HMD ಯ ಹೊಸ ಫೋನ್ ಶೀಘ್ರದಲ್ಲೇ ಭಾರತಕ್ಕೆ! ಏನೇನಿರಲಿದೆ ಗೊತ್ತಾ ಈ ಫೋನ್‌ನಲ್ಲಿ?
ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದ ನೋಕಿಯಾ (Nokia) ಈಗ ಹೆಚ್‌ಎಮ್‌ಡಿ (HMD) ಬ್ರ್ಯಾಂಡ್ ಅಡಿಯಲ್ಲಿ ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಈ ನಡುವೆ ಭಾರತದಲ್ಲಿ ಈ ಬ್ರ್ಯಾಂಡ್‌ನ ಹೊಸ ಫೋನ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ.
ಹೌದು, ಭಾರತದಲ್ಲಿ ಅಭಿಮಾನಿಗಳಿಂದ ಹೆಸರಿಸಲಾದ ಹೆಚ್‌ಎಮ್‌ಡಿ ಯ 'ಶಾರ್ಪೆಸ್ಟ್ ಸ್ಮಾರ್ಟ್‌ಫೋನ್' (Sharpest Smartphone) ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಅಂತೆಯೇ ಹೆಚ್‌ಎಮ್‌ಡಿ ಗ್ಲೋಬಲ್ (HMD Global) ತನ್ನ ಮೊದಲ ಹೆಚ್‌ಎಮ್‌ಡಿ-ಬ್ರಾಂಡ್ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಕಂಪನಿಯು ಈಗ ತನ್ನ ಸ್ಮಾರ್ಟ್‌ಫೋನ್ ಅನ್ನು 'ಹೆಚ್‌ಎಮ್‌ಡಿ ಆರೋ' ಎಂದು ಕರೆಯುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್ ಯಾವಾಗ ಲಾಂಚ್ ಆಗಲಿದೆ?, ಇದು ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹೆಚ್‌ಎಮ್‌ಡಿ ಫೋನ್: ನೋಕಿಯಾ ಫೋನ್‌ಗಳ ಅಧಿಕೃತ ತಯಾರಕರಾದ ಹೆಚ್‌ಎಮ್‌ಡಿ ಗ್ಲೋಬಲ್ ಭಾರತದಲ್ಲಿ ತನ್ನ ಮೊದಲ ಹೆಚ್‌ಎಮ್‌ಡಿ ಬ್ರಾಂಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೆ ಮುಂಚಿತವಾಗಿ ಇನ್ನು #HMDNameOurSmartphone ಸ್ಪರ್ಧೆಯನ್ನು ಘೋಷಣೆ ಮಾಡಿತ್ತು, ಕಂಪನಿಯು ಭಾರತದಲ್ಲಿ ತನ್ನ ಮೊದಲ ಹೆಚ್‌ಎಮ್‌ಡಿ ಬ್ರಾಂಡ್ ಸ್ಮಾರ್ಟ್‌ಫೋನ್ ಅನ್ನು 'ಹೆಚ್‌ಎಮ್‌ಡಿ ಆರೋ' ಎಂದು ಕರೆಯಲಾಗುವುದು ಎಂದು ಘೋಷಣೆ ಮಾಡಿದೆ.
ಕಂಪನಿಯು ವಿವಿಧ ಮಾರುಕಟ್ಟೆಗಳಲ್ಲಿ ಸ್ಮಾರ್ಟ್‌ಫೋನ್‌ಗೆ ವಿಭಿನ್ನ ಹೆಸರುಗಳನ್ನು ಸಹ ಬಳಕೆ ಮಾಡಿದೆ. ಉದಾಹರಣೆಗೆ, ನೋಕಿಯಾಮೋಬ್ ಪ್ರಕಾರ, ಹೆಚ್‌ಎಮ್‌ಡಿಯ ಮೊದಲ ಡಿವೈಸ್ ಅನ್ನು ಯುರೋಪ್‌ನಲ್ಲಿ ಪಲ್ಸ್ ಮತ್ತು ಯುಎಸ್ ನಲ್ಲಿ ವೈಬ್ ಎಂದು ಕರೆದಿದೆ. ಹೆಚ್‌ಎಮ್‌ಡಿ ಇಂಡಿಯಾದ ಎಕ್ಸ್ ಪೋಸ್ಟ್‌ನ ಪ್ರಕಾರ, ಭಾರತಕ್ಕೆ ಬರುತ್ತಿರುವ ಈ ಫೋನ್‌ಗೆ ಬಳಕೆದಾರರು ಶಾರ್ಪ್ಸಿ, ನೈಫ್, ನ್ಯಾರುಟೊ, ಪೋಲಾರಿಸ್, ಇಂಧುಮನಾಯ್ಡ್, ತೇಜಸ್ವಿತಾ, ಬ್ರಹ್ಮೋಸ್, ಅಸ್ಟ್ರಾಬೀಮ್, ಅನ್ ಬ್ರೋಕನ್, ಡ್ಯಾಝಲ್, ಮೇಘನಾದ್, ಬೀಸ್ಟ್, ಟ್ರೈಲ್‌ಬ್ಲೇಜರ್, ಟ್ರೆಮರ್ ಮತ್ತು ಹೆಚ್ಚಿನ ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ.

45 ಸೆಕೆಂಡುಗಳ ಕ್ಲಿಪ್‌ನಲ್ಲಿ ಹೆಚ್‌ಎಮ್‌ಡಿ ಯ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರ ರಾಜಸ್ಥಾನ ರಾಯಲ್ಸ್‌ನ ಎಕ್ಸ್ ಹ್ಯಾಂಡಲ್‌ನಲ್ಲಿ ಅಂತಿಮ ಹೆಸರನ್ನು ಘೋಷಿಸಲಾಗಿದೆ. ಕಂಪನಿಯು ಹ್ಯಾಂಡ್‌ಸೆಟ್ ಅನ್ನು ಭಾರತದ ಶಾರ್ಪ್ ಸ್ಮಾರ್ಟ್‌ಫೋನ್ ಎಂದು ಕರೆದಿದೆ. ಮೈಕ್ರೋಬ್ಲಾಗಿಂಗ್ ಆಪ್‌ನಲ್ಲಿನ ಅದರ ಮಾರ್ಕೆಟಿಂಗ್ ವಸ್ತುಗಳಲ್ಲಿ ಮುಂಬರುವ ಹ್ಯಾಂಡ್‌ಸೆಟ್‌ನ ಕ್ಯಾಮೆರಾ, ಡಿಸ್‌ಪ್ಲೇ ಮತ್ತು ವಿನ್ಯಾಸವನ್ನು ಹೆಚ್‌ಎಮ್‌ಡಿ ತಿಳಿಸಿದೆ.
ಹೆಚ್‌ಎಮ್‌ಡಿಯ ಈ ಫೋನ್‌ನ ನಿರೀಕ್ಷಿತ ಫೀಚರ್ಸ್: ಈ ಸ್ಮಾರ್ಟ್‌ಫೋನ್ ಹೆಚ್‌ಎಮ್‌ಡಿ ಪಲ್ಸ್‌ನ ರೀಬ್ರಾಂಡೆಡ್ ಆವೃತ್ತಿಯಾಗಿ ಹೊರಹೊಮ್ಮಿದರೆ, ಇದು 480 ನಿಟ್ಸ್ ಬ್ರೈಟ್‌ನೆಸ್‌ನೊಂದಿಗೆ 6.56 ಇಂಚಿನ ಹೆಚ್‌ಡಿ ಪ್ಲಸ್ ಐಪಿಎಸ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಯೂನಿಸೋಕ್ T606 4G ಚಿಪ್‌ಸೆಟ್ ಅನ್ನು ಪಡೆಯಬಹುದು ಮತ್ತು ಆಂಡ್ರಾಯ್ಡ್ 14 ಆಧಾರಿತ ಓಎಸ್‌ನಲ್ಲಿ ರನ್ ಆಗಬಹುದು ಎಂದು ಹೇಳಲಾಗಿದೆ.
ಹೆಚ್‌ಎಮ್‌ಡಿ ಫೋನ್‌ನೊಂದಿಗೆ ಎರಡು ಓಎಸ್ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಬಹುದು ಎನ್ನಲಾಗಿದ್ದು, ಇದು 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಬಹುದು ಎಂದು ತಿಳಿದುಬಂದಿದೆ. ಕ್ಯಾಮೆರಾ ವಿಚಾರಕ್ಕೆ ಸಂಬಂಧಿಸಿದಂತೆ 13 ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಆಪ್ಟಿಕ್ಸ್ ಜೊತೆಗೆ ಫ್ಲ್ಯಾಶ್ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿರಲಿದೆ.

ಕನೆಕ್ಟಿವಿಟಿ ವಿಚಾರದಲ್ಲಿ ಈ ಫೋನ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0, ಎಲ್‌ಎಫ್‌ಸಿ, ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ 2.0 ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಮತ್ತು IP52 ರೇಟಿಂಗ್ ಅನ್ನು ಪಡೆದಿರಲಿದೆ ಎನ್ನಲಾಗಿದ್ದು, ನಾಲ್ಕು ಬಣ್ಣ ಆಯ್ಕೆಗಳಲ್ಲಿ ಮತ್ತು 6GB RAM ಮತ್ತು 64GB ಸ್ಟೋರೇಜ್ ಆಯ್ಕೆಯಲ್ಲಿ ಲಾಂಚ್ ಆಗಬಹುದು ಎಂಬ ನಿರೀಕ್ಷೆ ಇದೆ.


Click it and Unblock the Notifications








