ಎಸಿಯಿಂದಾಗಿ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಬರುತ್ತಿದೆಯೇ? ಹಾಗಿದ್ರೆ ಈ ಕೆಲಸ ಮಾಡಿ!
ಈಗಾಗಲೇ ರಾಜ್ಯದಲ್ಲಿ ಅಲ್ಲಲ್ಲಿ ಸುರಿದ ಭಾರೀ ಮಳೆ ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ. ಅದಾಗ್ಯೂ ಮನೆ ಒಳಗೆ ಮಾತ್ರ ಧಗೆ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಫ್ಯಾನ್ ಹಾಗೂ ಎಸಿಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಕೆಲವರಂತೂ ದಿನದ 24 ಗಂಟೆಯೂ ಎಸಿ ಬಳಕೆ ಮಾಡುತ್ತಿದ್ದಾರೆ. ಆದರೆ, ಇದು ನಿಮ್ಮ ವಿದ್ಯುತ್ ಬಿಲ್‌ನ ಬೆಲೆಯಲ್ಲಿ ಏರಿಕೆ ಮಾಡುತ್ತದೆ ಎನ್ನುವುದು ಗಮನಕ್ಕಿರಲಿ.
ಹೌದು, ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಸಹ ಮನೆಯಲ್ಲಿ ಫ್ಯಾನ್ ಅಥವಾ ಎಸಿ ಆನ್ ಮಾಡದೆ ವಾಸ ಮಾಡಲು ಸಾಧ್ಯವೇ ಆಗುವುದಿಲ್ಲ ಎನ್ನುವ ಸ್ಥಿತಿ ಕೆಲವು ಕಡೆ ನಿರ್ಮಾಣ ಆಗಿದೆ. ಅದರಲ್ಲೂ ಮಹಾನಗರಗಳಲ್ಲಿ ಸೆಕೆಗೆ ಜನರು ಬಳಲಿ ಬೆಂಡಾಗಿದ್ದಾರೆ. ಇದರೊಂದಿಗೆ ಅಧಿಕ ಮೊತ್ತದ ವಿದ್ಯುತ್ ದರದ ಬರೆ ಮತ್ತೊಂದು ಕಡೆ. ಈ ನಡುವೆ ನಿಮ್ಮ ಎಸಿ ಯಿಂದಾಗಿ ಬರುವ ಅಧಿಕ ದರದ ಬಿಲ್‌ಗಳನ್ನು ಕಡಿಮೆ ಮಾಡಲು ಈ ಪ್ರಮುಖ ಸಲಹೆಗಳನ್ನು ಅನುಸರಿಸಿ.

ಬಳಕೆಯಲ್ಲಿಲ್ಲದಿದ್ದಾಗ ಎಸಿ ಆಫ್ ಮಾಡಿ: ವಿದ್ಯುತ್ ಉಳಿಸಲು ಮೊದಲು ಮಾಡಬೇಕಾದ ಕೆಲಸ ಏನೆಂದರೆ ಎಸಿ ಬಳಕೆಯಲ್ಲಿಲ್ಲದಿದ್ದಾಗ ಅದನ್ನು ಆಫ್ ಮಾಡುವುದು. ಆದರೆ, ಹೆಚ್ಚಿನ ಜನರು ರಿಮೋಟ್ ಬಳಸಿ ಎಸಿಯನ್ನು ಸರಳವಾಗಿ ಆಫ್ ಮಾಡುತ್ತಾರೆ. ಇದರ ಬದಲಾಗಿ ನೇರವಾಗಿ ಸ್ವಿಚ್‌ನಿಂದ ಆಫ್ ಮಾಡುವುದನ್ನು ರೂಢಿಸಿಕೊಳ್ಳಿ. ನೇರವಾಗಿ ಎಸಿ ಆಫ್ ಮಾಡದೆ ಇದ್ದರೆ ಎಸಿ ಕಾರ್ಯನಿರ್ವಹಿಸದಿದ್ದರೂ ಸಹ ವಿದ್ಯುಚ್ಛಕ್ತಿಯ ವ್ಯರ್ಥಕ್ಕೆ ಕಾರಣವಾಗುತ್ತದೆ.
ಗರಿಷ್ಠ ತಾಪಮಾನ 24 ಡಿಗ್ರಿಗಳಲ್ಲಿ AC ಬಳಸಿ: ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಪ್ರಕಾರ, 24 ಡಿಗ್ರಿ ಮಾನವ ದೇಹಕ್ಕೆ ಸೂಕ್ತವಾದ ತಾಪಮಾನವಾಗಿದ್ದು, ಇನ್ನು ಕಡಿಮೆ ತಾಪಮಾನದ ಸೆಟ್ಟಿಂಗ್‌ಗೆ ಹೊಂದಿಸಿದರೆ ಎಸಿ ಆ ಗುರಿಯನ್ನು ಸಾಧಿಸಲು ಕಡಿಮೆ ಶಕ್ತಿ ತೆಗೆದುಕೊಳ್ಳುತ್ತದೆ. ಆದರೆ, ತಾಪಮಾನವನ್ನು ಕನಿಷ್ಠ ಮಟ್ಟಕ್ಕೆ ಹೊಂದಿಸಿದಾಗ ಅದು ಸುತ್ತಮುತ್ತಲಿನ ಪ್ರದೇಶವನ್ನು ವೇಗವಾಗಿ ತಂಪಾಗಿಸುತ್ತದೆ ಎನ್ನುವುದು ಕೆಲವರ ನಂಬಿಕೆ.
ನಿಯಮಿತವಾಗಿ ಸರ್ವಿಸ್ ಮಾಡಿಸಿ: ಎಸಿಗಳು ಬಳಕೆಯಾಗದಿದ್ದಾಗ ಅದರಲ್ಲಿ ಧೂಳು ಸಂಗ್ರಹವಾಗುತ್ತದೆ. ಇದು ಉತ್ತಮ ಗಾಳಿಯ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಈ ಮೂಲಕ ಹೆಚ್ಚಿನ ವಿದ್ಯುತ್ ಬಳಕೆಯನ್ನು ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಅಥವಾ ಪ್ರತಿ ಋತುವಿನಲ್ಲಿ ಸರ್ವಿಸ್ ಮಾಡಿಸಿ. ಈ ಮೂಲಕ ಉತ್ತಮ ದಕ್ಷತೆಯನ್ನು ನೀವು ಖಚಿತಪಡಿಸಿಕೊಳ್ಳಬಹುದು. ಇದರೊಂದಿಗೆ ತಿಂಗಳ ವಿದ್ಯುತ್ ಬಿಲ್ ಕಡಿಮೆಯಾಗುವಂತೆ ಮಾಡಬಹುದು.

ತಂಪಾದ ಗಾಳಿ ಕೋಣೆಯಿಂದ ಹೊರಹೋಗದಂತೆ ತಡೆಯಿರಿ: ಆಧುನಿಕ ಎಸಿಗಳು ಇನ್ವರ್ಟರ್ ಕಂಪ್ರಸೆರ್ ನೊಂದಿಗೆ ಬರುತ್ತವೆ. ಇವು ವಾತಾವರಣಕ್ಕೆ ತಕ್ಕಂತೆ ಗಾಳಿಯ ಹರಿವನ್ನು ನೀಡುತ್ತವೆ. ಈ ವೇಳೆ ತಂಪಾದ ಗಾಳಿ ಕೊಠಡಿಯಿಂದ ಹೊರಹೋಗುತ್ತಿದ್ದರೆ, ಎಸಿ ನಿಗದಿತ ತಂಪಾದ ಗಾಳಿಯನ್ನು ಸೆಟ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಮೂಲಕ ಹೆಚ್ಚಿನ ವಿದ್ಯುತ್ ಶಕ್ತಿಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತದೆ. ಈ ಕಾರಣಕ್ಕೆ ನಿಮ್ಮ ಕೋಣೆಯ ಎಲ್ಲಾ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ.
ಸೀಲಿಂಗ್ ಫ್ಯಾನ್ ಬಳಸಿ: ಸಾಮಾನ್ಯವಾಗಿ ಎಸಿ ಎಲ್ಲಿದೆಯೋ ಅಲ್ಲಿ ತಂಪಾದ ಗಾಳಿಯ ವಾತಾವರಣವನ್ನು ನಿರ್ಮಾಣ ಮಾಡಬಹುದು. ಆದರೆ, ಅದು ಶೀಘ್ರಗತಿಯಲ್ಲಿ ವ್ಯಾಪಿಸಿಕೊಳ್ಳುವುದಿಲ್ಲ ಈ ವೇಳೆ ನೀವು ಕೋಣೆಯನ್ನು ತಂಪಾಗಿಸುವ ವೇಗವನ್ನು ಹೆಚ್ಚಿಸಲು ಮಧ್ಯಮ ವೇಗದಲ್ಲಿ ಸೀಲಿಂಗ್ ಫ್ಯಾನ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಅಲ್ಪಕಾಲದಲ್ಲಿ ಮಾತ್ರ ಎಸಿ ಬಳಕೆ ಮಾಡಿಕೊಂಡು ಉಳಿದ ಸಮಯ ಸೀಲಿಂಗ್ ಫ್ಯಾನ್ ಬಳಕೆ ಮಾಡುವುದರಿಂದಲೂ ನಿಮ್ಮ ಹಣ ಉಳಿಸಬಹುದಾಗಿದೆ.
ವಿಭಿನ್ನ ಎಸಿ ಮೋಡ್‌ಗಳನ್ನು ಬಳಕೆ ಮಾಡಿ: ಇತ್ತೀಚಿನ ಎಸಿಗಳು ಹಲವು ಮೋಡ್‌ಗಳ ಫೀಚರ್ಸ್ ಅನ್ನು ಹೊಂದಿರುತ್ತವೆ. ಅದರಲ್ಲೂ ಬಳಕೆದಾರರಿಗೆ ಅದರ ಸಾಮರ್ಥ್ಯದ 80%, 60%, 25% ರಷ್ಟು ಎಸಿ ಬಳಕೆ ಮಾಡಿಕೊಳ್ಳಬಹುದಾಗಿದ್ದು. ಈ ವಿಧಾನಗಳನ್ನು ಸದುಪಯೋಗಪಡಿಸಿಕೊಂಡು ನೀವು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ, ಈ ಮೋಡ್‌ಗೆ ಬರುವ ಮುನ್ನ ಎಸಿಯನ್ನು ಸಾಮಾನ್ಯ ಮೋಡ್‌ನಲ್ಲಿ ಸ್ವಲ್ಪ ಸಮಯದವರೆಗೆ ಚಲಾಯಿಸಬೇಕು.
ಸ್ಲೀಪ್ ಟೈಮರ್ ಬಳಸಿ: ರಾತ್ರಿಯಲ್ಲಿ ಎಸಿ ಆಟೋಮ್ಯಾಟಿಕ್ ಆಗಿ ಆಫ್ ಮಾಡಲು ಸ್ಲೀಪ್ ಟೈಮರ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಎಲ್ಲಾ ಎಸಿಗಳು ಇನ್‌ಬಿಲ್ಟ್ ಟೈಮರ್ ಫೀಚರ್ಸ್‌ನೊಂದಿಗೆ ಪ್ಯಾಕ್ ಆಗುತ್ತವೆ. ಈ ಮೂಲಕ ಬಳಕೆದಾರರಿಗೆ ಬೇಕಾದ ಟೈಮರ್ ಹೊಂದಿಸಲು ಸುಲಭವಾಗಿ ಅನುಕೂಲ ಮಾಡಿಕೊಡಲಾಗಿದೆ. ಇದರಿಂದಾಗಿ ರಾತ್ರಿ ಪೂರ್ತಿ ಎಸಿ ಆನ್ ಮಾಡಿಡುವ ಬದಲು ಅಗತ್ಯ ಸಮಯದವರೆಗೆ ಮಾತ್ರ ಕೆಲಸ ಮಾಡುವಂತೆ ಮಾಡಬಹುದು.

ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಬಳಸಿ: ಇತ್ತೀಚೆಗೆ ಲಾಂಚ್ ಆಗುತ್ತಿರುವ ಎಸಿಗಳಲ್ಲಿ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಸೇವೆ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಸಂಪರ್ಕಿತ ಫೀಚರ್ಸ್‌ಗಳನ್ನು ಅನುಕರಿಸುವ ಥರ್ಡ್ ಪಾರ್ಟಿ ವೈ-ಫೈ IR ರಿಮೋಟ್‌ಗಳು ಲಭ್ಯವಿದ್ದು, ಎಸಿ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಟೋಮ್ಯಾಟಿಕ್ ಆಗಿ ಆನ್ ಮಾಡಲು ಹಾಗೂ ಆಫ್ ಮಾಡಲು ಇವುಗಳು ಅತ್ಯಾವಶ್ಯಕ.


Click it and Unblock the Notifications








