ನಿಮ್ಮ ಎಸಿಯಿಂದ ತಂಪಾದ ಗಾಳಿ ಬರುತ್ತಿಲ್ಲವೇ?; ಈ ಸಮಸ್ಯೆಗಳಿರಬಹುದು ಗಮನಿಸಿ!
ಈಗಾಗಲೇ ಎಲ್ಲಾ ಕಡೆ ಬಿರುಬಿಸಿಲು ಹೆಚ್ಚಾಗಿದ್ದು, ಇದರಿಂದ ಬಚಾವ್ ಆಗಲು ಜನರು ಎಸಿ ಹಾಗೂ ಫ್ಯಾನ್ ಮೊರೆ ಹೋಗುತ್ತಿದ್ದಾರೆ. ಇದರ ನಡುವೆ ಎಸಿ ಆನ್ ಆಗಿದ್ದರೂ ಸಹ ತಂಪಾದ ಗಾಳಿ ಅದರಿಂದ ಬರುತ್ತಿಲ್ಲ ಎಂದಾದರೆ ಮೊದಲು ಈ ಕೆಲಸ ಮಾಡಿ.
ಹೌದು, ಮಹಾನಗರಗಳಲ್ಲಿ ಹೆಚ್ಚಾಗಿರುವ ವಾಹನ ದಟ್ಟಣೆ ಜೊತೆಗೆ ಬಿಸಿಲಿನ ತಾಪವೂ ಜನರನ್ನು ಕಾಡಲು ಶುರು ಮಾಡಿದೆ. ಹೀಗಾಗಿಯೇ ಕೆಲವರು ಅವರ ಅಗತ್ಯಕ್ಕೆ ತಕ್ಕಂತೆ ಮನೆಯಲ್ಲಿ ಎಸಿ ಬಳಕೆ ಮಾಡುತ್ತಾರೆ. ಆದರೆ ಸುಮಾರು ದಿನಗಳಿಂದ ಬಳಕೆ ಮಾಡದೆ ಹಾಗೆ ಇದ್ದ ಎಸಿಯನ್ನು ಈಗ ಬಳಕೆ ಮಾಡಲು ನೀವೇನಾದರೂ ಮುಂದಾಗಿದ್ದು, ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಇಲ್ಲಿ ವಿವರಿಸಲಾದ ಸಮಸ್ಯೆಗಳು ಇರಬಹುದು ಗಮನಿಸಿ.

ಏರ್ ಫಿಲ್ಟರ್ ಸ್ವಚ್ಛ ಮಾಡಿ
ಭಾರತದಲ್ಲಿ ಸಾಮಾನ್ಯವಾಗಿ ಎಸಿಯನ್ನು ವರ್ಷದಲ್ಲಿ 6 ತಿಂಗಳಿಗಿಂತ ಹೆಚ್ಚು ಕಾಲ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಯಂತ್ರದಲ್ಲಿನ ಫಿಲ್ಟರ್ ಗಾಳಿಯಲ್ಲಿ ಕೊಳಕು ಧೂಳು ಹಾಗೂ ಇನ್ನಿತರೆ ಕಣಗಳು ಸೇರಿಕೊಳ್ಳುವುದು ಸಾಮಾನ್ಯ. ಇವು ಏರ್ ಫಿಲ್ಟರ್‌ನ ಗಾಳಿಯ ಹರಿವನ್ನು ನಿರ್ಬಂಧಿಸಬಹುದು ಹಾಗೆಯೇ ಏರ್ ಕಂಡಿಷನರ್ ಸರಿಯಾಗಿ ಕೆಲಸ ಮಾಡಲು ಅಡ್ಡಿಯನ್ನುಂಟು ಮಾಡಬಲ್ಲದು. ಹೀಗಾಗಿ ಏರ್ ಫಿಲ್ಟರ್ ಅನ್ನು ಸಾಧ್ಯವಾದರೆ ಬದಲಾಯಿಸಿ ಅಥವಾ ಬಟ್ಟೆಯಿಂದ ಅಥವಾ ನೀರಿನ ಮೂಲಕ ಸ್ವಚ್ಛಗೊಳಿಸಿ.
ಕಂಡೆನ್ಸರ್ ಸುರುಳಿಯನ್ನು ಸ್ವಚ್ಛಗೊಳಿಸಿ
ಕಂಡೆನ್ಸರ್ ಸುರುಳಿಗಳು ಎಸಿಯ ಹೊರಾಂಗಣ ಘಟಕದಲ್ಲಿರಲಿದ್ದು, ಅದು ಕೊಳಕು ಅಥವಾ ಪಾರಿವಾಳಗಳ ಗೂಡುಗಳಿಂದ ಸಾಮಾನ್ಯವಾಗಿ ಹೆಚ್ಚು ಹಾಳಾಗುತ್ತವೆ. ಈ ವೇಳೆ ಕೊಳಕು, ಧೂಳು ಅಥವಾ ಪಾರಿವಾಳಗಳ ಕಸದಿಂದ ಮುಚ್ಚಲ್ಪಟ್ಟಿದ್ದರೆ ಎಸಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಜೊತೆಗೆ ಹೆಚ್ಚಿನ ತಂಪಾದ ಗಾಳಿ ಸಹ ಬರುವುದಿಲ್ಲ. ಹೀಗಾಗಿ ಮೃದುವಾದ ಬ್ರಷ್‌ನಿಂದ ಸುರುಳಿಗಳನ್ನು ಸ್ವಚ್ಛಗೊಳಿಸಿ, ಜೊತೆಗೆ ನೀರನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ವೇಳೆ ಪಾರಿವಾಳಗಳು ಇದರ ಅಕ್ಕಪಕ್ಕ ಕೂರಬಾರದ ಹಾಗೆ ಸುತ್ತಲೂ ಬಲೆ ಹಾಕಬಹುದು.

ಥರ್ಮೋಸ್ಟಾಟ್ ಸೆಟ್ಟಿಂಗ್ ಪರಿಶೀಲಿಸಿ
ನಿಮ್ಮ ಎಸಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾದರೂ ಸಹ ಆಗಾಗ್ಗೆ ತನ್ನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಥರ್ಮೋಸ್ಟಾಟ್ ಅನ್ನು ಪರಿಶೀಲಿಸಬೇಕಿದೆ. ಈ ಥರ್ಮೋಸ್ಟಾಟ್ ಕೋಣೆಯ ಉಷ್ಣಾಂಶವನ್ನು ಹೊಂದಿಕೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನು ಪತ್ತೆ ಮಾಡಲು ನೀವು ಎಷ್ಟು ತಾಪಮಾನ ಹೊಂದಿಸಿದರೆ ಎಷ್ಟು ತಂಪಾದ ಗಾಳಿ ಬರುತ್ತಿದೆ ಎನ್ನುವುದನ್ನು ಕಂಡುಕೊಳ್ಳಿ. ಇದರಲ್ಲಿ ಏನಾದರೂ ಸಮಸ್ಯೆ ಇದ್ದರೆ ವೃತ್ತಿಪರ ಕೆಲಸಗಾರರ ಮೂಲಕ ಸರಿಪಡಿಸಿಕೊಳ್ಳಿ.
ಎಸಿ ಮೋಟಾರ್ ಬಗ್ಗೆ ಗಮನಹರಿಸಿ
ಎಸಿಗೆ ಹೃದಯ ಭಾಗ ಎಂದರೆ ಅದು ಮೋಟಾರ್. ನಿಮ್ಮ ಮನೆಯಲ್ಲಿನ ವಿದ್ಯುತ್ ಏರಿಳಿತವು ನಿಮ್ಮ ಎಸಿಯಲ್ಲಿರುವ ಮೋಟಾರ್‌ಗೆ ಸಮಸ್ಯೆ ಉಂಟುಮಾಡಬುದು, ಹಾಗೆಯೇ ಇದರಿಂದಾಗಿ ಎಸಿ ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಈ ವೇಳೆ ನೀವು ಎಸಿ ಸಂಬಂಧಿತ ಕಂಪನಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಜೊತೆಗೆ ವೃತ್ತಿಪರ ಕೆಲಸಗಾರರನ್ನು ಕರೆಯಿಸಿ ಪರಿಶೀಲಿಸಲು ಹೇಳಿ.

ಕಂಪ್ರೆಸರ್ ಪರೀಕ್ಷಿಸಿ
ಕಂಪ್ರೆಸರ್‌ಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಎಸಿಯಿಂದ ಬರುವ ಗಾಳಿಯಲ್ಲಿ ಏರುಪೇರಾಗುತ್ತದೆ. ಸರಿಯಾಗಿ ತಂಪಾದ ಗಾಳಿಯನ್ನು ನೀಡಲು ಎಸಿ ವಿಫಲವಾಗುತ್ತದೆ. ಇನ್ನು ಎಸಿ ಘಟಕದಲ್ಲಿ ಕಂಪ್ರೆಸರ್ ಒಂದು ಪ್ರಮುಖ ಮೆಶಿನ್ ಆಗಿದ್ದು, ಇದನ್ನು ನೀವೇ ರಿಪೇರಿ ಮಾಡಿಕೊಳ್ಳಲು ಮುಂದಾಗಬೇಡಿ. ಬದಲಾಗಿ ಸಂಬಂಧಿಸಿದ ಕಂಪನಿಗೆ ಕರೆ ಮಾಡಿ ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಿ.
ಈ ಮೇಲೆ ತಿಳಿಸಿದ ಪ್ರಮುಖ ವಿಷಯಗಳ ಹೊರತಾಗಿಯೂ ನೀವು ಕೋಣೆಯ ಕಿಟಕಿ ಹಾಗೂ ಬಾಗಿಲುಗಳನ್ನು ಸರಿಯಾಗಿ ಮುಚ್ಚಲಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಮೂಲಕ ನೀವು ಉತ್ತಮವಾದ ತಂಪಾದ ಗಾಳಿಯನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಹೆಚ್ಚಿನ ವಿದ್ಯುತ್ ಖರ್ಚಾಗುವುದಿಲ್ಲ.


Click it and Unblock the Notifications








