ಭಾರತ ಸರ್ಕಾರದಿಂದ ಆಪಲ್ ಡಿವೈಸ್ ಬಳಕೆದಾರರಿಗೆ ವಾರ್ನಿಂಗ್!: ಯಾಕೆ ಗೊತ್ತಾ?
ಸ್ಮಾರ್ಟ್ ಡಿವೈಸ್ ಮಾರುಕಟ್ಟೆಯಲ್ಲಿ ಆಪಲ್ ಡಿವೈಸ್‌ಗಳು ಉತ್ತಮ ಸ್ಥಾನ ಪಡೆದಿದ್ದು, ಇವುಗಳ ಕಾರ್ಯಕ್ಷಮತೆ ಹಾಗೂ ಭದ್ರತಾ ವಿಚಾರಕ್ಕೆ ಬಹುಪಾಲು ಮಂದಿ ಮಾರುಹೋಗಿದ್ದಾರೆ. ಆದರೆ, ಯಾರ್ಯಾರು ಆಪಲ್ ಡಿವೈಸ್‌ಗಳನ್ನು ಬಳಕೆ ಮಾಡುತ್ತಿದ್ದಾರೋ ಅವರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ್ದು, ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಹೌದು, ಭಾರತ ಸರ್ಕಾರದ ಸೈಬರ್ ಭದ್ರತಾ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸುವ ರಾಷ್ಟ್ರೀಯ ನೋಡಲ್ ಏಜೆನ್ಸಿಯಾದ CERT-In ದೇಶದ ಆಪಲ್ ಉತ್ಪನ್ನಗಳಿಗೆ ಎಚ್ಚರಿಕೆಗಳನ್ನು ರವಾನಿಸಿದೆ. ಯಾಕೆಂದರೆ, ಬಳಕೆದಾರರ ಮ್ಯಾಕ್ ಪಿಸಿಗಳು, ಆಪಲ್ ವಾಚ್ ಮತ್ತು ಆಪಲ್ ಟಿವಿಗಳ ಸಾಫ್ಟ್ ವೇರ್ ಗಳಲ್ಲಿ ಲೋಪಗಳು ಪತ್ತೆಯಾಗಿವೆ. ಹಾಗಿದ್ರೆ, ಆಪಲ್ ಡಿವೈಸ್‌ಬಳಕೆದಾರರು ತಕ್ಷಣಕ್ಕೆ ಏನು ಮಾಡಬೇಕು?, ಇದರಿಂದ ಸಮಸ್ಯೆ ಏನು ಎಂಬ ವಿವರಕ್ಕಾಗಿ ಈ ಲೇಖನ ಓದಿ.

ಆಪಲ್ ಡಿವೈಸ್ ಬಳಕೆದಾರರಿಗೆ ಯಾಕೆ ಈ ವಾರ್ನಿಂಗ್: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಸಂಬಂಧ ಮಾಹಿತಿ ನೀಡಿದ್ದು, ಅದರಂತೆ ಸಾಫ್ಟ್‌ವೇರ್ ಆವೃತ್ತಿಗಳನ್ನು ತಕ್ಷಣವೇ ಅಪ್‌ಡೇಟ್ ಮಾಡಲು ಸಲಹೆ ನೀಡಿದೆ. ಯಾಕೆಂದರೆ ಆಪಲ್‌ನ ಸ್ವಂತ ಸಫಾರಿ ವೆಬ್ ಬ್ರೌಸರ್‌ನಲ್ಲಿ ದೋಷಗಳನ್ನು ಕಂಡುಕೊಳ್ಳಲಾಗಿದೆ. ಬ್ರೌಸರ್‌ನಲ್ಲಿ ತೆರೆಯಲಾದ ಯಾವುದೇ ಸೂಕ್ಷ್ಮ ವೆಬ್‌ಸೈಟ್ ಮ್ಯಾಕ್ ಡಿವೈಸ್‌ನ ಡೇಟಾಬೇಸ್ ಅನ್ನು ಕದಿಯಬಹುದು ಎನ್ನಲಾಗಿದೆ.
ಆಪಲ್ ವಾಚ್, ಆಪಲ್ ಟಿವಿ, ಪಾಡ್‌ಕ್ಯಾಸ್ಟ್‌ಗಳು, ಸರ್ವಿಸ್, ಶಾರ್ಟ್‌ಕಟ್‌ಗಳು ಮತ್ತು ವೆಬ್ ಕಿಟ್‌ನಂತಹ ಇತರೆ ವಿಭಾಗಗಳಲ್ಲಿ ದೋಷಗಳು ಕಂಡುಬಂದಿದ್ದು, ಈ ಮೂಲಕ ಸೈಬರ್ ದಾಳಿಕೋರರು ಬಳಕೆದಾರರನ್ನು ಗುರಿಯಾಗಿಸಬಹುದು ಎಂದು ತಿಳಿಸಲಾಗಿದೆ. ಈ ಕಾರಣಕ್ಕಾಗಿಯೇ ಡಿವೈಸ್‌ಗಳನ್ನು ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ಗೆ ನವೀಕರಿಸುವ ಮೂಲಕ ಇಂತಹ ಸೈಬರ್ ದಾಳಿಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಲಾಗಿದೆ.
ಹಾಗಿದ್ರೆ, ನಿಮ್ಮ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಲು ನೀವು ಈ ಮಾರ್ಗ ಅನುಸರಿಸಬಹುದು. ಅಂದರೆ ಬಳಕೆದಾರರು ಮೊದಲು ಸಫಾರಿ ಆವೃತ್ತಿಯನ್ನು 16.4 ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಇದಕ್ಕಾಗಿ ಆಪಲ್ ಆಪ್ ಸ್ಟೋರ್‌ನಲ್ಲಿ ಡೆಸ್ಕ್‌ಟಾಪ್ ಆಪ್ ಓಪನ್ ಮಾಡಿ. ನಂತರ ಆಪ್ ಸ್ಟೋರ್ ಟೂಲ್‌ಬಾರ್‌ನಲ್ಲಿ ನವೀಕರಣದ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇದರೊಂದಿಗೆ ಮ್ಯಾಕ್ ಬಳಕೆದಾರರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮ್ಯಾಕ್ ಓಎಸ್‌ನ ಹೊಸ ಆವೃತ್ತಿಗೆ ಅಪ್‌ಗ್ರೇಡ್ ಮಾಡಬೇಕಿದೆ. ಯಾಕೆಂದರೆ ಇದರಲ್ಲಿ ಸ್ಟೋರೇಜ್ ಸಮಸ್ಯೆ, ಅನುಚಿತ ತಪಾಸಣೆಗಳು, ಅಸಮರ್ಪಕ ಇನ್‌ಪುಟ್, ಕರ್ಲ್ ಸಮಸ್ಯೆಗಳು, ಅಸಮರ್ಪಕ ಬೌಂಡ್ ಚೆಕ್‌ಗಳು, ಗೌಪ್ಯತೆ ಸಮಸ್ಯೆ, ಲಾಜಿಕ್ ಸಮಸ್ಯೆ ಸೇರಿದಂತೆ ಇನ್ನೂ ಹೆಚ್ಚಿನ ದೋಷಗಳು ಇದರಲ್ಲಿ ಕಂಡುಬಂದಿವೆ.
ಈ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಆಕ್ರಮಣಕಾರರು ಈ ಮೂಲಕ ನಿಮ್ಮ ಸೂಕ್ಷ್ಮ ಡೇಟಾವನ್ನು ಹೊರತೆಗೆಯಲು ಮುಂದಾಗಲಿದ್ದಾರೆ. ಅದರಂತೆ 13.3 ಕ್ಕಿಂತ ಒಳಗಿನ ಮ್ಯಾಕೋಸ್ ವೆಂಚುರಾ ಆವೃತ್ತಿಗಳಲ್ಲಿ ಇದು ಪರಿಣಾಮ ಬೀರಲಿದೆ. ಹಾಗೆಯೇ 11.7.5 ಕ್ಕಿಂತ ಒಳಗಿನ ಮ್ಯಾಕೋಸ್ ಬಿಗ್ ಸುರ್ ಆವೃತ್ತಿಗಳು ಮತ್ತು 12.6.4 ಒಳಗಿನ ಮ್ಯಾಕೋಸ್ ಮಾಂಟೆರಿ ಆವೃತ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತ ಸರ್ಕಾರ ಉಲ್ಲೇಖಿಸಿದೆ.
ಅದರಂತೆ ಆಪಲ್ ವಾಚ್ ಮತ್ತು ಆಪಲ್ ಟಿವಿಗಳಲ್ಲಿಯೂ ಈ ಸಮಸ್ಯೆ ಉಲ್ಬಣಿಸಿದ್ದು, ಅದರಂತೆ ಆಪಲ್ ಟಿವಿ ಓಎಸ್ ಹಾಗೂ ಆಪಲ್ ವಾಚ್ ಓಎಸ್‌ಅನ್ನು ನವೀಕರಣ ಮಾಡಬೇಕು ಎಂದು ತಿಳಿಸಲಾಗಿದೆ. ಈ ದೋಷಗಳು ಸಹ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಕದಿಯಲು ಅನುಕೂಲ ಮಾಡಿಕೊಡಲಿವೆ ಎಂದು ತಿಳಿಸಲಾಗಿದೆ. ಅದರಲ್ಲೂ 16.4 ಒಳಗಿನ ವಾಚ್‌ಓಎಸ್ ಆವೃತ್ತಿಯಲ್ಲಿ ಹಾಗೂ 9.4 ಒಳಗಿನ ಟಿವಿಒಎಸ್ ಆವೃತ್ತಿಯಲ್ಲಿ ಸಮಸ್ಯೆಗಳು ಕಂಡುಬಂದಿವೆ.

ಸದ್ಯಕ್ಕೆ ಐಫೋನ್‌ನಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಅದಾಗ್ಯೂ ಈ ಐಫೋನ್ ಬಳಕೆದಾರರು ಆಪರೇಟಿಂಗ್ ಸಿಸ್ಟಮ್ ಆವೃತ್ತಿಯನ್ನು iOS 16.4 ಗೆ ಅಪ್‌ಡೇಟ್ ಮಾಡಬಹುದು. ಹಾಗೆಯೇ ಐಪ್ಯಾಡ್ ಬಳಕೆದಾರರು ಐಪ್ಯಾಡ್ ಓಎಸ್ 16.4ಗೆ ಅಪ್‌ಡೇಟ್ ಮಾಡುವುದು ಉತ್ತಮ. ಯಾಕೆಂದರೆ ಮುಂದೆ ಆಗುವ ಸಮಸ್ಯೆಗೆ ಈಗಲೇ ಕಡಿವಾಣ ಹಾಕಬಹುದಾಗಿದೆ.


Click it and Unblock the Notifications








