ರೆಡ್ಮಿ ಫೋನ್‌ಗಳನ್ನು ಭಾರತದಲ್ಲಿ ನಿರ್ಮಿಸುವ ಪ್ರಕ್ರಿಯೆ ಹೇಗಿದೆ ಗೊತ್ತಾ!?
ರೆಡ್ಮಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದು, ಇತ್ತೀಚೆಗಂತೂ ಸುಧಾರಿತ ಫೀಚರ್ಸ್‌ಗಳೊಂದಿಗೆ ಕಾಣಿಸಿಕೊಳ್ಳುವ ಈ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಡುವೆ ಭಾರತದಲ್ಲಿಯೂ ಸಹ ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡಲಾಗುತ್ತದೆ ಎಂಬ ವಿಷಯ ನಿಮಗೆ ಗೊತ್ತಾ?, ಗೊತ್ತಿಲ್ಲದಿದ್ರೆ ಬನ್ನಿ ಫೋನ್ ತಯಾರಿಕಾ ಕಾರ್ಖಾನೆಯನ್ನು ಸುತ್ತಿ ಬರೋಣ.
ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ರೆಡ್ಮಿ ಫೋನ್‌ಗಳು ಸಹ ಇದ್ದು, ಈ ಫೋನ್‌ಗಳನ್ನು ಫೋನ್‌ಗಳನ್ನು ಭಾರತದಲ್ಲಿ ತಯಾರು ಮಾಡಲಾಗುತ್ತದೆ. ಅಂದರೆ ಇವುಗಳನ್ನು ಇಲ್ಲಿ ಜೋಡಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಮೂಲಕ ಲಕ್ಷಾಂತರ ಫೋನ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ನಡುವೆ ಈ ಫೋನ್‌ಗಳನ್ನು ತಯಾರಿಸುವುದರ ಹಿಂದಿನ ಪ್ರಕ್ರಿಯೆ ಹೇಗಿರಲಿದೆ? ಸ್ಮಾರ್ಟ್‌ಫೋನ್ ತಯಾರಿಸಲು ಎಷ್ಟು ಸಮಯ ಬೇಕು? ಎಂಬಿತ್ಯಾದಿ ವಿವರವನ್ನು ಇಂಡಿಯಾ ಟುಡೇ ವರದಿ ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

ಹರಿಯಾಣದ ಬವಾಲ್‌ನಲ್ಲಿರುವ ಡಿಬಿಜಿ ಇಂಡಿಯಾದ ಉತ್ಪಾದನಾ ಘಟಕದಲ್ಲಿ ಈ ಫೋನ್‌ಗಳನ್ನು ತಯಾರು ಮಾಡಲಾಗುತ್ತಿದೆ. ಹಲವಾರು ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲೇ ತಯಾರು ಮಾಡಲಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಪ್ರವೇಶ ಮಟ್ಟದ ರೆಡ್ಮಿ A2 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಸಹ ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿದ ಮೊದಲ ಫೋನ್ ಕಂಪನಿಗಳಲ್ಲಿ ಶಿಯೋಮಿ ಒಂದಾಗಿದೆ.
ಏನಿದು ಡಿಬಿಜಿ?: ಹರಿಯಾಣದ ಬವಾಲ್‌ನಲ್ಲಿರುವ ಡಿಬಿಜಿ ಇಂಡಿಯಾ ಸ್ಮಾರ್ಟ್ ಗ್ಯಾಜೆಟ್ ಉತ್ಪಾದನಾ ಘಟಕವಾಗಿದ್ದು, ಇಲ್ಲಿ ರೆಡ್ಮಿ A2 ಸರಣಿಯ ಫೋನ್‌ಗಳಾದ ರೆಡ್ಮಿ A2 ಮತ್ತು A2 ಪ್ಲಸ್ ಅನ್ನು ತಯಾರಿಸಲಾಗುತ್ತದೆ. ಹಾಗೆಯೇ ರೆಡ್ಮಿ ಮತ್ತು ಶಿಯೋಮಿ ಫೋನ್‌ಗಳನ್ನು ತಯಾರಿಸಲು ಇಲ್ಲಿ ಪ್ರತ್ಯೇಕ ಅಸೆಂಬ್ಲಿ ಲೈನ್‌ಗಳನ್ನೂ ಸಹ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಡಿಬಿಜಿ ಇತರೆ ಬ್ರಾಂಡ್‌ಗಳ ಫೋನ್‌ಗಳನ್ನೂ ಸಹ ಜೋಡಿಸುತ್ತದೆ.
ಫೋನ್ ತಯಾರಿಕೆಯ ಮೊದಲ ಹಂತ ಹೇಗಿರಲಿದೆ?:ಫೋನ್ ತಯಾರಿಸುವ ಮೊದಲ ಹಂತವೆಂದರೆ ಪಿಸಿಬಿಗಳನ್ನು (ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳು)ನಿರ್ಮಾಣ ಮಾಡುವುದು. ಇವುಗಳನ್ನು ಕೆಲಸಗಾರರು ಮೇಲ್ವಿಚಾರಣೆ ಮಾಡುವ ಮೀಸಲಾದ ಯಂತ್ರಗಳ ಮೂಲಕ ಜೋಡಿಸಲಾಗುತ್ತದೆ.ಜೊತೆಗೆ ಇವುಗಳಲ್ಲಿ ಯಾವುದೇ ದೋಷ ಇರದ ಹಾಗೆ ಮಾಡಲು ಯಂತ್ರಗಳ ಮೂಲಕ ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.ಈ ವೇಳೆ ಬ್ಯಾಟರಿ ಕನೆಕ್ಟರ್, ಆಂಟೆನಾ ಸ್ವಿಚ್, ಆರ್ಎಫ್ ಸರ್ಕ್ಯೂಟ್, ಆಡಿಯೊ ಸರ್ಕ್ಯೂಟ್, ಪವರ್ ಮ್ಯಾನೇಜ್ಮೆಂಟ್ ಐಸಿ, ಮೆಮೊರಿ ಐಸಿ ಸೇರಿದಂತೆ ಇತರೆ ಬಿಡಿ ಭಾಗಗಳನ್ನು ಇರಿಸಲಾಗುತ್ತದೆ.

ಎರಡನೇ ಹಂತದಲ್ಲಿ ಏನೆಲ್ಲಾ ನಡೆಯಲಿದೆ?: ಮೇಲೆ ತಿಳಿಸಿದ ಪ್ರಕ್ರಿಯೆ ಮುಗಿದ ನಂತರ ಪಿಸಿಬಿಗಳು ಉತ್ತಮ ಎಂದು ಅನುಮೋದನೆ ನೀಡಿ ಮುಂದಿನ ವಿಭಾಗಕ್ಕೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಮತ್ತೊಮ್ಮೆ ಪರಿಶೀಲನೆ ಒಳಪಡಿಸಿಲಾಗುತ್ತದೆ. ಜೊತೆಗೆ ಸರಿಯಾಗಿ ನಿರ್ಮಿಸದ ಅಥವಾ ಗುಣಮಟ್ಟದ ಕೊರತೆ ಇರುವ ಪಿಸಿಬಿಗಳನ್ನು ತಿರಸ್ಕರಿಸಲಾಗುತ್ತದೆ. ಈ ಮೂಲಕ ಅಸೆಂಬ್ಲಿ ಸಾಲಿನಲ್ಲಿ ಹಿಂತಿರುಗಿ ಬರುವ ಅವುಗಳ ದೋಷಗಳನ್ನು ಮಗದೊಮ್ಮೆ ಸರಿಪಡಿಸಲಾಗುತ್ತದೆ.
ಮೂರನೇ ಹಂತದ ಪ್ರಕ್ರಿಯೆ ಬಲು ರೋಚಕ: ಇನ್ನು ಈ ಡಿಬಿಜಿ ಘಟಕವು ಪ್ರಾಥಮಿಕವಾಗಿ ಫೋನ್‌ಗಳನ್ನು ಜೋಡಿಸುವ ಕೆಲಸ ಮಾಡುತ್ತದೆ. ಈ ಮೂಲಕ ಎಲ್ಲಾ ಮೊಬೈಲ್ ಭಾಗಗಳನ್ನು ಈ ಕಾರ್ಖಾನೆಯಲ್ಲಿ ನಿರ್ಮಿಸುವುದಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಈ ನಡುವೆ ಎರಡನೇ ಹಂತದಿಂದ ಬಂದ ಫೋನ್‌ಗಳಲ್ಲಿ ಎಲ್ಲಾ ಭಾಗಗಳನ್ನು ಜೋಡಿಸುವ ಕೆಲಸ ನಡೆಯುತ್ತದೆ. ಈ ವಿಭಾಗದಲ್ಲಿ ಫೋನ್‌ನ ಪ್ರತಿಯೊಂದು ಘಟಕವನ್ನು ಸೇರಿಸಲು ಮತ್ತು ಪರಿಶೀಲಿಸಲು ಕೆಲಸಗಾರರು ಇರುತ್ತಾರೆ.
ಅಂದರೆ ಡಿಸ್‌ಪ್ಲೇಯಿಂದ ಹಿಡಿದು ಕ್ಯಾಮರಾ, ಮೈಕ್, ಬ್ಯಾಟರಿ ಮತ್ತು ಇನ್ನೂ ಹೆಚ್ಚಿನ ಘಟಕಗಳನ್ನು ಇರಿಸಲಾಗುತ್ತದೆ. ಈ ಕೆಲಸ ಸರಿಯಾಗಿ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಘಟಕದಲ್ಲಿ ಆಯಾ ವಸ್ತುಗಳನ್ನು ಇರಿಸಿದ ನಂತರ ಫೋನ್ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಒಳಗಾಗುತ್ತದೆ. ಈ ವೇಳೆ ಫೋನ್‌ನ ಕ್ಯಾಮೆರಾವನ್ನು ವಿಶೇಷ ವಿಭಾಗದಲ್ಲಿ ಜೋಡಿಲಾಗುತ್ತದೆ. ಯಾಕೆಂದರೆ ಈ ವಿಭಾಗವನ್ನು ಧೂಳು ಮುಕ್ತವಾಗಿ ವಿನ್ಯಾಸಗೊಳಿಸಲಾಗಿದೆ.

ನಾಲ್ಕನೇ ಪ್ರಕ್ರಿಯೆ: ಈ ಎಲ್ಲಾ ಕೆಲಸ ಆದ ನಂತರ ಪರೀಕ್ಷಾ ಪ್ರಕ್ರಿಯೆ ಜರುಗಲಿದೆ. ಅಲ್ಲಿ ಫೋನ್‌ನ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ, ಚಾರ್ಜಿಂಗ್ ಮತ್ತು ಇತರ ಎಲ್ಲಾ ಅಂಶಗಳನ್ನು ಆನ್ ಮಾಡಲಾಗುತ್ತದೆ ಮತ್ತು ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಗಳನ್ನು ಅಲ್ಲಿರುವ ಕಾರ್ಮಿಕರು ಹಸ್ತಚಾಲಿತವಾಗಿ ನಡೆಸುತ್ತಾರೆ. ಇದರೊಂದಿಗೆ ಕೆಲವು ಯಂತ್ರ ಪರೀಕ್ಷೆಗಳನ್ನೂ ಸಹ ಮಾಡಲಾಗುತ್ತದೆ. ಈ ವೇಳೆ ಯಾವ ಹಂತದಿಂದ ಬಿದ್ದರೆ ಫೋನ್ ಎಷ್ಟರಮಟ್ಟಿಗೆ ಡ್ಯಾಮೇಜ್ ಆಗುತ್ತದೆ ಎಂದೂ ಸಹ ಪರೀಕ್ಷೆ ಮಾಡಲಾಗುತ್ತದೆ.
ಅಂತಿಮ ಪರಿಶೀಲನೆ: ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಮುಂದೆ ಫೋನ್ ಅಂತಿಮ ಪರಿಶೀಲನೆಗೆ ಒಳಗಾಗುತ್ತದೆ. ಜೊತೆಗೆ ಪ್ಯಾಕೇಜಿಂಗ್‌ಗೆ ಯೋಗ್ಯ ಎಂದು ಆ ಫೋನ್ ಅನ್ನು ಅನುಮೋದಿಸಲಾಗುತ್ತದೆ. ಇದಾದ ಬಳಿಕ ಕಾರ್ಖಾನೆಯ ಕೆಲಸಗಾರರು ಎಲ್ಲಾ ಪ್ಯಾಕೇಜಿಂಗ್ ಅನ್ನು ಹಸ್ತಚಾಲಿತವಾಗಿ ಮಾಡುತ್ತಾರೆ. ಈ ವೇಳೆ ಯಾವುದೇ ಯಂತ್ರವನ್ನು ಬಳಕೆ ಮಾಡಲಾಗುವುದಿಲ್ಲ. ಮೇಲೆ ತಿಳಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಂಡು ಒಂದು ಫೋನ್ ಮಾರುಕಟ್ಟೆಗೆ ಬರುತ್ತವೆ.


Click it and Unblock the Notifications








