UPI Lite: ಪಿನ್ ಎಂಟ್ರಿ ಮಾಡದೆ ಹಣ ಪಾವತಿ ಮಾಡಲು ಈ ಕ್ರಮ ಅನುಸರಿಸಿ
ಇಂದು ನಾವು ನೀವೆಲ್ಲಾ ಡಿಜಿಟಲ್ ವ್ಯವಸ್ಥೆ ಮೂಲಕವೇ ಬಹುಪಾಲು ಹಣದ ವ್ಯವಹಾರ ಮಾಡುತ್ತೇವೆ. ಈ ಸೇವೆ ನೀಡಲೆಂದೇ ಫೋನ್‌ಪೇ, ಗೂಗಲ್ ಪೇ, ಪೇಟಿಎಮ್ ಸೇರಿದಂತೆ ಇನ್ನಿತರೆ ಯುಪಿಐ ಆಧಾರಿತ ಆಪ್‌ಗಳ ಸೇವೆ ಸಲ್ಲಿಸುತ್ತಿದ್ದು, ಈ ನಡುವೆ ಪಿನ್ ಎಂಟ್ರಿ ಮಾಡದೆ ಹಣ ಪಾವತಿ ಮಾಡಬಹುದು.
ಹೌದು, ಡಿಜಿಟಲ್ ಪಾವತಿ ಅನುಭವವನ್ನು ಸುಲಭಗೊಳಿಸುವ ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಯುಪಿಐ ಲೈಟ್ ಬಗ್ಗೆ ಘೋಷಣೆ ಮಾಡಿತ್ತು. ಈ ಫೀಚರ್ಸ್ ಬಳಕೆದಾರರಿಗೆ ತಮ್ಮ ಯುಪಿಐ ಪಿನ್ ಅನ್ನು ನಮೂದಿಸದೆಯೇ ಡಿಜಿಟಲ್ ವ್ಯಾಲೆಟ್‌ನಿಂದ ನೇರವಾಗಿ ವಹಿವಾಟು ನಡೆಸಬಹುದಾಗಿದೆ. ಹಾಗಿದ್ರೆ, ನಿಮ್ಮ ಫೋನ್‌ನಲ್ಲಿ ಹೇಗೆ ಬಳಕೆ ಮಾಡಬಹುದು, ಎಷ್ಟು ಹಣ ಪಾವತಿ ಮಾಡಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪೇಟಿಎಮ್‌ನಿಂದ ಯುಪಿಐ ಲೈಟ್ ಲಾಂಚ್
ಪೇಟಿಎಮ್ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಯುಪಿಐ ಲೈಟ್ ಪಾವತಿಗಳ ಆಯ್ಕೆ ಪ್ರಾರಂಭಿಸಿದ್ದು, ಸಣ್ಣ ಮೌಲ್ಯದ ಯುಪಿಐ ವಹಿವಾಟುಗಳನ್ನು ತ್ವರಿತವಾಗಿ ನಡೆಸಲು ಈ ಮೂಲಕ ಅನುವು ಮಾಡಿಕೊಟ್ಟಿದೆ. ಅದರಲ್ಲೂ ಡಿಜಿಟಲ್ ಪಾವತಿ ಅನುಭವವನ್ನು ಹೆಚ್ಚಿಸಲು ಜನರಿಗೆ ಸಹಾಯ ಮಾಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಲಾಗಿದೆ.
ಯುಪಿಐ ಲೈಟ್ ಎಂದರೇನು?
ಯುಪಿಐ ಲೈಟ್ ಬಳಕೆದಾರರಿಗೆ ಆನ್ ಡಿವೈಸ್ ವ್ಯಾಲೆಟ್ ಬಳಸಿಕೊಂಡು ವಹಿವಾಟು ನಡೆಸಲು ಅನುಮತಿಸುತ್ತದೆ. ಅಂದರೆ, ಇದು ನೇರವಾಗಿ ಲಿಂಕ್ ಮಾಡಲಾದ ಯಾವುದೇ ಬ್ಯಾಂಕ್‌ನಿಂದ ವ್ಯವಹಾರ ನಡೆಸುವ ಮಾರ್ಗವಲ್ಲ. ಯುಪಿಐ ಲೈಟ್ ಬಳಸಿ ವಹಿವಾಟುಗಳನ್ನು ಪ್ರಾರಂಭಿಸಲು ಪೇಟಿಎಂ ವ್ಯಾಲೆಟ್‌ನಲ್ಲಿ ಹಣ ಇರಿಸಿಕೊಂಡಿರಬೇಕು ಎಂಬುದು ನಿಮ್ಮ ಗಮನಕ್ಕಿರಲಿ.
ಎಷ್ಟು ಹಣ ಪಾವತಿ ಮಾಡಬಹುದು?
ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸೆಪ್ಟೆಂಬರ್ 2022 ರಲ್ಲಿ ಈ ಯುಪಿಐ ಲೈಟ್ ಅನ್ನು ಪ್ರಾರಂಭಿಸಿದ್ದು, ಮೇ 2022 ರಲ್ಲಿ ಹೊರಡಿಸಲಾದ ಎನ್‌ಪಿಸಿಐ ಸುತ್ತೋಲೆಯ ಪ್ರಕಾರ ದೇಶಾದ್ಯಂತ ಒಟ್ಟು ಯುಪಿಐ ವಹಿವಾಟಿನಲ್ಲಿ 200 ರೂ. ಗಳು ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಹಣವನ್ನು ಪಾವತಿ ಮಾಡಬಹುದಾಗಿದೆ. ಇದರಿಂದ ಗ್ರಾಹಕರು ಸುಲಭವಾಗಿ ಹಾಗೂ ಶೀಘ್ರವಾಗಿ ತಮ್ಮ ವ್ಯವಹಾರ ನಡೆಸಬಹುದು.

ಯುಪಿಐ ಲೈಟ್‌ಅನ್ನು ಹೇಗೆ ಆಕ್ಟಿವ್ ಮಾಡುವುದು ಎಂಬುದನ್ನು ಸರಳ ಹಂತದ ಮೂಲಕ ನೀಡಲಾಗಿದೆ ನೋಡಿ.
ಹಂತ 1
ಮೊದಲು ನಿಮ್ಮ ಆಂಡ್ರಾಯ್ಡ್ ಅಥವಾ ಆಪಲ್ ಪೋನ್‌ನಲ್ಲಿ ಪೇಟಿಎಮ್ ಆಪ್ ಓಪನ್ ಮಾಡಿ, ನಂತರ ಮೇನ್‌ಪೇಜ್‌ನ ಮೇಲಿನ ಎಡ ಭಾಗದಲ್ಲಿ ಕಂಡು ಬರುವ ಪ್ರೊಫೈಲ್ ಬಟನ್ ಮೇಲೆ ಟ್ಯಾಪ್ ಮಾಡಿ. ಈ ವೇಳೆ ಯುಪಿಐ ಮತ್ತು ಪಾವತಿ ಸೆಟ್ಟಿಂಗ್ ಎಂಬುದನ್ನು ಆಯ್ಕೆ ಮಾಡಿ. ನಂತರ ಇತರೆ ಸೆಟ್ಟಿಂಗ್ ವಿಭಾಗ ಕಾಣಿಸಿಕೊಳ್ಳುತ್ತದೆ. ಅದರ ಅಡಿಯಲ್ಲಿಯೇ ಯುಪಿಐ ಲೈಟ್ ಇರಲಿದೆ ಗಮನಿಸಿ.
ಹಂತ 2
ಇನ್ನು ಯುಪಿಐ ಗೆ ಅಗತ್ಯವಾಗಿರುವ ಬ್ಯಾಂಕ್ ಖಾತೆಯನ್ನು ನೀಡಲಾದ ಲಿಸ್ಟ್ ಮೂಲಕ ಆಯ್ಕೆ ಮಾಡಿ, ಬಳಿಕ ಯುಪಿಐ ಅನ್ನು ಆಕ್ಟಿವ್ ಮಾಡಲು ಹಣವನ್ನು ಅಲ್ಲಿಗೆ ಆಡ್ ಮಾಡಿ. ಇದಾದ ನಂತರ MPIN ಮೂಲಕ ಮೌಲ್ಯೀಕರಿಸಿ. ಇದಾದ ನಂತರದಲ್ಲಿ ನಿಮ್ಮ ಯುಪಿಐ ಲೈಟ್ ಖಾತೆ ರಚನೆ ಪ್ರಕ್ರಿಯೆ ಪೂರ್ಣವಾಗುತ್ತದೆ. ಒಮ್ಮೆ ನಿಮ್ಮ ಖಾತೆಯನ್ನು ರಚಿಸಿದ ನಂತರ ಕೇವಲ ಒಂದೇ ಟ್ಯಾಪ್ ಮೂಲಕ ನೀವು ಪಾವತಿ ಪ್ರಕ್ರಿಯೆ ನಡೆಸಬಹುದು.

ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ಯುಪಿಐ ಲೈಟ್ ಮೂಲಕ ಮಾಡಲಾದ ಯಾವುದೇ ಪಾವತಿಗಳು ನಿಮ್ಮ ಬ್ಯಾಂಕ್ ಪಾಸ್‌ಬುಕ್‌ಗೆ ಎಂಟ್ರಿಯಾಗುವುದಿಲ್ಲ. ಆದರೆ, ಈ ಎಲ್ಲಾ ಮಾಹಿತಿಯೂ ಆಪ್‌ನ ಬ್ಯಾಲೆನ್ಸ್ ಹಿಸ್ಟರಿ ವಿಭಾಗದಲ್ಲಿ ಗೋಚರಿಸುತ್ತವೆ. ಈ ಮೂಲಕವಷ್ಟೇ ನೀವು ಎಲ್ಲೆಲ್ಲಿ ಎಷ್ಟು ಖರ್ಚು ಮಾಡಿದ್ದೀರಾ ಎಂದು ತಿಳಿದುಕೊಳ್ಳಬಹುದು.


Click it and Unblock the Notifications








