Gruha Lakshmi:ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರೇ ಎಚ್ಚರ...ಈ ತಪ್ಪು ಮಾಡದಿರಿ!
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruha Lakshmi) ಇಂದು ಸಂಜೆ ಐದು ಗಂಟೆಯ ನಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಯೋಜನೆಯಡಿ ಮನೆಯ ಒಡತಿ ಪ್ರತಿ ತಿಂಗಳು ಎರಡು ಸಾವಿರ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಇದಕ್ಕೆ ಅರ್ಜಿ ಸಲ್ಲಿಸುವ ಮುನ್ನ ಎಚ್ವರಿಕೆ ವಹಿಸುವುದು ಈಗ ಅನಿವಾರ್ಯ ಆಗಿದೆ.
ಹೌದು, ಕರ್ನಾಟಕದ ಸರ್ಕಾರ ಮಹತ್ವದ ಯೋಜನೆಗಳ ಲಿಸ್ಟ್‌ನಲ್ಲಿ ಈಗಾಗಲೇ ಅನ್ನಭಾಗ್ಯ, ಶಕ್ತಿಯೋಜನೆ ಹಾಗೂ ಉಚಿತ ವಿದ್ಯುತ್ ಯೋಜನೆಗಳು ಜಾರಿಯಾಗಿದ್ದು, ಜನರೆಲ್ಲರೂ ಕಾತುರದಿಂದ ಖಕಾಯುತ್ತಿದ್ದ ಗೃಹಲಕ್ಷ್ಮಿಗೆ ಇಂದಿನಿಂದ ಅರ್ಜಿ ಸಲ್ಲಿಸಬಹುದಾಗಿದೆ. ಈ ನಡುವೆ ಜನರು ಬಹಳ ಎಚ್ಚರಿಕೆಯಿಂದ ಈ ಕಾರ್ಯ ಮಾಡಬೇಕಿದೆ. ಅಂತೆಯೇ ಅರ್ಜಿ ಸಲ್ಲಿಸುವಾಗ ಏನೆಲ್ಲಾ ಮುಂಜಾಗ್ರತೆ ಕ್ರಮ ಬಹಿಸಬೇಕು?, ಯಾವೆಲ್ಲಾ ದಾಖಲೆಗಳು ಬೇಕು?, ಮೋಸ ಹೋಗದ ಹಾಗೆ ಅರ್ಜಿ ಸಲ್ಲಿಸುವುದು ಹೇಗೆ ?ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ಗೃಹಲಕ್ಷ್ಮಿ?: ಗೃಹಲಕ್ಷ್ಮಿ ಯೋಜನೆ ಎಂದರೆ ಈಗಾಗಲೇ ಸಾಮಾನ್ಯವಾಗಿ ಕರ್ನಾಟಕದ ಎಲ್ಲರಿಗೂ ತಿಳಿದ ವಿಚಾರವೇ ಹೌದು. ಈ ಯೋಜನೆಯಲ್ಲಿ ಪ್ರತಿ ತಿಂಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎರಡು ಸಾವಿರ ರೂ.ಗಳನ್ನು ಮನೆಯ ಒಡತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ. ಮನೆಯ ಒಡತಿ ಎಂದರೆ ಪಡಿತರ ಚೀಟಿಯಲ್ಲಿ(Ration card) ಯಾರು ಮುಖ್ಯಸ್ಥರು ಎಂದು ನಮೂದಾಗಿದೆಯೋ ಅವರ ಹೆಸರಿಗೆ ಈ ಹಣವನ್ನು ಜಮಾ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಅಗತ್ಯ?: ಅರ್ಜಿ ಸಲ್ಲಿಕೆ ಮಾಡುವ ಮುನ್ನ ನಿಮ್ಮ ಬಳಿ ಪಡಿತರ ಚೀಟಿ, ಆಧಾರ್ ಕಾರ್ಡ್(Aadhar card), ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಫೋನ್ ನಂಬರ್(phone number) ಅಗತ್ಯವಾದ ದಾಖಲೆಗಳಾಗಿದೆ. ಇವುಗಳನ್ನು ಬಳಕೆ ಮಾಡಿಕೊಂಡು ನೀವು ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದು.
ನಕಲಿ ಆಪ್‌ಗಳ ಬಗ್ಗೆ ಇರಲಿ ಎಚ್ಚರ: ಸರ್ಕಾರ ಈ ಯೋಜನೆಗಳನ್ನು ಘೋಷಣೆ ಮಾಡಿದಾಗಿನಿಂದಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೃಹಲಕ್ಷ್ಮಿ ಹೆಸರಿನ ಅನೇಕ ಆಪ್‌ಗಳು (Fake apps) ಕಾಣಿಸಿಕೊಂಡಿವೆ. ಆದರೆ ಇವೆಲ್ಲಾ ನಕಲಿ ಆಪ್‌ಗಳಾಗಿವೆ ಎಂಬುದು ನಿಮಗೆ ಗೊತ್ತಿರಲಿ. ಇವು ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುವುದರೊಂದಿಗೆ ನಿಮಗೆ ಹಣದ ವಂಚನೆ ಮಾಡುವ ಉದ್ದೇಶವನ್ನು ಹೊಂದಿರುತ್ತವೆ. ಪರಿಣಾಮ ಗೃಹಲಕ್ಷ್ಮಿ ಸಂಬಂಧ ಯಾವುದೇ ನಕಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ.
ಯಾವುದೇ ಕಾಗದದ ಅರ್ಜಿಗಳು ಇರುವುದಿಲ್ಲ: ಇದೆಲ್ಲದಕ್ಕಿಂತ ಮಿಗಿಲಾಗಿ ನಕಲಿ ಅರ್ಜಿಗಳ ಮೂಲಕ ಕೆಲ ಕಿಡಿಗೇಡಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(laxmi hebbalkar ) ಜನರನ್ನು ಎಚ್ಚರಿಸಿದ್ದು, ಅರ್ಜಿಗಳ ಮೂಲಕ ಈ ಯೋಜನೆಗೆ ಮನವಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ಸಹ ನೀಡಿದ್ದಾರೆ.
ಮನೆ ಬಳಿ ಬರುವವರ ಬಗ್ಗೆ ಇರಲಿ ಎಚ್ಚರ: ಸರ್ಕಾರ ಈ ಕೆಲಸಕ್ಕೆ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಿಮ್ಮ ಮನೆಗೆ ಬಂದು ಅರ್ಜಿ ಸಲ್ಲಿಸುತ್ತೇವೆ ಎಂದರೆ ಅವರು ಮೊದಲು ಯಾರೆಂದು ತಿಳಿದುಕೊಂಡು ಅರ್ಜಿ ಸಲ್ಲಿಕೆ ಮಾಡಿ. ಹಾಗೆಯೇ ಪ್ರಜಾಪ್ರತಿನಿಧಿಗಳು ಮೊಬೈಲ್ ಆಪ್ ಮೂಲಕ ಅರ್ಜಿ ಭರ್ತಿ ಮಾಡಿ ಇಲಾಖೆಗೆ ಕಳುಹಿಸುತ್ತಾರೆ.

ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ: ಈ ಸಂಬಂಧ ಯಾವುದೇ ಮಾಹಿತಿಯನ್ನಾದರೂ ಕೇಳಿ ಪಡೆದುಕೊಳ್ಳಲು ಹಾಗೂ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕಲು ಪಡಿತರ ಚೀಟಿಯ ಸಂಖ್ಯೆಯನ್ನು 8147500500 ಈ ಸಂಖ್ಯೆ ಎಸ್‌ಎಂಎಸ್ ಮಾಡಬಹುದು. ಇದರೊಂದಿಗೆ ಇಲಾಖೆಯ 1902 ನಂಬರ್ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಇದರೊಂದಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅಂತಿಮ ದಿನಾಂಕವೂ ಇಲ್ಲ ಹಾಗೂ ಅರ್ಜಿ ಶುಲ್ಕ ಸಹ ಇರುವುದಿಲ್ಲ.
ಎಲ್ಲೆಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು?: ಗೃಹಲಕ್ಷ್ಮಿ ಯೋಜನೆಗೆ ನೀವೇ ಸ್ವತಃ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ. ಯಾಕೆಂದರೆ ಈಗಾಗಲೇ ಸ್ಕ್ಯಾಮರ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ಕಾರದ ಅಧಿಕೃತ ಸೇವಾ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆ ಮಾಡಬಹುದು. ಅಂದರೆ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಪ್ರಜಾಪ್ರತಿನಿಧಿಗಳ ಸಹಾಯ ಪಡೆಯಬಹುದು.


Click it and Unblock the Notifications








