ಯೂಟ್ಯೂಬ್ ವಿಡಿಯೋ ನೋಡಿ ಈ ಸಾಧನೆ ಮಾಡಿದ ಯುವತಿ; ಆಪಲ್ ಸಿಇಓ ಫಿದಾ!
ಸಾಧನೆ ಮಾಡುವ ಛಲ ಇದ್ದರೆ ಏನು ಬೇಕಾದರೂ ಮಾಡಿ ಇಡೀ ಜಗತ್ತಿಗೆ ಪರಿಚಯವಾಗಬಹುದು ಎಂಬುದಕ್ಕೆ ಈ 20 ರ ಹರೆಯದ ಯುವತಿ ಸಾಕ್ಷಿಯಾಗಿದ್ದಾರೆ. ಇವರು ಕಣ್ಣಿನ ಆರೋಗ್ಯ ಸಂಬಂಧ ಆಪ್ ಅನ್ನು ನಿರ್ಮಾಣ ಮಾಡಿದ್ದು, ಈ ಮೂಲಕ ಆಪಲ್ ಸ್ವಿಫ್ಟ್ ಚಾಲೆಂಜ್ ಅನ್ನು ಗೆದ್ದಿದ್ದಾರೆ.
ಹೌದು, ಇಂದೋರ್‌ನ 20 ವರ್ಷದ ವಿದ್ಯಾರ್ಥಿನಿ ಅಸ್ಮಿ ಜೈನ್ ಎಂಬುವರು ಕಣ್ಣಿನ ಸ್ನಾಯುಗಳನ್ನು ಬಲಪಡಿಸಲು ನಿರ್ಮಾಣ ಮಾಡಿದ ತನ್ನ ಅಪ್ಲಿಕೇಶನ್‌ಗಾಗಿ 375 ಆಪಲ್ ಸ್ವಿಫ್ಟ್ ಚಾಲೆಂಜ್ ವಿಜೇತರಲ್ಲಿ ಒಬ್ಬರಾಗಿದ್ದಾರೆ. ತನ್ನ ಸ್ನೇಹಿತನ ಚಿಕ್ಕಪ್ಪನ ಎಡ ಗಣ್ಣಿನ ಜೋಡಣೆಗೆ ಸಹಾಯ ಮಾಡಲು ರಚಿಸಲಾದ ಈ ಆಪ್ ಟಿಮ್ ಕುಕ್ ಅವರ ಗಮನ ಸೆಳೆದಿದೆ. ಹಾಗಿದ್ರೆ, ಬನ್ನಿ ಈ ಆಪ್ ಹೇಗೆಲ್ಲಾ ಕೆಲಸ ಮಾಡಲಿದೆ?, ಯುವತಿ ಮಾಡಿದ ಸಾಧನೆ ಎಂತಹುದು ಎಂಬ ಬಗ್ಗೆ ತಿಳಿಯೋಣ.

20 ವರ್ಷದ ವಿದ್ಯಾರ್ಥಿನಿಯಿಂದ ಸಾಧನೆ: ಇಂದೋರ್ ವಿದ್ಯಾರ್ಥಿನಿ ಅಸ್ಮಿ ಮೆಡಿ-ಕ್ಯಾಪ್ಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐಟ್ರಾಕ್ ಆಪ್ ಅನ್ನು ರಚಿಸಿದ್ದಾರೆ. ಜೊತೆಗೆ ಇದನ್ನು ನಿರ್ಮಾಣ ಮಾಡಲು ಯೂಟ್ಯೂಬ್ ಸಹಾಯ ತೆಗೆದುಕೊಂಡೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಜಗತ್ತಿನ ಮೇಲೆ ಆಳವಾದ ಪ್ರಭಾವ ಬೀರಲು ಮುಂದಾಗಿದ್ದಾರೆ ಎಂದು ಇವರನ್ನು ಟಿಮ್ ಕುಕ್ ಹಾಡಿ ಹೊಗಳಿದ್ದಾರೆ.
ಇನ್ನು ಪ್ರತಿ ವರ್ಷ ತನ್ನ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) ಭಾಗವಾಗಿ ಆಪಲ್ ಜಗತ್ತಿನಾದ್ಯಂತ ವಿದ್ಯಾರ್ಥಿಗಳಿಗೆ ಸ್ವಿಫ್ಟ್ ಸವಾಲನ್ನು ನೀಡುತ್ತದೆ. ಅದರಲ್ಲಿ ಆಪಲ್‌ನ ಸ್ವಿಫ್ಟ್ ಕೋಡಿಂಗ್ ಭಾಷೆಯನ್ನು ಬಳಸಿಕೊಂಡು ಆಪ್ ಅನ್ನು ರಚಿಸುವುದು. ಅದರಂತೆ ಈ ಇಂದೋರ್‌ನ 20 ವರ್ಷದ ವಿದ್ಯಾರ್ಥಿನಿ ಅಸ್ಮಿ ಜೈನ್ ಕಣ್ಣಿನ ಸ್ನಾಯುಗಳನ್ನು ಬಲಪಡಿಸುವ ತನ್ನ ಆಪ್‌ಗಾಗಿ ಜಗತ್ತಿನ ಗಮನ ಸೆಳೆದಿದ್ದಾಳೆ.

WWDC 2023 ರ ನಂತರದ ವರ್ಚುವಲ್ ಕರೆಯಲ್ಲಿ ಇಂಡಿಯಾ ಟುಡೇ ಟೆಕ್‌ನೊಂದಿಗೆ ಈ ಸಂಬಂಧ ಮಾತನಾಡಿರುವ ಅವರು, ಯೂಟ್ಯೂಬ್ ತನ್ನ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಆಪಲ್ ಸ್ವಿಫ್ಟ್ ಕೋಡಿಂಗ್ ಭಾಷೆಯನ್ನು ಕಲಿಸದ ಕಾರಣ ಯೂಟ್ಯೂಬ್ ನಿಂದ ಹೆಚ್ಚಿನ ಸಹಾಯವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಐಟ್ರ್ಯಾಕ್ (EyeTrack) ಆಪ್ ಬಳಕೆದಾರ ಸ್ನೇಹಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ನಂತರ ಅದನ್ನು ಆಪ್ ಸ್ಟೋರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ನಾನು ಅದನ್ನು ವಿಸ್ತರಿಸಲು ಬಯಸುತ್ತೇನೆ. ಇದರಿಂದಾಗಿ ಕಣ್ಣು ಮಾತ್ರವಲ್ಲದೆ ಮುಖದಲ್ಲಿನ ಎಲ್ಲಾ ಸ್ನಾಯುಗಳನ್ನು ಬಲಪಡಿಸಲು ಆಪ್ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟು ಮಾತ್ರವಲ್ಲ ನನ್ನ ಸ್ನೇಹಿತನ ಚಿಕ್ಕಪ್ಪನಂತಹ ಜನರು ತಮ್ಮದೇ ಆದ ವೇಗದಲ್ಲಿ ಬಳಸಬಹುದಾದ ಚಿಕಿತ್ಸಾ ಡಿವೈಸ್ ಆಗಿ ಇದು ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇನ್ನು ಈ ವಿಭಾಗದ ಸ್ಪರ್ಧಿಗಳಲ್ಲಿ ಮೂರು ಜನರು ಮಾತ್ರ ವಿಜೇತರಾಗಿದ್ದು, ಅದರಲ್ಲಿ ಇಂದೋರ್‌ನ 20 ವರ್ಷದ ಅಸ್ಮಿ ಜೈನ್ ಜೊತೆಗೆ 21 ವರ್ಷದ ಯೆಮಿ ಅಜೆಸಿನ್ ಹಾಗೂ ಮಾರ್ಟಾ 25 ವರ್ಷದ ಮಿಚೆಲ್ ಕ್ಯಾಲಿಯೆಂಡೋ ಸೇರಿದ್ದಾರೆ. ಇವರೂ ಸಹ ಆಪಲ್‌ನ ಸ್ವಿಫ್ಟ್ ಕೋಡಿಂಗ್ ಭಾಷೆಯನ್ನು ಬಳಕೆ ಮಾಡಿಕೊಂಡು ಜಗತ್ತಿನ ಗಮನಸೆಳೆದಿದ್ದಾರೆ.

ಈ ವರ್ಷ ಆಪಲ್ ಸ್ವಿಫ್ಟ್ ಚಾಲೆಂಜ್ ವಿಜೇತರ ಸಂಖ್ಯೆಯನ್ನು 350 ರಿಂದ 375 ಕ್ಕೆ ಹೆಚ್ಚಿಸಲಾಗಿದ್ದು, ವಿದ್ಯಾರ್ಥಿಗಳ ಅಪ್ಲಿಕೇಶನ್ ಪ್ಲೇ ಗ್ರೌಂಡ್ 30 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸುತ್ತದೆ. ಅದರಲ್ಲಿ ಆರೋಗ್ಯ, ಕ್ರೀಡೆ, ಮನರಂಜನೆ ಮತ್ತು ಪರಿಸರದಂತಹ ವಿವಿಧ ವಿಷಯಗಳನ್ನು ಒಳಗೊಂಡಿದೆ ಎಂದು ಆಪಲ್ ತಿಳಿಸಿದೆ.


Click it and Unblock the Notifications








