5G ನೆಟವರ್ಕ್ ಪರೀಕ್ಷಿಸಿದ ಹೆಗ್ಗಳಿಕೆ ಪಾತ್ರವಾಗಿದೆ 'ನಮ್ಮ ಮೆಟ್ರೋ'!
ಸದ್ಯ ದೇಶದ ತಂತ್ರಜ್ಞಾನ ವಲಯ 5G ನೆಟ್‌ವರ್ಕ್‌ಗಾಗಿ ಕಾತರದಿಂದ ಎದುರುನೋಡುತ್ತಿದೆ. ಹಾಗೆಯೇ ದೇಶದಲ್ಲಿ 5G ನೆಟ್‌ವರ್ಕ್ ಹರಾಜು ಪ್ರಕ್ರಿಯೆ ಸಹ ಸನಿಹದಲ್ಲಿದೆ. ಈ ನಡುವೆ ಇದೀಗ ಟ್ರಾಯ್ (TRAI) ನ ಪೈಲಟ್ ಪ್ರಾಜೆಕ್ಟ್ ನಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಭಾರತದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ 'ನಮ್ಮ ಮೆಟ್ರೋ' (Namma Metro) ಪಾತ್ರವಾಗಿದೆ.

ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ ಮೊದಲ ಮೆಟ್ರೋ ಆಗಿ ಗುರುತಿಸಿಕೊಂಡಿದೆ. 5G ನೆಟ್‌ವರ್ಕ್ 200 ಮೀ ವ್ಯಾಪ್ತಿಯಲ್ಲಿ ಹರಡಿತು. ಇದನ್ನು ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ (M G Road) ನಿಯೋಜಿಸಿತ್ತು.

ಪ್ರಾಯೋಗಿಕ ಪರೀಕ್ಷಾ ಹಂತದಲ್ಲಿ 1.45 Gbps ಡೌನ್‌ಲೋಡ್ ಮತ್ತು 65 Mbps ಅಪ್‌ಲೋಡ್ ವೇಗವನ್ನು ಕಂಡು ಬಂದಿದೆ. ಪರೀಕ್ಷಾ ಹಂತದಲ್ಲಿ ಕಂಡು ಬಂದ 5G ವೇಗವು, 4G ವೇಗಕ್ಕಿಂತ 50 ಪಟ್ಟು ಅಧಿಕ ವೇಗವಾಗಿದೆ. ಇನ್ನು ಈ ಹಣಕಾಸು ವರ್ಷದಲ್ಲೇ ಟೆಲಿಕಾಂ ಕಂಪನಿಗಳು ಭಾರತದಲ್ಲಿ 5G ಮೊಬೈಲ್ ಸೇವೆ ಆರಂಭಿಸಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹಾಗೆಯೇ ಜುಲೈ 26 ರಿಂದ 5G ತರಂಗಾಂತರದ ಹರಾಜು ಆರಂಭವಾಗಲಿದೆ. 5G ತರಂಗಾಂತರವನ್ನು ಹರಾಜು ಮಾಡಲು ನಾಲ್ಕು ಟೆಲಿಕಾಂ ಸಂಸ್ಥೆಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. ಇದರಲ್ಲಿ ಅದಾನಿ ಡೇಟಾ ನೆಟ್‌ವರ್ಕ್, ರಿಲಯನ್ಸ್ ಜಿಯೋ ಇನ್ಫೋಕಾಮ್, ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಲಿಮಿಟೆಡ್‌ಗಳು 5G ಹರಾಜಿಗೆ ಬಿಡ್ ಸಲ್ಲಿಸಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಭಾರತದಲ್ಲಿ 5G ಸೇವೆಯಿಂದ ಏನೆಲ್ಲಾ ಪ್ರಯೋಜನ!
ಶೀಘ್ರದಲ್ಲೇ ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಒಂದು ಹಂತದ ವರದಿಯ ಪ್ರಕಾರ 5G ಸೇವೆ ಲಭ್ಯವಾದರೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎನ್ನಲಾಗಿದೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ.

ಇದಲ್ಲದೆ 5G ಸೇವೆ ಗ್ರಾಹಕರಿಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA) ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿ ಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ.

5G ಸೇವೆ ಪಡೆದುಕೊಳ್ಳುವ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 4K ವೀಡಿಯೊವನ್ನು ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ AR/ VR, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ತಲ್ಲೀನಗೊಳಿಸುವ ಚಟುವಟಿಕೆಗಳು ಮತ್ತು ಹೊಸ ಅಪ್ಲಿಕೇಶನ್‌ಗಳನ್ನು ಬಳಸಲು ಅನುಮತಿಸುತ್ತದೆ. ಇದಲ್ಲದೆ ಮನರಂಜನೆಯನ್ನು ಪಡೆಯಲು ಸುರಕ್ಷಿತವಾದ ಮಾರ್ಗವನ್ನು ಕಲ್ಪಿಸಲಿದೆ. ಅಲ್ಲದೆ 5G ಆಗಮನದಿಂದ ಡೇಟಾ ಡೌನ್‌ಲೋಡ್ ವೇಗ ಹೆಚ್ಚಾಗಲಿದೆ. ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆ ಮತ್ತು ಅತಿ ಕಡಿಮೆ ಸುಪ್ತತೆಯನ್ನು ಕಾಣಬಹುದಾಗಿದೆ.

ಭಾರತದಲ್ಲಿ 5G ಏಕೆ ಮುಖ್ಯ ಎನಿಸಿಕೊಂಡಿದೆ?
ಭಾರತದಲ್ಲಿ 5G ನೆಟ್‌ವರ್ಕ್ ಹೆಚ್ಚಿನ ಇಂಟರ್‌ನೆಟ್ ವೇಗಕ್ಕಾಗಿ ಅತಿ ಅವಶ್ಯಕ ಎನಿಸಿದೆ. ಇದು ಹೆಚ್ಚಿನ ಮಲ್ಟಿ GBPS ಗರಿಷ್ಠ ಡೇಟಾ ವೇಗವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ ಲೋ ಲೆಟೆನ್ಸಿ, ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವಿನ ಹೆಚ್ಚಿನ ನೆಟ್‌ವರ್ಕ್ ವಿಶ್ವಾಸಾರ್ಹತೆಯನ್ನು ಹೊಂದಿದೆ. ಹೆಚ್ಚಿನ ಜನರನ್ನು ಮತ್ತು ಹೆಚ್ಚಿನ ಸಾಧನಗಳನ್ನು ಬೆಂಬಲಿಸುವ ಬೃಹತ್ ನೆಟ್‌ವರ್ಕ್ ಸಾಮರ್ಥ್ಯ ಇದರಲ್ಲಿದೆ. ಯಾವುದೇ ಸಮಯದಲ್ಲಿ ಅನೇಕ ಉದ್ಯಮ ಅಪ್ಲಿಕೇಶನ್‌ಗಳು ಮತ್ತು ಬಳಕೆದಾರರನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ.

ಈಗಾಗಲೇ ಭಾರತದಲ್ಲಿ 5G ಗಾಗಿ ಹೆಚ್ಚಿನ ಗ್ರಾಹಕರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅಲ್ಲದೆ 5G ಸೇವೆಗಳನ್ನು ಪಡೆಯಲು ಪ್ರೀಮಿಯಂ ಪಾವತಿಸಲು ಕೂಡ ಸಿದ್ಧರಿದ್ದಾರೆ. ಅದರಲ್ಲೂ ಭಾರತದಲ್ಲಿ ಕನಿಷ್ಠ 40 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು 5G ಲಭ್ಯವಾದ ಮೊದಲ ವರ್ಷದಲ್ಲಿ ಅದನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ ಎರಿಕ್ಸನ್ ಮೊಬಿಲಿಟಿ ವರದಿಯ ಪ್ರಕಾರ ಸುಮಾರು 500 ಮಿಲಿಯನ್ ಚಂದಾದಾರಿಕೆಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ 2027 ರ ಅಂತ್ಯದಲ್ಲಿ 5G ಮೊಬೈಲ್ ಚಂದಾದಾರಿಕೆಗಳಲ್ಲಿ ಸುಮಾರು 39% ಏರಿಕೆಯನ್ನು ಕಾಣಬಹುದಾಗಿದೆ.

ಇನ್ನು 5G ನೆಟ್‌ವರ್ಕ್ ಕೆಲಸ, ಕಲಿಕೆ, ಸಾಮಾಜಿಕ ಸಂವಹನದಂತಹ ಅಗತ್ಯಗಳಿಗೆ 5G ಸೂಕ್ತವಾಗಿದೆ. ಇದು ರಿಯಲ್-ಟೈಂ ಸೆನ್ಸಾರ್ ಗುಣಮಟ್ಟವನ್ನು ಸುಧಾರಿಸುತ್ತದೆ. 5G ಯ ಪ್ರಭಾವವು ಎಲ್ಲಾ ರೀತಿಯ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಗಳಲ್ಲಿ ಕಂಡುಬರುತ್ತದೆ. ಇದರಿಂದ ಆನ್‌ಲೈನ್ ಸಮಾಲೋಚನೆಗಳ ಸಂಖ್ಯೆ ಮತ್ತು ದಕ್ಷತೆಯು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಟೆಲಿಮೆಡಿಸಿನ್ ಮತ್ತು ಆರೋಗ್ಯ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ 5G ಯ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಭಾರತ ವಿಶ್ವದ ನಂಬರ್ 1 ಡಿಜಿಟಲ್ ಸೂಪರ್ ಪವರ್ ರಾಷ್ಟ್ರ ಆಗುವುದಕ್ಕೆ 5G ಪ್ರಮುಖ ಪಾತ್ರವನ್ನು ವಹಿಸಲಿದೆ.


Click it and Unblock the Notifications








