HP ಯಿಂದ ಎನ್ವಿ ಮೂವ್ ಆಲ್-ಇನ್-ಒನ್ ಪಿಸಿ ಲಾಂಚ್! ಬೆಲೆಗೆ ತಕ್ಕ ಫೀಚರ್ಸ್..
ಹೆಚ್‌ಪಿ (HP) ಲ್ಯಾಪ್‌ಟಾಪ್ ಮತ್ತು ಪಿಸಿಗಳು ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು, ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ನೀಡುವ ಕೆಲಸ ಮಾಡುತ್ತವೆ. ಅದರಲ್ಲೂ ಹೆಚ್‌ಪಿ ಆಗಾಗ್ಗೆ ವಿಶೇಷ ಅಪ್‌ಗ್ರೇಡ್ ಮೂಲಕ ಹೊಸ ಹೊಸ ಫೀಚರ್ಸ್ ಅನ್ನು ಸಹ ನೀಡುತ್ತಿದೆ. ಅದರಂತೆ ಈಗ ಹೆಚ್‌ಪಿ ಎನ್ವಿ ಮೂವ್ ಆಲ್-ಇನ್-ಒನ್ ಪಿಸಿಯನ್ನು ಲಾಂಚ್ ಮಾಡಿದ್ದು, ಇದು ವಿಶೇಷದಲ್ಲಿ ವಿಶೇಷ ಎನಿಸಿದೆ.
ಹೌದು, ಹೆಚ್‌ಪಿ ಇದೀಗ ಭಾರತದಲ್ಲಿ ಎನ್ವಿ ಮೂವ್ 23.8-ಇಂಚಿನ ಆಲ್-ಇನ್-ಒನ್ (AIO) ಪಿಸಿಯನ್ನು (HP Envy Move all-in-one PC ) ಅನಾವರಣ ಮಾಡಿದೆ. ಈ ಪಿಸಿ ಯಾವುದೇ ಕಾರ್ಯಕ್ಕೂ ಸೈ ಅನ್ನುವಂತಿದ್ದು, ಮನರಂಜನೆ ವಿಷಯದಲ್ಲಂತೂ ಬಳೆಕದಾರರಿಗೆ ಹೊಸ ಲೋಕವನ್ನೇ ಪರಿಚಯಿಸಲಿದೆ. ಈ ಡಿವೈಸ್ 13ನೇ ಜನ್ ಇಂಟೆಲ್ ಕೋರ್ i5 ಪ್ರೊಸೆಸರ್‌ನಲ್ಲಿ ರನ್ ಆಗಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿದುಕೊಳ್ಳಿ.

ಹೆಚ್‌ಪಿ ಎನ್ವಿ ಮೂವ್ ಆಲ್-ಇನ್-ಒನ್ ಪಿಸಿ: ಎನ್ವಿ ಮೂವ್ ಆಲ್-ಇನ್-ಒನ್ ಪಿಸಿಯನ್ನು ಚಲನಶೀಲತೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇದನ್ನು ಸುಲಭವಾಗಿ ಎತ್ತಬಹುದು ಮತ್ತು ಮನೆಯ ಎಲ್ಲೆಂದರಲ್ಲಿ ಇಡಬಹುದಾಗಿದೆ. ಇದಕ್ಕಾಗಿ ವಿಶೇಷ ಹ್ಯಾಂಡಲ್ ಆಯ್ಕೆ ನೀಡಲಾಗಿದೆ. ಜೊತೆಗೆ ಸ್ಥಿರತೆಗಾಗಿ ಆಟೋಮ್ಯಾಟಿಕ್ ಕಿಕ್‌ಸ್ಟ್ಯಾಂಡ್ ಫೂಟ್ ನೀಡಲಾಗಿದೆ. ಉಳಿದಂತೆ ವೈರ್‌ಲೆಸ್ ಕೀಬೋರ್ಡ್‌ಗೆ ಅನುಕೂಲಕರ ಆಯ್ಕೆ ನೀಡಲಾಗಿದೆ. ಅಂದರೆ ರಿಯರ್ ಭಾಗದಲ್ಲಿ ಕೀಬೋರ್ಡ್ ಪಾಕೆಟ್ ಇದೆ.
ಇನ್ನು ಹೆಚ್‌ಪಿ ಎನ್ವಿ ಮೂವ್ ಆಲ್-ಇನ್-ಒನ್ ಪಿಸಿಯು 13ನೇ ಜನ್ ಇಂಟೆಲ್ ಕೋರ್ i5 ಪ್ರೊಸೆಸರ್ ಮತ್ತು ಇಂಟಿಗ್ರೇಟೆಡ್ ಇಂಟೆಲ್ ಯುಹೆಚ್‌ಡಿ ಗ್ರಾಫಿಕ್ಸ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು 4.1kg ತೂಕ ಹೊಂದಿದೆ. ಹಾಗೆಯೇ ಈ ಡಿವೈಸ್ ಕಲಿಕೆ, ಮನರಂಜನೆ, ವಿಡಿಯೋ ಕರೆಗಳು ಮತ್ತು ಇತರೆ ಕೆಲಸದಂತಹ ಚಟುವಟಿಕೆಗಳಿಗೆ ಉತ್ತಮ ಎನಿಸಿದ್ದು, 23.8 ಇಂಚಿನ QHD ಟಚ್ ಡಿಸ್‌ಪ್ಲೇ ವಿಶೇಷ ಅನುಭವ ನೀಡಲಿದೆ. ಅಲ್ಲದೆ ಬಳಕೆದಾರರ ಸೌಕರ್ಯಕ್ಕಾಗಿ ಆಟೋ ಬ್ರೈಟ್‌ನೆಸ್ ಹೊಂದಾಣಿಕೆ ಮತ್ತು ಸ್ಕ್ರೀನ್ ಬ್ಲರ್ರಿಂಗ್ ಫೀಚರ್ಸ್ ಆಯ್ಕೆಯನ್ನು ನೀಡುತ್ತದೆ.

ಇದರೊಂದಿಗೆ ಎಲ್ಲಾ ಸಮಯದ ಬಳಕೆಗಾಗಿ ರೀಚಾರ್ಜಬಲ್ ಬ್ಯಾಟರಿ ಆಯ್ಕೆ ಹೊಂದಿದ್ದು, ಇದರಲ್ಲಿನ ಇಂಟೆಲ್ ಯುನಿಸನ್ ಸುಲಭವಾಗಿ ಫೋನ್‌ನಿಂದ ಲ್ಯಾಪ್‌ಟಾಪ್ ಕನೆಕ್ಟಿವಿಟಿಯನ್ನು ಸಕ್ರಿಯಗೊಳಿಸುತ್ತದೆ. ಇದರೊಂದಿಗೆ ಉತ್ತಮ ಸೌಂಡ್ ಅನುಭವ ಸಹ ಪಡೆಯಬಹುದಾಗಿದೆ ಅಂದರೆ ತಲ್ಲೀನಗೊಳಿಸುವ ದೃಶ್ಯಗಳು ಮತ್ತು ಆಡಿಯೊಗಾಗಿ ಐಮ್ಯಾಕ್ಸ್ ವರ್ಧಿತ ಡಿಸ್‌ಪ್ಲೇ ಆಯ್ಕೆ ನೀಡಲಾಗಿದೆ.
ಇವಿಷ್ಟೇ ಅಲ್ಲದೆ ಹೊಂದಾಣಿಕೆ ಮಾಡಬಹುದಾದ ಹೆಚ್‌ಡಿ ಕ್ಯಾಮೆರಾ ಮತ್ತು ಹೆಚ್‌ಪಿ ಎನ್‌ಹಾನ್ಸ್ ಲೈಟಿಂಗ್ ವಿಡಿಯೋ ಕರೆ ಸೌಲಭ್ಯ ಇದ್ದು, ಇದರಲ್ಲಿನ ಹೆಚ್‌ಪಿ ವೈಡ್ ವಿಷನ್ 5 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಮೀಟಿಂಗ್ ಹಾಗೂ ಇನ್ನಿತರೆ ಕಾರ್ಯಗಳಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಬಹುದಾಗಿದೆ.

ಹಾಗೆಯೇ ಈ ಕ್ಯಾಮರಾಕ್ಕಾಗಿ ಆಟೋಮ್ಯಾಟಿಕ್ ಗೌಪ್ಯತೆ ಶಟರ್ ಅನ್ನು ಸಹ ನೀಡಲಾಗಿದೆ ಮತ್ತು ವಾಕ್ ಅವೇ ಲಾಕ್‌ನಂತಹ ಫೀಚರ್ಸ್ ಅನ್ನು ಇದರಲ್ಲಿ ನೀಡಲಾಗಿದ್ದು. ಬಳಕೆದಾರರು ಪಿಸಿಯಿಂದ ದೂರ ಇದ್ದಾಗ ಆಟೋಮ್ಯಾಟಿಕ್ ಆಗಿ ಡಿಸ್‌ಪ್ಲೇಯನ್ನು ಆಫ್ ಮಾಡುತ್ತದೆ.
ಎನ್ವಿ ಮೂವ್ ಪಿಸಿ ಬೆಲೆ: ಭಾರತದಲ್ಲಿ ಎನ್ವಿ ಮೂವ್ ಪಿಸಿಯನ್ನು ಹೆಚ್‌ಪಿಯ ಸುಸ್ಥಿರತೆಯ ಗುರಿಗಳಿಗೆ ಅನುಗುಣವಾಗಿ 56 ಪ್ರತಿಶತ ಗ್ರಾಹಕ ಮರುಬಳಕೆಯ ಪ್ಲಾಸ್ಟಿಕ್‌ಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಇದನ್ನು ರಿಪೀಟ್ ಗೋಲ್ಡ್ ಮತ್ತು ಎನರ್ಜಿ ಸ್ಟಾರ್‌ನಿಂದ ಪ್ರಮಾಣೀಕರಿಸಲಾಗಿದೆ. ಅದರಂತೆ ಈ ವಿಶೇಷ ಡಿವೈಸ್ 1,24,900 ರೂ.ಗಳ ಬೆಲೆಯೊಂದಿಗೆ ಆರಂಭ ಆಗಲಿದೆ.


Click it and Unblock the Notifications








