ಬೆಂಗಳೂರಲ್ಲಿ ಹೊಸ ಕ್ರಾಂತಿ; ದೇಶದ ಮೊದಲ 3D ಮುದ್ರಿತ ಅಂಚೆ ಕಚೇರಿ ಹೇಗಿದೆ? ನಿರ್ಮಾಣ ಹೇಗಾಯ್ತು?
ಭಾರತದ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷವಾದ ಸಾಧನೆಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲೂ ನಮ್ಮ ಬೆಂಗಳೂರು ಈ ಎಲ್ಲಾ ವಿಶೇಷತೆಗಳಿಗೆ ಸಾಕ್ಷಿ ಆಗುತ್ತಲೇ ಇದೆ. ಈಗ ಮತ್ತೊಂದು ಕ್ರಾಂತಿ ಬೆಂಗಳೂರಿನಿಂದಲೇ ಆರಂಭ ಆಗಿದ್ದು, ಈ ಮೂಲಕ ದೇಶದ ಜನರು ಈ ಕಡೆ ತಿರುಗಿ ನೋಡುವಂತೆ ಮಾಡಲಾಗಿದೆ.
ಹೌದು, ಬೆಂಗಳೂರಿನಲ್ಲಿ ಈಗ ಅನಾವರಣ ಆಗಿರುವ ಹೊಸ ಅಂಚೆ ಕಚೇರಿ ಇತರೆ ಎಲ್ಲಾ ಅಂಚೆ ಕಚೇರಿಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಯಾಕೆಂದರೆ ಇದು ಸಾಮಾನ್ಯ ಕಟ್ಟಡದಂತೆ ಕಂಡರೂ ಸಾಮಾನ್ಯವಾದುದಲ್ಲ. ಬದಲಾಗಿ ಇದು 3D ಪ್ರಿಂಟಿಂಗ್ ತಂತ್ರಜ್ಞಾನ (3D Printing Technology) ಬಳಕೆ ಮಾಡಿ ನಿರ್ಮಾಣ ಮಾಡಲಾದ ದೇಶದ ಮೊದಲ ಅಂಚೆ ಕಚೇರಿ ಇದಾಗಿದೆ. ಹಾಗಿದ್ರೆ, ಏನಿದು 3D ಪ್ರಿಂಟಿಂಗ್ ತಂತ್ರಜ್ಞಾನ?, ಈ ಅಂಚೆ ಕಚೇರಿಯನ್ನು ಹೇಗೆ ನಿರ್ಮಾಣ ಮಾಡಲಾಗಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಟ್ಟಡ ನಿರ್ಮಾಣದಲ್ಲಿ ಹೊಸ ಅಧ್ಯಾಯ ಬರೆದ ಬೆಂಗಳೂರು: 3D ಪ್ರಿಂಟಿಂಗ್ ತಂತ್ರಜ್ಞಾನ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಈ ಮೂಲಕ ಕಟ್ಟಡಗಳನ್ನು ನಿರ್ಮಾಣ ಮಾಡುವ ಕೆಲಸ ಆರಂಭ ಆಗಿದ್ದು, ಆರಂಭದಲ್ಲಿ ಇದನ್ನು ಚೀನಾದಲ್ಲಿ ಬಳಕೆ ಮಾಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅಲೆಗಳನ್ನು ಉಂಟುಮಾಡಲಿದ್ದು, ಭೂಮಿಯಲ್ಲಿ ಮಾತ್ರವಲ್ಲ, ಚಂದ್ರನ ಮೇಲೂ ಸಹ 3D ಪ್ರಿಂಟೆಡ್ ಕಟ್ಟಡ ನಿರ್ಮಿಸಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಅಂದರೆ ಚಂದ್ರನ ಮೇಲೆ 3D ಪ್ರಿಂಟೆಡ್ ಕಟ್ಟಡ (3D printed building) ನಿರ್ಮಿಸಲು ಚೀನಾ ಈಗಾಗಲೇ ಎಲ್ಲಾ ತಯಾರಿ ನಡೆಸುತ್ತಿದೆ. ಈ ನಡುವೆ ಭಾರತದಲ್ಲಿ ಅದರಲ್ಲೂ ಬೆಂಗಳೂರಲ್ಲಿ ನಿರ್ಮಿಸಲಾದ ಮೊದಲ 3D ಮುದ್ರಿತ ಕಟ್ಟಡದ ಶೈಲಿ ಮಾತ್ರ ಎಲ್ಲರ ಗಮನವನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು. ಇದನ್ನು ಐಐಟಿ ಮದ್ರಾಸ್‌ನ ತಾಂತ್ರಿಕ ಬೆಂಬಲದೊಂದಿಗೆ, ಲಾರ್ಸೆನ್ ಮತ್ತು ಟೂಬ್ರೊ ಬೆಂಗಳೂರಿನಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ.
ರೊಬೊಟಿಕ್ ನಿಖರತೆ ಮತ್ತು ಪೂರ್ವ ಎಂಬೆಡೆಡ್ ವಿನ್ಯಾಸಗಳನ್ನು ಬಳಕೆ ಮಾಡಿಕೊಂಡು 43 ದಿನಗಳಲ್ಲಿ ಈ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ ಎಂದು ನಿರ್ಮಾಣದ ಮೇಲ್ವಿಚಾರಣೆಯ ಎಲ್ & ಟಿ ಕಾರ್ಯಾಚರಣೆಯ ಮುಖ್ಯಸ್ಥ ಜಾರ್ಜ್ ಅಬ್ರಹಾಂ ಹೇಳಿದ್ದಾರೆ. ಈ ಅಂಚೆ ಕಚೇರಿ ಕಟ್ಟಡವು 1,021 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಜೊತೆಗೆ ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 23 ಲಕ್ಷ ರೂ. ಖರ್ಚು ಮಾಡಲಾಗಿದೆ. ಅಷ್ಟೇ ಅಲ್ಲ ಕೇವಲ 43 ದಿನಗಳಲ್ಲಿ ಪೂರ್ಣಗೊಂಡಿರುವುದು ವಿಶೇಷವಾದ ಸಂಗತಿ. ಇದೇ ಕಟ್ಟಡವನ್ನು ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಲು ಮುಂದಾಗಿದ್ರೆ ಸುಮಾರು 6-8 ತಿಂಗಳು ಬೇಕಾಗಬೇಕಿತ್ತು. ಉಳಿದಂತೆ 3D ಪ್ರಿಂಟೆಡ್ ತಂತ್ರಜ್ಞಾನದ ಒಂದು ಪ್ರಯೋಜನವೆಂದರೆ ಕಡಿಮೆ ಪರಿಸರ ಹಾನಿಯೊಂದಿಗೆ ನಿರ್ಮಾಣ ಮಾಡಬಹುದಾಗಿದೆ.
ಇಷ್ಟೇ ಅಲ್ಲದೆ ಈ 3D ಪ್ರಿಂಟೆಡ್ ತಂತ್ರಜ್ಞಾನದಿಂದ ಹಲವಾರು ರೀತಿಯ ಅನುಕೂಲಗಳು ಇವೆ. ಯಾಕೆಂದರೆ ಇದನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು, ಕಡಿಮೆ ಶ್ರಮ ಸಾಕು, ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸುವ ಅಗತ್ಯವಿಲ್ಲ, ಸಾಕಷ್ಟು ಸಮಯವನ್ನು ಉಳಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಪರಿಣಾಮ ಈ ನಿರ್ಮಾಣ ವಿಧಾನವು ಮುಂದಿನ ದಿನಗಳಲ್ಲಿ ಭಾರತದಲ್ಲಿ ಕ್ರಾಂತಿಯನ್ನೇ ಸೃಷ್ಟಿ ಮಾಡಲಿದೆ ಎಂದು ನಂಬಲಾಗಿದೆ.
ಬೆಂಗಳೂರಲ್ಲಿ ಎಲ್ಲಿದೆ ಈ ಕಟ್ಟಡ: ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ ಈ 3D ಪ್ರಿಂಟೆಡ್ ತಂತ್ರಜ್ಞಾನ ಬಳಕೆ ಮಡಿ ದೇಶದ ಮೊದಲ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ. ಡ್ಯಾನಿಶ್ ಕಂಪನಿ COBOD ತಯಾರಿಸಿದ BOD2 3D ಪ್ರಿಂಟರ್ ಅನ್ನು ಈ ಕಟ್ಟಡದ ನಿರ್ಮಾಣಕ್ಕೆ ಬಳಕೆ ಮಾಡಲಾಗಿದ್ದು, ಈ ಪ್ರಿಂಟರ್ IP66 ರೇಟಿಂಗ್‌ನೊಂದಿಗೆ ಬರುತ್ತದೆ. ಆದ್ದರಿಂದ, ಈ ಯಂತ್ರವು ಧೂಳಿನ ಮತ್ತು ಆರ್ದ್ರ ವಾತಾವರಣದಲ್ಲಿಯೂ ಸರಾಗವಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ.
ಉಳಿದಂತೆ ಈ ನವೀನ 3D ಪ್ರಿಂಟರ್ ಅನ್ನು ನಿರ್ವಹಿಸಲು ಕೇವಲ ಮೂರು ಅಥವಾ ನಾಲ್ಕು ನಿರ್ವಾಹಕರು ಮಾತ್ರ ಸಾಕು. ಮೊದಲನೆಯದಾಗಿ, 3D ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡದ ನಿರ್ಮಾಣಕ್ಕಾಗಿ ಉದ್ದೇಶಿತ ಕಟ್ಟಡದ ವಿನ್ಯಾಸವನ್ನು ತಯಾರಿಸಲಾಗುತ್ತದೆ. ನಂತರ CAD ಯಂತಹ ತಂತ್ರಾಂಶದ ಸಹಾಯದಿಂದ 3D ಮುದ್ರಣಕ್ಕೆ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಲಾಗುತ್ತದೆ. ಇದಾದ ಬಳಿಕ 3D ಪ್ರಿಂಟರ್ ಅನ್ನು ಸ್ಥಾಪಿಸಲಾಗುತ್ತದೆ.
ಕಟ್ಟಡದ 3D ಕಡತವನ್ನು ಯಂತ್ರಕ್ಕೆ ನೀಡಿದ ಬಳಿಕ ಉಳಿದದ್ದನ್ನು ಪ್ರಿಂಟಿಂಗ್ ಮಷಿನ್ ನಿಭಾಯಿಸುತ್ತದೆ. 3D ಪ್ರಿಂಟರ್‌ನ ಹೊಂದಿಕೊಳ್ಳಬಲ್ಲ ಮಾಡ್ಯುಲರ್ ವಿನ್ಯಾಸವು ಸ್ಕೇಲೆಬಿಲಿಟಿಗೆ ಅನುಮತಿಸುತ್ತದೆ. ದೊಡ್ಡ ಮತ್ತು ಸಣ್ಣ ಯೋಜನೆಗಳಿಗೆ ಯಂತ್ರವನ್ನು ಸೂಕ್ತವಾಗಿ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಹಾಗೆಯೇ ಉಕ್ಕಿನ ನಳಿಕೆಯ ಆಯಾಮಗಳನ್ನು ಕಂಟ್ರೋಲ್ ಮಾಡುವಾಗ ಮುದ್ರಣದ ಸಮಯದಲ್ಲಿ ಗೋಡೆಯನ್ನು ಸುಗಮಗೊಳಿಸಬಹುದು ಅಥವಾ ರಚನೆ ಮಾಡಬಹುದು.
ಈ ರೀತಿಯ 3D ಪ್ರಿಂಟರ್ ತಂತ್ರಜ್ಞಾನ ಸದ್ಯಕ್ಕೆ ಚೀನಾದಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಚೀನಾಕ್ಕೆ ಫ್ಯಾಕ್ಟರಿ ಆಫ್ ದಿ ವರ್ಲ್ಡ್ ಎಂಬ ಬಿರುದನ್ನು ನೀಡಲಾಗಿದೆ. ಭಾರತವು ಉತ್ಪಾದನಾ ಉದ್ಯಮದಲ್ಲಿ ಚೀನಾದೊಂದಿಗೆ ಸ್ಪರ್ಧಿಸಲು ಬಯಸಿದರೆ 3D ಮುದ್ರಣದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಅದರಲ್ಲೂ ದೇಶದ ಸರ್ಕಾರಿ ವಲಯದಲ್ಲಿ ನಡೆಯುತ್ತಿರುವ ಅನೇಕ ಕಾಮಗಾರಿ ನಿರ್ಮಾಣಗಳು ಸಾಕಷ್ಟು ವಿಳಂಬವಾಗುತ್ತವೆ. ಈ ರೀತಿಯ ಸಮಸ್ಯೆಗಳನ್ನು ಎದುರಿಸಲು ಈ ರೀತಿಯ ತಂತ್ರಜ್ಞಾನ ಬಳಕೆ ಮಾಡಬಹುದು.

ಇನ್ನು 3D ಕಾಂಕ್ರೀಟ್ ಮುದ್ರಣದಲ್ಲಿ ಎರಡು ವಿಧಗಳಿವೆ. ಆನ್-ಸೈಟ್ ಮುದ್ರಣವು 3D ಮುದ್ರಣ ಯಂತ್ರವನ್ನು ನಿರ್ಮಾಣ ಸ್ಥಳಕ್ಕೆ ತರುವುದು ಮತ್ತು ಅಗತ್ಯವಿರುವ ಘಟಕಗಳನ್ನು ಮುದ್ರಿಸುವುದನ್ನು ಅದು ಹೊಂದಿರುತ್ತದೆ. ಮತ್ತೊಂದು ಕಟ್ಟಡದ ಘಟಕಗಳನ್ನು ಪ್ರಿಂಟಿಂಗ್ ಯಂತ್ರದ ಸಹಾಯದಿಂದ ಮತ್ತೊಂದು ಸ್ಥಳದಲ್ಲಿ ತಯಾರಿಸಲಾಗುತ್ತದೆ. ಇದು ಆಫ್-ಸೈಟ್ ಮುದ್ರಣವಾಗಿದೆ. ಜಾಗತಿಕ 3D ಮುದ್ರಣ ಮಾರುಕಟ್ಟೆಯು 2023 ರ ಅಂತ್ಯದ ವೇಳೆಗೆ $19.9 ಶತಕೋಟಿಯನ್ನು ತಲುಪಲಿದೆ ಎನ್ನಲಾಗಿದೆ.


Click it and Unblock the Notifications