ಬರೋಬ್ಬರಿ 400 ಅಡಿ ಆಳದ ಕಮರಿಗೆ ಬಿದ್ದ ಕಾರು, ಪ್ರಯಾಣಿಕನ ಪ್ರಾಣ ಉಳಿಸಿದ iPhone 14!
ಸ್ಮಾರ್ಟ್‌ಫೋನ್‌ಗಳು(Smartphone) ಇಂದು ಎಲ್ಲಾ ವಿಭಾಗದಲ್ಲೂ ಅಗತ್ಯ ಸೇವೆಗಳನ್ನು ನೀಡುತ್ತಾ ಬರುತ್ತಿದ್ದು, ಈ ಮೂಲಕ ಬಳಕೆದಾರರು ಭಿನ್ನ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಆಪಲ್ ಡಿವೈಸ್‌ಗಳು ಮನುಷ್ಯರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಭಾಗವಾಗಿಯೇ ಐಫೋನ್ 14 (iPhone 14) ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ಹೌದು, ತಂತ್ರಜ್ಞಾನದ ಬೆಳವಣಿಗೆಯು ಮಾನವರ ಜೀವನವನ್ನು ಸುಲಭಗೊಳಿಸುವುದಲ್ಲದೆ ಅವರ ಜೀವವನ್ನೂ ಸಹ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬರುತ್ತಿವೆ. ಅದರಂತೆ ಆಪಲ್ ವಾಚ್‌ಗಳು ಹಾಗೂ ಫೋನ್‌ಗಳು ಈಗಾಗಲೇ ಸಾಕಷ್ಟು ಜೀವಗಳನ್ನು ಉಳಿಸಿದ್ದು, ಇದರ ನಡುವೆ ಇತ್ತೀಚಿಗೆ ಲಾಂಚ್ ಆಗಿರುವ ಐಫೋನ್14 ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದೆ. ಹಾಗಿದ್ರೆ, ಬನ್ನಿ ಈ ಐಫೋನ್ ಹೇಗೆಲ್ಲಾ ಸಹಾಯ ಮಾಡಿದೆ ಎಂಬುದನ್ನು ತಿಳಿಯೋಣ.

ಕಾರು ಪ್ರಯಾಣಿಕನ ಪ್ರಾಣ ಉಳಿಸಿದ ಐಫೋನ್ 14: ಇತ್ತೀಚೆಗೆ ಲಾಂಚ್ ಆಗುತ್ತಿರುವ ಐಫೋನ್‌ಗಳಲ್ಲಿ ವಿಶೇಷವಾದ ಫೀಚರ್ಸ್ ಆಯ್ಕೆ ನೀಡಲಾಗುತ್ತಿದ್ದು, ಇವು ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಿವೆ. ಅದರಂತೆ ಶುಕ್ರವಾರ ತಡರಾತ್ರಿ ಲಾಸ್ ಏಂಜಲೀಸ್(Los Angeles) ಬಳಿ ಸಂಭವಿಸಿದ ಭಾರಿ ಅಪಘಾತದಿಂದ ಐಫೋನ್ 14 ವ್ಯಕ್ತಿಯ ಜೀವವನ್ನು ಆಶ್ಚರ್ಯಕರವಾಗಿ ಉಳಿಸಿದೆ. ಮೌಂಟ್ ವಿಲ್ಸನ್ ಪ್ರದೇಶದಲ್ಲಿ ಕಾರು ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ 400 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರು.
ಅನಿರೀಕ್ಷಿತವಾಗಿ ನಡೆಯುವ ಈ ಘಟನೆಗಳು ತಕ್ಷಣಕ್ಕೆ ಸುತ್ತಮುತ್ತಲ ಜನರಿಗೆ ತಿಳಿಯುವುದಿಲ್ಲ. ಅದರಂತೆ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ತುರ್ತು ಚಿಕಿತ್ಸೆ ಸಹ ಲಭ್ಯ ಆಗುವುದಿಲ್ಲ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ರಕ್ತ ಸ್ರಾವವಾಗಿ ಸಾವಿಗೀಡಾದ ಅದೆಷ್ಟೋ ಘಟನೆಗಳು ನಮ್ಮ ದೇಶದಲ್ಲಿ ವರದಿಯಾಗಿವೆ. ಅಂತೆಯೇ ಈ ಐಫೋನ್ 14 ಇಲ್ಲದಿದ್ದರೆ ಈ ಕಾರ್ ಪ್ರಯಾಣಿಕನಿಗೂ ಇದೇ ಗತಿ ಬರುತ್ತಿತ್ತು.
ಐಫೋನ್ ಮಾಡಿದ ಸಹಾಯ ಏನು?: ಈ ಐಫೋನ್ 14 ಹಲವಾರು ಫೀಚರ್ಸ್‌ಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್(Crash detection features) ಮತ್ತು ತುರ್ತು ಉಪಗ್ರಹ SOS (Emergency Satellite SOS) ಆಯ್ಕೆಯನ್ನು ಪಡೆದುಕೊಂಡಿದೆ. ಕ್ರ್ಯಾಶ್ ಡಿಟೆಕ್ಷನ್ ಫೀಚರ್ಸ್ ವಾಹನ ಅಪಘಾತಗಳನ್ನು ಪತ್ತೆಹಚ್ಚುವ ಮತ್ತು ಸಹಾಯವನ್ನು ವಿನಂತಿಸಲು ತುರ್ತು ಸಂಖ್ಯೆಗೆ ಮೆಸೆಜ್ ಮಾಡುವ ಫೀಚರ್ಸ್ ಆಗಿದೆ.
ಅದರಂತೆ ಐಫೋನ್‌ನಲ್ಲಿರುವ ಕ್ರ್ಯಾಶ್ ಡಿಟೆಕ್ಷನ್ ಮೋಡ್ ಅಪಘಾತ ಸಂಭವಿಸಿದ ತಕ್ಷಣ ಅದನ್ನು ಪತ್ತೆ ಮಾಡಿದೆ. ಈ ವೈಶಿಷ್ಟ್ಯವು ಅಕ್ಸೆಲೆರೊಮೀಟರ್ ಮತ್ತು ಗೈರೊಸ್ಕೋಪ್ ಮತ್ತು ಸುಧಾರಿತ ಮೋಷನ್ ಡಿಟೆಕ್ಷನ್ ಅಲ್ಗಾರಿದಮ್‌ಗಳಂತಹ ಸೆನ್ಸರ್‌ಗಳನ್ನು ಬಳಕೆ ಮಾಡಿಕೊಂಡು ಕೆಲಸ ಮಾಡುತ್ತದೆ. ಅಪಘಾತ ಉಂಟಾದಾಗ ಫೋನ್ 10 ಸೆಕೆಂಡುಗಳ ಕಾಲ 10 ರಿಂದ 1 ರವರೆಗೆ ಎಣಿಕೆಯನ್ನು ಪ್ರಾರಂಭಿಸುತ್ತದೆ. ಆ ವೇಳೆ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲವಾದರೆ ತಾನೇ ಮುಂದಿನ ಕಾರ್ಯ ಮಾಡಲು ಆರಂಭಿಸುತ್ತದೆ.
ಫೋನ್ ಬಳಕೆದಾರರು ಅಪಘಾತಕ್ಕೆ ಈಡಾಗಿಲ್ಲ ಎಂದರೆ ಹತ್ತು ಸೆಕೆಂಡ್‌ನ ಕೌಂಟ್‌ಡೌನ್ ಅನ್ನು ಆಫ್ ಮಾಡಬೇಕು. ಇದನ್ನು ಆಫ್ ಮಾಡಿಲ್ಲ ಎಂದರೆ ಏನೋ ಜರುಗಿದೆ ಎಂದು ಅರ್ಥೈಸಿಕೊಳ್ಳುವ ಫೋನ್ ತುರ್ತು ಮೆಸೆಜ್ ಅನ್ನು ಈಗಾಗಲೇ ಸೆಟ್ ಮಾಡಲಾದ ಸಂಖ್ಯೆಗೆ ಕಳುಹಿಸುತ್ತದೆ. ಅದರೊಂದಿಗೆ ಅಪಘಾತ ನಡೆದ ಸ್ಥಳವನ್ನೂ ಸೆಂಡ್ ಮಾಡುತ್ತದೆ. ಪರಿಣಾಮ ಯಾವುದೇ ವಿಳಂಬ ಇಲ್ಲದೆ ರಕ್ಷಣಾ ಕಾರ್ಯಾಚರಣೆ ಮಾಡಲು ಸಹಾಯ ಮಾಡಲಿದೆ.
ಇನ್ನು ಇದೇ ಕೆಲಸವನ್ನು ಈ ಘಟನೆಯಲ್ಲಿ ಐಫೋನ್ ಮಾಡಿದೆ. ಅಷ್ಟು ಮಾತ್ರವಲ್ಲದೆ ಇದೇ ವೇಳೆ ಐಫೋನ್‌ನ ಮತ್ತೊಂದು ಫೀಚರ್ಸ್ ಆಗಿರುವ ಸ್ಯಾಟಲೈಟ್ ಎಸ್‌ಒಎಸ್ ಸೇವೆಯಂತೂ ಪ್ರಮುಖವಾಗಿ ಬಳಕೆಗೆ ಬಂದಿದೆ. ಅಂದರೆ ತುರ್ತು ಪ್ರತಿಕ್ರಿಯೆಗಾಗಿ ಮೊಬೈಲ್ ಕವರೇಜ್ ಇಲ್ಲದಿರುವ ಸ್ಥಳದಲ್ಲೂ ಇದು ಕೆಲಸ ಮಾಡುತ್ತದೆ. ಇದರಿಂದಾಗಿ ರಕ್ಷಕರೂ ಎಂತಹುದೇ ಪ್ರದೇಶವಾದರೂ ಕರಾರುವಕ್ಕಾಗಿ ಅಲ್ಲಿಗೆ ತಲುಪಲು ಸಾಧ್ಯವಾಗುತ್ತದೆ.
ಈ ಘಟನೆಯಲ್ಲಿ ಕಾರು ಬಿದ್ದ ಪ್ರದೇಶದಲ್ಲಿ ಯಾವುದೇ ಸೆಲ್ಯುಲಾರ್ ಹಾಗೂ ವೈ-ಫೈ ಕವರೇಜ್ ಇರಲಿಲ್ಲ. ಪರಿಣಾಮ ಮೆಸೆಜ್‌ಗಳನ್ನು ಕಳುಹಿಸಲು ಐಫೋನ್ ಉಪಗ್ರಹವನ್ನು(satellite) ಬಳಕೆ ಮಾಡಿಕೊಂಡಿದೆ. ಈ ಮೆಸೆಜ್‌ನಲ್ಲಿ ಸ್ಥಳವು ನಿಖರವಾಗಿ ಇದ್ದುದರಿಂದ, ರಕ್ಷಣಾ ಕಾರ್ಯಕರ್ತರು ತ್ವರಿತವಾಗಿ ಅದು ಯಾವ ಸ್ಥಳ ಎಂದು ಅರ್ಥಮಾಡಿಕೊಳ್ಳಲು ಮತ್ತು ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗಿದೆ.
ಇದಾದ ನಂತರದಲ್ಲಿ ತಂಡವು ಅಪಘಾತದ ಸ್ಥಳಕ್ಕೆ ತಲುಪಿ ನಜ್ಜುಗುಜ್ಜಾಗಿದ್ದ ಕಾರಿನಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದೆ. ಅದು ಕಣಿವೆ ಆಗಿದ್ದರಿಂದ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಈ ವೇಳೆ ಮಾಂಟ್ರೋಸ್ ಸರ್ಚ್ ತಂಡದ ಅಂದರೆ ರಕ್ಷಣಾ ತಂಡದ ಮುಖ್ಯಸ್ಥ ಸ್ಟೀವ್ ಗೋಲ್ಡ್ಸ್ವರ್ಥಿ ಪ್ರತಿಕ್ರಿಯೆ ನೀಡಿ, ಐಫೋನ್ ಇಲ್ಲದಿದ್ದರೆ ಅವರನ್ನು ಪತ್ತೆ ಮಾಡುವುದು ಅಸಾಧ್ಯವಾದ ಕೆಲಸ ಎಂದು ಹೇಳಿದ್ದಾರೆ.


Click it and Unblock the Notifications








