ಈ ಐಫೋನ್‌ಗಳಲ್ಲಿ ಭಾರೀ ವಿಕಿರಣ; 'ನಮ್ಮ ದೇಶದಲ್ಲಿ ಮಾರಲೇಬೇಡಿ, ವಾಪಸ್ ಪಡೆಯಿರಿ'!
ಆಪಲ್ ಮೊನ್ನೆಯಷ್ಟೇ ಐಫೋನ್ 15 ಸರಣಿ (iPhone 15 series) ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಜಾಗತಿಕವಾಗಿ ಸದ್ದು ಮಾಡಿದೆ. ಹಾಗೆಯೇ ಈ ಫೋನ್‌ಗಳನ್ನು ಖರೀದಿ ಮಾಡಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಆಪಲ್‌ನ ಈ ಫೋನ್‌ಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಮನಗಂಡು ವಾಪಸ್ ಪಡೆಯಲಾಗುತ್ತಿದೆ.
ಹೌದು, ಆಪಲ್‌ನ ಐಫೋನ್‌ಗಳೆಂದರೆ ಸುರಕ್ಷತೆ ಮತ್ತು ವಿಶೇಷ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿವೆ. ಹಾಗೆಯೇ ಆಪಲ್ ನೀಡುವ ಫೀಚರ್ಸ್ ಅನ್ನು ಯಾವುದೇ ಮೊಬೈಲ್ ಬ್ರ್ಯಾಂಡ್‌ಗಳು ನೀಡುವುದಿಲ್ಲ ಎನ್ನುವುದು ಗ್ರಾಹಕರ ವಾದ. ಆದರೆ, ಆಪಲ್ ಈ ವಿಷಯದಲ್ಲಿ ಅನಿರೀಕ್ಷಿತ ಹಿನ್ನಡೆಯನ್ನು ಅನುಭವಿಸುವಂತೆ ಆಗಿದೆ. ಹಾಗಿದ್ರೆ, ಏನಿದು ಹೊಸ ಘಟನೆ?, ಯಾವ ದೇಶದಲ್ಲಿ ಫೋನ್‌ಗಳಲ್ಲಿ ಹಿಂಪಡೆಯಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಫ್ರಾನ್ಸ್‌ನಲ್ಲಿ ಐಫೋನ್ 12 ಸರಣಿಯನ್ನು ಹಿಂಪಡೆಯಲಾಗುತ್ತಿದೆ: ಐಫೋನ್‌ಗಳ ವಿಭಾಗದಲ್ಲಿ ಹೆಚ್ಚು ಸೇಲ್ ಆಗಿರುವ ಈಗಲೂ ಸೇಲ್ ಆಗುತ್ತಿರುವ ಫೋನ್‌ಗಳೆಂದರೆ ಐಫೋನ್ 12 ಸರಣಿ (iPhone 12 series) ಫೋನ್‌ಗಳು. ಆದರೆ, ಈ ಫೋನ್‌ಗಳು ಅತಿಯಾದ ವಿಕಿರಣ ಹೊರಸೂಸುತ್ತಿವೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಸರ್ಕಾರ ಆಪಲ್‌ಗೆ ಹಿಂಪಡೆಯಲು ತಿಳಿಸಿದೆ. ಇನ್ನು ಈ ಐಫೋನ್ 12 ಸರಣಿಯನ್ನು 2020 ರಲ್ಲಿ ಲಾಂಚ್ ಮಾಡಲಾಗಿತ್ತು.
ಎಚ್ಚರಿಕೆ ನೀಡಿದ ಫ್ರಾನ್ಸ್ ಸರ್ಕಾರ: ಐಫೋನ್ 12 ಅನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಬಾರದು ಎಂದು ಫ್ರಾನ್ಸ್ ಸರ್ಕಾರ ಆಪಲ್‌ಗೆ ಎಚ್ಚರಿಕೆ ನೀಡಿದೆ. ಹಾಗೆಯೇ ಈಗಾಗಲೇ ಮಾರಾಟವಾಗಿರುವ ಮಾದರಿಗಳನ್ನು ಹಿಂಪಡೆಯುವಂತೆ ಸರ್ಕಾರವು ತಿಳಿಸಿದೆ. ಆದರೆ, ಆಪಲ್ ಮಾತ್ರ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಎಲ್ಲವೂ ಸರಿಯಾಗಿಯೇ ಇದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಐಫೋನ್ 12 ಫೋನ್‌ಗಳು ಜಾಗತಿಕ ವಿಕಿರಣ ಮಾನದಂಡಗಳನ್ನು ಅನುಸರಿಸುವ ಉತ್ಪನ್ನಗಳಾಗಿವೆ ಎಂದು ಆಪಲ್ ಉಲ್ಲೇಖಿಸಿದೆ.
ಈ ಬಗ್ಗೆ ರಾಯಿಟರ್ಸ್ ವರದಿ ಮಾಡಿದ್ದು, ಆಪಲ್ ಐಫೋನ್ 12 EU ವಿಕಿರಣದ ಮಾನ್ಯತೆ ಮಿತಿಯನ್ನು ಉಲ್ಲಂಘಿಸಿದೆಯಂತೆ. ಇದರ ವಿರುದ್ಧ ಕಂಪನಿ ಬುಧವಾರ ಸಮರ್ಥನೆ ಮಾಡಿಕೊಂಡಿದೆ. ಈ ನಡುವೆ ಇದನ್ನೇ ಆಧಾರವಾಗಿರಿಕೊಂಡು ಜರ್ಮನಿ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ ಐಫೋನ್ 12 ಅನ್ನು ನಿಷೇಧಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇದೇ ಎಲ್ಲಾ ಕಡೆ ಮುಂದುವರೆದರೆ ಆಪಲ್ ದೊಡ್ಡ ಮಟ್ಟದಲ್ಲಿ ಹಿನ್ನೆಲೆ ಅನುಭವಿಸುವುದರಲ್ಲಿ ಎರಡು ಮಾತಿಲ್ಲ.
ಅಷ್ಟೇ ಅಲ್ಲದೆ ಈ ಫೋನ್‌ಗಳ ವಿರುದ್ಧ ಸಮರ ಸಾರಿರುವ ಫ್ರಾನ್ಸ್ ಇನ್ಮುಂದೆ ದೇಶದಲ್ಲಿನ ಆಪಲ್ ಸ್ಟೋರ್‌ಗಳಲ್ಲಿ ಐಫೋನ್ 12 ಮಾದರಿಗಳು ಮಾರಾಟವಾಗುತ್ತಿವೆಯೇ ಎಂದು ಕಂಡುಹಿಡಿಯಲು ಅಧಿಕಾರಿಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದೆ. ಮಾರಾಟ ನಿಲ್ಲಿಸುವಂತೆ ಆದೇಶವಿದ್ದರೂ ಫೋನ್ ಮಾರಾಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ಇಂತಹ ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ. ಅದಾಗ್ಯೂ ನಾವು ಯಾವುದೇ ಕಾನೂನನ್ನು ಉಲ್ಲಂಘನೆ ಮಾಡುವುದಿಲ್ಲ ಎಂದು ಆಪಲ್ ಹೇಳಿದೆ.
ನಾವು ತಪ್ಪು ಮಾಡಿಲ್ಲ ಎನ್ನುತ್ತಿದೆ ಆಪಲ್: ಆಪಲ್ ಮತ್ತು ಮೂರನೇ ವ್ಯಕ್ತಿಗಳು ನಡೆಸಿದ ವಿವಿಧ ಲ್ಯಾಬ್ ಫಲಿತಾಂಶಗಳಲ್ಲಿ ಫೋನ್ ಜಾಗತಿಕ ವಿಕಿರಣ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಮೊಬೈಲ್ ಫೋನ್‌ಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಳೆದ ಎರಡು ದಶಕಗಳಿಂದ ಅಧ್ಯಯನ ಮಾಡಲಾಗಿದೆ ಎಂದು ಆಪಲ್ ಹೇಳಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೊಬೈಲ್ ಫೋನ್‌ಗಳ ಬಳಕೆಯಿಂದ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗಳು ಇನ್ನೂ ಕಂಡುಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

ಆಪಲ್ ಗೆ ಬೆಂಬಲ: ಈ ನಡುವೆ, SAR ಮಿತಿಗಳ ಕುರಿತು ಜಾಗತಿಕ ಮಾರ್ಗಸೂಚಿಗಳನ್ನು ಹೊಂದಿಸುವ ಇಂಟರ್ನ್ಯಾಷನಲ್ ಕಮಿಷನ್ ಆನ್ ನಾನ್-ಐಯೋನೈಸಿಂಗ್ ರೇಡಿಯೇಶನ್ ಪ್ರೊಟೆಕ್ಷನ್ ನ ಅಧ್ಯಕ್ಷ ಪ್ರೊಫೆಸರ್ ರಾಡ್ನಿ ಕ್ರಾಫ್ಟ್ ಅವರು ಆಪಲ್ ಬೆಂಬಲಕ್ಕೆ ನಿಂತಿದ್ದಾರೆ. ಫೋನ್‌ಗಳಿಂದ ವಿಕಿರಣವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ, ಆಪಲ್ ಅನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತಿರುವುದರಿಂದ ವಿಕಿರಣ ಹೊರಸೂಸುತ್ತಿದೆ ಎಂದು ಫ್ರೆಂಚ್ ಅಧಿಕಾರಿಗಳು ಭಾವಿಸಿದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications








