Mosquito bites: ಸೊಳ್ಳೆ ಕಡಿತದ ನೋವನ್ನು ಮಾಯ ಮಾಡಲಿದೆ ಈ ಯುಎಸ್‌ಬಿ ಡಾಂಗಲ್; ಅದೇಗೆ ಅಂತೀರಾ?
ಸೊಳ್ಳೆಗಳ (mosquito) ಕಾಟ ಯಾರಿಗೆ ತಾನೆ ಇಲ್ಲ ಹೇಳಿ. ಎಂತಹುದೇ ಐಷಾರಾಮಿ ಮನೆಯಲ್ಲಿ ಇದ್ದರೂ ಒಂದು ಸೊಳ್ಳೆಯಾದರೂ ಇದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ಸೊಳ್ಳೆಗಳು ಮನುಷ್ಯರನ್ನು ಇನ್ನಿಲ್ಲದಂತೆ ಕಾಡುತ್ತವೆ. ಈ ನಡುವೆ ಸೊಳ್ಳೆಗಳನ್ನು ನಾಶ ಮಾಡಲು ವಿವಿಧ ರೀತಿಯ ಸ್ಮಾರ್ಟ್ ಗ್ಯಾಜೆಟ್ ಇರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಸೊಳ್ಳೆ ಕಚ್ಚಿದರೆ ಅದರ ನೋವಿನಿಂದ ಪಾರಾಗುವುದಕ್ಕೂ ಸ್ಮಾರ್ಟ್ ಡಿವೈಸ್ ಇದೆ ಅನ್ನೋದು ಗೊತ್ತಾ?.
ಹೌದು, ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಷಯಕ್ಕೂ ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಬಳಕೆ ಮಾಡುತ್ತೇವೆ. ಅಂತೆಯೇ ಸೊಳ್ಳೆ ಕಡಿತದ ನೋವಿಗೆ ಪರಿಹಾರ ಪಡೆಯಲು ಹೊಸ ಡಿವೈಸ್ ಲಭ್ಯ ಇದ್ದು, ಇದು ವಿವಿಧ ರೀತಿಯಲ್ಲಿ ಬಳಕೆಗೆ ಬರಲಿದೆ. ಇದನ್ನು ಸ್ಮಾರ್ಟ್‌ಫೋನ್ (Smartphone) ಮೂಲಕವೇ ಬಳಕೆ ಮಾಡಬಹುದಾಗಿದೆ. ಹಾಗಿದ್ರೆ, ಸೊಳ್ಳೆ ಕಡಿತದ ನೋವನ್ನು ಕಡಿಮೆ ಮಾಡಲು ಹೊಸ ಯುಎಸ್‌ಬಿ ಟೈಪ್-ಸಿ ಡಾಂಗಲ್ (USB Type-C dongle) ಹೇಗೆ ಕೆಲಸ ಮಾಡಲಿದೆ?, ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಯುಎಸ್‌ಬಿ ಟೈಪ್-ಸಿ ಡಾಂಗಲ್: ಸೊಳ್ಳೆ ಕಚ್ಚಿದ ನಂತರ ನೋವು ಮತ್ತು ತುರಿಕೆ ನಿವಾರಿಸಲು ಜನರು ಕಷ್ಟ ಪಡುತ್ತಾರೆ. ಆದರೆ, ಈ ಈ ಪ್ರಶ್ನೆಗೆ ಸರಳ ಉತ್ತರ ಎಂದರೆ ಅದುವೇ ಈ ಯುಎಸ್‌ಬಿ ಟೈಪ್-ಸಿ ಡಾಂಗಲ್. ಅಂದರೆ ಜರ್ಮನ್ ಕಂಪನಿ ಕಾಮೆಡಿ ಈ ಸ್ಮಾರ್ಟ್ ಡಿವೈಸ್ ಅನ್ನು ಪರಿಚಯಿಸಿದ್ದು, ಸೊಳ್ಳೆ ಮಾತ್ರವಲ್ಲದೇ ಇತರೆ ಕೀಟಗಳ ಕಡಿತದಿಂದ ಉಂಟಾಗುವ ನೋವನ್ನು ನಿವಾರಿಸಲು ಈ ಕಾಮೆಡಿ (Kamedi) ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಬಳಕೆ ಮಾಡಬಹುದಾಗಿದೆ.
ಕಾಮಿಡಿ ಲಾಂಚ್ ಮಾಡಿರುವ ಈ ಡಿವೈಸ್‌ಗೆ ಹೀಟ್ ಇಟ್ (Heat-It'USB Type-C dongle) ಎಂದು ಹೆಸರಿಡಲಾಗಿದೆ. ಇದು ಯುಎಸ್‌ಬಿ ಟೈಪ್-ಸಿ ಡಾಂಗಲ್ ಆಗಿದ್ದು, ಸೊಳ್ಳೆ ಕಡಿತದಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ಬಳಸಬಹುದು ಎಂದು ಕಂಪನಿ ಮಾಹಿತಿ ನೀಡಿದೆ. ಈ ಯುಎಸ್‌ಬಿ ಟೈಪ್-ಸಿ ಡಾಂಗಲ್ ಗ್ಯಾಜೆಟ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನ ಟೈಪ್-ಸಿ ಪೋರ್ಟ್‌ಗೆ ಸಂಪರ್ಕ ಮಾಡಿಕೊಳ್ಳಬಹುದು. ಇದು ಶಾಖವನ್ನು ಉತ್ಪಾದಿಸುವ ಲೋಹದ ಮೇಲ್ಮೈಯನ್ನು ಹೊಂದಿದ್ದು, ಕಚ್ಚಿಸಿಕೊಂಡ ಜಾಗದಲ್ಲಿ ಪರಿಹಾರ ಪಡೆಯಬಹುದು.

ಇನ್ನು ಪ್ಲಗ್ ಇನ್ ಮಾಡಿದ ನಂತರ ಈ ಶಾಖ ಚಿಕಿತ್ಸೆಯ ಅವಧಿಯನ್ನು ಕಸ್ಟಮೈಸ್ ಮಾಡಲು ಸಹ ಅನುಕೂಲ ಇದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಆಪ್ ಬಳಕೆ ಮಾಡಬಹುದು. ಗಮನಿಸಬೇಕಾದ ವಿಷಯ ಏನೆಂದರೆ ಈ ಆಪ್ ಮೂಲಕ ಮಕ್ಕಳಿಗೆ ಹಾಗೂ ಸೂಕ್ಷ್ಮ ಚರ್ಮ ಇರುವವರಿಗೆ ಯಾವುದೇ ಸಮಸ್ಯೆ ಆಗಬಾರದ ಹಾಗೆ ಸೆಟ್ಟಿಂಗ್ ಮಾಡಿಕೊಳ್ಳಬಹುದಾಗಿದೆ. ಅಂದರೆ ಚರ್ಮಕ್ಕೆ ತಕ್ಕಂತೆ ತಾಪಮಾನವನ್ನು ಸರಿಹೊಂದಿಸಿಕೊಳ್ಳಬಹುದಾಗಿದೆ.
ಸೊಳ್ಳೆ ಕಡಿತದ ಪ್ರದೇಶದಲ್ಲಿ ಅಂದರೆ ನಿಮ್ಮ ಚರ್ಮದ ಮೇಲೆ ಸುಮಾರು 51 ಡಿಗ್ರಿ ಸೆಲ್ಸಿಯಸ್ ಗುರಿ ತಾಪಮಾನವು ಶಾಖದ ಮೂಲಕ ಪರಿಹಾರವನ್ನು ನೀಡುವ ಕೆಲಸ ಮಾಡುತ್ತದೆ. ಈಗಾಗಲೇ ಹೀಟ್ ಇಟ್ ಬಳಸಿ ನಡೆಸಿದ ಅಧ್ಯಯದ ಮೂಲಕ ಉತ್ತಮ ರಿಸಲ್ಟ್ ಕಂಡುಕೊಳ್ಳಲಾಗಿದೆ. ಕೀಟ ಕಡಿತದಿಂದ ಉಂಟಾಗುವ ಸಮಸ್ಯೆ ಅಥವಾ ತುರಿಕೆಯನ್ನು ನಿವಾರಿಸುವಲ್ಲಿ ಈ ಸಣ್ಣ ಡಿವೈಸ್ ಪರಿಣಾಮಕಾರಿ ಪರಿಹಾರ ನೀಡುತ್ತದೆ ಎಂದು ತಿಳಿದುಬಂದಿದೆ. ಈ ವರದಿಯನ್ನು ಸ್ವೀಡಿಷ್ ಜರ್ನಲ್ ಆಕ್ಟಾ ಡರ್ಮಟೊ ವೆನೆರೊಲೊಜಿಕಾದಲ್ಲಿ ಪ್ರಕಟ ಮಾಡಲಾಗಿದೆ.
ಈ ಅಧ್ಯಯನದ ಭಾಗವಾಗಿ, 1,700 ವ್ಯಕ್ತಿಗಳ ಮೇಲೆ 12,000 ಕ್ಕೂ ಹೆಚ್ಚು ಚಿಕಿತ್ಸೆಗಳನ್ನು ನಡೆಸಲಾಗಿದೆ ಮತ್ತು ಸಂಶೋಧನೆಗಳು ಹೀಟ್ ಇಟ್ ಗಮನಾರ್ಹವಾಗಿ ತುರಿಕೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ಹಳೆಯ ಸಮಸ್ಯೆಗೆ ಹೊಸ ರೀತಿಯ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಅಂದರೆ ಈ ಮೊದಲು ಕೆಲವರು ಸೊಳ್ಳೆ ಕಡಿತ ಮತ್ತು ಇತರ ಕೀಟ ಕಡಿತವನ್ನು ಗುಣಪಡಿಸಲು ಬಿಸಿ ನೀರನ್ನು ಬಳಕೆ ಮಾಡುತ್ತಿದ್ದರು. ಆದರೆ ಈ ಹೊಸ ಹೀಟ್ ಇಟ್ ಡಾಂಗಲ್ ಹೆಚ್ಚು ಅನುಕೂಲಕರ ಪರಿಹಾರವನ್ನು ನೀಡಲಿದೆ.

ಭಾರತದಲ್ಲಿ ಲಭ್ಯ ಇದೆಯೇ?: ಈ ಹೀಟ್ ಇಟ್ ಯುಎಸ್‌ಬಿ ಡಾಂಗಲ್ ಅಮೆಜಾನ್ ಯುಎಸ್ ಮತ್ತು ಯುಕೆಯಲ್ಲಿ ಲಭ್ಯವಿದೆ. ಈಗಾಗಲೇ ಸಾಕಷ್ಟು ಜನರು ಇದನ್ನು ಖರೀದಿ ಮಾಡಿ ಬಳಕೆ ಮಾಡುತ್ತಿದ್ದಾರೆ. ಆದರೆ ಈ ಯುಎಸ್‌ಬಿ ಡಾಂಗಲ್ ಭಾರತದಲ್ಲಿ ಲಭ್ಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅದಾಗ್ಯೂ ಈ ರೀತಿಯ ಡಿವೈಸ್ ಭಾರತದಕ್ಕೆ ಅಗತ್ಯವಾಗಿದೆ. ಯಾಕೆಂದರೆ ಇಲ್ಲಿ ಸೊಳ್ಳೆಗಳು ಸದಾಕಾಲ ಜನರನ್ನು ಇನ್ನಿಲ್ಲದಂತೆ ಕಾಡುತ್ತಲೇ ಇರುತ್ತವೆ.


Click it and Unblock the Notifications








