ಫೇಸ್‌ಬುಕ್‌ನಲ್ಲಿ ಜಾಹೀರಾತುಗಳ ಕಾಟ ಹೆಚ್ಚಾಗಿದೆಯಾ?: ನಿರ್ಬಂಧಿಸಲು ಇಲ್ಲಿದೆ ಸರಳ ಮಾರ್ಗ!
ಫೇಸ್‌ಬುಕ್ ನಲ್ಲಿ ನೀವು ಸಾಮಾನ್ಯವಾಗಿ ಗಮನಿಸಿರುವಂತೆ ಹಲವಾರು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಈ ಜಾಹೀರಾತುಗಳು ಯಾವಾಗಲು ಸಹ ಬಳಕೆದಾರರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕಿರಿ ಅನುಭವ ನೀಡುವುದು ಗೊತ್ತಿರುವ ಸಂಗತಿ. ಹಾಗಂತ ಸುಮ್ಮನೆ ಇದ್ದರೆ ಹೇಗೆ?, ನಿಮಗೆ ಜಾಹೀರಾತು ವೀಕ್ಷಣೆ ಮಾಡಲು ಸಾಧ್ಯವಿಲ್ಲ ಎಂದಾದ್ರೆ ಈ ರೀತಿ ಮಾಡಬಹುದು.
ಹೌದು, ಫೇಸ್‌ಬುಕ್‌ನಲ್ಲಿ ವೈಯಕ್ತಿಕಗೊಳಿಸಿದ ಜಾಹೀರಾತುಗಳು ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತವೆ. ಅದೂ ಸಹ ನಿಮ್ಮ ಆಸಕ್ತಿಗಳು ಮತ್ತು ಫೇಸ್‌ಬುಕ್ ಚಟುವಟಿಕೆಯ ಆಧಾರದ ಮೇಲೆ ಅದೇ ವಿಷಯವನ್ನು ಹೋಲುವ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಇದು ಹೇಗೆ ಸಾಧ್ಯ ಎಂದರೆ ನೀವು ಫೇಸ್‌ಬುಕ್ ಅನ್ನು ಬಳಸುವಾಗ ಅದು ನಿಮ್ಮ ಚಟುವಟಿಕೆಯನ್ನು ಸಂಗ್ರಹಿಸುತ್ತದೆ. ಹಾಗಿದ್ರೆ, ಈ ರೀತಿಯ ಜಾಹೀರಾತುಗಳನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ನೀವು ಸಾಮಾನ್ಯವಾಗಿ ಯಾವುದಾದರೂ ನಿರ್ದಿಷ್ಟ ವಿಡಿಯೋ ಗೇಮ್ ಕುರಿತು ಮಾಹಿತಿಯನ್ನು ಹುಡುಕುತ್ತಿದ್ದರೆ ಆ ಸಂಬಂಧದ ಮಾಹಿತಿಗಳು ನಿಮಗೆ ಲಭ್ಯವಾಗುವುತ್ತದೆ. ಆದರೆ, ಇದೇ ಸಂಬಂಧಿ ಜಾಹೀರಾತುಗಳು ಸಹ ಫೇಸ್‌ಬುಕ್ ಫೀಡ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಕೆಲವರಿಗೆ ಇಷ್ಟವಾದರೆ ಹಲವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹಾಗೆಯೇ ಯಾರೂ ಸಹ ಈ ರೀತಿಯ ಜಾಹಿರಾತಿಗಳನ್ನು ಪದೇ ಪದೇ ವೀಕ್ಷಣೆ ಮಾಡಲು ಇಷ್ಟ ಪಡುವುದಿಲ್ಲ.
ಈ ಜಾಹೀರಾತುಗಳಿಂದ ಮುಕ್ತಿ ಪಡೆಯುವುದು ಹೇಗೆ? : ನಿಮ್ಮ ಜಾಹೀರಾತು ಆದ್ಯತೆಗಳನ್ನು ಸರಿಹೊಂದಿಸುವ ಮೂಲಕ ನೀವು ನೋಡುವ ಜಾಹೀರಾತುಗಳ ಪ್ರಕಾರಗಳನ್ನು ನಿಯಂತ್ರಿಸಲು ಫೇಸ್‌ಬುಕ್ ನಿಮಗೆ ಅನುಮತಿಸುತ್ತದೆ. ಇದಕ್ಕಾಗಿ ಫೇಸ್‌ಬುಕ್ ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡಿ. ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ವಿಭಾಗಕ್ಕೆ ತಲುಪಿ.
ಇದಾದ ನಂತರದಲ್ಲಿ ಸೆಟ್ಟಿಂಗ್ ವಿಭಾಗ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಅದರಲ್ಲಿ ಜಾಹೀರಾತು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಗಮನಿಸಿ. ಈ ಆಯ್ಕೆಯಲ್ಲಿ ನಿಮ್ಮ ಆಸಕ್ತಿಗಳು ಏನೆಂದು ಫೇಸ್‌ಬುಕ್ ತಿಳಿದುಕೊಳ್ಳಲು ಬಯಸುತ್ತದೆ. ಈ ಮೂಲಕ ನಿಮಗೆ ಅಗತ್ಯವಿರುವಂತೆ ಬದಲಾವಣೆಗಳನ್ನು ಮಾಡಬಹುದು. ಜೊತೆಗೆ ಇತರ ವೆಬ್‌ಸೈಟ್‌ಗಳು ಮತ್ತು ಆಪ್‌ನಲ್ಲಿನ ನಿಮ್ಮ ಚಟುವಟಿಕೆಯನ್ನು ಆಧರಿಸಿ ನೀವು ಈ ಜಾಹೀರಾತುಗಳನ್ನು ಆಫ್ ಮಾಡಬಹುದು ಮತ್ತು ನೀವು ನೋಡಲು ಬಯಸದ ನಿರ್ದಿಷ್ಟ ಜಾಹೀರಾತುಗಳನ್ನು ಮರೆಮಾಡಬಹುದು.

ಉದ್ದೇಶಿತ ಜಾಹೀರಾತುಗಳಿಂದ ಹೊರಗುಳಿಯುವುದು ಹೇಗೆ?: ಇದನ್ನು ಮಾಡಲು ಮೇಲೆ ವಿವರಿಸಿದಂತೆ ನಿಮ್ಮ ಜಾಹೀರಾತು ವಿಭಾಗಕ್ಕೆ ಬನ್ನಿ ಅಲ್ಲಿ ಪಾಲುದಾರರಿಂದ ಡೇಟಾ ಆಧಾರಿತ ಜಾಹೀರಾತುಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸೆಟ್ಟಿಂಗ್ ಅನ್ನು ಆಫ್ ಮಾಡಿ. ಈ ಮೂಲಕ ಫೇಸ್‌ಬುಕ್ ಜಾಹೀರಾತುಗಳನ್ನು ತೋರಿಸಲು ಇತರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಂದ ಮಾಹಿತಿಯನ್ನು ಪಡೆಯುವುದನ್ನು ನಿಲ್ಲಿಸುತ್ತದೆ.
ಜಾಹೀರಾತು ಬ್ಲಾಕರ್ ಬಳಸಬಹುದು: ಜಾಹೀರಾತು ಬ್ಲಾಕರ್‌ಗಾಗಿ ನೀವು ಹೆಚ್ಚು ಜನಪ್ರಿಯವಾಗಿರುವ ಆಡ್‌ಬ್ಲಾಕ್, ಆಡ್‌ಬ್ಲಾಕ್ ಪ್ಲಸ್ ಮತ್ತು ಯುಬ್ಲಾಕ್ ಅನ್ನು ಬಳಕೆ ಮಾಡಬಹುದು. ಈ ಜಾಹೀರಾತು ಬ್ಲಾಕರ್‌ಗಳು ಬ್ರೌಸರ್ ಎಕ್ಸಟೆನ್ಶನ್ ಆಗಿದ್ದು, ಫೇಸ್‌ಬುಕ್ ಸೇರಿದಂತೆ ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ನಿರ್ಬಂಧಿಸಬಹುದು. ಇನ್ನು ಈ ಜಾಹೀರಾತು ಬ್ಲಾಕರ್ ಅನ್ನು ಬಳಕೆ ಮಾಡಬೇಕು ಎಂದರೆ ನಿಮ್ಮ ವೆಬ್ ಬ್ರೌಸ್‌ನಲ್ಲಿ ಎಕ್ಸಟೆನ್ಶನ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ಮಾಡಿ.
ಫೇಸ್‌ಬುಕ್ ಪ್ರೀಮಿಯಂಗೆ ಚಂದಾದಾರರಾಗಿ: ಇದೆಲ್ಲದರ ಹೊರತಾಗಿ ನೀವು ಫೇಸ್‌ಬುಕ್ ಪ್ರೀಮಿಯಂಗೆ ಚಂದಾದಾರರಾಗುವ ಮೂಲಕವೂ ಈ ಪ್ರಕ್ರಿಯೆ ನಡೆಸಬಹುದಾಗಿದೆ. ಈ ಸೇವೆಯನ್ನು ಪಡೆದುಕೊಳ್ಳಲು ನೀವು ಮಾಸಿಕ ಶುಲ್ಕವನ್ನು ಪಾವತಿ ಮಾಡಬೇಕಿದೆ. ಆದರೆ, ಈ ಸೇವೆ ವ್ಯಾಪಕವಾಗಿ ಲಭ್ಯವಿಲ್ಲ. ಜೊತೆಗೆ ಇದನ್ನು ಎಲ್ಲಾ ಬಳಕೆದಾರರಿಗೆ ಯಾವಾಗ ಪರಿಚಯಿಸಲಾಗುತ್ತದೆ ಎನ್ನುವ ಬಗ್ಗೆಯೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

ಯಾಕಾಗಿ ಈ ಜಾಹೀರಾತು ಪ್ರಸಾರವಾಗುತ್ತವೆ?: ಫೇಸ್‌ಬುಕ್ ಕಾರ್ಯನಿರ್ವಹಿಸಬೇಕು ಎಂದರೆ ಹಣ ಬೇಕು. ಹಣ ಬೇಕು ಎಂದರೆ ಜಾಹೀರಾತುಗಳು ಅನಿವಾರ್ಯ. ಆದ್ದರಿಂದ ಸೈಟ್‌ನಲ್ಲಿ ಯಾವಾಗಲೂ ಕೆಲವು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಫೇಸ್‌ಬುಕ್ ಮಾತ್ರವಲ್ಲದೆ ಹಲವಾರು ಆಪ್‌ಗಳು ಅಥವಾ ಸೈಟ್‌ಗಳು ಜಾಹೀರಾತುವಿನಿಂದ ಬರುವ ಆದಾಯದಲ್ಲಿಯೇ ಕಾರ್ಯನಿರ್ವಹಿಸುತ್ತವೆ.


Click it and Unblock the Notifications








