5 ಸಾವಿರಕ್ಕೆ ಐಫೋನ್?..ಖರೀದಿಸಬೇಕೋ, ಬೇಡವೋ ಎಂಬುದನ್ನು ಈ ವರದಿ ನೋಡಿ ನಿರ್ಧಾರ ಮಾಡಿ!
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಹುಪಾಲು ಜನರು ಆನ್‌ಲೈನ್ ಮೂಲಕ ಎಲ್ಲಾ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಮಾರಾಟವನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದ ಹಲವು ಇ-ಕಾಮರ್ಸ್ ಸೈಟ್‌ಗಳು ವಿವಿಧ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್‌ಡಿವೈಸ್‌ಗಳಿಗೆ ಭಾರೀ ಡಿಸ್ಕೌಂಟ್ ನೀಡಿ ಸೇಲ್ ಮಾಡುತ್ತಿವೆ. ಈ ನಡುವೆ ಲಕ್ಷ ಬೆಲೆಯ ಐಫೋನ್ ಅನ್ನು ಕೇವಲ ಐದು ಸಾವಿರ ರೂಪಾಯಿಗೂ ಖರೀದಿ ಮಾಡಬಹುದು ಎಂದರೆ ನಂಬುತ್ತೀರಾ.?
ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಫೀಚರ್ಸ್ ಅನ್ನು ಹೊಂದಿವೆ. ಅದರಲ್ಲೂ ಅಗ್ಗದ ದರದಲ್ಲಿ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳು ಲಭ್ಯ ಆಗುತ್ತವೆ ಎಂದರೆ ಯಾರೂ ಸಹ ಹಿಂದೆ ಮುಂದೆ ನೋಡದೆ ಅದನ್ನು ಖರೀದಿ ಮಾಡಲು ಮುಂದಾಗುತ್ತಾರೆ.ಆದರೆ,ನೀವೇನಾದರೂ ಐದು ಸಾವಿರ ರೂಪಾಯಿಗೆ ಐಫೋನ್ ಖರೀದಿ ಮಾಡಲು ಹೋದರೆ ನಿಮಗೆ ನೀವೆ ಮೂರು ನಾಮ ಹಾಕಿಕೊಂಡಂತೆ.ಹಾಗಿದ್ರೆ, ಏನಿದು ಸ್ಕ್ಯಾಮರ್‌ಗಳ ಹೊಸ ತಂತ್ರ, ಈ ಮೋಸದ ಜಾಲವನ್ನು ಕಂಡುಕೊಳ್ಳುವುದು ಹೇಗೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

5000 ರೂ.ಗೆ ಆಪಲ್ ಐಫೋನ್? : ಇತ್ತೀಚೆಗೆ ಹಲವಾರು ಜನರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ರೀತಿಯ ವಿಷಯ ಗಮನಿಸಿರಬಹುದು. ಆದರೆ, ದುಬಾರಿ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವ ನಕಲಿ ವೆಬ್‌ಸೈಟ್‌ಗಳು ನಿಮ್ಮನ್ನು ವಂಚಿಸಲು ಮುಂದಾಗಿದ್ದು, ಇವುಗಳಿಂದ ನೀವು ಎಚ್ಚರಿಕೆ ವಹಿಸಬೇಕಿದೆ. ಯಾಕೆಂದರೆ ಈ ವೆಬ್‌ಸೈಟ್‌ಗಳು ನಿಮ್ಮ ಖಾಸಗಿ ಡೇಟಾ ಹಾಗೂ ಬ್ಯಾಂಕ್ ಮಾಹಿತಿಯನ್ನು ಕದಿಯುವುದರೊಂದಿಗೆ ನಿಮ್ಮ ಖಾತೆ ಖಾಲಿ ಮಾಡುತ್ತವೆ.
ಹೆಚ್ಚಾದ ನಕಲಿ ವೆಬ್‌ಸೈಟ್‌ಗಳು: ಡಿಜಿಟಲ್ ಯುಗದಲ್ಲಿ ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡುವುದು ಈಗ ಸಾಮಾನ್ಯವಾಗಿದೆ. ಅದರಲ್ಲೂ ಕೋವಿಡ್ -19 ರ ನಂತರ ಇದೂ ಇನ್ನೂ ಹೆಚ್ಚಾಗಿದೆ. ಈ ನಡುವೆ, ನಿಮ್ಮ ಸ್ಮಾರ್ಟ್‌ಫೋನಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳನ್ನು ವೀಕ್ಷಿಸುವಾಗ ಎಚ್ಚರಿಕೆ ವಹಿಸುವುದು ಮುಖ್ಯ. ಅದಾಗ್ಯೂ ಆಕರ್ಷಣೀಯ ರಿಯಾಯಿತಿ ಬಗ್ಗೆ ಜಾಹೀರಾತು ಮಾಡುವ ನಕಲಿ ವೆಬ್‌ಸೈಟ್‌ಗಳ ಸಂಖ್ಯೆ ಹೆಚ್ಚುತ್ತಿದೆ.

ಇನ್ನು ಬಟ್ಟೆಯಿಂದ ಹಿಡಿದು ವಿವಿಧ ವಸ್ತುಗಳವರೆಗೆ ಈ ವೆಬ್‌ಸೈಟ್‌ಗಳು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದು, ಈ ಮೂಲಕ 5,000ರೂ.ಗೆ 1,00,000ರೂ.ಗಿಂತ ಹೆಚ್ಚು ಮೌಲ್ಯದ ಆಪಲ್ ಐಫೋನ್ ಖರೀದಿಗೆ ನೀಡುವುದಾಗಿ ತಿಳಿಸುತ್ತವೆ ಎಂದರೆ ನೀವೇ ಊಹಿಸಿಕೊಳ್ಳಿ. ಈ ಕೊಡುಗೆಗಳಿಗೆ ಬಲಿಯಾದರೆ ನೀವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಗಾಗುತ್ತದೆ. ಈ ಮೋಸದ ವೆಬ್‌ಸೈಟ್‌ಗಳು ಗ್ರಾಹಕರಿಗೆ ಲಿಂಕ್‌ಗಳನ್ನು ಕಳುಹಿಸುತ್ತವೆ, ಖರೀದಿಗಳನ್ನು ಮಾಡಲು ಅವರನ್ನು ಒತ್ತಾಯಿಸುತ್ತವೆ. ಗ್ರಾಹಕರು ತಾವು ಮೋಸ ಹೋದೆವು ಅನ್ನುವಷ್ಟರಲ್ಲಿ ಆ ವೆಬ್‌ಸೈಟ್‌ಗಳೇ ಮಂಗಮಾಯ ಆಗುತ್ತವೆ.
ಎಚ್ಚರಿಕೆ ವಹಿಸಿ: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ. ಆದರೆ ಯಾರು ಯಾವುದೇ ರೀತಿಯಲ್ಲಿ ಮೋಸ ಮಾಡಲು ಮುಂದಾದರೆ ಏನಂತೆ ನಾವು ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾದ ವಿಷಯ. ಈ ಕಾರಣಕ್ಕೆ ಸ್ಕ್ಯಾಮ್ ಅಡ್ವೈಸರ್(https://www.scamadviser.com/) ನಂತಹ ಪ್ರತಿಷ್ಠಿತ ಪ್ಲಾಟ್‌ಫಾರ್ಮ್‌ಗಳ ಸೇವೆ ಪಡೆಯಬಹುದು. ಈ ಸೈಟ್ ಮೂಲಕ ವೆಬ್‌ಸೈಟ್‌ನ ದೃಢೀಕರಣವನ್ನು ಪರಿಶೀಲಿಸಬಹುದಾಗಿದೆ.

ಅದಾಗ್ಯೂ ನೀವು ಆನ್‌ಲೈನ್‌ನಲ್ಲಿ ಏನನ್ನೇ ಬ್ರೌಸ್ ಮಾಡುವಾಗಲೂ ಸಹ ಭಾರೀ ಜಾಗರೂಕತೆವಹಿಸಿ. ಈ ಮೂಲಕ ಸಂಭಾವ್ಯ ವಂಚನೆಗಳಿಂದ ರಕ್ಷಿಸಿಕೊಳ್ಳುವ ಜವಬ್ದಾರಿ ನಿಮ್ಮ ಮೇಲೆಯೇ ಇರುತ್ತದೆ. ಜೊತೆಗೆ ಯಾವುದೇ ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅದರಲ್ಲೂ ಖರೀದಿ ಮಾಡುವಾಗ ಬ್ಯಾಂಕ್ ವಿವರವನ್ನು ಕೇಳುವ ಕಾಲಂ ಅನ್ನು ಕೂಲಂಕಷವಾಗಿ ಪರಿಶೀಲಿಸಿ.


Click it and Unblock the Notifications








