ಬೆಂಗಳೂರಿನ ಹಲವೆಡೆ AI ವಿಡಿಯೋ ಕ್ಯಾಮೆರಾ ಅಳವಡಿಕೆ: ಇವುಗಳಿಂದ ಪ್ರಯೋಜನ ಏನು?
ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಇಂದು ಇಡೀ ಜಗತ್ತೇ ತಿರುಗಿ ನೋಡುತ್ತದೆ. ಯಾಕೆಂದರೆ ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ತಂತ್ರಜ್ಞಾನ ಅಭಿವೃದ್ಧಿ, ಉದ್ಯೋಗಗಳ ಸೃಷ್ಟಿ ಹಾಗೂ ಹೊಸ ಕಂಪೆನಿಗಳ ಉಗಮವಾಗುತ್ತಿವೆ. ಅದರಂತೆ ಅಪರಾಧ ಪ್ರಕರಣಗಳು ಸಹ ಜರುಗುತ್ತಿದ್ದು, ಇನ್ಮುಂದೆ ಇವುಗಳಿಗೆ ಹೆಚ್ಚಿನ ಕಡಿವಾಣ ಬೀಳಲಿದೆ.
ಹೌದು, ಬೆಂಗಳೂರಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇವುಗಳನ್ನು ಪತ್ತೆ ಮಾಡುವುದಕ್ಕೆ ಅಥವಾ ಆರೋಪಿತರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಲು ಹಾಗೂ ಆರೋಪಿಗಳನ್ನು ಟ್ರ್ಯಾಕ್ ಮಾಡಲು ಪೊಲೀಸರು ಇನ್ಮುಂದೆ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರುವುದಿಲ್ಲ.ಯಾಕೆಂದರೆ ಬೆಂಗಳೂರಿನಲ್ಲಿ ಎಐ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇವುಗಳು ಅಪರಾಧ ಪ್ರಕರಣ ಅಷ್ಟೇ ಅಲ್ಲದೆ ಭದ್ರತಾ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

7000 AI ವಿಡಿಯೋ ಕ್ಯಾಮೆರಾ: ಸುರಕ್ಷಿತ ನಗರ ಯೋಜನೆಯ ಮೂಲಕ ನಗರದೊಳಗೆ 3,000 ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ 7,000 ಕ್ಕೂ ಹೆಚ್ಚು ವೀಡಿಯೊ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಮೂಲಕ ಬೆಂಗಳೂರಿನ ಜನರಿಗೆ ಭದ್ರತೆಯ ಬಗ್ಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದ್ದು, ಇದರಲ್ಲಿ ಬಾಡಿ ಕ್ಯಾಮೆರಾಗಳು ಹಾಗೂ ಸುರಕ್ಷತಾ ದ್ವೀಪಗಳು ಸಹ ಸೇರಿವೆ. ಇದರಿಂದ ನಗರದಲ್ಲಿನ ಯಾವುದೇ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ.
ಇನ್ನು ಹನಿವೆಲ್ ಬೆಂಗಳೂರು ನಗರ ಪೊಲೀಸರ ಸಹಯೋಗದೊಂದಿಗೆ ಸೇಫ್ ಸಿಟಿ ಯೋಜನೆಯ 1 ನೇ ಹಂತದಲ್ಲಿ ನಗರದಾದ್ಯಂತ 3,000 ಆಯಕಟ್ಟಿನ ಸ್ಥಳಗಳಲ್ಲಿ 4,100 ಕ್ಕೂ ಹೆಚ್ಚು ವಿಡಿಯೋ ಕ್ಯಾಮೆರಾಗಳನ್ನು ಸ್ಥಾಪಿಸಿದೆ. ಈ ಕ್ಯಾಮೆರಾಗಳನ್ನು ನಿರ್ಣಾಯಕ ಘಟನೆಗಳನ್ನು ಪತ್ತೆಹಚ್ಚಲು ಮತ್ತು ಪೊಲೀಸ್ ಪ್ರತಿಕ್ರಿಯೆ ಸಮಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಿದ್ದು, ಇದರಿಂದ ಸಾಕಷ್ಟು ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.

ಈ ಕ್ಯಾಮೆರಾಗಳ ವಿಶೇಷತೆ ಏನು: ಬೆಂಗಳೂರಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಸಾಮಾನ್ಯವಾದ ಕ್ಯಾಮೆರಾಗಳಲ್ಲ ಬದಲಾಗಿ ಇವು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಬಳಸುವ ಕಮಾಂಡ್ ಸೆಂಟರ್‌ಗೆ ಈ ಕ್ಯಾಮೆರಾಗಳನ್ನು ಸಂಪರ್ಕಿಸಲಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನ್ ಕಳ್ಳರನ್ನು ಅವರ ಬಟ್ಟೆ ಮತ್ತು ವಾಹನದ ಪ್ರಕಾರದ ಬಣ್ಣಗಳಂತಹ ಮಾರ್ಕರ್‌ಗಳನ್ನು ಬಳಸಿಕೊಂಡು ಪತ್ತೆಹಚ್ಚಲು ಬಳಕೆ ಮಾಡಲಾಗುತ್ತದೆ.
ಹಾಗೆಯೇ ಈ ವಿಡಿಯೋ ಫೀಡ್ ಅನ್ನು ಅಪರಾಧಿಗಳ ಡೇಟಾಬೇಸ್‌ಗೆ ಲಿಂಕ್ ಮಾಡಬಹುದಾಗಿದ್ದು, ಯಾವುದೇ ನಿವಾಸಿಗಳ ಗೌಪ್ಯತೆಗೆ ಧಕ್ಕೆಯಾಗದಂತೆ ಅವರನ್ನು ಟ್ರ್ಯಾಕ್ ಮಾಡಲು ಈ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಪೊಲೀಸ್ ಅಧಿಕಾರಿಗಳು ಧರಿಸಿರುವ ಬಾಡಿ ಕ್ಯಾಮೆರಾಗಳನ್ನು ಸಹ ಸಿಸ್ಟಮ್‌ಗೆ ಸಂಪರ್ಕಿಸಲಾಗಿದ್ದು, ಇದರಲ್ಲಿ ನೀಡಲಾದ SOS ಬಟನ್ ಅನ್ನು ಒತ್ತುವ ಮೂಲಕ ಮುಂದಿನ ಕ್ರಮಕ್ಕಾಗಿ ವಿಡಿಯೋ ಫೀಡ್ ಅನ್ನು ಕಮಾಂಡ್ ಸೆಂಟರ್‌ಗೆ ಸೆಂಟ್ ಮಾಡಬಹುದಾಗಿದೆ.
ಸುರಕ್ಷತಾ ದ್ವೀಪ: ಹಾಗೆಯೇ ಸೇಫ್ ಸಿಟಿ ಯೋಜನೆಯ ಭಾಗವಾಗಿ ಬೆಂಗಳೂರು ಪೊಲೀಸರು ಅಜ್ಞಾತ ನಾಗರಿಕರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ದ್ವೀಪಗಳನ್ನು ಸ್ಥಾಪಿಸಿದ್ದಾರೆ, ಇಲ್ಲಿ ನಾಗರಿಕರು 1122 ಅನ್ನು ಡಯಲ್ ಮಾಡಿ ಇಲಾಖೆಯನ್ನು ಸಂಪರ್ಕಿಸಬಹುದು. ಇದರೊಂದಿಗೆ ಹಂತ 2 ರಲ್ಲಿ ಬೆಂಗಳೂರು ನಗರವು ಹೆಚ್ಚುವರಿ 3,400 ವಿಡಿಯೋ ಕ್ಯಾಮೆರಾಗಳು, 115 ಬಾಡಿ ಕ್ಯಾಮೆರಾಗಳು ಸೇವೆಗೆ ಬರಲಿವೆ.

ಹಾಗೆಯೇ 20 ಸುರಕ್ಷತೆ ದ್ವೀಪಗಳು ಹಾಗೂ ಈ ಎರಡು ಹೆಚ್ಚುವರಿ ಡ್ರೋನ್‌ಗಳನ್ನು ನೀಡುವುದರ ಜೊತೆಗೆ ಶಾಶ್ವತ ಕಮಾಂಡ್ ಸೆಂಟರ್ ಮತ್ತು ಡೇಟಾ ಸೆಂಟರ್ ಅನ್ನು ಸಹ ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡಲು ತಯಾರಿ ನಡೆಸಲಾಗಿದೆ. ಈ ಪ್ಲ್ಯಾನ್ ಯಶಸ್ವಿಗೊಳಿಸಲು ಕಳೆದ ವರ್ಷ 496.67 ಕೋಟಿಗೆ ಖಾಸಗಿ ಬಿಡ್ಡರ್ ಹನಿವೆಲ್‌ಗೆ ನೀಡಲಾಗಿದ್ದು, ಇದನ್ನು ನಿರ್ಭಯ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ.


Click it and Unblock the Notifications








