Apple: ಗುಜರಾತ್ ಕಾಲೇಜಿನ ಪದವೀಧರ ಇನ್ಮುಂದೆ ಆಪಲ್ ಆಡಿಯೊ ವಿಭಾಗದ ಹೊಸ ಬಾಸ್?
ಈಗಾಗಲೇ ಭಾರತ ಮೂಲದ ಸಾಕಷ್ಟು ಜನರು ದೊಡ್ಡ ದೊಡ್ಡ ಜಾಗತಿಕ ಸಂಸ್ಥೆಗಳ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲೂ ಇಂದ್ರ ನೂಯಿ, ಇವಾನ್ ಮೆನೇಜಸ್, ಲಕ್ಷ್ಮಣ್ ನರಸಿಂಹನ್, ನೀಲ್ ಮೋಹನ್ ಸೇರಿದಂತೆ ಅನೇಕರು ಜನಪ್ರಿಯತೆ ಪಡೆದಿರುವ ಕಂಪೆನಿಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈ ನಡುವೆ ಗುಜರಾತ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಓರ್ವರು ಇನ್ಮುಂದೆ ಆಪಲ್‌ನ (Apple) ಆಡಿಯೊ ವಿಭಾಗದ ಬಾಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಆಪಲ್ ಗ್ರಾಹಕ ಎಲೆಕ್ಟ್ರಾನಿಕ್ಸ್ ತಯಾರಿಕಾ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದೆ. ಇದು ಐಫೋನ್, ಐಪ್ಯಾಡ್, ಮ್ಯಾಕ್, ಆಪಲ್ ವಾಚ್ ಹಾಗೂ ಆಪಲ್ ಟಿವಿ ಸೇರಿದಂತೆ ಅನೇಕ ಡಿವೈಸ್‌ಗಳನ್ನು ಪರಿಚಯಿಸಿದೆ. ಇದರ ಜೊತೆಗೆ ಐಟ್ಯೂನ್ಸ್, ಐಕ್ಲೌಡ್ ಮತ್ತು ಆಪಲ್ ಮ್ಯೂಸಿಕ್ ಸಹ ಸೇರಿವೆ. ಈ ಮೂಲಕ ಟೆಕ್ ದೈತ್ಯನಾಗಿ ಆಪಲ್ ಗುರುತಿಸಿಕೊಂಡಿದೆ. ಈ ನಡುವೆ ಇಷ್ಟು ದೊಡ್ಡ ಕಂಪೆನಿಯ ಆಡಿಯೋ ವಿಭಾಗಕ್ಕೆ ಹೊಸ ಬಾಸ್ ನೇಮಕವಾಗುತ್ತಿದ್ದಾರೆ ಎನ್ನಲಾಗಿದೆ. ಹಾಗಿದ್ರೆ ಯಾರು ಇವರು?, ಈ ಹಿಂದೆ ಇದ್ದವರು ಯಾರು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಆಪಲ್ ಆಡಿಯೊ ವಿಭಾಗಕ್ಕೆ ಹೊಸ ಬಾಸ್: ಆಪಲ್ ತನ್ನ ಹಾರ್ಡ್‌ವೇರ್ ತಂಡದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಿದೆ ಎಂದು ತಿಳಿದುಬಂದಿದೆ. ಈ ನಡುವೆ ಆಪಲ್ ಏರ್‌ಪಾಡ್ಸ್ ಮತ್ತು ಮ್ಯಾಕ್ಸ್ ನಂತಹ ಆಡಿಯೊ ವೈಶಿಷ್ಟ್ಯಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಸಹ ಹೊಂದಿದ್ದು, ಈವರೆಗೆ ಆಪಲ್‌ನ ಅಕೌಸ್ಟಿಕ್ಸ್‌ನ ಚುಕ್ಕಾಣಿ ಹಿಡಿದಿದ್ದ ಗ್ಯಾರಿ ಗೀವ್ಸ್ (Gary Geeves) ಅವರು ತಮ್ಮ ಪಾತ್ರದಿಂದ ವಿಮುಕ್ತರಾಗಲಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಗೇವ್ಸ್ ಸುಮಾರು 13 ವರ್ಷಗಳ ಕಾಲ ಆಪಲ್‌ನ ಅಕೌಸ್ಟಿಕ್ಸ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಆದರೆ ಈಗ ಗೀವ್ಸ್ ಬದಲಿಗೆ ಇದೇ 14 ವರ್ಷಗಳಿಂದ ಇದೇ ಕಂಪನಿಯಲ್ಲಿದ್ದ ರುಚಿರ್ ಡೇವ್ (Ruchir Dave) ಎಂಬುವ ಗುಜರಾತ್‌ನ ಕಾಲೇಜಿನಲ್ಲಿ ಪದವಿ ಪಡೆದಿರುವ ವ್ಯಕ್ತಿಯೋರ್ವರು ಆಪಲ್‌ನಲ್ಲಿ ಅಕೌಸ್ಟಿಕ್ಸ್‌ನ ಹೊಸ ಉಪಾಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಇಂಡಿಯಾ ಟುಡೇ ವರದಿ ಮಾಡಿದ್ದು, ಅದರಲ್ಲಿ ಉಲ್ಲೇಖ ಮಾಡಿದಂತೆ ಲಿಂಕ್ಡ್‌ಇನ್ ಖಾತೆಯ ಪ್ರಕಾರ, ಡೇವ್ 14 ವರ್ಷಗಳಿಗೂ ಹೆಚ್ಚು ಕಾಲ ಕಂಪನಿಯಲ್ಲಿದ್ದಾರಂತೆ.

ಡೇವ್ ಅವರು ಅಕೌಸ್ಟಿಕ್ಸ್ ಇಂಜಿನಿಯರ್ ತಂಡದಲ್ಲಿ ಪ್ರಮುಖರಾಗಿ ಕೆಲಸ ಮಾಡುತ್ತಿದ್ದು, ಮೇ 2012 ರಲ್ಲಿ ಮ್ಯಾನೇಜರ್ ಮಟ್ಟಕ್ಕೆ ಬಡ್ತಿ ಪಡೆದಿದ್ದರು. ಇದಾದ ಬಳಿಕ ಮಾರ್ಚ್ 2021 ರಲ್ಲಿ, ಡೇವ್ ಅವರನ್ನು ಕಂಪನಿಯಲ್ಲಿ ಹಿರಿಯ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಇನ್ನು ಇವರು ಆಪಲ್‌ಗೂ ಬರುವ ಮುನ್ನ ಸುಮಾರು 10 ವರ್ಷಗಳ ಕಾಲ ಸಿಸ್ಕೋದಲ್ಲಿ ಕೆಲಸ ಮಾಡಿದ್ದಾರೆ. ಇದೇ ವೇಳೆ ಇವರ ಬಗ್ಗೆ ತಿಳಿದುಬಂದ ವಿಚಾರ ಏನೆಂದರೆ ಇವರು ಗುಜರಾತ್‌ನಲ್ಲಿ ವಿದ್ಯಾರ್ಥಿಯಾಗಿದ್ದರು ಅನ್ನೋದು.
ಡೇವ್ ಅವರ ಲಿಂಕ್ಡ್‌ಇನ್ ಬಯೋದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. 1982 ರಿಂದ 1994 ರವರೆಗೆ ಅಹಮದಾಬಾದ್‌ನ ಶಾರದಮಂದಿರದಲ್ಲಿ ವಿದ್ಯಾರ್ಥಿಯಾಗಿದ್ದರು ಎಂದು ಉಲ್ಲೇಖಿಸಿದ್ದಾರೆ. ನಂತರ ಅವರು ಅಹಮದಾಬಾದ್‌ನ ಲಾಲ್‌ಭಾಯ್ ದಲ್ಪತ್‌ಭಾಯ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿದ್ದು, 1998 ರಲ್ಲಿ ಪದವಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪೆನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಿದ್ದಾರೆ.

ಇನ್ನು ಇವರು ಹೊಸ ಹುದ್ದೆ ಅಲಂಕರಿಸುತ್ತಿದ್ದಾರೆ ಅನ್ನೋ ಮಾಹಿತಿ ಬಗ್ಗೆ ಆಪಲ್ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ವಿಷಯ ಇನ್ನೂ ಸಹ ಖಾಸಗಿ ಆಗಿದೆ ಎನ್ನಲಾಗಿದೆ. ಇನ್ನು ಆಪಲ್‌ನ ಹಾರ್ಡ್‌ವೇರ್ ತಂಡವು ಸುಮಾರು 300 ಉದ್ಯೋಗಿಗಳನ್ನು ಒಳಗೊಂಡಿದ್ದು, ಕಂಪನಿಯ ಹೋಮ್‌ಪಾಡ್, ಏರ್‌ಪಾಡ್ಸ್ ಮತ್ತು ಸ್ಪೀಕರ್‌ಗಳ ವ್ಯವಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಈ ಟೀಮ್ ಸೌಂಡ್ ಮತ್ತು ಮೈಕ್ರೊಫೋನ್ ತಂತ್ರಜ್ಞಾನಗಳಲ್ಲಿನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಪ್ರಾದೇಶಿಕ ಆಡಿಯೊದಂತಹ ಸಾಫ್ಟ್‌ವೇರ್ ಫೀಚರ್ಸ್‌ಗಳ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ನಡುವೆ ಒಂದೆರಡು ತಿಂಗಳ ಹಿಂದೆ, ಆಪಲ್ ತನ್ನ ಅತ್ಯಂತ ಜನಪ್ರಿಯ ಆಡಿಯೊ ಉತ್ಪನ್ನಗಳಲ್ಲಿ ಒಂದಾದ ಏರ್‌ಪಾಡ್‌ಗಳಲ್ಲಿ ಪ್ರಮುಖ ಬದಲಾವಣೆಯನ್ನು ಸಹ ಪರಿಚಯಿಸಿದೆ.
ಮೊದಲ ಬಾರಿಗೆ, ಕಂಪನಿಯು ಲೈಟನಿಂಗ್ ಪೋರ್ಟ್‌ಗೆ ವಿದಾಯ ಹೇಳಿದ್ದು, ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಡಿವೈಸ್‌ಗೆ ಸೇರಿಸಿದೆ. ಹೊಸ ಏರ್‌ಪಾಡ್ಸ್ ಹೊಂದಿರುವ ಗ್ರಾಹಕರು ಈಗ ಹೆಚ್ಚುವರಿ ಕೇಬಲ್ ಅನ್ನು ಒಯ್ಯದೆಯೇ ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಬಳಕೆ ಮಾಡುವ ಕೇಬಲ್‌ನಿಂದಲೇ ಚಾರ್ಜ್ ಮಾಡಬಹುದಾಗಿದೆ.


Click it and Unblock the Notifications








