ನಿಮ್ಮ ಕಂಪ್ಯೂಟರ್ ವೈರಸ್,ಮಾಲ್‌ವೇರ್‌ನಿಂದ ತೊಂದರೆಗೀಡಾಗಿದೆ ಅನ್ನೋದಕ್ಕೆ ಸೂಚನೆಗಳಿವು!
ಇಂದಿನ ಹಲವಾರು ಕೆಲಸಗಳಿಗೆ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅತ್ಯಗತ್ಯ. ಇದರಲ್ಲಿ ನಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ಇರಿಸಿಕೊಳ್ಳಬಹುದು ಹಾಗೂ ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ಹೀಗಾಗಿ ಕಂಪ್ಯೂಟರ್ ಮಾಡದ ಕೆಲಸವೇ ಇಲ್ಲ ಎನ್ನುವಂತೆ ಅದು ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಇಷ್ಟೆಲ್ಲಾ ಕೆಲಸ ಮಾಡುತ್ತದೆ ಎಂದ ಮೇಲೆ ಇದರಲ್ಲೂ ಹಲವಾರು ಸಮಸ್ಯೆಗಳು ನಿರ್ಮಾಣ ಆಗುತ್ತವೆ ಎಂಬುದು ಸಹ ನಿಮಗೆ ಗೊತ್ತಿರಲಿ.
ಹೌದು, ಮನುಷ್ಯನ ಆರೋಗ್ಯ ಹದಗೆಟ್ಟರೆ ಹೇಗೆ ಅಸ್ವಸ್ಥನಾಗುತ್ತಾನೋ ಅದೇ ರೀತಿ ಕಂಪ್ಯೂಟರ್ ಸಹ. ಕಂಪ್ಯೂಟರ್‌ನಲ್ಲಿರುವ ವೈರಸ್ ದುರುದ್ದೇಶಪೂರಿತ ಪ್ರೋಗ್ರಾಂ ಆಗಿದ್ದು, ಅದು ನಿಮ್ಮ ಕಂಪ್ಯೂಟರ್ ಅನ್ನು ನಿಧಾನಗೊಳಿಸುವುದು, ಫೈಲ್‌ಗಳನ್ನು ಅಳಿಸುವುದು, ವೈಯಕ್ತಿಕ ಮಾಹಿತಿಯನ್ನು ಕದಿಯುವುದು ಮತ್ತು ನಿಮ್ಮ ಕಂಪ್ಯೂಟರ್ ಅನ್ನು ದೂರದಿಂದಲೇ ಯಾರೋ ಕಂಟ್ರೋಲ್ ಮಾಡುವಂತಹ ಹಲವಾರು ಸಮಸ್ಯೆಗಳಿಗೆ ಈಡಾಗುತ್ತದೆ. ಹಾಗಿದ್ರೆ, ಯಾವೆಲ್ಲಾ ಗುಣಲಕ್ಷಣಗಳು ನಿಮ್ಮ ಡಿವೈಸ್ ದೋಷಪೂರಿತವಾಗಿದೆ ಎಂದು ತಿಳಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.

ಕಾರ್ಯಕ್ಷಮತೆ: ಯಾವುದೇ ಡಿವೈಸ್‌ಗಳ ಕಾರ್ಯಕ್ಷಮತೆಗೆ ಅವುಗಳ ಆರೋಗ್ಯ ಸೂಚಕವಾಗಿವೆ. ಕಾರ್ಯಕ್ಷಮತೆ ಸರಿಯಾಗಿ ಇಲ್ಲ ಎಂದು ಕಂಡುಬಂದರೆ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಅಪ್‌ಡೇಟ್‌ನಲ್ಲಿನ ದೋಷವಾಗಿರಬಹುದು ಅಥವಾ ಕೆಲವು ಹಾರ್ಡ್‌ವೇರ್ ತಪ್ಪಾಗಿರಬಹುದು. ಆದಾಗ್ಯೂ, ಸಿಸ್ಟಮ್ ಕೆಲವು ರೀತಿಯ ವೈರಸ್ ಅಥವಾ ಮಾಲ್‌ವೇರ್ ಅನ್ನು ಹೊಂದಿರಲಿದ್ದು, ಸಿಸ್ಟಮ್‌ನ ಕಾರ್ಯವನ್ನು ಅಡ್ಡಿಪಡಿಸಬಹುದು. ಈ ರೀತಿಯಾದಾಗ ಬೂಟ್ ವೇಗ, ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ತೆರೆಯಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಅಸಾಮಾನ್ಯ ನಡವಳಿಕೆ : ಈವರೆಗೂ ಇದ್ದ ಕಂಪ್ಯೂಟರ್‌ನ ನಡವಳಿಕೆ ತಕ್ಷಣಕ್ಕೆ ಬದಲಾದರೆ ಖಂಡಿತಾ ಅದು ಮಾಲ್‌ವೇರ್‌ನಿಂದ ಎಫೆಕ್ಟ್ ಆಗಿದೆ ಎಂದು ನೀವು ಅರಿತುಕೊಳ್ಳಬಹುದು. ಇದರ ಸಾಮಾನ್ಯ ಲಕ್ಷಣ ಎಂದರೆ ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳ್ಳುವುದು, ರೀಸ್ಟಾರ್ಟ್ ಆಗುವುದು ಹಾಗೂ ನೀವು ಯಾವುದೇ ಅಪ್ಲಿಕೇಶನ್ ಅನ್ನು ತೆರೆಯದೇ ಇದ್ದರೂ ಸಹ ತಂತಾನೆ ಓಪನ್ ಆಗುವುದು.
ಅನಗತ್ಯ ಪಾಪ್-ಅಪ್‌ಗಳು ಮತ್ತು ಜಾಹೀರಾತುಗಳು: ವೈರಸ್‌ಗಳು ಮತ್ತು ಮಾಲ್‌ವೇರ್‌ಗಳ ಸಾಮಾನ್ಯ ಮೂಲವೇ ಜಾಹೀರಾತುಗಳು. ಇದಕ್ಕೆ ಕಾರಣ ಅರಿವಿಲ್ಲದೆ ಯಾವುದಾದರೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ ಅದರಲ್ಲಿ ಮಾಲ್‌ವೇರ್ ಸಹ ಸಿಸ್ಟಂಗೆ ಬಂದು ಕೂರಸಬಹುದು. ಆ ವೇಳೆ ಬ್ರೌಸಿಂಗ್ ಮಾಡುವಾಗ ಅನಗತ್ಯ ಜಾಹೀರಾತುಗಳು ಅಥವಾ ಪಾಪ್-ಅಪ್‌ಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಯಾವುದೇ ಕಾರಣವಿಲ್ಲದೆ ಯಾದೃಚ್ಛಿಕ ಜಾಹೀರಾತುಗಳು ಪಾಪ್ ಅಪ್ ಆಗುವುದು ಸಾಮಾನ್ಯವಾಗುತ್ತದೆ.

ಫೈಲ್‌ಗಳು ಕಾಣೆಯಾಗುತ್ತವೆ: ನಾವು ನಮ್ಮ ಅಗತ್ಯ ಮಾಹಿತಿಗಳನ್ನು ಮರು ಬಳಕೆ ಮಾಡುವ ಉದ್ದೇಶದಿಂದ ಡಿವೈಸ್‌ನಲ್ಲಿ ಎಲ್ಲಾದರೂ ಸೇವ್ ಮಾಡಿ ಇಟ್ಟಿರುತ್ತೇವೆ. ಆದರೆ ಮಾಲ್‌ವೇರ್ ಅಥವಾ ವೈರಸ್ ಇವುಗಳ ಮೇಲೂ ಪ್ರಭಾವ ಬೀರಬಹುದು. ನೀವು ಆ ಫೈಲ್‌ಗಳನ್ನು ಮತ್ತೆ ಹುಡುಕಲು ಸಾಧ್ಯವಾಗಲಿಲ್ಲ ಎಂದಾದರೆ ಖಂಡಿತಾ ನಿಮ್ಮ ಡಿವೈಸ್ ತೊಂದರೆಗೆ ಒಳಗಾಗಿದೆ ಎಂದರ್ಥ.
ಸಿಸ್ಟಮ್ ಕ್ರ್ಯಾಶ್‌ಮತ್ತು ದೋಷ ಸಂದೇಶ: ನಿಮ್ಮ ಕಂಪ್ಯೂಟರ್ ಕ್ರ್ಯಾಶ್ ಆಗುತ್ತಿದ್ದರೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚಾಗಿ ದೋಷ ಸಂದೇಶಗಳನ್ನು ತೋರಿಸುತ್ತಿದ್ದರೆ ವೈರಸ್ ಅಥವಾ ಮಾಲ್‌ವೇರ್ ನಿಮ್ಮ ಡಿವೈಸ್ ಮೇಲೆ ಪರಿಣಾಮ ಬೀರುತ್ತಿದೆ ಎಂಬುದರ ಸಂಕೇತ. ಇವು ನಿಮ್ಮ ಕಂಪ್ಯೂಟರ್ ಅಸ್ಥಿರವಾಗುವಂತೆ ಮಾಡುತ್ತವೆ. ಈ ಕಾರಣಕ್ಕಾಗಿಯೇ ಈ ಸಮಸ್ಯೆಗಳು ನಿರ್ಮಾಣ ಆಗುವುದು.
ಫೋಲ್ಡರ್ ಒಳಗೆ ನಕಲಿ ಫೋಲ್ಡರ್: ಈ ವಿಷಯ ಬಹುಪಾಲು ಮಂದಿಗೆ ತಿಳಿದೇ ಇರುತ್ತದೆ. ಜೊತೆಗೆ ಇದನ್ನು ನೀವು ನಿಮ್ಮ ಸಿಸ್ಟಂನಲ್ಲಿ ಗಮನಿಸಿರಬಹುದು. ಕಂಪ್ಯೂಟರ್‌ಗಳಲ್ಲಿ ವೈರಸ್ ಇದ್ದರೆ ಇದು ಸಾಮಾನ್ಯ ಲಕ್ಷಣವಾಗಿದೆ. ಅಷ್ಟೇ ಅಲ್ಲದೆ ಫೋಲ್ಡರ್‌ನಲ್ಲಿ ಇರುವ ದಾಖಲೆಗಳನ್ನು ಸಹ ಇದು ಅಳಿಸಬಹುದು. ಈ ರೀತಿಯ ನಕಲಿ ಫೋಲ್ಡರ್‌ಗಳು ಹೆಚ್ಚಾಗಿ ಕಂಡುಬಂದರೆ ನಿಮ್ಮ ಡಿವೈಸ್ ತೊಂದರೆಗೆ ಒಳಗಾಗಿದೆ ಎಂದರ್ಥ.

ಹೆಚ್ಚಿನ ಇಂಟರ್ನೆಟ್ ಬಳಕೆ: ನಿಮ್ಮ ಡಿವೈಸ್ ಹೆಚ್ಚಿನ ಮಟ್ಟದ ಡೇಟಾವನ್ನು ಹೀರಿಕೊಳ್ಳುತ್ತಿದ್ದರೆ ಸಮಸ್ಯೆಗೆ ಸಿಲುಕಿದೆ ಎಂದರ್ಥ. ಅಂದರೆ ಮಾಲ್ವೇರ್ ಸಾಮಾನ್ಯವಾಗಿ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಫಿಶಿಂಗ್ ದಾಳಿಗಳಿಗೆ ಗುರಿ ಮಾಡಿಕೊಡುತ್ತದೆ. ಜೊತೆಗೆ ಸಂಗ್ರಹಿಸಿದ ಡೇಟಾವನ್ನು ಇಂಟರ್ನೆಟ್ ಮೂಲಕ ಲಿಂಕ್ ಮಾಡಲಾದ ಸರ್ವರ್‌ಗೆ ಕಳುಹಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ನಿಮ್ಮ ಡಿವೈಸ್ ಹೆಚ್ಚು ಇಂಟರ್ನೆಟ್ ಹೀರಿಕೊಳ್ಳುತ್ತದೆ ಎಂದು ತಿಳಿದಿರಲಿ.


Click it and Unblock the Notifications








