹೊಸ ವ್ಯಕ್ತಿಗೆ ಹಣ ಪಾವತಿ ಮಾಡಲು ಮುಂದಾದರೆ ಪ್ರತಿ ಬಾರಿ ನಾಲ್ಕು ಗಂಟೆಗಳ ಸಮಯದ ಮಿತಿಯನ್ನು ಜಾರಿಗೊಳಿಸುತ್ತದೆ ಎಂದು ಹೇಳಲಾಗಿದೆ.
ಯಾಕಾಗಿ ಈ ನಿರ್ಧಾರ?: ಈ ಕ್ರಮವು ಡಿಜಿಟಲ್ ಪಾವತಿ ವಿಭಾಗದಲ್ಲಿ ಕೆಲವು ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತದೆಯಾದರೂ ಸೈಬರ್ ಅಪರಾಧ ತಡೆಗೆ ಉತ್ತಮ ಮಾರ್ಗವಾಗಿದೆ ಎಂದು ಅಧಿಕಾರಿಗಳು ವಾದಿಸುತ್ತಾರೆ. ಈ ಉದ್ದೇಶಿತ ವಿಳಂಬದಿಂದ ಸೈಬರ್ ಅಪರಾಧಿಗಳು ಮತ್ತು ವಂಚಕರು ಯುಪಿಐ ವಹಿವಾಟುಗಳ ಲಾಭ ಪಡೆಯಲು ವಿಫಲರಾಗಬಹುದು ಎಂದು ಉಲ್ಲೇಖಿಲಾಗಿದೆ.

ಈ ನಿರ್ಧಾರಕ್ಕೂ ಮುನ್ನ ಸರ್ಕಾರ ಹಲವು ಅನುಮಾನಾಸ್ಪದ ಸಂಖ್ಯೆಗಳನ್ನು ನಿರ್ಬಂಧಿಸಿದೆ. ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರು ಮಂಗಳವಾರ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ, ಅನುಮಾನಾಸ್ಪದ ವಹಿವಾಟುಗಳಲ್ಲಿ ಬಳಕೆಯಾದ 70 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಅಮಾನತುಗೊಸಲಾಗಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಪಾವತಿ ವಂಚನೆಯನ್ನು ತಡೆಯುವ ಸಂಭಾವ್ಯ ಕ್ರಮಗಳಲ್ಲಿ ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳನ್ನು ಅಮಾನತುಗೊಳಿಸುವುದು ಪ್ರಮುಖವಾದ ಮಾರ್ಗವಾಗಿದೆ ಎಂದು ಈ ವೇಳೆ ಒತ್ತಿ ಹೇಳಿದ್ದಾರೆ.


Click it and Unblock the Notifications








