EPF ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?; ಇಲ್ಲಿದೆ ನೋಡಿ ಸರಳ ಮಾರ್ಗ
ನೀವು ಉದ್ಯೋಗಿಗಳಾಗಿದ್ದು, ನಿಮ್ಮ ನಿವೃತ್ತಿ ನಂತರ ಹೆಚ್ಚಿನ ಪಿಂಚಣಿ ಪಡೆಯಬೇಕು ಎಂದುಕೊಂಡಿದ್ದರೆ ಇದು ನಿಮಗೆ ಕೊನೇ ಅವಕಾಶ. ಯಾಕೆಂದರೆ ಸರ್ಕಾರ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ದಿನಾಂಕವನ್ನು ಒಂದು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡಿದೆ.
ಹೌದು, ಉದ್ಯೋಗಿಗಳ ಪಿಂಚಣಿ ಯೋಜನೆಯಲ್ಲಿ ಅಂದರೆ ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿಗೆ ನೌಕರರು ಹಾಗೂ ಉದ್ಯೋಗದಾತರು ಜಂಟಿಯಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಇಂದಿಗೆ ನಿಗದಿ ಪಡಿಸಲಾಗಿತ್ತು. ಅಂದರೆ ಮಾರ್ಚ್ 3 ಅಂತಿಮ ದಿನವಾಗಿತ್ತು. ಆದರೆ, ಇಪಿಎಫ್‌ಒ ಇದೀಗ ಈ ದಿನಾಂಕವನ್ನು ವಿಸ್ತರಿಸಿ ಮೇ 3ರ ವರೆಗೆ ಅವಕಾಶ ನೀಡಿದೆ. ಹಾಗಿದ್ರೆ, ಇದರಿಂದ ಪ್ರಯೋಜನ ಏನು?, ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಯಾರು ಅರ್ಹರು ಎಂಬ ಮಾಹಿತಿಯನ್ನು ತಿಳಿಯಿರಿ.

ಈ ಸೌಲಭ್ಯ ಪಡೆಯಲು ಯಾರು ಅರ್ಹರು ?
ಯಾವುದೇ ಉದ್ಯೋಗಿಗಳ ಬೇಸಿಕ್ ಸ್ಯಾಲರಿಯಲ್ಲಿ ಇಪಿಎಫ್‌ಗೆ ಕಡಿತವಾಗುತ್ತಿದ್ರೆ ಆ ಎಲ್ಲಾ ಉದ್ಯೋಗಿಗಳು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಇದಕ್ಕಾಗಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ತಮ್ಮ ಹೊಸ ಆಯ್ಕೆಯ ಪಿಂಚಣಿ ನಿಧಿಯ ಸೌಲಭ್ಯ ಪಡೆದುಕೊಳ್ಳಲು ಇಪಿಎಫ್‌ಒಗೆ ತಮ್ಮ ಉದ್ಯೋಗದಾತರೊಂದಿಗೆ ಜಂಟಿ ಒಪ್ಪಿಗೆಯನ್ನು ನೀಡಬೇಕು.ಈ ಮೂಲಕ ಕೆಲಸ ಮಾಡಲು ಸಾಧ್ಯವಾಗದ ಸಮಯದಲ್ಲಿ ಯಾರಿಗೂ ಭಾರವಾಗದೆ ಕೂತು ತಿನ್ನುವ ಅವಕಾಶ ನಿಮ್ಮದಾಗುತ್ತದೆ.
ಪ್ರಸ್ತುತ ಇಪಿಎಸ್ ನಿಯಮಗಳೇನು?
ಸರ್ಕಾರದ ಹೊದ ಇಪಿಎಸ್ ನಿಯಮದ ಪ್ರಕಾರ ಉದ್ಯೋಗಿಗಳು ಮತ್ತು ಉದ್ಯೋಗದಾತರು ಶೇಕಡಾ 12 ರಷ್ಟನ್ನು ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್‌ಗೆ ಕೊಡುಗೆ ನೀಡಬಹುದಾಗಿದ್ದು, 12 % ಕೊಡುಗೆಯನ್ನು ವಿಭಾಗ ಮಾಡಲಾಗಿದೆ. ಇದರಲ್ಲಿ ಇಪಿಎಫ್‌ಗೆ ಶೇಕಡಾ 3.67 ಮತ್ತು ಇಪಿಎಸ್‌ಗೆ ಶೇಕಡಾ 8.33 ಎಂದು ವಿಭಜಿಸಲಾಗಿದ್ದು, ಇದರ ಜೊತೆಗೆ ಭಾರತ ಸರ್ಕಾರವು ಉದ್ಯೋಗಿಯ ಪಿಂಚಣಿಗೆ ಶೇಕಡಾ 1.16 ರಷ್ಟು ಕೊಡುಗೆ ನೀಡುತ್ತದೆ.

ಈ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ
ಹಂತ 1
ಮೊದಲು ಡೆಸ್ಕ್‌ಟಾಪ್‌ನಲ್ಲಿ ಇ ಸೇವಾ ಪೋರ್ಟಲ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು ಈ https://unifiedportal-mem.epfindia.gov.in/memberinterface/ ಲಿಂಕ್ ಬಳಕೆ ಮಾಡಬಹುದು. ಇದಾದ ನಂತರ ಪೇಜ್‌ನ ಬಲಗಡೆಯಲ್ಲಿ ಬ್ಲಿಂಕ್ ಆಗುವ 'Pension on higher salary: Exercise of joint option on or before May 3, 2023' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದನ್ನು ಕ್ಲಿಕ್ ಮಾಡಿ.
ಹಂತ 2
ಬಳಿಕ ನಿಮಗೆ ಜಂಟಿ ಆಯ್ಕೆಗಳ ಮೌಲ್ಯೀಕರಣಕ್ಕಾಗಿ ಅರ್ಜಿ ನಮೂನೆ ಹಾಗೂ ಜಂಟಿ ಆಯ್ಕೆಗಳಿಗಾಗಿ ಅರ್ಜಿ ನಮೂನೆ ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈಗ ಎರಡನೇ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಳಿಕ UAN ನಂಬರ್, ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡಬೇಕು. ನಂತರ ನೀಡಲಾದ ಕ್ಯಾಪ್ಚಾ ನಮೂದು ಮಾಡಿ.

ಹಂತ 3
ಕ್ಯಾಪ್ಚಾ ನಮೂದು ಮಾಡಿ ನೀಡಲಾದ ಸೂಚನೆಗೆ ಒಪ್ಪಿಗೆ ಸೂಚಿಸಿದ ನಂತರ ಓಟಿಪಿ ಪಡೆಯಿರಿ ಎಂಬ ನೀಲಿ ಬಟನ್ ಇರುವ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿರುವ ಫೋನ್ ನಂಬರ್‌ಗೆ ಓಟಿಪಿ ಬರುತ್ತದೆ. ಬಳಿಕ ವ್ಯಾಲಿಡೇಟ್ ಯೂಸರ್ ಹಾಗೂ ಸಬ್‌ಮಿಟ್ ಅಪ್ಲಿಕೇಶನ್, ಸ್ವೀಕೃತಿ ಸಂಖ್ಯೆ ರಚನೆ ಎಂಬ ಮೂರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.


Click it and Unblock the Notifications








