ಭಾರತದ ಈ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ 5G ಬೇಸ್ ಸ್ಟೇಷನ್ ಸ್ಥಾಪಿಸಬೇಡಿ; ದೂರಸಂಪರ್ಕ ಇಲಾಖೆ
ಭಾರತದಲ್ಲಿ ಈಗ 5G ಎಲ್ಲಾ ಕಡೆ ನಿಧಾನವಾಗಿ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳುತ್ತ ಬರುತ್ತಿದೆ. ಅದರಂತೆ ಈಗಾಗಲೇ ಹಲವು ಮೆಟ್ರೋ ನಗರಗಳು ಈ ಸೇವೆ ಪಡೆಯುವಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಆದರೆ, ಈ ಪ್ರಮುಖ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಬೇಡಿ ಎಂದು ಏರ್‌ಟೆಲ್, ಜಿಯೋ ಹಾಗೂ ವಿಗೆ ದೂರಸಂಪರ್ಕ ಇಲಾಖೆ ಪತ್ರ ಬರೆದಿದೆ.

ಹೌದು, ಈ 5G ಸೇವೆಯಿಂದ ಕೆಲವೊಂದಷ್ಟು ಸಮಸ್ಯೆಯನ್ನು ಕಂಡುಕೊಂಡಿರುವ ದೂರಸಂಪರ್ಕ ಇಲಾಖೆ, ವಿಮಾನ ನಿಲ್ದಾಣಗಳಿಂದ 2.1 ಕಿಮೀ ಒಳಗೆ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಬೇಡಿ ಹೇಳಿದೆ. ಹಾಗೆಯೇ ಈ ಬಗ್ಗೆ ಮನವಿ ಮಾಡಿ ಬರೆಯಲಾದ ಪತ್ರ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳಿಗೆ ತಲುಪಿದೆ. ಈ ಮೂಲಕ ನಾ ಮುಂದು ತಾ ಮುಂದೆ ಎಂಬಂತೆ ವಿಮಾನ ನಿಲ್ದಾಣಗಳಲ್ಲಿ 5G ಸೇವೆ ನೀಡಲು ಮುಂದಾಗಿದ್ದ ಸಂಸ್ಥೆಗಳಿಗೆ ಕೆಲವು ಸಮಯದ ವರೆಗೆ ಲಗಾಮು ಹಾಕಲಾಗಿದೆ.

5G ಸೇವೆಯಿಂದ ವಿಮಾನ ನಿಲ್ದಾಣಕ್ಕೆ ಆಗುವ ಸಮಸ್ಯೆ ಏನು?
ನಾಗರಿಕ ವಿಮಾನಯಾನ ಸಚಿವಾಲಯವು ಬಫರ್ ಮತ್ತು ಸುರಕ್ಷತಾ ವಲಯದ ರೇಖಾಚಿತ್ರವನ್ನು ಈಗಾಗಲೇ ನೀಡಿದೆ. ಇನ್ನು ಸಿ-ಬ್ಯಾಂಡ್ 5G ಬೇಸ್ ಸ್ಟೇಷನ್‌ಗಳು ಕೆಲವು ಸಮಸ್ಯೆ ಉಂಟುಮಾಡಲಿವೆ ಎಂದು ತಿಳಿಸಿದೆ. ಅಂದರೆ, ವಿಮಾನದ ರೇಡಿಯೋ (ರೇಡಾರ್) ಆಲ್ಟಿಮೀಟರ್ ಮೂಲಕ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆಗಳು ನಡೆಯುತ್ತವೆ 5G ಬ್ಯಾಂಡ್‌ಗಳನ್ನು ವಿಮಾನ ನಿಲ್ದಾಣದ ಹತ್ತಿರ ಸ್ಥಾಪನೆ ಮಾಡಿದರೆ 5G ತರಂಗಾತರಗಳು ಏರ್‌ಕ್ರಾಫ್ಟ್ ರೇಡಿಯೋ ತರಂಗಾಂತರಗಳಿಗೆ ಹೆಚ್ಚಿನ ಅಡ್ಡಿ ಉಂಟುಮಾಡಲಿವೆಯಂತೆ. ಇದರಿಂದ ವಿಮಾನಗಳು ಲ್ಯಾಂಡಿಂಗ್ ಆಗುವಾಗ ಅಪಘಾತವಾಗುವ ಸಂಭವ ಹೆಚ್ಚಿರುತ್ತದೆ ಎಂದು ತಿಳಿಸಿದೆ.

2.1 ಕಿಮೀ ವ್ಯಾಪ್ತಿಯ ಅಂತರ ಇರಲಿ
ಇನ್ನು ರನ್‌ವೇಯ ಎರಡೂ ತುದಿಗಳಿಂದ 2,100 ಮೀಟರ್‌ಗಳು ಮತ್ತು ಭಾರತೀಯ ವಿಮಾನ ನಿಲ್ದಾಣಗಳ ರನ್‌ವೇಯ ಮಧ್ಯದ ರೇಖೆಯಿಂದ 910 ಮೀಟರ್‌ಗಳಷ್ಟು ಪ್ರದೇಶದಲ್ಲಿ 3,300-3,670 MHz ನ 5G/ IMT ಬೇಸ್ ಸ್ಟೇಷನ್ ಇರಬಾರದು ಎಂದು ಟೆಲಿಕಾಂ ಪೂರೈಕೆದಾರರಿಗೆ ಸಲಹೆ ನೀಡಲಾಗಿದೆ.

ಎಲ್ಲೆಲ್ಲಿ 5G ಬೇಸ್ ಸ್ಟೇಷನ್ ಸ್ಥಾಪನೆ ಆಗಿವೆ?
ಈಗಾಗಲೇ ಏರ್‌ಟೆಲ್ ನಾಗ್ಪುರ, ಬೆಂಗಳೂರು, ನವದೆಹಲಿ, ಗುವಾಹಟಿ ಮತ್ತು ಪುಣೆಯ ವಿಮಾನ ನಿಲ್ದಾಣಗಳಲ್ಲಿ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಹಾಗೆಯೇ ಜಿಯೋ ಸಂಸ್ಥೆ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪನೆ ಮಾಡಿದೆ.

ರೇಡಿಯೊ ಆಲ್ಟಿಮೀಟರ್‌ಗೆ ತೊಂದರೆಯಾಗಬಾರದು
5G ಹೊರಸೂಸುವಿಕೆಗಳು ರೇಡಿಯೊ ಆಲ್ಟಿಮೀಟರ್‌ಗಳೊಂದಿಗೆ ಮಧ್ಯಪ್ರವೇಶಿಸಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಟೆಲಿಕಾಂ ಪೂರೈಕೆದಾರರನ್ನು ದೂರಸಂಪರ್ಕ ಇಲಾಖೆ ಕೇಳಿದೆ. ಹಾಗೆಯೇ ಎಲ್ಲಾ ವಿಮಾನಗಳ ರೇಡಿಯೋ ಆಲ್ಟಿಮೀಟರ್‌ಗಳ ಫಿಲ್ಟರ್‌ಗಳು ಬದಲಾಗಿರುವುದನ್ನು ಡಿಜಿಸಿಎ ಖಾತ್ರಿಪಡಿಸುವವರೆಗೆ ಈ ಹೊಸ ನಿಯಮವು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

ಈಗಾಗಲೇ ಸಮಸ್ಯೆ ಎದುರಿಸುತ್ತಿದೆ ಯುಎಸ್
ಪ್ರಪಂಚದಾದ್ಯಂತ ಹೆಚ್ಚಿನ ವೇಗದ 5G ವಾಯರ್‌ಲೆಸ್ ಸೇವೆ ಹೆಚ್ಚಾದಂತೆ ಕೆಲವು ಸಮಸ್ಯೆ ಸಹ ಎದುರಾಗುತ್ತಿವೆ. ಅದರಲ್ಲೂ ಯುಎಸ್‌ನಲ್ಲಿ ಪೈಲಟ್‌ಗಳು ವಿಮಾನದ ರೇಡಿಯೊ (ರೇಡಾರ್) ಆಲ್ಟಿಮೀಟರ್‌ಗಳೊಂದಿಗೆ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಮುಂದಾಲೋಚನೆ ಮಾಡಿರುವ ಭಾರತದ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಕ್ಕೆ ಕಡಿವಾಣಹಾಕಿದ್ದಾರೆ.

ಮೂರು ವಿಮಾನಗಳು ಒಂದೇ ಬಾರಿಗೆ ಸಮಸ್ಯೆ ಎದುರಿಸಿವೆ
ಈ ವರ್ಷದ ಜನವರಿಯಲ್ಲಿ ಯುಎಸ್‌ನಲ್ಲಿ ಕನಿಷ್ಠ ಮೂರು ವಿಮಾನಗಳು ಏಕಕಾಲದಲ್ಲಿ ಆಲ್ಟಿಮೀಟರ್ ದೋಷಗಳನ್ನು ಎದುರಿಸಿವೆಯಂತೆ. ಅದರಲ್ಲೂ ಒಂದು ಜೆಟ್ ತನ್ನ ಆಟೋಪೈಲಟ್ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಿತ್ತು ಎಂಬ ಬಗ್ಗೆಯೂ ವರದಿಯಾಗಿದೆ.


Click it and Unblock the Notifications








