ಚಂದ್ರಯಾನ 3 ಬಗ್ಗೆ ಇಸ್ರೋ ರಸಪ್ರಶ್ನೆ! ಗೆದ್ದರೆ 1 ಲಕ್ಷ ನಗದು ಬಹುಮಾನ! ಈಗಲೇ ಟ್ರೈ ಮಾಡಿ
ಭಾರತ ಚಂದ್ರಯಾನ -3 ಅನ್ನು ವಿಶೇಷವಾಗಿ ಭಾರತ ಸಂಭ್ರಮಿಸಿದೆ. ಈ ಸಂಭ್ರಮದ ನಡುವೆ ದೇಶದ ಜನರಿಗೆ ಮತ್ತೊಂದು ಖುಷಿಯ ಸುದ್ದಿ ನೀಡಲಾಗಿದೆ. ಮೂಲಕ ಜನರು ಒಂದು ಲಕ್ಷ ರೂ.ಗಳ ವರೆಗೆ ಬಹುಮಾನ ಪಡೆದುಕೊಳ್ಳಬಹುದಾಗಿದೆ. ಇದನ್ನು ಇಸ್ರೋ ಅಧಿಕೃತವಾಗಿ ಘೋಷಣೆ ಮಾಡಿದೆ.
ಹೌದು, ಚಂದ್ರಯಾನ -3 ಯಶಸ್ಸು ಕೇವಲ ಕೆಲವು ಜನರಿಗೆ ಮಾತ್ರ ಸೀಮಿತವಾದುದ್ದಲ್ಲ, ಈ ಕಾರಣಕ್ಕೆ ಈ ಸಂಭ್ರಮದಲ್ಲಿ ಇಡೀ ಭಾರತವೇ ಕುಣಿದು ಕುಪ್ಪಳಿಸಿದೆ. ಅದರಂತೆ ಈ ಯಶಸ್ಸನ್ನು ಆಚರಿಸಲು ಇಸ್ರೋ, ಚಂದ್ರಯಾನ-3 ಮಹಾಕ್ವಿಜ್ (Chandrayaan-3 Mahaquiz) ಅನ್ನು ಘೋಷಣೆ ಮಾಡಿದೆ. ಈ ಮೂಲಕ ಯಾರೆಲ್ಲಾ ಸರಿಯಾದ ಉತ್ತರ ನೀಡುತ್ತಾರೋ ಅವರು ಭರ್ಜರಿ ಬಹುಮಾನ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಕ್ವಿಜ್ ನಲ್ಲಿ ಹೇಗೆ ಭಾಗಿಯಾಗುವುದು?, ಬಹುಮಾನಗಳ ಮೊತ್ತ ಎಷ್ಟು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಚಂದ್ರಯಾನ-3 ಮಹಾಕ್ವಿಜ್ : ಭಾರತದ ಐತಿಹಾಸಿಕ ಚಂದ್ರನ ಲ್ಯಾಂಡಿಂಗ್ ಮಿಷನ್ ಸಂಭ್ರಮ ಇನ್ನೂ ಕಡಿಮೆಯಾಗಿಲ್ಲ, ಈ ಸಂಭ್ರಮ ಜನರ ಮನಸ್ಸಲ್ಲಿ ಉಳಿದಿರುವಾಗಲೇ ಸೂರ್ಯನೆಡೆಗೆ ಉಪಗ್ರಹ ಕಳಿಸುವ ಮೂಲಕ ಭಾರತ ದೊಡ್ಡ ಸಾಧನೆಗಳನ್ನು ಮಾಡಲು ಮುಂದಾಗಿದೆ. ಅದರಂತೆ ಈ ವಿಶೇಷ ಆಚರಣೆಯ ಭಾಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಕೇಂದ್ರ ಸರ್ಕಾರ ಭಾರತದ ಎಲ್ಲಾ ನಾಗರಿಕರಿಗಾಗಿ ರಸಪ್ರಶ್ನೆ ಆಟವನ್ನು ಆಯೋಜಿಸಿದೆ.
ಇನ್ನು ವಿಜ್ಞಾನ ಮತ್ತು ಅನ್ವೇಷಣೆಯ ಪ್ರೀತಿಯನ್ನು ಪ್ರದರ್ಶಿಸುವುದರ ಜೊತೆಗೆ ಈ ರಸಪ್ರಶ್ನೆಯು ಜನರಿಗೆ 1 ಲಕ್ಷದವರೆಗಿನ ಕೆಲವು ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಲು ಉತ್ತಮ ಅವಕಾಶವನ್ನು ನೀಡುತ್ತದೆ. ಇನ್ನು '@mygovindia ಭಾರತದ ಅದ್ಭುತ ಬಾಹ್ಯಾಕಾಶ ಪರಿಶೋಧನಾ ಪ್ರಯಾಣವನ್ನು ಗೌರವಿಸಲು, ಚಂದ್ರನ ಅದ್ಭುತಗಳನ್ನು ಅನ್ವೇಷಿಸಲು ಮತ್ತು ನಮ್ಮ ವಿಜ್ಞಾನ ಮತ್ತು ಆವಿಷ್ಕಾರದ ಪ್ರೀತಿಯನ್ನು ಪ್ರದರ್ಶಿಸಲು ಚಂದ್ರಯಾನ-3 ಮಹಾಕ್ವಿಜ್ ಅನ್ನು ಆಯೋಜಿಸಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ನಗದು ಬಹುಮಾನ ವಿವರ:
-ಅತ್ಯುತ್ತಮ ಪ್ರದರ್ಶನ ನೀಡುವವರಿಗೆ 1,00,000ರೂ.ಗಳ ನಗದು ಬಹುಮಾನ ನೀಡಲಾಗುವುದು.
-ಎರಡನೇ ಅತ್ಯುತ್ತಮ ಪ್ರದರ್ಶನಕಾರರಿಗೆ 75,000 ರೂ.ಗಳ ನಗದು ಬಹುಮಾನವನ್ನು ನೀಡಲಾಗುತ್ತದೆ.
-ಮೂರನೇ ಅತ್ಯುತ್ತಮ ಪ್ರದರ್ಶನಕಾರರಿಗೆ 50,000 ರೂ.ಗಳ ನಗದು ಬಹುಮಾನವನ್ನು ನೀಡಲಾಗುತ್ತದೆ.
- ಇದಾದ ನಂತರ ಮುಂದಿನ ನೂರು 100 ಉತ್ತಮ ಸಾಧಕರಿಗೆ ತಲಾ 2,000 ರೂ.ಗಳ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
-ಅಷ್ಟೇ ಅಲ್ಲದೆ ಮುಂದಿನ ಇನ್ನೂರು 200 ಉತ್ತಮ ಸಾಧಕರಿಗೆ ತಲಾ 1,000ರೂ.ಗಳ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.
ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೇಗೆ?
- ರಸಪ್ರಶ್ನೆಯಲ್ಲಿ ಭಾಗವಹಿಸಲು, ಅಭ್ಯರ್ಥಿಗಳು MyGov ನಲ್ಲಿ ವೈಯಕ್ತಿಕ ಖಾತೆಯನ್ನು ರಚಿಸಬೇಕಾಗುತ್ತದೆ. ಇದಕ್ಕಾಗಿ ನೀವು https://isroquiz.mygov.in/ ಈ ಲಿಂಕ್ ಅನ್ನು ಬಳಕೆ ಮಾಡಬಹುದು.
- ಇದಾದ ನಂತರ ಪಾರ್ಟಿಸಿಪೇಟ್ ಕ್ವಿಜ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ದೇಶದ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ರಾಜ್ಯ, ಹೆಸರು, ಹುಟ್ಟಿದ ದಿನಾಂಕ, ಜಿಲ್ಲೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ನಂತರದಲ್ಲಿ ಮುಂದುವರೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ಈಗಾಗಲೇ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ, ಅದನ್ನು ಕೇಳಲಾದ ಜಾಗದಲ್ಲಿ ಭರ್ತಿ ಮಾಡಿ.
- ಇದನ್ನು ಮಾಡಿದ ನಂತರ ಚಂದ್ರಯಾನ 3 ಹಾಗೂ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧ ಹತ್ತು ಪ್ರಶ್ನೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಸಮಯವನ್ನು ನೀಡಲಾಗಿದ್ದು, ಈ ಸಮಯದೊಳಗೆ ನೀವು ಸರಿ ಉತ್ತರಗಳನ್ನು ನೀಡಿದರೆ ನೀವು ಸಹ ಲಕ್ಷ ಗೆಲ್ಲಬಹುದು.

- ಇದೆಲ್ಲಾ ಆದ ನಂತರ ನೀವು ಈಗಾಗಲೇ ನೀಡಲಾದ ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆಗೆ ಡೌನ್‌ಲೋಡ್ ಮಾಡಬಹುದಾದ ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಕಳುಹಿಸಲಾಗುತ್ತದೆ.


Click it and Unblock the Notifications








