ಜನಪ್ರಿಯ 'ಗೂಗಲ್ ಪೇ' ಸೇವೆ ಸ್ಥಗಿತವಾಗುವ ಸಂಭವ!
ಗೂಗಲ್ ಒಡೆತನದ ಜನಪ್ರಿಯ ಆನ್‌ಲೈನ್ ಪೇಮೆಂಟ್ ಆಪ್ ಗೂಗಲ್ ಪೇಗೆ ಇದೀಗ ಸಂಕಷ್ಟ ಎದುರಾಗಿದೆ. ಯಾವುದೇ ಅನುಮತಿ ಇಲ್ಲದೇ ಗೂಗಲ್‌ನ ಮೊಬೈಲ್ ಪೇಮೆಂಟ್ ಆಪ್ ಕಾರ್ಯನಿರ್ವಹಿಸುವುದಾದರು ಹೇಗೆ? ಎಂದು ದೆಹಲಿ ಹೈಕೋರ್ಟ್ ಬುಧವಾರ ಆರ್‌ಬಿಐಗೆ ಪ್ರಶ್ನಿಸಿದೆ. ಇದಕ್ಕೆ ಸೂಕ್ತ ಉತ್ತರ ದೊರೆಯದಿದ್ದಲ್ಲಿ ಗೂಗಲ್ ಪೇ ಸೇವೆ ಸ್ಥಗಿತಗೊಳ್ಳಬಹುದಾಗಿದೆ.
ಹೌದು, ಗೂಗಲ್ ಪೇ ಅಧಿಕೃತ ಮಾನ್ಯತೆ ಹೊಂದಿಲ್ಲ ಮತ್ತು ಪಾವತಿ ಹಾಗೂ ಸೆಟಲ್ಮೆಂಟ್ ಕಾಯ್ದೆ ಉಲ್ಲಂಘಿಸಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಇಂತಹದೊಂದು ಪ್ರಶ್ನೆ ಮುಂದಿಟ್ಟಿದ್ದು, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಆರ್ಬಿಐ ಹಾಗೂ ಗೂಗಲ್ ಇಂಡಿಯಾ ಸಂಸ್ಥೆಗೆ ಕೋರ್ಟ್ ನೋಟಿಸ್ ನೀಡಿದೆ.

ಗೂಗಲ್ ಪೇ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಮತ್ತು ನ್ಯಾಯಮೂರ್ತಿ ಎಜೆ ಬಂಬಾನಿ ಅವರನ್ನೊಳಗೊಂಡ ಪೀಠವು, ದೇಶದಲ್ಲಿ ಹಣಕಾಸಿನ ವಹಿವಾಟುಗಳಿಗೆ ಅಗತ್ಯವಾದ ಅನುಮತಿಯಿಲ್ಲದೆ ಗೂಗಲ್ ಪೇ ಹೇಗೆ ಹೇಗೆ ಸುಗಮವಾಗಿ ನಡೆಯುತ್ತಿದೆ ಎಂದು ಕೇಂದ್ರೀಯ ಬ್ಯಾಂಕ್‌ಗೆ ಪ್ರಶ್ನೆ ಕೇಳಿದೆ.
ಅಭಿಜಿತ್ ಮಿಶ್ರಾ ಎಂಬುವವರ ಮನವಿಯ ಮೇರೆಗೆ ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಕೋರಿ ಕೋರ್ಟ್ ಆರ್‌ಬಿಐ ಮತ್ತು ಗೂಗಲ್ ಇಂಡಿಯಾಗೆ ಸೂಚನೆ ನೀಡಿದೆ. ಮಾರ್ಚ್ 20, 2019 ರಂದು ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿದ ಅಧಿಕೃತ "ಪಾವತಿ ವ್ಯವಸ್ಥೆಗಳ ನಿರ್ವಾಹಕರ" ಆರ್‌ಬಿಐನ ಈ ಪಟ್ಟಿಯಲ್ಲಿ ಗೂಗಲ್‌ಪೇ ಕಾಣಿಸುವುದಿಲ್ಲ ಎಂದು ಮಿಶ್ರಾ ಅವರು ವಾದಿಸಿದ್ದಾರೆ.

ಗೂಗಲ್ ಪೇ ಬಳಸಿ ವ್ಯಕ್ತಿಯಿಂದ ವ್ಯಕ್ತಿಗೆ(ಪಿ2ಪಿ) ಮತ್ತು ಇತರ ಗೂಗಲ್ ಪೇ ಬಳಕೆದಾರರಿಗೆ ನಗದುರೂಪದ ವಹಿವಾಟುಗಳು,ಇತರ ಬ್ಯಾಂಕ್ ಖಾತೆಗಳಿಗೆ ಹಣಪಾವತಿ, ವ್ಯಾಪಾರಿಗಳಿಗೆ ಹಣಪಾವತಿ,ಗೂಗಲ್ ತೇಜ್ ಯುಪಿಐ ಐಡಿ ಬಳಸಿ ಪಾವತಿ ಮುಂತಾದ ಕನಿಷ್ಟ ಐದು ಬಗೆಯ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಇದೊಂದು ಜನಪ್ರಿಯ ಪೇಮೆಂಟ್ ಆಪ್ ಆಗಿದೆ.
ಓದಿರಿ: ಶಾಕಿಂಗ್ ನ್ಯೂಸ್!..ಫೇಸ್ಬುಕ್ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್!


Click it and Unblock the Notifications








