Kannada AI anchor: ಕರ್ನಾಟಕಕ್ಕೂ ಎಂಟ್ರಿ ಕೊಟ್ರು ಎಐ ಆಂಕರ್‌ಗಳು: ಕನ್ನಡತಿ 'ಸೌಂದರ್ಯ'ಳ ಬಗ್ಗೆ ತಿಳಿಯಿರಿ!
ಎಐ ಆಧಾರಿತ ಸ್ಮಾರ್ಟ್ ಡಿವೈಸ್‌ಗಳ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದು ಒಂದು ಕಡೆ ವರದಾನವಾದರೆ ಮತ್ತೊಂದೆಡೆ ಮಾನವ ಕೆಲಸಗಳನ್ನೂ ಸಹ ಕಿತ್ತುಕೊಳ್ಳುತ್ತಿದೆ ಎನ್ನುವ ಆರೋಪ ಸಹ ಇದೆ. ಈ ನಡುವೆ ಟಿವಿ ವಿಭಾಗಕ್ಕೂ ಎಐ ಆಧಾರಿತ ನ್ಯೂಸ್ ಆಂಕರ್‌ಗಳು ಎಂಟ್ರಿ ನೀಡುತ್ತಿದ್ದು, ಕೆಲವು ದಿನಗಳ ಹಿಂದೆ ಒಡಿಶಾದ ಟಿವಿಯೊಂದು ಎಐ ಆಂಕರ್ ಅನ್ನು ಪರಿಚಯಿಸಿತ್ತು. ಅದರಂತೆ ಈಗ ಕರ್ನಾಟಕದಲ್ಲೂ ಈ ಎಐ ಆಂಕರ್‌ಗಳು ಭಾರೀ ಸದ್ದು ಮಾಡುತ್ತಿದ್ದಾರೆ.
ಹೌದು, ಚಾಟ್‌ಜಿಪಿಟಿ ಅಭಿವೃದ್ಧಿ ಆಗುತ್ತಿದ್ದಂತೆ ಇದನ್ನು ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಲು ಕಂಪೆನಿಗಳು ದಾಪುಗಾಲು ಇಡುತ್ತಿವೆ. ಅದರಂತೆ ಈಗ ದೂರದರ್ಶನದಲ್ಲಿ ಸುದ್ದಿ ವಾಚನ ಮಾಡಲು ಎಐ ಆಂಕರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ವಿದೇಶದಲ್ಲಿ ಈ ವಿಶೇಷತೆ ಇತ್ತು. ಆದರೆ, ಈಗ ಭಾರತಕ್ಕೂ ಕಾಲಿಟ್ಟಿದ್ದು, ಲೇಟಾದರೂ ಲೇಟೆಸ್ಟ್ ಆಗಿ ಕನ್ನಡದ ಟಿವಿಗಳನ್ನು ಎಐ ಆಂಕರ್‌ಗಳು ಆಕ್ರಮಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ, ಕರ್ನಾಟಕದಲ್ಲಿ ಯಾವ ಟಿವಿಗಳು ಈ ಎಐ ಆಂಕರ್‌ಗಳನ್ನು ಪರಿಚಯಿಸಿದೆ ಎಂಬುದನ್ನು ನೋಡೋಣ ಬನ್ನಿ.

ಕರ್ನಾಟಕದ ದೂರದರ್ಶನಗಳಲ್ಲಿ ಒಂದಾದ ಪವರ್ ಟಿವಿ ಈಗ ಹೊಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಂಕರ್ (Kannada AI Anchor) ಅನ್ನು ಪರಿಚಯಿಸಿದೆ. ಈಕೆಯ ಹೆಸರು ಸೌಂದರ್ಯ. ಈ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಐ ಆಂಕರ್ ಅನ್ನು ಪರಿಚಯಿಸಿದ ಕೀರ್ತಿಯನ್ನು ಪವರ್ ಟಿವಿ ಪಡೆದುಕೊಂಡಿದೆ. ಈ ಆಂಕರ್ ಟಿವಿಯಲ್ಲಿ ಕಾಣಿಸಿಕೊಂಡಿದ್ದು, 'ನಮಸ್ಕಾರ ಕನ್ನಡಿಗರೇ ನಾನು ಸೌಂದರ್ಯ, ಕನ್ನಡದ ಮೊದಲ ಎಐ ಆಂಕರ್' ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಈ ಸೌಂದರ್ಯ ಆರಂಭದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಮಾಧ್ಯಮ ಕ್ಷೇತ್ರದ ವಿಷಯಗಳ ಕುರಿತು ಕೆಲವು ಮಾತುಗಳನ್ನು ಆಡಿದ್ದಾಳೆ. ಈ ವೇಳೆ ಅಂದರೆ ಸುದ್ದಿಯನ್ನು ಓದುವ ಸಂದರ್ಭದಲ್ಲಿ ಈಕೆಯ ಹಾವಭಾವಗಳು ನಿಜಕ್ಕೂ ಈಕೆ ನಿಜವಾದ ನ್ಯೂಸ್ ಆಂಕರ್ ಎನಿಸುವಂತೆ ಇದೆಯಾದರೂ ಸ್ವಲ್ಪ ಯಾಂತ್ರಿಕತೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಈಗಾಗಲೇ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡಿರುವ ನ್ಯೂಸ್ ಆಂಕರ್‌ಗಳ ಶೈಲಿಯನ್ನೇ ಈಕೆ ಹೊಂದಿದ್ದಾಳೆ.
ಈ ಸಂಬಂಧ ಪವರ್‌ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಚಂದನ್ ಶರ್ಮಾ ಅವರು ಗಿಜ್‌ಬಾಟ್‌ನೊಂದಿಗೆ ಮಾತನಾಡಿ, ಇದೊಂದು ಪ್ರಯತ್ನವಾಗಿದೆ. ಸಂಪೂರ್ಣ ಎಐ ತಂತ್ರಜ್ಞಾನ ಆಧರಿತ ಆಂಕರ್‌ಗಳನ್ನು ನಾವು ಮುಂದಿನ ದಿನಗಳಲ್ಲಿ ನೋಡಬಹುದು. ಈಕೆಗೆ ಧ್ವನಿಯನ್ನು ನಮ್ಮ ಮಾನವ ಆಂಕರ್‌ಗಳೇ ನೀಡಿದ್ದಾರೆ. ಅದರಲ್ಲೂ ಇತರೆ ರಾಜ್ಯಗಳಲ್ಲಿ ಈ ಎಐ ಆಧಾರಿತ ಆಂಕರ್‌ಗಳು ಸಂಚಲನವನ್ನೇ ಉಂಟು ಮಾಡುತ್ತಿದ್ದರು. ಅದರಂತೆ ಈಗ ಕರ್ನಾಟಕದಲ್ಲಿ ಹಾಗೂ ಕನ್ನಡದ ಮೊದಲ ಆಂಕರ್ ಆಗಿ ಸೌಂದರ್ಯ ನಿತ್ಯ ಬೆಳಗ್ಗೆ ಸುದ್ದಿ ವಾಚನ ಮಾಡಲಿದ್ದಾಳೆ ಎಂದು ತಿಳಿಸಿದ್ದಾರೆ.
ಈಕೆಯನ್ನು ನಿರ್ಮಾಣ ಮಾಡಲು ಚಾಟ್‌ಜಿಪಿಟಿ ಜತೆಗೆ ಡೀಪ್‌ಬ್ರೇನ್ ಎಐ ಸ್ಟುಡಿಯೋ ಎಐ ಅವತಾರ್ ವಿಡಿಯೋ ಜನರೇಷನ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಈ ಎಐ ಆಂಕರ್ ಅನ್ನು ಇನ್ನಷ್ಟು ಸುಧಾರಣೆ ಮಾಡಲಾಗುವುದು ಎಂದು ಟಿವಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಈ ನಡುವೆ ಭಾರತದಲ್ಲಿ ಈ ಎಐ ಆಂಕರ್‌ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಮುಖ ಟಿವಿಗಳು ಮೊದಲಿಗರಾಗಲು ಪ್ರಯತ್ನ ಮಾಡುತ್ತಿವೆ.
ಅದರಂತೆ ಕನ್ನಡದ ಮತ್ತೊಂದು ಸುದ್ದಿ ಪ್ರಸಾರ ಮಾಡುವ ಟಿವಿಯಾಗಿರುವ ನ್ಯೂಸ್ ಫಸ್ಟ್ ಸಹ ಹೊಸ ಎಐ ಆಂಕರ್ ಅನ್ನು ಪರಿಚಯಿಸಿದೆ. ಈಕೆ ಸಹ 'ಕರ್ನಾಟಕದ ಜನತೆಗೆ ನನ್ನ ವಿನಮ್ರ ನಮಸ್ಕಾರಗಳು, ನಾನು ಮಾಯಾ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮೂಲಕ ಕ್ರಿಯೇಟ್ ಮಾಡಿರುವ ದಕ್ಷಿಣ ಭಾರತದ ಮೊದಲ ಕನ್ನಡ ಆಂಕರ್' ಎಂದು ಹೇಳಿಕೊಂಡಿದ್ದಾಳೆ. ಜೊತೆಗೆ ಈ ವೇಳೆ ನಿಜವಾದ ಸುದ್ದಿ ನಿರೂಪಕರೊಂದಿಗೆ ಕೆಲಕಾಲ ಸಂವಹನ ಸಹ ನಡೆಸಿದ್ದಾಳೆ.
ಈ ಮಾಯಾ ಮಾಡ್ರೆನ್ ಆಗಿ ಕಾಣಿಸಿಕೊಂಡಿದ್ದು, ವಿದೇಶಿ ಯುವತಿಯ ಮುಖ ಶೈಲಿಯನ್ನು ಪಡೆದುಕೊಂಡಿದ್ದಾಳೆ. ಆದರೆ, ಇದು ಪ್ರಾಯೋಗಿಕ ಪರೀಕ್ಷೆ ಆಗಿದ್ದು, ಮುಂದಿನ ದಿನಗಳಲ್ಲಿ ಈಕೆ ಸಂಪೂರ್ಣವಾಗಿ ಸುದ್ದಿ ವಾಚಕಿಯಾಗಲಿದ್ದಾಳೆ ಎಂದು ಹೇಳಲಾಗುತ್ತಿದೆ. ಏನೇ ಇರಲಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಎಐ ಆಂಕರ್‌ಗಳು ಮುಂದೆ ಮಾಧ್ಯಮ ಲೋಕದಲ್ಲಿ ಯಾವ ರೀತಿಯ ಸ್ಥಾನ ಪಡೆಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications








