ಇಸ್ರೋದಿಂದ 'ಪರಮಾಣು ಗಡಿಯಾರ' ಅಭಿವೃದ್ದಿ!..ಭಾರತಕ್ಕೆ ಮತ್ತೊಂದು ಗರಿ!!
ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಮೊದಲ ಬಾರಿಗೆ ಸ್ವದೇಶಿ ತಂತ್ರಜ್ಞಾನ ಬಳಸಿಕೊಂಡು ಪರಮಾಣು ಗಡಿಯಾರವನ್ನು ಅಭಿವೃದ್ಧಿಪಡಿಸಿದೆ. ಈ ಪರಮಾಣು ಗಡಿಯಾರದಿಂದ ಉಪಗ್ರಹಗಳಿರುವ ಸ್ಥಳವನ್ನು ನಿಖರವಾಗಿ ಕಂಡು ಹಿಡಿಯಬಹುದಾಗಿದೆ.!
ಈವರೆಗೂ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳು ಹೊಂದಿದ್ದ ಪರಮಾಣು ಗಡಿಯಾರವನ್ನು ಇದೀಗ, ಇಸ್ರೋ ಕೂಡ ಯಶಸ್ವಿಯಾಗಿ ಅಭಿವೃದ್ದಿಪಡಿಸಿದೆ. ಅಹಮದಾಬಾದ್‌ನಲ್ಲಿರುವ ಇಸ್ರೋ ಸ್ಪೇಸ್ ಅಪ್ಲಿಕೇಷನ್ ಸೆಂಟರ್‌ನಲ್ಲಿ ಈ ಗಡಿಯಾರವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ವಿಶ್ವ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಮ್ಮೆ ಮತ್ತಷ್ಟು ಮೇಲಕ್ಕೇರಿದೆ.

ಇದುವರೆಗೆ ಈ ಗಡಿಯಾರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು, ಇನ್ನು ಮುಂದೆ ನಾವು ತಯಾರಿಸಿದ ಗಡಿಯಾರವನ್ನೇ ಬಳಸಿಕೊಳ್ಳಲಾಗುವುದು. ಈ ತಂತ್ರಜ್ಞಾನವನ್ನು ಹೊಂದಿದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ನಾವೂ ಒಬ್ಬರಾಗಿದ್ದೇವೆ ಎಂದು ಇಸ್ರೋ ಎಸ್ಎಸಿ ನಿರ್ದೇಶಕ ತಾಪನ್ ಮಿಶ್ರಾ ಅವರು ಹೇಳಿದ್ದಾರೆ.
ಸಧ್ಯ ಗಡಿಯಾರವನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ಯಶಸ್ವಿಯಾದ ಬಳಿಕ ಮುಂದಿನ ದಿನಗಳಲ್ಲಿ ಉಡಾವಣೆಗೊಳ್ಳುವ ಉಪಗ್ರಹಗಳಲ್ಲಿ ಇದನ್ನು ಅಳವಡಿಸಲಾಗುವುದು ಎಂದು ಇಸ್ರೋ ತಿಳಿಸಿದೆ. ಈ ಗಡಿಯಾರಗಳನ್ನು ಅಳವಡಿಸುವುದರಿಂದ ಉಪಗ್ರಹ ಎಲ್ಲೇ ಇದ್ದರೂ ಸುಲಭವಾಗಿ ಗುರುತಿಸಲು ಸಾಧ್ಯವಿದೆ.

ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿರುವ ಈ ಪರಮಾಣು ಗಡಿಯಾರಗಳನ್ನು ನ್ಯಾವಿಗೇಷನ್ ಉಪಗ್ರಹಗಳ ಉಡಾವಣೆ ಸಮಯದಲ್ಲಿ ಅಳವಡಿಸಲಾಗುತ್ತದೆ.ಗಡಿಯಾರಗಳನ್ನು ಅಳವಡಿಸುವುದರಿಂದ ಉಪಗ್ರಹ ಎಲ್ಲೇ ಇದ್ದರೂ ಸುಲಭವಾಗಿ ಗುರುತಿಸಿ, ಉಪಗ್ರಹದ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವುದು ಸುಲಭವಾಗಲಿದೆ ಎಂದು ಅವರು ಹೇಳಿದರು.

ಓದಿರಿ: ಭವಿಷ್ಯದಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಮೊಬೈಲ್ 'ಡೇಟಾ' ಬೆಲೆ!..ಸರ್ಕಾರದಿಂದ ಬಂಪರ್ ಗಿಫ್ಟ್!!


Click it and Unblock the Notifications