ವಿಮಾನದಿಂದ 16,000 ಅಡಿ ಕೆಳಗೆ ಬಿದ್ದ ಐಫೋನ್: ಒಂಚೂರು ತೊಂದ್ರೆ ಆಗಿಲ್ಲ...
ಐಫೋನ್‌ಗಳು (iPhones) ಆಗಾಗ್ಗೆ ತಮ್ಮನ್ನು ತಾವು ಭಿನ್ನವಾಗಿ ಗುರುತಿಸಿಕೊಳ್ಳುತ್ತಲೇ ಇರುತ್ತವೆ. ಈ ಕಾರಣಕ್ಕೆ ಸಾಮಾನ್ಯ ಜನರೂ ಸಹ ಈ ಫೋನ್‌ಗಳ ಮೇಲೆ ಹೆಚ್ಚಿನ ಒಲವು ಹೊಂದುವಂತೆ ಆಗಿದೆ. ಒಂದು ಕಡೆ ಜೀವ ಉಳಿಸುವ ಕೆಲಸ ಮಾಡಿದ್ರೆ ಮತ್ತೊಂದೆಡೆ ಅದೆಷ್ಟೋ ತಿಂಗಳ ನಂತರ ನೀರಿನ ಒಳಗೆ ಸಿಕ್ಕ ಐಫೋನ್ ಹೊಸತರಂತೆ ಕಾರ್ಯನಿರ್ವಹಿಸುತ್ತದೆ. ಈ ಎಲ್ಲಾ ವಿಶೇಷತೆಗಳ ನಡುವೆ ಈಗ ಮತ್ತೊಂದು ಶ್ರೇಯಸ್ಸು ಐಫೋನ್‌ಗೆ ಸಿಕ್ಕಿದೆ.
ಹೌದು, ವಿಮಾನದಿಂದ 16,000 ಅಡಿ ಕೆಳಗೆ ಬಿದ್ದ ಐಫೋನ್‌ಗೆ ಕಿಂಚಿತ್ತೂ ಸಮಸ್ಯೆ ಆಗಿಲ್ಲ. ಬದಲಾಗಿ ಮೊದಲಿನಂತೆಯೇ ಕೆಲಸ ಮಾಡುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ?, ಯಾವ ವಿಮಾನದಿಂದ ಯಾವ ಐಫೋನ್ ಕೆಳಗೆ ಬಿದ್ದಿತು?, ಈ ಫೋನ್ ಯಾರ ಕೈಗೆ ಸಿಕ್ಕಿತು? ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

16,000 ಅಡಿ ಕೆಳಗೆ ಬಿದ್ದ ಐಫೋನ್: ಸಾಮಾನ್ಯವಾಗಿ ಜೇಬಿನಿಂದ ಕೈತಪ್ಪಿ ಫೋನ್ ಬಿದ್ದರೆ ಡಿಸ್‌ಪ್ಲೇ ಹೊಡೆಯುವುದು ಅಥವಾ ಸ್ಕ್ರ್ಯಾಚ್ ಆಗುವುದು ಸಾಮಾನ್ಯ. ಆದರೆ, ಈ ಐಫೋನ್ ಬರೋಬ್ಬರಿ 16,000 ಅಡಿಯಿಂದ ಕೆಳಗೆ ಬಿದ್ದರೂ ಏನೂ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ ಒಂಟಾರಿಯೊಗೆ ತೆರಳುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್ ಎಎಸ್‌ಎ 1282 ವಿಮಾನದಿಂದ (Alaska Airlines Flight ASA 1282) ಈ ಫೋನ್ ಬಿದ್ದಿದೆ.
ವಿಮಾನ ಸಮಸ್ಯೆಗೆ ಸಿಲುಕಿದ್ದು ಒಂದು ಕಡೆಯಾದರೆ ಈ ಫೋನ್ ಕೆಳಗೆ ಬಿದ್ದು ಏನೂ ಆಗದೆ ಇರುವುದು ಅಚ್ಚರಿ ಎನಿಸಿದೆ. ಭಯಾನಕ ಗಾಳಿಯ ಒತ್ತಡಕ್ಕೆ ಕಿಟಕಿ ಒಡೆದುಹೋಗಿದೆ. ಈ ವೇಳೆ ಗಾಳಿಯ ರಭಸಕ್ಕೆ ವಿವಿಧ ವಸ್ತುಗಳ ಹಾರಿಹೋಗಿವೆ. ಇದರೊಂದಿಗೆ ಐಫೋನ್ ಸಹ ಇತ್ತು. ಆದರೆ, ಸೀನಾಥನ್ ಬೇಟ್ಸ್, ಬಾರ್ನ್ಸ್ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವ್ಯಕ್ತಿಗೆ ಮೇಲಿಂದ ಹಾರಿಬಂದ ಈ ಫೋನ್ ಸಿಕ್ಕಿದೆ.

ಈ ಸಂಬಂಧ ಅಚ್ಚರಿಕೊಂಡ ಬೆಟ್ಸ್ ಅವರು ಎಕ್ಸ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋನ್‌ನ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಪೋಸ್ಟ್‌ನಲ್ಲಿ, ರಸ್ತೆಯ ಬದಿಯಲ್ಲಿ ಐಫೋನ್ ಸಿಕ್ಕಿತು, ಇನ್ನೂ ಅರ್ಧ ಬ್ಯಾಟರಿಯೊಂದಿಗೆ ಏರ್‌ಪ್ಲೇನ್ ಮೋಡ್‌ನಲ್ಲಿ ಈ ಫೋನ್ ಇದೆ ಎಂದು ಬರೆದಿದ್ದಾರೆ. ಜೊತೆಗೆ ಈ ಫೋನ್ ಅನ್ನು ವಾರಸುದಾರರು ಮರಳಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಇನ್ನು ಈ ಐಫೋನ್‌ನ ಮಾದರಿಯನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲವಾದರೂ, ಬೇಟ್ಸ್ ಹಂಚಿಕೊಂಡ ಫೋಟೋಗಳನ್ನು ಗಮನಿಸಿದ್ರೆ ಇದು ಐಫೋನ್ 14 ಪ್ರೊ ಅಥವಾ ಐಫೋನ್ 15 ಮಾದರಿ ಎನ್ನಲಾಗಿದೆ. ಜೊತೆಗೆ ಫೋನ್ ಇನ್ ಫ್ಲೈಟ್ ಮೋಡ್‌ನಲ್ಲಿದ್ದು, SOS ಮೋಡ್‌ನೊಂದಿಗೆ ಸಕ್ರಿಯಗೊಳಿಸಲಾಗಿದೆ ಎಂಬ ಮಾಹಿತಿ ಈ ಫೋಟೋ ಮೂಲಕ ತಿಳಿದುಬಂದಿದೆ.

ಆಕಾಶದಲ್ಲಿ ತೀವ್ರ ಗಾಳಿಯ ಹೊರತಾಗಿಯೂ ಯಾವುದೇ ಸಮಸ್ಯೆ ಆಗದೆ ನೆಲಕ್ಕೆ ಬಿದ್ದ ಐಫೋನ್ ಬಗ್ಗೆ ಕೆಲವರು ಸಂತಸ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಅನುಮಾನ ಪಡುತ್ತಿದ್ದಾರೆ. ಕೆಲವು ನೆಟಿಜನ್‌ಗಳು ಆಪಲ್‌ನ ಕ್ವಾಲಿಟಿಗೆ ಸಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಇನ್ನು ಐಫೋನ್ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣಕ್ಕೆ ಸಾಕ್ಷಿಯಾಗಿಲ್ಲ ಎಂದು ನಿಮಗೆ ನಾವು ಮೊದಲೇ ತಿಳಿಸಿದ್ದೇವೆ. ಅದರಂತೆ ಸಾಕಷ್ಟು ಸವಾಲುಗಳನ್ನು ಈ ಫೋನ್‌ಗಳು ಹೆದರಿಸಿವೆ.
ಕಳೆದ ವರ್ಷ ಯುಎಸ್‌ಎಯ ವಿಸ್ಕಾನ್ಸಿನ್‌ನ ಮ್ಯಾಡಿಸನ್‌ನಲ್ಲಿ ಒಂದು ಅದ್ಭುತ ಘಟನೆ ಸಂಭವಿಸಿತ್ತು. ಅದೇನೆಂದರೆ ಶುಚಿಗೊಳಿಸುವ ಸಂದರ್ಭದಲ್ಲಿದ್ದ ಸ್ಕೂಬಾ ಕ್ಲಬ್ ಸುಮಾರು ಒಂದು ವರ್ಷದವರೆಗೆ ನೀರಿನಲ್ಲಿ ಮುಳುಗಿದ್ದ ಐಫೋನ್ ಪತ್ತೆ ಮಾಡಿತ್ತು. ಇದಾದ ನಂತರದಲ್ಲಿ ಅದನ್ನು ಹೊರತಂದು ಚಾರ್ಜ್‌ಗೆ ಹಾಕಿದಾಗ ಚಾರ್ಜ್ ಸಹ ಆಗಿ ನಂತರ ಫೋನ್ ಆನ್ ಆಗಿದೆ. ಇದಾದ ನಂತರದಲ್ಲಿ ಸ್ಥಳೀಯ ಅಧಿಕಾರಿಗಳು ಫೋನ್‌ನ ಡೇಟಾವನ್ನು ಬಳಸಿಕೊಂಡು ಮಾಲೀಕ ಎಲ್ಲೀ ಐಸೆನ್‌ಬರ್ಗ್ ಅವರನ್ನು ಸಂಪರ್ಕ ಮಾಡಿದ್ದಾರೆ.


Click it and Unblock the Notifications








