'ಭಾರತೀಯ ಅಂಚೆ ಇಲಾಖೆಯಿಂದ ಐಫೋನ್ 15 ಗಿಫ್ಟ್, ಈ ಪೋಸ್ಟ್ ಅನ್ನು 20 ಜನರಿಗೆ ಶೇರ್ ಮಾಡಿ'!
ಐಫೋನ್ (iPhone) ಮೇಲಿನ ಕ್ರೇಜ್ ಭಾರತೀಯರಿಗೆ ಇತರೆ ದೇಶದವರಿಗಿಂತ ಹೆಚ್ಚಾಗಿಯೇ ಇದೆ. ಮುಂಗಡ ಆರ್ಡರ್ ಮಾಡಿದವರೆಲ್ಲಾ ಈಗ ಈ ಹೊಸ ಐಫೋನ್‌ಗಳನ್ನು ಬಳಕೆ ಮಾಡಲು ಆರಂಭಿಸಿದ್ದಾರೆ. ಅದೂ ಸಹ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಈ ಫೋನ್‌ಗಳನ್ನು ಖರೀದಿ ಮಾಡಿದ್ದಾರೆ. ಆದರೆ, ನೀವು ಭಾರತೀಯ ಅಂಚೆ ಇಲಾಖೆಯ ಈ ಪೋಸ್ಟ್ ಅನ್ನು ಇತರರೊಂದಿಗೆ ಹಂಚಿಕೊಂಡರೆ ಉಚಿತವಾಗಿ ಪಡೆಯಬಹುದಾಗಿದೆ.
ಹೌದು, ಈ ವಿಷಯ ಕೇಳಿ ನಿಮಗೆ ಶಾಕ್ ಆಗಿರಬಹುದು, ಜೊತೆಗೆ ಯಾವುದು ಆ ಪೋಸ್ಟ್? ಎಂದು ಆಲೋಚನೆ ಮಾಡಿರಬಹುದು. ಆದರೆ ಸ್ವಲ್ಪ ಇರಿ ಈ ಪೋಸ್ಟ್ ಅನ್ನು ನಂಬಿ ನೀವೇನಾದರೂ ಶೇರ್ ಮಾಡಿದ್ರೆ ಮೂರು ನಾಮ ಪಕ್ಕಾ. ಹಾಗಿದ್ರೆ, ಏನಿದು ಭಾರತೀಯ ಅಂಚೆ ಇಲಾಖೆ ಹಾಗೂ ಐಫೋನ್ ಸಂಬಂಧ ಹೊಸ ಮೋಸ?, ಈ ಸಂಬಂಧ ಅಂಚೆ ಇಲಾಖೆ ಹೇಳೋದೇನು? ಎಂಬ ಆಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಎಚ್ಚರಿಕೆ ನೀಡಿದ ಅಂಚೆ ಇಲಾಖೆ: ಭಾರತೀಯ ಅಂಚೆ ಇಲಾಖೆಯ ಹೆಸರಿನಲ್ಲಿ ನಕಲಿ ಪ್ರಚಾರಗಳಿಗೆ ಬೀಳದಂತೆ ದೇಶದ ಜನರಿಗೆ ಎಚ್ಚರಿಕೆ ನೀಡಿದೆ. ಇಂಡಿಯಾ ಪೋಸ್ಟ್‌ನ ಪೋಸ್ಟ್ ಅನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ ಹಾಗೂ ಹೊಸ ಐಫೋನ್ 15 ಉಡುಗೊರೆಯಾಗಿ ಪಡೆಯಿರಿ ಎಂದು ವೈರಲ್ ಆಗಿರುವ ಪೋಸ್ಟ್ ಅನ್ನು ಉಲ್ಲೇಖ ಮಾಡಲಾಗಿದೆ. ಇನ್ನು ಇಂಡಿಯಾ ಪೋಸ್ಟ್ ತನ್ನ ಅಧಿಕೃತ ಟ್ವಿಟರ್ ಪೋಸ್ಟ್ ಮೂಲಕ ಈ ಪ್ರಚಾರ ನಕಲಿ ಎಂದು ನಕಲಿ ಎಂದು ತಿಳಿಸಿದೆ.
ದಯವಿಟ್ಟು ಗಮನಿಸಿ! ಇಂಡಿಯಾ ಪೋಸ್ಟ್ ಯಾವುದೇ ಅನಧಿಕೃತ ಪೋರ್ಟಲ್ ಅಥವಾ ಲಿಂಕ್ ಮೂಲಕ ಯಾವುದೇ ರೀತಿಯ ಉಡುಗೊರೆಗಳನ್ನು ನೀಡುವುದಿಲ್ಲ.. ಇಂಡಿಯಾ ಪೋಸ್ಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ದಯವಿಟ್ಟು ಅಧಿಕೃತ ವೆಬ್‌ಸೈಟ್ Indiapost.gov.in ಅನ್ನು ಅನುಸರಿಸಿ...ಎಂದು ಇಂಡಿಯಾ ಪೋಸ್ಟ್ ಟ್ವಿಟರ್‌ನಲ್ಲಿ ಈ ಬಗ್ಗೆ ತಿಳಿಸಲಾಗಿದೆ.
ಈ ಪೋಸ್ಟ್‌ನಲ್ಲಿ ಏನೆಲ್ಲಾ ಬರೆಯಲಾಗಿದೆ?: ಪೋಸ್ಟ್ ಶೇರ್ ಮಾಡುವ ಅದೃಷ್ಟವಂತರಿಗೆ ನವರಾತ್ರಿ ಉಡುಗೊರೆಯಾಗಿ ಇಂಡಿಯಾ ಪೋಸ್ಟ್ ಐಫೋನ್ 15 ಅನ್ನು ನೀಡುತ್ತದೆ ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಐಫೋನ್ 15 ಉಡುಗೊರೆಯಾಗಿ ಸ್ವೀಕರಿಸಿದ್ದೇವೆ ಎಂಬ ನಕಲಿ ಮೆಸೆಜ್‌ನ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗುತ್ತಿದೆ. ಹಾಗೆಯೇ ಅಲ್ಲೆ ಲಗತ್ತಿಸಲಾದ ಸ್ಕ್ರೀನ್‌ಶಾಟ್ ಬಹುಮಾನವನ್ನು ಪಡೆಯಲು ಏನು ಮಾಡಬೇಕೆಂಬ ವಿವರವನ್ನೂ ಉಲ್ಲೇಖ ಮಾಡಲಾಗಿದೆ.
ಪ್ರಮುಖ ವಿಷಯ ಏನೆಂದರೆ ಈ ನಕಲಿ ಪೋಸ್ಟ್ ಅನ್ನು 5 ಗುಂಪುಗಳು ಅಥವಾ 20 ಸ್ನೇಹಿತರೊಂದಿಗೆ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಬೇಕಂತೆ. ಈ ರೀತಿ ಮಾಡಿದ್ರೆ ಉಡುಗೊರೆಯಾಗಿ ಐಫೋನ್ 15 ಅನ್ನು ನೀಡಲಾಗುತ್ತದೆ ಎಂದು ಆಸೆ ಹುಟ್ಟಿಸಲಾಗಿದೆ. ಇದನ್ನು ನಂಬಿದ ಅದೆಷ್ಟೋ ಜನರು ಈ ಕೆಲಸವನ್ನು ಮಾಡಿ ಮಗಿಸಿ ಐಫೋನ್‌ಗಾಗಿ ಕಾದು ಕುಳಿತಿದ್ದಾರೆ. ಆದರೆ ಪಾಪ ಹಲವಾರು ಜನರಿಗೆ ಅದು ಫಿಶಿಂಗ್ ಲಿಂಕ್ ಎಂದು ತಿಳಿದಿಲ್ಲ.
ಇನ್ನು ವಂಚಕರು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಂತೆ ಕಾಣುವ ನಕಲಿ ವೆಬ್‌ಸೈಟ್‌ಗಳನ್ನು ರಚಿಸುವ ಮೂಲಕ ಜನರನ್ನು ಮೋಸಗೊಳಿಸುವುದನ್ನು ಮುಂದುವರೆಸಿದ್ದಾರೆ. ಆಧಾರ್ ನವೀಕರಣಗಳು, ಪ್ಯಾನ್ ಅಪ್‌ಡೇಟ್‌ಗಳು ಮತ್ತು ಬ್ಯಾಂಕ್‌ಗೆ ಸಂಬಂಧಿಸಿದ ವಿಷಯಗಳನ್ನು ಅಪ್‌ಡೇಟ್ ಮಾಡಲು ನಕಲಿ ಲಿಂಕ್‌ಗಳನ್ನು ಕಳುಹಿಸುವ ಮೂಲಕ ಹಣ ಮತ್ತು ಡೇಟಾವನ್ನು ಕಳ್ಳತನ ಮಾಡುತ್ತಿದ್ದಾರೆ.
ಅದರಲ್ಲಿ ನೀವು ಗಮನಿಸಬೇಕಾದ ವಿಷಯ ಏನೆಂದರೆ ಈ ಮೆಸೆಜ್‌ಗಳಲ್ಲಿ ಒಂದು ದುರುದ್ದೇಶಪೂರಿತ ಲಿಂಕ್ ಇದ್ದೇ ಇರುತ್ತದೆ. ಒಮ್ಮೆ ಬಳಕೆದಾರರು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ, ಅವರನ್ನು ಸ್ಕ್ಯಾಮ್ ವೆಬ್‌ಸೈಟ್‌ಗಳಿಗೆ ಮರುನಿರ್ದೇಶಿಸಲಾಗುತ್ತದೆ ಮತ್ತು ಅವರು ಹಣ ಕಳೆದುಕೊಳ್ಳುತ್ತಾರೆ. ನೀವು ಅಂತಹ ನಕಲಿ ಮೆಸೆಜ್‌ಗಳನ್ನು ನೋಡಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಹಾಗೆಯೇ ಈ ಐಫೋನ್ 15 ಹಗರಣಕ್ಕೆ ಸಿಲುಕಲೇ ಬೇಡಿ.
ಗಮನಿಸಬೇಕಾದ ವಿಚಾರ ಏನೆಂದರೆ ಜನರನ್ನು ಬಲೆಗೆ ಬೀಳಿಸಲು ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಟ್ರೆಂಡಿಂಗ್ ವಿಷಯಗಳನ್ನೇ ಆಯ್ಕೆ ಮಾಡುತ್ತಾರೆ. ಈಗ ಇಡೀ ಜಗತ್ತು ಐಫೋನ್ 15 ಸರಣಿಯ ಫೋನ್‌ಗಳ ಕಡೆಗೇ ಕಣ್ಣಾಯಿಸಿದೆ. ಈ ಕಾರಣಕ್ಕೆ ಅವರು ಈ ಫೋನ್ ಹೆಸರಲ್ಲಿ ವಂಚನೆ ಮಾಡಲು ಮುಂದಾಗಿದ್ದಾರೆ. ನಿಮಗೆ ಐಫೋನ್ ಅನ್ನು ಖರೀದಿ ಮಾಡಬೇಕು ಎಂದರೆ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಅದಾಗ್ಯೂ ಅಗ್ಗದ ದರದಲ್ಲಿ ಫೋನ್‌ಗಳನ್ನು ಖರೀದಿ ಮಾಡಬೇಕು ಎಂದರೆ ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್ ಸೈಟ್‌ಗೆ ಭೇಟಿ ನೀಡಿ ಇದರ ಬದಲಾಗಿ ಯಾರೂ ಸಹ ನಿಮಗೆ ಉಚಿತವಾಗಿ ಅಥವಾ ದೊಡ್ಡ ಮೊತ್ತದ ರಿಯಾಯಿತಿಯಲ್ಲಿ ಫೋನ್‌ಗಳನ್ನು ನೀಡುವುದಿಲ್ಲ.


Click it and Unblock the Notifications








