ಭಾರತೀಯರು ಟಿಕ್‌ಟಾಕ್ ಆಪ್‌ನಲ್ಲಿ ಕಳೆದ ಸಮಯ ಎಷ್ಟು ಗೊತ್ತಾ?
ಸದ್ಯ ವಿಶ್ವದಲ್ಲಿಯೇ ಭಾರೀ ಟ್ರೆಂಡಿಂಗ್‌ನಲ್ಲಿ ಮುನ್ನುಗ್ಗುತ್ತಿರುವ ಟಿಕ್‌ಟಾಕ್ ವಿಡಿಯೊ ಅಪ್ಲಿಕೇಶನ್ ಭಾರತದಲ್ಲಿಯೂ ಅಧಿಕ ಬಳಕೆದಾರರನ್ನು ಹೊಂದಿದೆ. ಬಳಕೆದಾರರಿಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿರುವ ಚೀನಾ ಮೂಲದ ಈ ಕಿರು ವಿಡಿಯೊ ಅಪ್ಲಿಕೇಶನ್ ಎಲ್ಲ ವಯೋಮಾನದವರನ್ನು ಸೆಳೆದಿದೆ. ಪ್ರತಿ ತಿಂಗಳು ತನ್ನ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣುತ್ತಿರುವ ಟಿಕ್‌ಟಾಕ್ ಆಪ್‌ನಲ್ಲಿ ಭಾರತೀಯರು ಎಷ್ಟು ಸಮಯ ವ್ಯಯಸಿದ್ದಾರೆ ಎಂದು ತಿಳಿದರೆ ಖಂಡಿತಾ ಅಚ್ಚರಿಪಡ್ತಿರಾ.

ಹೌದು, ಶಾರ್ಟ್ ವಿಡಿಯೊ ಮೇಕಿಂಗ್ ಆಪ್ ಟಿಕ್‌ಟಾಕ್ ಭಾರತೀಯರನ್ನು ಆಕರ್ಷಿಸಿದ್ದು, ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಪಡೆದಿದೆ. ಕಳೆದ ವರ್ಷ 2019ರಲ್ಲಿ ಭಾರತೀಯ ಟಿಕ್‌ಟಾಕ್ ಬಳಕೆದಾರರು ಒಟ್ಟು ಸುಮಾರು 5.5 ಬಿಲಿಯನ್ ಗಂಟೆಗಳಷ್ಟು ಸಮಯವನ್ನು ಟಿಕ್‌ಟಾಕ್ ಅಪ್ಲಿಕೇಶನ್‌ನಲ್ಲಿ ಕಳೆದಿದ್ದಾರೆ ಎಂದು ಆಪ್ ಅನಾಲಿಟಿಕ್ಸ್ ಸಂಸ್ಥೆ App Annie ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಟಿಕ್‌ಟಾಕ್‌ನಲ್ಲಿ ಕಳೆದ ಸಮಯವೆಷ್ಟು?
ಟಿಕ್‌ಟಾಕ್ ಆಪ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು, ಬಳಕೆದಾರರನ್ನು ಸ್ವಲ್ಪವು ಕದಲದಂತೆ ಮಾಡಿದೆ. ಅದರ ಪರಿಣಾಮವೇ 2019ರಲ್ಲಿ ಭಾರತೀಯ ಟಿಕ್‌ಟಾಕ್ ಬಳಕೆದಾರರು ಒಟ್ಟು 5.5 ಬಿಲಿಯನ್ ಗಂಟೆಗಳಷ್ಟು ಸಮಯ ವ್ಯಯಸಿದ್ದಾರೆ. ಅಂದರೇ ಒಂದು ಅಂದಾಜು ಲೆಕ್ಕಾಚಾರದಲ್ಲಿ ಸುಮಾರು 6 ಲಕ್ಷದ 27 ಸಾವಿರ ವರ್ಷಗಳ ಅವಧಿಯಷ್ಟು ಸಮಯವನ್ನು ಟಿಕ್‌ಟಾಕ್‌ನಲ್ಲಿ ಕಳೆದಿದ್ದಾರೆ ಎನ್ನುವುದನ್ನು App Annie ವರದಿ ತಿಳಿಸಿದೆ.

ಟಿಕ್‌ಟಾಕ್ ವೀಕ್ಷಣೆಯಲ್ಲಿ ಹೆಚ್ಚಳ
ಟಿಕ್‌ಟಾಕ್ ಆಪ್ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗಿದೆ. ಹೀಗಾಗಿ 2018ಕ್ಕೆ ಹೋಲಿಸಿದರೆ 2019ರಲ್ಲಿ ಭಾರತೀಯರು ಟಿಕ್‌ಟಾಕ್ ವೀಕ್ಷಣೆಯ ಸಮಯದಲ್ಲಿ ಆರುಪಟ್ಟು ಹೆಚ್ಚಳ ಕಂಡುಬಂದಿದೆ. 2018ರಲ್ಲಿ ಭಾರತೀಯ ಟಿಕ್‌ಟಾಕ್ ಬಳಕೆದಾರರು 900 ಮಿಲಿಯನ್ ಸಮಯ ಟಿಕ್‌ಟಾಕ್ ತಾಣದಲ್ಲಿ ವ್ಯಯಸಿದ್ದರು. ಹಾಗೆಯೇ ಪ್ರತಿ ತಿಂಗಳಿಂದ ತಿಂಗಳಿಗೆ ಶೇ.90% ರಷ್ಟು ಬಳಕೆದಾರರ ಸಂಖ್ಯೆಯು ಸಹ ಏರಿಕೆಯಾಗಿದೆ.

ಬಳಕೆದಾರರ ಸಂಖ್ಯೆ ಏರಿಕೆ
ಟಿಕ್‌ಟಾಕ್ ಆಪ್ ಭಾರತದಲ್ಲಿ ಸೆಪ್ಟೆಂಬರ್ 2017ರಲ್ಲಿ ಬಿಡುಗಡೆ ಆಗಿದ್ದು, ಬಹುಬೇಗನೆ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ. ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿಯೂ ಸಹ ತ್ರೀವ ಏರಿಕೆ ಕಂಡುಬಂದಿದೆ. 2018ರ ಟಿಕ್‌ಟಾಕ್ ಸಕ್ರಿಯ ಬಳಕೆದಾರರಿಗೆ ಹೋಲಿಸಿದರೇ 2019ರ ಡಿಸೆಂಬರ್ ವೇಳೆಗೆ ಟಿಕ್‌ಟಾಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಶೇ.90% (81 ಮಿಲಿಯನ್) ಏರಿಕೆ ಕಂಡುಬಂದಿದೆ.


Click it and Unblock the Notifications