ಪೋಷಕರೇ ಎಚ್ಚರ...ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡಬೇಡಿ, ಯಾಕಂದ್ರೆ!?
ಈಗಂತೂ ಸ್ಮಾರ್ಟ್‌ಫೋನ್ ಇಲ್ಲದೆ ಮಕ್ಕಳಿಗೆ ಊಟವನ್ನೇ ಮಾಡಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಮೊಬೈಲ್ ಕೊಟ್ಟರೆ ಹೇಗೋ ಊಟ ಮಾಡುತ್ತಾನಲ್ಲ ಬಿಡು ಎಂದು ಪೋಷಕರು ಸಹ ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗಲು ಕಾರ್ಣಕರ್ತರಾಗುತ್ತಿದ್ದಾರೆ. ಆದರೆ, ಈ ಸ್ಮಾರ್ಟ್‌ಫೋನ್ ನಿಂದ ಮಕ್ಕಳಿಗೆ ಉಂಟಾಗುವ ಸಮಸ್ಯೆ ತಿಳಿದರೆ ಖಂಡಿತಾ ಶಾಕ್ ಆಗ್ತೀರ.

ಹೌದು, ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ದೊಡ್ಡವರಿಗೇ ಒಳ್ಳೆಯದಲ್ಲ ಅಂತಹುದರಲ್ಲಿ ಮಕ್ಕಳು ಸಹ ಬಳಕೆ ಮಾಡುತ್ತಾರೆ ಅಂದ್ರೆ ಮಕ್ಕಳ ಮಾನಸಿಕ ಪರಿಸ್ಥಿತಿ ಹೇಗಾಗಬೇಡ ಯೋಚಿಸಿ. ಅದರಲ್ಲೂ ಈಗಿನ ಮಕ್ಕಳು ಹೆಚ್ಚಾಗಿ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಬೇಕು ಎಂದು ಹಠ ಹಿಡಿಯುವುದು ಬಹುಪಾಲು ಕಡೆ ಕಂಡುಬರುತ್ತಿದೆ. ಹಾಗಿದ್ರೆ, ಸ್ಮಾರ್ಟ್‌ಫೋನ್ ಬಳಕೆಯಿಂದ ಮಕ್ಕಳಿಗೆ ಆಗುತ್ತಿರುವ ಸಮಸ್ಯೆ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.
ಕೊರೊನಾ ನಂತರ ಬದಲಾದ ವ್ಯವಸ್ಥೆ
ಇಂದಿನ ಕೆಲವು ಕೆಟ್ಟ ಪರಿಸ್ಥಿತಿ ಹಾಗೂ ಬದಲಾವಣೆಗೆ ಕೊರೊನಾ ಪ್ರಮುಖ ಕಾರಣವಾಗಿದೆ. ಯಾಕೆಂದರೆ ಕೊರೊನಾ ಹಿನ್ನೆಲೆ ಮಕ್ಕಳ ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ. ಇದರಲ್ಲಿ ಸಾಮಾಜಿಕ ಪ್ರತ್ಯೇಕತೆಯಿಂದಾಗಿ ಮಕ್ಕಳು ಫೋನ್ ಬಳಕೆಯನ್ನು ಹೆಚ್ಚಿಗೆ ಮಾಡಿವೆ ಎಂದೇ ಹೇಳಬಹುದು. ಈ ಮೂಲಕ ಅವರ ಭಾವನಾತ್ಮಕ ಹಾಗೂ ಇತರೆ ನಡವಳಿಕೆ ಶೈಲಿಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬಂದಿವೆ.
ಮಕ್ಕಳ ವಿಭಾಗದ ರಾಜ್ಯ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಮತ್ತು ನ್ಯೂ ಹೊರೈಜನ್ಸ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ನ ನಿರ್ದೇಶಕ ಡಾ. ಸಮೀರ್ ದಳವಾಯಿ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ಚಿಕ್ಕ ಮಕ್ಕಳು ಮತ್ತು ಹದಿಹರೆಯದವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಕುಟುಂಬಗಳು ನಮ್ಮ ಕೇಂದ್ರದಲ್ಲಿ ಸಲಹೆ ಹಾಗೂ ಸಹಾಯ ಪಡೆಯುತ್ತಿವೆ. ಇದರಲ್ಲಿ ಸಹಾಯ ಕೇಳಿದ ಅನೇಕ ಮಕ್ಕಳಿಗೆ ಸ್ವಲೀನತೆ ಸ್ಪೆಕ್ಟ್ರಮ್ ಸಮಸ್ಯೆ ಇದೆ. ಹಾಗೆಯೇ ಲಾಕ್‌ಡೌನ್ ಹಿನ್ನೆಲೆ ಅವರು ಚಿಕಿತ್ಸೆಯಿಂದ ವಂಚಿತರಾಗಿದ್ದು, ಇದರಿಂದಾಗಿ ಪೋಷಕರು ತಮ್ಮ ಮಗುವಿನ ಈ ರೀತಿಯ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಹಾಗೆಯೇ ಈ ರೋಗದ ಬಗ್ಗೆ ತಿಳಿದ ನಂತರ ಆಘಾತಕ್ಕೊಳಗಾಗಿದ್ದರು ಎಂದಿದ್ದಾರೆ.

ಪೋಷಕರೇ ಕಾರಣ
ಮೊದಲೇ ತಿಳಿಸಿದಂತೆ ಲಾಕ್‌ಡೌನ್ ಸಮಯದಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್‌ಗಳಿಗೆ ಮಾರು ಹೋಗಿದ್ದರು. 2021 ಮತ್ತು 2022 ರ ನಡುವೆ ನಮ್ಮ ಕೇಂದ್ರದಲ್ಲಿ 2,258 ಮಕ್ಕಳನ್ನು ಪರಿಶೀಲಿಸಲಾಗಿದೆ. ಇನ್ನು ತಂದೆ-ತಾಯಿ ಮನೆಯಲ್ಲಿದ್ದರೂ ಕೆಲಸದಲ್ಲಿ ನಿರತರಾಗಿರುತ್ತಿದ್ದರು, ಮಕ್ಕಳು ಹೊರಗೆ ಹೋಗಲು ಸಾಧ್ಯವಾಗದ ಕಾರಣ ಸಾಮಾಜಿಕ ಪ್ರತ್ಯೇಕತೆಯು ತೀವ್ರವಾಗಿ ಹೆಚ್ಚಾಗಿದೆ. ಈ ಮೂಲಕ ಮಕ್ಕಳ ಸಾಮಾನ್ಯ ಸಾಮಾಜಿಕ ಜೀವನ ಇದರಿಂದಲೇ ಕಳೆದುಹೋಗಿದೆ. ಹಾಗೆಯೇ ಇದು ಮಕ್ಕಳಲ್ಲಿ ಆತಂಕ ಮತ್ತು ಭಯ ವಾತಾವರಣ ಅತಿರೇಕವಾಗಿ ಉಂಟಾಗಿದೆ ಎಂದು ಮಾಹಿತಿ ನೀಡಿರುವ ಡಾ.ದಳವಾಯಿ, ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಕೆ ಮಾಡುವುದನ್ನು ಅನುಮತಿಸುವ ಮೂಲಕ ಪೋಷಕರು ಮಕ್ಕಳ ಮಾತಿಗೆ ಮಣಿದರೇ ಹೊರತು, ದೈನಂದಿನ ಪ್ರೀತಿ ಮತ್ತು ವಾತ್ಸಲ್ಯವನ್ನು ಒದಗಿಸಲು ಯಾವುದೇ ಗಮನ ನೀಡಲಿಲ್ಲ ಎಂದು ಹೇಳಿದ್ದಾರೆ.

ಪೋಷಕರು ಬದಲಾದರೂ ಮಕ್ಕಳು ಬದಲಾಗಲಿಲ್ಲ
ಕೊರೊನಾ ನಂತರದ ಹಲವಾರು ಪೋಷಕರು ಹಾಗೂ ವಯಸ್ಕರು ತಮ್ಮ ದೈನಂದಿನ ಜೀವನವನ್ನು ಬದಲು ಮಾಡಿಕೊಂಡರು. ಅಂದರೆ ಕೊರೊನಾ ಪೂರ್ವದಲ್ಲಿ ಹೇಗೆ ಜೀವನ ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಜೀವನ ನಿರ್ವಹಣೆ ಮಾಡಲು ಮುಂದಾದರು. ಆದರೆ, ಮಕ್ಕಳು ಮಾತ್ರ ಇದರಿಂದ ಕಂಗಾಲಾಗಿದ್ದಾರೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಎರಡು ವರ್ಷ ವಯಸ್ಸಿನ ಮಕ್ಕಳು ಶಾಲಾ ಜೀವನಕ್ಕೆ ಹೊಂದಿಕೊಳ್ಳಲು ಅಗತ್ಯವಾದ ಸಾಮಾಜಿಕ ಕೌಶಲ್ಯವಿಲ್ಲದೆ ನಾಲ್ಕು ಅಥವಾ ಐದನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ್ದಾರೆ. ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಶಿಕ್ಷಣವನ್ನು ಕಳೆದುಕೊಂಡಿರುವುದು ಸಹ ಪ್ರಮುಖವಾದ ವಿಷಯವಾಗಿದೆ.
ಈ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದನ್ನು ಸಾಮಾಜಿಕವಾಗಿ ನಿಭಾಯಿಸಲು ಅಪಾರ ಒತ್ತಡವನ್ನು ಎದುರಿಸುತ್ತಿದ್ದಾರೆ. ಇದು ಹದಗೆಡುತ್ತಿರುವ ಮಕ್ಕಳ ವರ್ತನೆಯ ಮತ್ತು ಭಾವನಾತ್ಮಕ ಹೋರಾಟಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಅದರಲ್ಲೂ ಸೌಮ್ಯವಾದ ಬೆಳವಣಿಗೆಯ ಸಮಸ್ಯೆ ಹೊಂದಿರುವ ಮಕ್ಕಳು ಸಾಂಕ್ರಾಮಿಕ ನಂತರ ಇನ್ನೂ ಹೆಚ್ಚು ಬಳಲುತ್ತಿದ್ದಾರೆ ಎಂದು ಕಂಡುಕೊಳ್ಳಲಾಗಿದೆ.
ಸಮಸ್ಯೆಗೆ ವೈದ್ಯರು ಬೇಕಿಲ್ಲ, ವಾತ್ಸಲ್ಯ ಬೇಕಿದೆ!
ಶಾಲೆಗಳು ಶಿಕ್ಷಣವನ್ನು ನೀಡಿದರೆ, ಪೋಷಕರು ಮತ್ತು ನೆರೆಹೊರೆಯವರು ಮಕ್ಕಳಿಗೆ ಅಗತ್ಯವಿರುವ ಸಾಮಾಜಿಕ ಬಾಂಧವ್ಯವನ್ನು ವೃದ್ಧಿಸಲು ಕಾರಣಕರ್ತರಾಗುತ್ತಾರೆ. ಈ ಕಾರಣದಿಂದಲೇ ಮಕ್ಕಳು ಶಾಲೆಗೆ ಸೇರುವ ಮುನ್ನ ಅವರ ಪ್ರೀತಿಪಾತ್ರರ ಉಪಸ್ಥಿತಿ ಹಾಗೂ ಅವರೊಂದಿಗಿನ ಸಂವಹನವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅದರಂತೆ ಮಕ್ಕಳ ನಡವಳಿಕೆಯಲ್ಲಿ ಕಂಡುಬರುವ ಈ ಹೊಸ ಬದಲಾವಣೆಗಳು ಮತ್ತು ಸವಾಲುಗಳು ರೋಗವಲ್ಲ. ಹೀಗಾಗಿ ಅವರಿಗೆ ವೈದ್ಯಕೀಯ ವೃತ್ತಿಪರರ ಚಿಕಿತ್ಸೆಯ ಬದಲಿಗೆ ಕುಟುಂಬದೊಂದಿಗಿನ ಅರ್ಥಪೂರ್ಣ ಮಾತುಗಳು ಅಗತ್ಯ ಇದ್ದು, ಮಕ್ಕಳ ಈ ಸಮಸ್ಯೆಯನ್ನು ನಿಭಾಯಿಸಬಹುದಾಗಿದೆ.

ಪೋಷಕರಿಗೆ ಆನ್‌ಲೈನ್ ತರಬೇತಿ
ಸಮಾಜದಲ್ಲಿ ಈ ರೀತಿಯ ಭಾವನಾತ್ಮಕ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪೋಷಕರಿಗೆ ನ್ಯೂ ಹೊರೈಜನ್ಸ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ ತರಬೇತಿ ನೀಡುತ್ತಿದ್ದು, ಈ ಮೂಲಕ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದೆ. ಈ ಮೂಲಕ ಕುಟುಂಬ ವಾತಾವರಣವನ್ನು ಹೆಚ್ಚು ಮಾಡಲು ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ.
ಇನ್ನಷ್ಟು ಹೆಚ್ಚಿನ ಜಾಗೃತಿ ಅಗತ್ಯ
ವರ್ತನೆಯ ಅಸ್ವಸ್ಥತೆಗಳು, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD), ಗಮನ-ಕೊರತೆ/ಹೈಪರ್ಆಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ), ನಿರ್ದಿಷ್ಟ ಕಲಿಕೆಯ ಅಸ್ವಸ್ಥತೆ (ಎಸ್‌ಎಲ್‌ಡಿ) ಮತ್ತು ಮಕ್ಕಳ ಚಿಕಿತ್ಸೆಗಳ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸುವುದು ಮುಖ್ಯ ಎಂದು ಮಕ್ಕಳ ವೈದ್ಯರಾದ ಡಾ. ಬರ್ಖಾ ಚಾವ್ಲಾ ಹೇಳಿದ್ದು, ಸಾಮಾನ್ಯವಾಗಿ ಮಕ್ಕಳು ಈ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆಂದು ಪೋಷಕರಿಗೆ ತಿಳಿದಿರುವುದಿಲ್ಲ. ಇದರಿಂದಾಗಿ ಚಿಕಿತ್ಸೆ ವಿಳಂಬವಾಗುತ್ತದೆ ಎಂದಿದ್ದಾರೆ.


Click it and Unblock the Notifications








