ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತುಂಬಾ ಖಾಸಗಿ ವಿಚಾರ ಇದೆಯೇ?: ರಕ್ಷಿಸಲು ಈ ಕೆಲಸ ಮಾಡಿ!
ಸ್ಮಾರ್ಟ್‌ಫೋನ್ ಎನ್ನುವುದು ಬಹುಪಾಲು ಮಂದಿಯ ಖಾಸಗಿ ಮಾಹಿತಿಯನ್ನು ಇರಿಸಿಕೊಳ್ಳುವ ಖಾಸಗಿ ಡಿವೈಸ್ ಆಗಿದೆ. ಈ ಕಾರಣಕ್ಕೆ ಅಷ್ಟೊಂದು ಸುಲಭವಾಗಿ ಯಾರ ಕೈಗೂ ಮೊಬೈಲ್ ಕೊಡುವುದಿಲ್ಲ. ಅದಾಗ್ಯೂ ನಿಮ್ಮ ಬ್ಯಾಂಕಿಂಗ್, ಸ್ಥಳ ಮತ್ತು ಇತರ ವೈಯಕ್ತಿಕ ಮಾಹಿತಿಗೆ ಪ್ರವೇಶ ಪಡೆಯಲು ಸ್ಕ್ಯಾಮರ್‌ಗಳು ಯಾವಾಗಲೂ ಸಜ್ಜಾಗಿರುತ್ತಾರೆ. ಈ ವೇಳೆ ಅಹಿತಕರ ಘಟನೆಗಳು ಜರುಗದಂತೆ ನೀವು ಈ ಕ್ರಮ ತೆಗೆದುಕೊಳ್ಳಬಹುದು.
ಹೌದು, ಸ್ಮಾರ್ಟ್‌ಫೋನ್ ತುಂಬಾ ಸೇಫ್ ಎಂದು ಹೇಳಲು ಸಾಧ್ಯವೇ ಇಲ್ಲ. ನಮಗರಿವಿಲ್ಲದ ಹಾಗೇ ಯಾರ್ಯಾರೋ ಅದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಇದಕ್ಕೆಲ್ಲಾ ಕಾರಣ ಶೀಘ್ರಗತಿಯಲ್ಲಿ ಆಗುತ್ತಿರುವ ತಂತ್ರಜ್ಞಾನ ಬೆಳವಣಿಗೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ತುಂಬಾ ಸೂಕ್ಷ್ಮ ಮಾಹಿತಿಯನ್ನು ಹೊಂದಿರುವುದರಿಂದ ಇದು ಹ್ಯಾಕರ್‌ಗಳಿಗೆ ಅಮೂಲ್ಯವಾದ ವಿಷಯಗಳಾಗಿರುತ್ತವೆ. ಆದರೆ, ನೀವು ಈ ಉತ್ತಮ ಅಭ್ಯಾಸಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

ದುರುದ್ದೇಶಪೂರಿತ ಆಪ್‌ಗಳ ಬಗ್ಗೆ ಇರಲಿ ಎಚ್ಚರ: ಸಾಮಾನ್ಯವಾಗಿ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಆಪ್‌ಗಳಿವೆ.ಆದರೆ, ಇವುಗಳಲ್ಲಿ ಕೆಲವು ಆಪ್‌ಗಳು ಖಂಡಿತಾ ಮಾಲ್‌ವೇರ್‌ನಿಂದ ಕೂಡಿರಲಿವೆ. ಈ ಕಾರಣಕ್ಕೆ ಆಗಾಗ್ಗೆ ಗೂಗಲ್ ಪ್ಲೇ ಸ್ಟೋರ್ ಇವುಗಳನ್ನು ಹೊರದಬ್ಬುವುದು. ಇನ್ನು ಈ ದುರುದ್ದೇಶಪೂರಿತ ಆಪ್‌ಗಳಲ್ಲಿ ಯಾವುದಾದರೂ ಒಂದನ್ನು ಇನ್‌ಸ್ಟಾಲ್ ಮಾಡಿದರೂ ಹ್ಯಾಕರ್‌ಗಳು ನಿಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.
McAfee ವರದಿಯ ಪ್ರಕಾರ ನೀವು ಇಮೇಜ್ ಎಡಿಟರ್‌ಗಳು ಮತ್ತು ಫೋಟೋಗ್ರಫಿ ಆಪ್‌ಗಳು, ವ್ಯಾಪಾರ, ಗೇಮಿಂಗ್ ಸಲಹೆಗಳು ಮತ್ತು ಚೀಟ್ಸ್, ಸಾಮಾಜಿಕ ಮಾಧ್ಯಮ ಟೂಲ್ಸ್‌ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಜೊತೆಗೆ ಚಾಟ್ ಜಿಪಿಟಿ ಆಪ್‌ಗಳು ಅಥವಾ GPT-4 ಎನ್ನುವ ಆಪ್‌ಗಳು ಕಂಡುಬಂದರೆ ಇವುಗಳ ಬಗ್ಗೆಯೂ ಅತ್ಯಂತ ಜಾಗರೂಗರಾಗಿರಬೇಕು. ಯಾಕೆಂದರೆ ಇನ್ನೂ ಸಹ ಓಪನ್ ಎಐ ಆಪ್‌ಗಳನ್ನು ಅಭಿವೃದ್ಧಿಪಡಿಸಿಲ್ಲ.
ಮಾಲ್‌ವೇರ್ ಪತ್ತೆ ಮಾಡುವುದು ಹೇಗೆ?: ನಿಮ್ಮ ಫೋನ್‌ಗೆ ಮಾಲ್‌ವೇರ್‌ನಿಂದ ಸೋಂಕು ತಗುಲಿರುವ ಆಪ್ ಅನ್ನು ನೀವೇನಾದರೂ ಡೌನ್‌ಲೋಡ್ ಮಾಡಿದ್ದರೆ ನಿಮ್ಮ ಫೋನ್ ಹೆಚ್ಚು ಮೊಬೈಲ್ ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತದೆ. ನಿಮ್ಮ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ನಿಮ್ಮ ಮಾಹಿತಿಯನ್ನು ತಿಳಿಯದೆ ಚಂದಾದಾರಿಕೆಗಳನ್ನು ಖರೀದಿಸಲು ಬಳಕೆ ಮಾಡಲಾಗುತ್ತದೆ ಅಥವಾ ನಿಮ್ಮ ಫೋನ್‌ನ ಡಿಸ್‌ಪ್ಲೇನಲ್ಲಿ ನೀವು ಇನ್‌ಸ್ಟಾಲ್ ಮಾಡಿರದ ಆಪ್‌ಗಳು ಕಾಣಿಸಿಕೊಳ್ಳುತ್ತವೆ.

ಸ್ಕ್ಯಾಮರ್ಸ್‌ಗಳಿಂದ ಎಚ್ಚರ: ವಂಚಕರು ಇಮೇಲ್, ಟೆಕ್ಸ್ಟ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ನೇರ ಸಂದೇಶದ ಮೂಲಕ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಅದರಲ್ಲೂ ಸಾಕಷ್ಟು ಜನರು ಇಂತಹುದೇ ಮೆಸೆಜ್‌ನಿಂದ ಮಾರುಹೋಗಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಆದರೆ, ಇದನ್ನು ನೀವು ಅಸಲಿಯೋ ಅಥವಾ ನಕಲಿಯೋ ಎಂದು ಪತ್ತೆ ಮಾಡುವುದು ಅಗತ್ಯ. ಇದಕ್ಕಾಗಿ ಸಂದೇಶದ ವ್ಯಾಕರಣ, ಕಾಗುಣಿತ ಅಥವಾ ಸಿಂಟ್ಯಾಕ್ಸ ಬಗ್ಗೆ ಗಮನಹರಿಸಬೇಕು.
ಅದಾಗ್ಯೂ ಇತ್ತೀಚೆಗೆ ಚಾಟ್‌ಜಿಪಿಟಿಯಂತಹ AI ಟೂಲ್ಸ್‌ಗಳು ಸ್ಕ್ಯಾಮರ್‌ಗಳಿಗೆ ನಿಖರವಾದ ವಂಚನೆಗಳನ್ನು ರೂಪಿಸಲು ಸಹಾಯ ಮಾಡುತ್ತಿವೆ. ಹೀಗಾಗಿ ಇಲ್ಲಿ ಯಾವುದೇ ವ್ಯಾಕರಣ ದೋಷ ಕಂಡುಬರುವುದಿಲ್ಲ. ಇನ್ನು ಸ್ಕ್ಯಾಮರ್‌ಗಳು ನಿಮ್ಮನ್ನು ತುರ್ತಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಪ್ರಯತ್ನಿಸುತ್ತಾರೆ, ಅಪರಿಚಿತ ಸಂಖ್ಯೆಗಳು ಅಥವಾ ಹೆಸರುಗಳಿಂದ ನಿಮ್ಮನ್ನು ಸಂಪರ್ಕಿಸುತ್ತಾರೆ ಜೊತೆಗೆ ವೈಯಕ್ತಿಕ ಮಾಹಿತಿಯನ್ನು ಹಸ್ತಾಂತರಿಸುವಂತೆ ಒತ್ತಡ ಹೇರುತ್ತಾರೆ. ಈ ವೇಳೆ ನೀವು ವಂಚನೆಗೊಳಗಾಗುತ್ತಿರುವಿರಿ ಎಂದು ಕಂಡುಕೊಳ್ಳಬಹುದು.
ಕಿಡ್ಸ್ ಆಪ್‌ಗಳ ಬಗ್ಗೆ ಗಮನಹರಿಸಿ: ದುರುದ್ದೇಶಪೂರಿತ ಮಾಲ್‌ವೇರ್ ಫೋಟೋ ಎಡಿಟಿಂಗ್ ಆಪ್‌ಗಳಲ್ಲಿ ಮಾತ್ರ ಸೀಮಿತವಾಗಿಲ್ಲ. ಮಾಲ್‌ವೇರ್ ಅನ್ನು ಮಕ್ಕಳ ಆಪ್‌ನಲ್ಲಿಯೂ ಇರಿಸಲಾಗುತ್ತದೆ. ಅಷ್ಟೇ ಅಲ್ಲದೆ. ಇನ್‌ಸ್ಟಾಗ್ರಾಮ್, ಯೂಟ್ಯೂಬ್ ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ದುರುದ್ದೇಶಪೂರಿತ ಮಾಲ್‌ವೇರ್ ಅನ್ನು ಪಸರಿಸಲಾಗುತ್ತದೆ ಎಂದು McAfee ವರದಿ ಹೇಳಿದೆ.

ಅದರಲ್ಲೂ ರೋಬ್ಲಾಕ್ಸ್ ಮತ್ತು ಮೈನ್‌ಕ್ರಾಪ್ಟ್ ನಂತಹ ಆಟಗಳಿಗೆ ಚೀಟ್ ಕೋಡ್‌ಗಳು ಅಥವಾ ಗೇಮಿಂಗ್ ಮೋಡ್‌ಗಳನ್ನು ಜಾಹೀರಾತು ಮಾಡುವ ಮೂಲಕ ಈ ಆಪ್‌ಗಳು ಮಕ್ಕಳನ್ನು ಗುರಿಯಾಗಿರಿಸಿಕೊಳ್ಳುತ್ತವೆ. ವಿಷಯ ಏನೆಂದರೆ ವಯಸ್ಕರು ಮಾಡುವ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಮಕ್ಕಳು ಹೊಂದಿಲ್ಲವಾದ್ದರಿಂದ ನಿಮ್ಮ ಮಕ್ಕಳ ಡಿವೈಸ್‌ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದೆ.


Click it and Unblock the Notifications








