IRCTC ಯಲ್ಲಿ ಶೀಘ್ರದಲ್ಲೇ ಸಾಕು ಪ್ರಾಣಿಗಳಿಗೂ ಟಿಕೆಟ್ ಬುಕಿಂಗ್ ಮಾಡಬಹುದು! ಷರತ್ತುಗಳು ಅನ್ವಯ
ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಈಗಾಗಲೇ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ಈ ಮೂಲಕ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಈ ನಡುವೆ ಇನ್ಮುಂದೆ ಪ್ರಯಾಣಿಕರುನಾಲ್ಕು ಕಾಲಿನ ಅತ್ಮೀಯರೊಂದಿಗೆ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಲಾಗುತ್ತಿದೆ. ಅಂದರೆ ಪ್ರಯಾಣಿಕರು ಸಾಕು ಪ್ರಾಣಿಗಳಿಗೆ ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು.
ಹೌದು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಅಥವಾ ಇನ್ಯಾವುದೇ ಪ್ರಾಣಿಗಳನ್ನು ಮನೆಯಲ್ಲಿ ಬಿಟ್ಟು ದೂರದ ಊರಿಗೆ ಸಂಚಾರ ಮಾಡಲು ಇಷ್ಟಪಡದವರು ಇನ್ಮುಂದೆ ಅವುಗಳಿಗೂ ಟಿಕೆಟ್ ಬುಕಿಂಗ್ ಮಾಡುವ ಮೂಲಕ ಉತ್ತಮ ಪ್ರಯಾಣ ತಮ್ಮದಾಗಿಸಿಕೊಳ್ಳಬಹುದು. ಅದರಂತೆ ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯ ಇತ್ತೀಚೆಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಹಾಗಿದ್ರೆ, ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

ಸಾಕು ಪ್ರಾಣಿಗಳಿಗೂ ಟಿಕೆಟ್ ಬುಕಿಂಗ್ ಸೌಲಭ್ಯ: ಈ ಹಿಂದೆ ಪಾರ್ಸೆಲ್ ಬುಕಿಂಗ್ ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಟಿಕೆಟ್ ಬುಕ್ ಮಾಡಬೇಕಿತ್ತು. ಆದರೆ, ಇನ್ಮುಂದೆ ನಿಮ್ಮ ಮನೆಯಿಂದಲೇ ನಿಮ್ಮ ಸಾಕುಪ್ರಾಣಿಗಳಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ಸಾಕು ಪ್ರಾಣಿಗಳ ಜೊತೆಗೆ ಸರಳ ಸಂಚಾರ ಮಾಡಬಹುದು.
ಈ ಮೊದಲು ಸಾಕುಪ್ರಾಣಿ ಜೊತೆಗೆ ಪ್ರಯಾಣ ಮಾಡುವವರು ಫಸ್ಟ್ ಕ್ಲಾಸ್‌ನ ಎಸಿ ಟಿಕೆಟ್‌ಗಳು, ಕ್ಯಾಬಿನ್‌ಗಳು ಅಥವಾ ಕೂಪ್‌ಗಳನ್ನು ಬುಕ್ ಮಾಡಬೇಕಾಗಿತ್ತು. ಅಷ್ಟೇ ಅಲ್ಲದೆ ಪ್ರಯಾಣದ ದಿನದಂದು ಪ್ಲಾಟ್‌ಫಾರ್ಮ್‌ನಲ್ಲಿರುವ ಪಾರ್ಸೆಲ್ ಬುಕಿಂಗ್ ಕೌಂಟರ್‌ಗಳಿಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಕೂಪ್ ಅನ್ನು ಕಾಯ್ದಿರಿಸಬೇಕಾಗಿತ್ತು. ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.
ಇನ್ನು ರೈಲ್ವೇ ಸಚಿವಾಲಯವು ಎಸಿ ಫಸ್ಟ್ ಕ್ಲಾಸ್ ರೈಲುಗಳಲ್ಲಿ ಸಾಕುಪ್ರಾಣಿಗಳಿಗಾಗಿ ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯು ಟಿಟಿಇಗಳಿಗೆ ಸಾಕುಪ್ರಾಣಿಗಳನ್ನು ಕಾಯ್ದಿರಿಸುವ ಅಧಿಕಾರವನ್ನು ನೀಡುತ್ತದೆ. ಇದು ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಹೆಚ್ಚು ಅನುಕೂಲಕರ ಮತ್ತು ಪ್ರಯಾಣಿಕರಿಗೆ ಆರಾಮದಾಯಕವಾಗಿಸುತ್ತದೆ ಎಂದು ಸಚಿವಾಲಯ ಭಾವಿಸಿದ್ದು, ಈ ನಿರ್ಧಾರ ಮಾಡಿದೆ.

ಇದರೊಂದಿಗೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪ್ರಾಣಿಗಳಿಗೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ನೀಡುವ ಉದ್ದೇಶಕ್ಕಾಗಿ ಸಾಫ್ಟ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ರೈಲ್ವೆ ಮಂಡಳಿಯು ರೈಲ್ವೇ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ವನ್ನು ಕೇಳಿದೆ ಎಂದು ವರದಿಯಿಂದ ತಿಳಿದುಬಂದಿದೆ. ಹಾಗೆಯೇ ಈ ಆನ್‌ಲೈನ್ ಸೇವೆಯೊಂದಿಗೆ, ರೈಲಿನ ಮೊದಲ ಚಾರ್ಟ್ ಸಿದ್ಧಪಡಿಸಿದ ನಂತರ ರೈಲ್ವೆ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಾಣಿಗಳ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಪ್ರಮುಖ ವಿಷಯ ಏನೆಂದರೆ ಪ್ರಯಾಣಿಕರ ಟಿಕೆಟ್ ದೃಢಪಟ್ಟರೆ ಮಾತ್ರ ಪ್ರಾಣಿಗಳಿಗೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗಲಿದೆ. ಇದಾದ ಬಳಿಕ ನಾಯಿ-ಬೆಕ್ಕಿನ ಟಿಕೆಟ್‌ಗಳನ್ನು ಕಾಯ್ದಿರಿಸುವ ಅಧಿಕಾರರವನ್ನು ಟಿಟಿಇಗೆ ನೀಡಲಾಗಿದೆ. ಅದರಂತೆ ಕಾವಲುಗಾರರಿಗೆ ಮೀಸಲಾದ ಎಸ್‌ಎಲ್‌ಆರ್ ಕೋಚ್‌ನಲ್ಲಿ ಪ್ರಾಣಿಗಳನ್ನು ಇರಿಸಲಾಗುತ್ತದೆ. ಇನ್ನು ಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ರೈಲು ಎಲ್ಲಿ ನಿಲ್ಲುತ್ತದೋ ಅಲ್ಲಿ ನೀರು, ಆಹಾರ ಇತ್ಯಾದಿಗಳನ್ನು ಒದಗಿಸಬಹುದು.
ಷರತ್ತುಗಳಿವೆ: ಈ ವ್ಯವಸ್ಥೆಯಲ್ಲಿ ಕೆಲವು ನೀತಿ ನಿಯಮಗಳು ಸಹ ಇವೆ. ಅವೇನೆಂದರೆ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿದರೆ ಪ್ರಾಣಿಗಳ ಟಿಕೆಟ್‌ಗೆ ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ. ರೈಲು ರದ್ದುಗೊಂಡರೆ ಅಥವಾ ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಪ್ರಾಣಿಗಳ ಟಿಕೆಟ್ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ. ಪ್ರಯಾಣಿಕರ ಟಿಕೆಟ್‌ಗೆ ಮಾತ್ರ ಮರುಪಾವತಿ ಮಾಡಲಾಗುವುದು.

ಯಾವೆಲ್ಲಾ ಪ್ರಾಣಿಗಳನ್ನು ಸಾಗಿಸಬಹುದು?: ಈ ಹೊಸ ನಿಯಮದ ಪ್ರಯಾಣ ಸಾಮಾನ್ಯ ರೈಲುಗಳಲ್ಲಿ ನಾಯಿ ಹಾಗೂ ಬೆಕ್ಕುಗಳನ್ನು ಮಾತ್ರ ಸಾಗಣೆ ಮಾಡುವುದಲ್ಲದೆ, ಗೂಡ್ಸ್ ರೈಲಿನ ಮೂಲಕ ಕುದುರೆಗಳು, ಹಸುಗಳು, ಎಮ್ಮೆಗಳು ಮುಂತಾದ ದೊಡ್ಡ ಸಾಕುಪ್ರಾಣಿಗಳನ್ನು ಬುಕ್ ಮಾಡಿ ಸಾಗಿಸಲಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಪ್ರಯಾಣದ ಸಮಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳಲು ಸಂಬಂಧಿಸಿದ ಒಬ್ಬ ವ್ಯಕ್ತಿ ಇರಬೇಕು. ಪ್ರಾಣಿಗಳಿಗೆ ಯಾವುದೇ ಹಾನಿ ಉಂಟಾದರೆ ಮಾಲೀಕರು ಜವಾಬ್ದಾರರಾಗಿರುತ್ತಾರೆ. ಅವರಿಗೆ ರೈಲ್ವೆ ಹೊಣೆಯಲ್ಲ.
ಸಾಕು ಪ್ರಾಣಿ ಸಾಗಿಸಲು ಇರುವ ಮಾರ್ಗಸೂಚಿಗಳು: ನೀವು ನಿಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುತ್ತಿದ್ದರೆ ನಿಮ್ಮ ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಮತ್ತು ಅದರ ಫೋಟೋಕಾಪಿಯನ್ನು ಪಡೆದುಕೊಳ್ಳಬೇಕು. ಎರಡನೆಯದಾಗಿ, ನಿಮ್ಮ ಸಾಕುಪ್ರಾಣಿಗಳು ಅಗತ್ಯವಿರುವ ಎಲ್ಲಾ ವ್ಯಾಕ್ಸಿನೇಷನ್‌ಗಳನ್ನು ಪಡೆದುಕೊಂಡಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಹಾಗೆಯೇ ಅವುಗಳ ಪ್ರಮಾಣಪತ್ರಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
ಇದಾದ ಬಳಿಕ ನಿರ್ಗಮಿಸುವ 24-48 ಗಂಟೆಗಳ ಮೊದಲು ಪಶು ವೈದ್ಯರಿಂದ ಫಿಟ್‌ನೆಸ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇದರೊಂದಿಗೆ ಸಂಬಂಧಿತ ಐಡಿಗಳನ್ನು ಜೊತೆಯಲ್ಲೇ ಇರಿಸಿಕೊಳ್ಳಬೇಕು. ನಂತರದಲ್ಲಿ ಪ್ರಯಾಣದ ಸಮಯದಲ್ಲಿ ನಿಮ್ಮ ಸಾಕುಪ್ರಾಣಿಗಳನ್ನು ಆರಾಮದಾಯಕವಾಗಿಸಲು ಮತ್ತು ಮನರಂಜನೆಗಾಗಿ ನೀರು, ಆಹಾರ ಮತ್ತು ಆಟಿಕೆ ಹಾಗೂ ಇತರೆ ವಸ್ತುಗಳನ್ನು ನಿಮ್ಮ ಜೊತೆಗೆ ತರಬಹುದು.
ನೀವು PRS ಟಿಕೆಟ್ ಅಥವಾ IRCTC ಯಿಂದ ಆನ್‌ಲೈನ್ ಟಿಕೆಟ್ ಹೊಂದಿದ್ದರೂ ಸಹ ಬುಕಿಂಗ್‌ಗಾಗಿ ರೈಲು ಹೊರಡುವ ಕನಿಷ್ಠ ಮೂರು ಗಂಟೆಗಳ ಮೊದಲು ನಿಮ್ಮ ನಾಯಿಯನ್ನು ಲಗೇಜ್ ಕಚೇರಿಗೆ ಕರೆತರಬೇಕು. ಎಸಿ ಫಸ್ಟ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್ ಕೂಪೆಯಲ್ಲಿ ನಿಮ್ಮ ನಾಯಿಯನ್ನು ನಿಮ್ಮೊಂದಿಗೆ ಕೊಂಡೊಯ್ದರೆ ನೀವು ಅನ್ವಯವಾಗುವ ಬ್ಯಾಗೇಜ್ ಶುಲ್ಕವನ್ನು ಪಾವತಿಸಬೇಕು.
ನಿಮ್ಮ ನಾಯಿಯನ್ನು AC2 ಶ್ರೇಣಿ, AC 3 ಶ್ರೇಣಿ, AC ಚೇರ್ ಕಾರ್, ಸ್ಲೀಪರ್ ಕ್ಲಾಸ್ ಅಥವಾ ಎರಡನೇ ದರ್ಜೆಯ ಕಂಪಾರ್ಟ್‌ಮೆಂಟ್‌ಗಳಲ್ಲಿ ಸಾಗಿಸಲು ಸಾಧ್ಯವಿಲ್ಲ. ಇತರ ಪ್ರಯಾಣಿಕರು ದೂರು ನೀಡಿದರೆ ನಿಮ್ಮ ನಾಯಿಯನ್ನು ಸಿಬ್ಬಂದಿಯ ವ್ಯಾನ್‌ಗೆ ಸ್ಥಳಾಂತರಿಸಲಾಗುತ್ತದೆ. ನಿಮ್ಮ ನಾಯಿಯ ಸುರಕ್ಷಿತ ಸಾಗಣೆಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ. ಪ್ರಯಾಣದ ಸಮಯದಲ್ಲಿ ನಿಮ್ಮ ನಾಯಿಗೆ ನೀವು ನೀರು ಮತ್ತು ಆಹಾರವನ್ನು ಒದಗಿಸಬೇಕು.


Click it and Unblock the Notifications




