ಚೀನಾಕ್ಕೆ ದೊಡ್ಡ ಪೆಟ್ಟು ನೀಡಿದ ಭಾರತ, ಇನ್ಮೇಲೆ ಈ ವಸ್ತುಗಳಿಗೆ ನಿರ್ಬಂಧ!
ಟೆಕ್ನಾಲಜಿಯಲ್ಲಿ ಭಾರತ ಇತರೆ ಮುಂಚೂಣಿ ರಾಷ್ಟ್ರಗಳನ್ನು ಹಿಂದಿಕ್ಕುವತ್ತ ದಾಪುಗಾಲು ಹಾಕುತ್ತಿದೆ. ಅದರಂತೆ ಭಾರತ ಇತರೆ ರಾಷ್ಟ್ರಗಳ ಮೇಲೆ ಇರುವ ಅವಲಂಬನೆಯನ್ನು ಕಡಿಮೆ ಮಾಡುತ್ತಾ ಬರುತ್ತಿದೆ. ಅದರಲ್ಲೂ ಚೀನಾಕ್ಕಂತೂ ದೊಡ್ಡ ಹೊಡೆತವನ್ನೇ ನೀಡುತ್ತಾ ಬರುತ್ತಿದೆ. ಈ ನಡುವೆ ಟೆಲಿಕಾಂ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಘೋಷಣೆಯೊಂದನ್ನು ಮಾಡಲಾಗಿದೆ.
ಹೌದು, ಭಾರತೀಯ ಟೆಲಿಕಾಂ ಸಂಸ್ಥೆಗಳು ಚೀನೀ ಮಾರಾಟಗಾರರೊಂದಿಗೆ 5G ಆರ್ಡರ್‌ಗಳನ್ನು ಮಾಡುವುದನ್ನು ನಿರ್ಬಂಧಿಸಲಾಗಿದೆ. ಅದರಲ್ಲೂ ಭದ್ರತಾ ಕಾಳಜಿ ವಿಷಯಕ್ಕೆ ಸಂಬಂಧಿಸಿದಂತೆ ಭವಿಷ್ಯದ ಪೀಳಿಗೆಯ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಚೀನಾದ ಮಾರಾಟಗಾರರ ಯಾವುದೇ ಒಳಗೊಳ್ಳುವಿಕೆಯನ್ನು ಬಯಸುವುದಿಲ್ಲ ಎಂದು ಭಾರತ ಸರ್ಕಾರ ಈ ಹಿಂದೆ ತಿಳಿಸಿತ್ತು. ಹಾಗಿದ್ರೆ, ಏನಿದು ಚೀನಾದ ವಿರುದ್ಧ ಭಾರತದ ಹೊಸ ಅಸ್ತ್ರ, ಭದ್ರತಾ ಕಾರಣ ಹೊರತುಪಡಿಸಿ ಬೇರೆ ಏನಾದರೂ ಕಾರಣ ಇವೆಯೇ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಚೀನಾ ವಿರುದ್ಧ ಸಮರ ಸಾರಿದ ಭಾರತ: ಭಾರತದ ಅಂದಿನಿಂದಲೂ ಚೀನಾದ ವಿರುದ್ಧ ಸ್ಪರ್ಧೆ ಮಾಡುತ್ತಲೇ ಬರುತ್ತಿದೆ. ಅದಾಗ್ಯೂ ಭಾರತದ ಪ್ರತಿ ಮನೆಯಲ್ಲೂ ಒಂದಲ್ಲಾ ಒಂದು ಗ್ಯಾಜೆಟ್ ಚೀನಾಕ್ಕೆ ಸೇರಿದ್ದೆ ಆಗಿರುತ್ತದೆ. ಇದರ ವಿರುದ್ಧ ಸಮರ ಸಾರಿರುವ ಭಾರತದ ಮೇಕ್ ಇನ್ ಇಂಡಿಯಾ ಕ್ರಮವಾಗಿ ಅಗತ್ಯ ವಸ್ತುಗಳನ್ನು ಇಲ್ಲೇ ತಯಾರಿ ಮಾಡುತ್ತಾ ಬರುತ್ತಿದೆ. ಈ ನಡುವೆ ಭಾರತೀಯ ಟೆಲಿಕಾಂ ಆಪರೇಟರ್‌ಗಳು ಚೀನೀ ತಯಾರಕರಾದ ZTE ಮತ್ತು ಹುವಾವೇ ಜೊತೆಗೆ 5G ನೆಟ್‌ವರ್ಕ್ ಸಂಬಂಧದ ವಿಷಯಗಳಿಗೆ ಫುಲ್‌ಸ್ಟಾಪ್ ಇಡಲಿದ್ದಾರೆ.
ಅದಾಗ್ಯೂ ಭಾರತದಲ್ಲಿ ರಿಲಯನ್ಸ್ ಜಿಯೋ ಹೊರತುಪಡಿಸಿದ್ರೆ ಉಳಿದ ಬಹುಪಾಲು ಟೆಲಿಕಾಂಗಳ 4G ನೆಟ್‌ವರ್ಕ್‌ಗಳನ್ನು ಚೀನಾದ ಮಾರಾಟಗಾರರೇ ನಿರ್ಮಿಸಿದ್ದಾರೆ. ಈ ಕಾರಣಕ್ಕಾಗಿಯೇ ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್‌ಗಳನ್ನು ಅಪ್‌ಗ್ರೇಡ್ ಮಾಡಲು ಅವರ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ. ಆದರೆ 5G ವಿಷಯಕ್ಕೆ ಮಾತ್ರ ತಲೆ ಹಾಕಬಾರದಂತೆ ನೋಡಿಕೊಳ್ಳಲಾಗುತ್ತಿದೆ.
ಈ ಸಂಬಂಧ ಇತ್ತೀಚೆಗೆ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯೊಂದನ್ನು ಮಾಡಿದ್ದು, ಭಾರತದ ಟೆಲಿಕಾಂ ಸಂಸ್ಥೆಗಳು ಚೀನೀ ಕಂಪನಿಗಳಿಂದ 5G ಗಾಗಿ ಉಪಕರಣಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದೆ. ಹಾಗಿದ್ರೆ, ಈಗಾಗಲೇ ಬಳಕೆಯಲ್ಲಿರುವ ಜಿಯೋ ಹಾಗೂ ಏರ್‌ಟೆಲ್ ಏನು ಮಾಡುತ್ತಿದೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಈ ಎರಡೂ ಟೆಲಿಕಾಂ ಸಂಸ್ಥೆಗಳು 5G ಅನ್ನು ಹೊರತಂದಿದ್ದರೂ ಸಹ ಯುರೋಪಿಯನ್ ಮಾರಾಟಗಾರರ ಸಹಾಯದಿಂದ ಇದನ್ನು ಸಾಧಿಸಿಕೊಂಡಿವೆ. ಪರಿಣಾಮ ಇದರಲ್ಲಿ ಚೀನಾದ ಯಾವುದೇ ಕಂಪನಿಯು ಭಾಗಿಯಾಗಿಲ್ಲ.
ಇನ್ನು ಕೆಲವು ದಿನಗಳ ಹಿಂದೆ ಭಾರತದ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು, ಅದರಂತೆ ಭದ್ರತಾ ಕಾಳಜಿಯ ಕಾರಣದಿಂದ ಭವಿಷ್ಯದ ಪೀಳಿಗೆಯ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಚೀನಾದ ಮಾರಾಟಗಾರರ ಯಾವುದೇ ಒಳಗೊಳ್ಳುವಿಕೆಯನ್ನು ಬಯಸುವುದಿಲ್ಲ ಸ್ಪಷ್ಟಪಡಿಸಿತ್ತು. ಚೀನೀ ಮಾರಾಟಗಾರರ ಮೇಲಿನ ನಿರ್ಬಂಧವು ಭದ್ರತಾ ಕಾಳಜಿಗಷ್ಟೇ ಸೀಮಿತವಾಗದೆ ದೇಶೀಯ ಟೆಲಿಕಾಂ ಸಂಸ್ಥೆಗಳನ್ನು ಉತ್ತೇಜಿಸುವ ಗುರಿ ಸಹ ಇದೆ ಎಂದು ಹೇಳಲಾಗಿತ್ತು. ಅಂದರೆ ಬಿಎಸ್‌ಎನ್ಎಲ್‌ಗಾಗಿ ಟಿಸಿಎಸ್ ನೇತೃತ್ವದ ಒಕ್ಕೂಟವು ಅಭಿವೃದ್ಧಿಪಡಿಸಿದ 4G ಮತ್ತು 5G ಸ್ಟಾಕ್ ಅನ್ನು ಖಾಸಗಿ ಟೆಲಿಕಾಂಗಳು ಸಹ ಅನ್ವೇಷಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದರಂತೆ ಯಾವುದೇ ಟೆಲಿಕಾಂ ಕಂಪನಿಗಳು ತಮ್ಮ ನೆಟ್‌ವರ್ಕ್‌ಗಳನ್ನು ಅಪ್‌ಗ್ರೇಡ್ ಮಾಡುವಾಗ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನಿಂದ (NSCS) ಅನುಮತಿಯನ್ನು ಪಡೆಯಬೇಕಾಗುತ್ತದೆ. ಅದರಂತೆ ZTE ನೊಂದಿಗೆ 200 ಕೋಟಿ ಮೌಲ್ಯದ ವೊಡಾಫೋನ್ ಐಡಿಯಾದ ನೆಟ್‌ವರ್ಕ್ ಅಪ್‌ಗ್ರೇಡ್ ಆದೇಶಕ್ಕೆ ಅನುಮೋದನೆ ನೀಡಲಾಗಿದ್ದು, ಚೀನಾದ ಸಂಸ್ಥೆ ಆಯ್ದ ವಲಯಗಳಲ್ಲಿ ಟೆಲಿಕಾಂ ಆಪರೇಟರ್‌ನ ಅಸ್ತಿತ್ವದಲ್ಲಿರುವ ನೆಟ್‌ವರ್ಕ್ ಅಪ್‌ಗ್ರೇಡ್‌ಗಳಿಗಾಗಿ ಆಪ್ಟಿಕಲ್ ಟ್ರಾನ್ಸ್‌ಮಿಷನ್ ಟೂಲ್ಸ್‌ಗಳ ಪೂರೈಕೆಯನ್ನಷ್ಟೇ ಮಾಡುತ್ತದೆ.
ಯಾಕೆ ಈ ನಿರ್ಧಾರ?: ಚೀನಾದ ಮೇಲಿನ ಅವಲಂಬನೆ ವಿರುದ್ಧ ಭಾರತ ಸೆಣಸುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಅಂದರೆ ಡಿಸೆಂಬರ್ 2020ರಲ್ಲಿ ಟೆಲಿಕಾಂ ವಲಯದ ರಾಷ್ಟ್ರೀಯ ಭದ್ರತಾ ನಿರ್ದೇಶನದ ಅಡಿಯಲ್ಲಿ ವಿಶ್ವಾಸಾರ್ಹ ಮೂಲ ಮಾನದಂಡಗಳನ್ನು ಪರಿಚಯಿಸಲಾಗಿದ್ದು, ಟೆಲಿಕಾಂ ಕಂಪನಿಗಳು ಮತ್ತು ಟೆಲಿಕಾಂ ಉತ್ಪನ್ನಗಳ ಪರವಾನಗಿ ಆಮದುದಾರರು ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡದ ಗೊತ್ತುಪಡಿಸಿದ ದೇಶಗಳಿಂದ ಮಾತ್ರ ಏನು ಬೇಕಾದರೂ ಖರೀದಿ ಮಾಡಬೇಕು ಎಂದು ತಿಳಿಸಿದೆ.


Click it and Unblock the Notifications








