ಕ್ರಾಂತಿಕಾರಿ ಹೆಜ್ಜೆ... ರೋಲ್ ಮಾಡಬಹುದಾದ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ ಸ್ಯಾಮ್‌ಸಂಗ್?
ಸ್ಮಾರ್ಟ್ ಗ್ಯಾಜೆಟ್‌ಗಳನ್ನು ವಿಭಿನ್ನವಾಗಿ ಪರಿಚಯಿಸುವಲ್ಲಿ ಸ್ಯಾಮ್‌ಸಂಗ್(Samsung) ಸದಾ ಮುಂದಿರುತ್ತದೆ. ಅದರಲ್ಲೂ ದೈತ್ಯ ಆಪಲ್ ಐಫೋನ್‌ಗಳಿಗೂ(iPhones) ಇದು ದೊಡ್ಡ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬಂದಿದೆ. ಕೆಲವು ದಿನಗಳ ಹಿಂದೆ ಫೋಲ್ಡಬಲ್ ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಟೆಕ್ ವಲಯದಲ್ಲಿ ಸಂಚಲನ ಉಂಟು ಮಾಡಿದ್ದ ಸ್ಯಾಮ್‌ಸಂಗ್ ಇದೀಗ ರೋಲಬಲ್ ಡಿವೈಸ್‌ಗಳ ಮೂಲಕ ಸದ್ದು ಮಾಡಲು ಸಜ್ಜಾಗಿದೆ.
ಹೌದು, ಸ್ಯಾಮ್‌ಸಂಗ್ ಅಂಡರ್ ಪ್ಯಾನೆಲ್ ಕ್ಯಾಮೆರಾದೊಂದಿಗೆ ರೋಲ್ ಮಾಡಬಹುದಾದ ಸ್ಮಾರ್ಟ್‌ಫೋನ್ (Rollable smartphone) ಅನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ವಿಶೇಷ ಫೋನ್ ಪ್ರತ್ಯೇಕ ಡಿವೈಸ್‌ಗಳ ಅಗತ್ಯವನ್ನು ಸಮರ್ಥವಾಗಿ ತೆಗೆದುಹಾಕುತ್ತದೆ ಎನ್ನಲಾಗಿದೆ. ಹಾಗಿದ್ರೆ, ಈ ಫೋನ್ ಯಾವ ರೀತಿ ಇರಲಿದೆ, ಬಳಕೆದಾರರಿಗೆ ಯಾವಾಗ ಲಭ್ಯ ಆಗಲಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ನಿಂದ ಕ್ರಾಂತಿಕಾರಿ ಹೆಜ್ಜೆ: ಈ ಸಂಬಂಧ ಟಿಪ್‌ಸ್ಟರ್ ಮಾಹಿತಿಯನ್ನು ಪೋಸ್ಟ್ ಮಾಡಿದೆ. ಅದರಂತೆ ಸ್ಯಾಮ್‌ಸಂಗ್ 2025 ರಲ್ಲಿ ರೋಲ್ ಮಾಡಬಹುದಾದ OLED ಡಿಸ್‌ಪ್ಲೇ ಆಯ್ಕೆಯೊಂದಿಗೆ ಕ್ರಾಂತಿಕಾರಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಯೋಜಿಸುತ್ತಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಅಂಡರ್-ಪ್ಯಾನಲ್ ಕ್ಯಾಮೆರಾದ (Under-panel camera) ಆಯ್ಕೆಯನ್ನೂ ಹೊಂದಿರಲಿದೆ ಎಂದು ತಿಳಿದುಬಂದಿದೆ.
ಇನ್ನು ಈ ರೋಲ್ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳು (Smartphones) ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗದಿದ್ದರೂ ಸಹ 2023 ರಲ್ಲಿ ಸ್ಯಾಮ್‌ಸಂಗ್ ಪ್ರದರ್ಶಿಸಲಾದ ರೋಲಬಲ್ ಫ್ಲೆಕ್ಸ್ ಡಿಸ್‌ಪ್ಲೇಯಂತೆಯೇ (Rollable Flex Display) ಮೋಟಾರೀಕೃತ ಯಾಂತ್ರಿಕತೆಯ ಸಾಧ್ಯತೆಯನ್ನು ಸೂಚಿಸುತ್ತವೆ. ಇವು ಫೋಲ್ಡಬಲ್‌ಗಳಿಗಿಂತ ಭಿನ್ನವಾಗಿರಲಿದ್ದು, ಒಂದು ಸ್ಥಿತ್ಯಂತರಕ್ಕೆ ಹೊಂದಿಕೊಳ್ಳುವ ಡಿಸ್‌ಪ್ಲೇ ಆಯ್ಕೆಯನ್ನು ಪಡೆಯಲಿವೆ ಎಂದು ತಿಳಿದುಬಂದಿದೆ.
ಟಿಪ್‌ಸ್ಟರ್ ರೆವೆಗ್ನಸ್ ಪೋಸ್ಟ್‌ನಲ್ಲಿ 2025 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾದ ಸಂಭಾವ್ಯ ಅದ್ಭುತವಾದ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ನವೀನ ಡಿವೈಸ್ ರೋಲ್ ಮಾಡಬಹುದಾದ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ವದಂತಿಗಳಿವೆ ಇದು ಕೇವಲ ಪರಿಕಲ್ಪನೆಯ ಫೋನ್ ಎಂದು ನಿರೀಕ್ಷಿಸಲಾಗುವುದಿಲ್ಲ. ಗ್ರಾಹಕರು ಖರೀದಿಸಲು ವಾಣಿಜ್ಯಿಕವಾಗಿ ಲಭ್ಯವಿರುವ ಉತ್ಪನ್ನವಾಗಿರಲಿದೆ ಎಂದು ಉಲ್ಲೇಖ ಮಾಡಲಾಗಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಈ ಫೋನ್ ಅಂಡರ್ ಪ್ಯಾನಲ್ ಕ್ಯಾಮೆರಾ (UPC) ತಂತ್ರಜ್ಞಾನವನ್ನು ಹೊಂದಿರಲಿದೆ ಎನ್ನಲಾಗಿದ್ದು, ಈ ಕ್ಯಾಮೆರಾ ಉದ್ದೇಶಕ್ಕಾಗಿ ಇದ್ದ ಬೆಜೆಲ್ ಈ ಮೂಲಕ ಮಾಯವಾಗಲಿದೆ. ವರದಿಯ ಪ್ರಕಾರ ಯಾವುದೇ ಗೋಚರ ಕಟೌಟ್‌ನ ಅಗತ್ಯವನ್ನು ಇದು ನಿವಾರಿಸುತ್ತದಂತೆ. ಈ ವಿನ್ಯಾಸವು ಬೆಜೆಲ್ ಲೆಸ್ ಡಿಸ್‌ಪ್ಲೇ ಅನುಭವವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಮುಖ ವಿಷಯ ಏನೆಂದರೆ ವಿವಿಧ ಕಂಪನಿಗಳು ರೋಲ್ ಮಾಡಬಹುದಾದ ಪರಿಕಲ್ಪನೆಯ ಡಿವೈಸ್‌ಗಳ ಮೂಲಕ ತಮ್ಮ ತಾಂತ್ರಿಕ ಪರಿಣತಿಯನ್ನು ಸತತವಾಗಿ ಪ್ರದರ್ಶಿಸುತ್ತಾ ಬರುತ್ತಿವೆ. ಉದಾಹರಣೆಗೆ, ಮೇ ತಿಂಗಳಲ್ಲಿ ನಡೆದ ಎಸ್‌ಐಡಿ ಡಿಸ್‌ಪ್ಲೇ ವೀಕ್ 2023 ರಲ್ಲಿ, ಸ್ಯಾಮ್‌ಸಂಗ್ ತನ್ನ ರೋಲಬಲ್ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಪ್ರಸ್ತುತಪಡಿಸಿತ್ತು. ಮೋಟಾರೀಕೃತ ಕಾರ್ಯವಿಧಾನದ ಮೂಲಕ ಇದನ್ನು 12.4 ಇಂಚುಗಳಿಗೆ ವಿಸ್ತರಣೆ ಮಾಡಬಹುದು.
ಈ ಸಮಾರಂಭದಲ್ಲಿ ಸ್ಯಾಮ್‌ಸಂಗ್‌ನ ಡಿಸ್‌ಪ್ಲೇ ತಂಡವು, ರೋಲ್ಬಿಲಿಟಿಯನ್ನು ಸಕ್ರಿಯಗೊಳಿಸುವ ಮೂಲಕ ದೊಡ್ಡದಾದ ಹಾಗೂ ಸಮಸ್ಯೆ ಉಂಟು ಮಾಡುವ ಡಿಸ್ಪ್ಲೇಯನ್ನು ಪೋರ್ಟಬಲ್ ಫಾರ್ಮ್ ಫ್ಯಾಕ್ಟರ್ ಆಗಿ ಪರಿವರ್ತಿಸುವುದು ಅತ್ಯಂತ ಮಹತ್ವದ ಸಾಧನೆಯಾಗಿದೆ ಎಂದು ವಿವರಿಸಿತ್ತು. ಈ ಕಾರಣಕ್ಕಾಗಿಯೇ ಮುಂಬರುವ 2025 ರಲ್ಲಿ ರೋಲಬಲ್ ಸ್ಮಾರ್ಟ್‌ಫೋನ್‌ನಲ್ಲಿ ಈ ತಂತ್ರಜ್ಞಾನ ಇರಲಿದೆ ಎಂದು ಊಹೆ ಮಾಡಲಾಗಿದೆ.

ಫೋಲ್ಡಬಲ್ ಫೋನ್‌ಗಳಿಗೆ ವ್ಯತಿರಿಕ್ತವಾಗಿ, ರೋಲ್ ಮಾಡಬಹುದಾದ ಡಿವೈಸ್‌ಗಳು ಕಾಂಪ್ಯಾಕ್ಟ್ ಡಿಸ್‌ಪ್ಲೇನ ಗಾತ್ರದಿಂದ ಟ್ಯಾಬ್ಲೆಟ್ ಗಾತ್ರದ ಡಿಸ್‌ಪ್ಲೇಗೆ ಪರಿವರ್ತನೆಯಾಗುವ ಸಾಮರ್ಥ್ಯವನ್ನು ಹೊಂದಿರಲಿವೆಯಂತೆ. ಈ ಕಾರಣಕ್ಕಾಗಿಯೇ ಪ್ರತ್ಯೇಕ ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಅಗತ್ಯವನ್ನು ಇದು ತೆಗೆದುಹಾಕುತ್ತದೆ ಎಂದು ವರದಿಗಳು ಇಲ್ಲೇಖ ಮಾಡಿವೆ.


Click it and Unblock the Notifications








